south-korean-citylife_0

ನನ್ನ ಶಾಲೆಯ ವಾರ್ಷಿಕೋತ್ಸವದಲ್ಲಿ ಒಮ್ಮೆ ಜಾದೂಗಾರನೊಬ್ಬ ಸಣ್ಣದೊಂದು ಡಬ್ಬಿ ಹಿಡಿದುಕೊಂಡು ಹೂವಿನ ಗೊಂಚಲು ತೆಗೆದಿದ್ದ. ಕಾಗದದ ಹೂಗಳ ರಾಶಿಯನ್ನು ಸುರಿದಿದ್ದ. ಜೋಡಿಸಿದ ಹತ್ತಾರು ಸೀರೆಯ ಮಾದರಿಯಲ್ಲಿ ಬಣ್ಣಬಣ್ಣದ ಕಾಗದವನ್ನು ಸರಸರನೆ ಎಳೆಯುತ್ತಿದ್ದ. ಇವೆಲ್ಲವನ್ನೂ ನಾವು ಕೌತುಕದಿಂದ ಕಣ್ಣು ಬಿಟ್ಟು ನೋಡುತ್ತಿದ್ದೆವು. ಒಂದು ರೀತಿಯ ಬೆರಗಿನಲ್ಲಿ. ಯೋಚಿಸಲು ನಮಗೇನೂ ಉಳಿದಿರಲೇ ಇಲ್ಲ. ಯಾಕೆಂದರೆ, ಮನೋವೇಗದಲ್ಲಿ ಅವನು ಎಲ್ಲವನ್ನೂ ಮಾಡಿ ಬಿಡುತ್ತಿದ್ದ.

ಹೀಗೆ ಸುಮಾರು 30 ವರ್ಷಗಳ ಅನಂತರ ನನ್ನ ಊರಿಗೆ ಹೋಗಿದ್ದೆ. ಡಾಮರು ರಸ್ತೆ ಬಂದಿತ್ತು. ಶಾಲೆಯಿಂದ ಹಿಡಿದು, ಮನೆಗಳು, ಅಂಗಡಿ ಮುಂಗಟ್ಟುಗಳು, ಅಮಲಿನ ತಾಣಗಳು-ಇವೆಲ್ಲಾ ಹೊಸತು. ರಸ್ತೆಯ ಅಕ್ಕಪಕ್ಕದಲ್ಲಿ ಉದ್ದುದ್ದ ಬೆಳೆದಿದೆ. ಹಳ್ಳಿಯ ಒಳಗಿದ್ದ ಜನರಲ್ಲಿ ಬಹುತೇಕರಿಲ್ಲ ; ಅದರ ಬದಲು ಬಹಳಷ್ಟು ಹೊಸ ಮುಖಗಳು ಬಂದಿವೆ. ಒಂದೇ ಸಾಲಿನಲ್ಲಿ ಹೇಳಬಹುದಾದರೆ ಒಳರಸ್ತೆಗಳೆಲ್ಲಾ ಮುಖ್ಯ ರಸ್ತೆಗೆ ಬಂದಿವೆ.

ಬೆರಳಿನಲ್ಲಿ ಎಣಿಸಿ ಹೇಳಬಹುದಾದಷ್ಟು ಮನೆಗಳ ಬದಲು ರಾಶಿ ರಾಶಿ ಮನೆಗಳಿವೆ. ಇತ್ತೀಚಿನ ಹತ್ತು ವರ್ಷಗಳಲ್ಲಿ ಬದಲಾದ ಈ ಪರಿ ದೊಡ್ಡ ಬದಲಾವಣೆಯಲ್ಲದೇ ಮತ್ತೇನು? ಹಳ್ಳಿಯಹೆಸರಿನ್ನೂ ಬದಲಾಗಿಲ್ಲ ; ಆದರೆ ಈ ಹೊಸ ಬದಲಾವಣೆಗೆ ನಗರದ ನಾಮಕರಣವಾಗಿದೆ. ವಿಶ್ವಸಂಸ್ಥೆ ಅಂದಾಜು ಮಾಡಿರುವಂತೆ 2050ರ ವೇಳೆಗೆ ಶೇ.64ರಷ್ಟು ಅಭಿವೃದ್ಧಿ ಶೀಲ ರಾಷ್ಟ್ರಗಳ ಜನಸಂಖ್ಯೆ ಹಾಗೂ ಶೇ.86ರಷ್ಟು ಅಭಿವೃದ್ಧಿಗೊಂಡ ರಾಷ್ಟ್ರಗಳ ಜನಸಂಖ್ಯೆ ನಗರಗಳಲ್ಲೇ ವಾಸಿಸುತ್ತಿರುತ್ತದೆ. ಅಂದರೆ, ಈ ಮಿಯಲ್ಲಿ ಹಳ್ಳಿಗಳಿಗಿಂತ ಹೆಚ್ಚಿನ ಜನಸಂಖ್ಯೆ ನಗರಗಳಲ್ಲೇ ಇರುತ್ತದೆ. ಅದರರ್ಥ, ಈಗಿನ ಪರಿಸ್ಥಿತಿ ಅದಲು-ಬದಲಾಗುತ್ತದೆ. ಅಫ್ರಿಕಾ ಮತ್ತು ಏಷ್ಯಾ ಖಂಡದಲ್ಲಿ ಈ ಬೆಳವಣಿಗೆಯ ಸಾಧ್ಯತೆ ಹೆಚ್ಚು ನಿಚ್ಚಳ.

ಭಾರತದ ದೃಷ್ಟಿಯಿಂದ ನೋಡುವುದಾದರೆ, ಪ್ರತಿ ವರ್ಷ ಸುಮಾರು 1 ಕೋಟಿ ಜನ ನಗರಕ್ಕೆ ವಲಸೆ ಬರುತ್ತಿದ್ದಾರೆ. 2031ರ ವೇಳೆಗೆ ನಗರಗಳಲ್ಲಿರುವವರ ಸಂಖ್ಯೆ 60 ಕೋಟಿ ಮೀರಬಹುದು. ಅಂದರೆ ಲೆಕ್ಕ ಹಾಕಿ, ಎಷ್ಟು ಹಳ್ಳಿಗಳು ಉಳಿದಾವು ಎಂದು? ಬರೀ ಅಂಕಿ ಅಂಶಗಳಷ್ಟೇ ಈ ಮಾತನ್ನು ಸಾಬೀತು ಪಡಿಸುವುದಿಲ್ಲ. ನಮ್ಮ ಹಳ್ಳಿಗಳಲ್ಲಿ ದಿನೇ ದಿನೆ ಕಡಿಮೆಯಾಗುತ್ತಿರುವ ಜನರು, ಪೇಟೆ ಬದಿಯ ರಸ್ತೆಯಲ್ಲಿ ಹೆಚ್ಚುತ್ತಿರುವ ಚಟುವಟಿಕೆ-ವಹಿವಾಟು, ಮುಖ್ಯ ರಸ್ತೆಯ ಆಸುಪಾಸುಗಳಲ್ಲಿ ಕಣ್ಣು ಕೋರೈಸುವಂಥ ಬೆಳಕು, ಒಳ ರಸ್ತೆಗಳಲ್ಲಿರುವ ಮನೆಗಳಲ್ಲಿ ಕತ್ತಲು-ಹೀಗೆ ಹಲವು ದೃಶ್ಯಗಳು ನಮಗೆ ವಿದ್ಯಮಾನವನ್ನು ಮನವರಿಕೆ ಮಾಡಿಕೊಡುತ್ತಿವೆ. ನಮ್ಮಮಂಗಳೂರೂ ಸಹ ಈಗ ಸ್ಮಾರ್ಟ್ ಸಿಟಿ ಆಗುವ ಧಾವಂತದಲ್ಲಿದೆ. ಕೊರತೆಗಳ ಪಟ್ಟಿ ಬಹಳ ದೊಡ್ಡದಿದೆ. ಆದರೂ ಹಂಬಲ ಅಲ್ಲಿಗೇ ನಿಂತಿಲ್ಲ.

ಇದು ಯಾರಿನ್ನೂ ಕೇಳಿ ಆಗುತ್ತಿರುವ ಬದಲಾವಣೆಯಲ್ಲ ಹಾಗೂ ಇದು ನನ್ನ ಹಳ್ಳಿಯ ಕಥೆಯೊಂದೇ ಅಲ್ಲ. ಭಾರತದ ಅಥವಾ ತೃತೀಯ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ರೀತಿಯ ನಗರ ಚಿತ್ರಣ (ಅರ್ಬನ್ ಸ್ಕೇಪ್) ಮೂಡುತ್ತಿದೆ. ಇದರದ್ದು ಮನೋವೇಗ ಹಾಗೂ ಗುಪ್ತಗಾಮಿನಿ. ಈ ವೇಗಕ್ಕೆ ನಮ್ಮನ್ನೆಲ್ಲಾ ಸೆಳೆದೊಯ್ಯುವಂಥ ಶಕ್ತಿ ಇದೆ. ಅದರ ಆಕರ್ಷಣೆಯೇ ಅಂಥದ್ದು. ಇದೇ ಮಾತನ್ನು ನೇರವಾಗಿ ಹೇಳುವುದಾದರೆ ಹಳ್ಳಿಗಳೆಲ್ಲಾ ನಗರ ಸಂವೇದನೆಗೆ ತೆರೆದುಕೊಳ್ಳುತ್ತಿವೆ. ನಗರವೆಂದ ಕೂಡಲೇ ಬೆಂಗಳೂರು, ಮುಂಬಯಿ, ದಿಲ್ಲಿ, ಕೋಲ್ಕತ್ತಾಗಳೇ ಆಗಿರಬೇಕಿಲ್ಲ. ಹಳ್ಳಿ ಸಣ್ಣಗೆ ಕೊಡವಿಕೊಂಡು ಪಟ್ಟಣವಾಗ ತೊಡಗಿದರೆ ನಗರವಾದಂತೆಯೇ.

ಈ ಹೊತ್ತೇ ಅಂಥದ್ದು. ನಮ್ಮೆಲ್ಲವನ್ನೂ ನಗರೀಕರಣಕ್ಕೆ ತೆರೆದಿಡುತ್ತಿರುವ ಹೊತ್ತು. ಹಾಗಾಗಿಯೇ ಈ ಶತಮಾನದ ದೊಡ್ಡ ವಿದ್ಯಮಾನವಾಗಿ ಕಾಣುತ್ತಿರುವುದು ನಗರವಾಗುವ ಮತ್ತು ನಗರಕ್ಕೆ ವಲಸೆ ಹೋಗುವ ಹಂಬಲ. ಯಾವುದೇ ಹಳ್ಳಿಗೆ ಹೋಗಿ, ಅಲ್ಲಿ ನಗರದತ್ತ ಹೊರಟಿರುವ ಚಿಹ್ನೆಗಳು ಗೋಚರಿಸುತ್ತಿವೆ. ನಮ್ಮ ಆಚಾರ-ವಿಚಾರ, ಕಂಫರ್ಟ್ಸ್ ಗಳಿಂದ ಹಿಡಿದು ಪ್ರತಿಯೊಂದರಲ್ಲೂ ನಗರದ ಅವಸರವನ್ನೇ ತುಂಬಿಕೊಳ್ಳುವಂಥ ಧಾವಂತ ಕಾಣಿಸುತ್ತಿದೆ.

ಅದು ಎಲ್ಲಿಯವರೆಗೆ ಎಂದರೆ, ಹಳ್ಳಿಯೆಂಬುದು ಅವ್ಯವಸ್ಥೆಗೆ ಪ್ರತೀಕವೆಂಬಂತೆ ನಿಲ್ಲುತ್ತಿದ್ದರೆ, ನಗರವೆಂಬುದು ಸುವ್ಯವಸ್ಥೆಗೆ ದ್ಯೋತಕವಾಗಿ ಬಿಂಬಿತವಾಗುತ್ತಿದೆ. ವಾಸ್ತವ ಚಿತ್ರಣವೇ ಬೇರೆ. ಜಾದೂಗಾರನ ಹೊರತಾಗಿ ಆ ಬಣ್ಣ ಬಣ್ಣದ ಕಾಗದದ ಸುರುಳಿಯ ಹೊರಬರುವಿಕೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಾವು ಬೆರಗಿನಿಂದ ನೋಡುತ್ತಾ ನಿಲ್ಲಬೇಕೋ ಅಥವಾ ಎಚ್ಚರದಿಂದ ಉಪಚರಿಸಿ, ನಮ್ಮದಾಗಿಸಿಕೊಳ್ಳಬೇಕೋ ಎಂಬುದರ ಮೇಲೆ ಸಿದಟಛಿತೆ ನಡೆಯಬೇಕು. ಇರುವ ಕನಿಷ್ಠ ಆಯ್ಕೆಯಲ್ಲಿ ಎರಡನೆಯದೇ ಹೆಚ್ಚು ಕ್ಷೇಮ ಎನಿಸುವುದುಂಟು. ನಮ್ಮೊಳಗಿನ ಎಚ್ಚರದ ಬೆಂಕಿಯ ಕಾವನ್ನು ಉಳಿಸಿಕೊಂಡೇ ರೂಪಾಂತರಗೊಳ್ಳುವುದು ಒಂದು ಜಾಣ ನಡೆ. ಆದರೂ ಅದು ಸುಲಭ ಸಾಧ್ಯವಲ್ಲ.

ನಗರ ಸಂವೇದನೆಗೆ ಹೋಟೆಲ್ನಂಥ ಸ್ಪಷ್ಟ ಪರಿಕಲ್ಪನೆ ಬೇರೊಂದಿಲ್ಲ. ಹಾಗಾಗಿ ಈ ಮಾದರಿಯ ಸಂವೇದನೆಯೇನೂ ಹೊಸತಲ್ಲ. ಜತೆಗೆ ಮಾನಸಿಕವಾಗಿ ನಗರೀಕರಣಕ್ಕೆ ಒಳಗಾಗಿದ್ದೂ ಹೊಸದಲ್ಲ. ನಿಮಗೆ ಮಸಾಲೆ ದೋಸೆಯ ಕಥೆ ಗೊತ್ತಲ್ಲಾ. ನನಗೆ ಅನ್ನಿಸುವಂತೆ ಅದು ನಗರ ಸಂವೇದನೆಗೆ ಬಹು ದೊಡ್ಡ ರೂಪಕ.

ಮೈಸೂರು ನಿಮಗೆ ತಿಳಿದೇ ಇದೆ. ಅದು ಪೂರ್ತಿ ನಗರವಲ್ಲ;  ಬಹುತೇಕ ಹಳ್ಳಿ. ಈ ವ್ಯಾಖ್ಯಾನವೇ ಒಂದು ಬಗೆಯಲ್ಲಿ ಶೇಕಡಾ ನೂರರ ಲೆಕ್ಕದ್ದಲ್ಲ; ಬದಲಾಗಿ ನೂರೈವತ್ತರದ್ದು. ಮುಕ್ಕಾಲು ಭಾಗ ನಗರ, ಹಾಗೆಯೇ ಮುಕ್ಕಾಲು ಭಾಗ ಹಳ್ಳಿ. ಮೈಸೂರಿನ ಮನೋಭೂಮಿಕೆ ಇನ್ನೂ ನಗರಕ್ಕೆ ಬದಲಾಗಿಲ್ಲ. ಆದರೆ, ಸೌಲಭ್ಯಗಳೆಲ್ಲಾ ನಗರದ ಮಾದರಿಯಲ್ಲಿವೆ. ಅಂಥ ಊರಿನಲ್ಲಿ ನನ್ನ ಸೋದರರೊಬ್ಬರ ಪ್ರಸಿದ್ಧ ಊಟದ ಹೋಟೆಲ್ ಒಂದಿದೆ. ಸುಮಾರು 40 ವರ್ಷಗಳಿಂದ ನಿರಂತರವಾಗಿ ಊಟಕ್ಕೆ ಹೆಸರುವಾಸಿ.ಅದಕ್ಕೂ ಕಾರಣವಿದೆ. ಅದು ಇರುವುದು ಮಾರ್ಕೆಟ್ ಪ್ರದೇಶದಲ್ಲಿ. ಅಕ್ಕಪಕ್ಕದಲ್ಲಿ ಬಟ್ಟೆ ಅಂಗಡಿಗಳೂ ಸೇರಿದಂತೆ ವಿವಿಧ ರೀತಿಯ ಮಳಿಗೆಗಳಿವೆ. ಸಾಕಷ್ಟು ಪ್ರಮಾಣದಲ್ಲಿ ಹಳ್ಳಿಗಳ ಸುತ್ತಲಿನ ಜನರ ಓಡಾಟವಿದೆ.

ಇತ್ತೀಚೆಗೆ ನನ್ನ ಸೋದರ ಒಮ್ಮೆ ‘ನಮ್ಮಲ್ಲಿ ಮಸಾಲೆ ದೋಸೆ ಆರಂಭಿಸಬೇಕೆಂದಿದೆ’ ಎಂದು ಹೇಳಿದ. ಅದನ್ನು ಕೇಳಿ ನನಗೆ ಅಚ್ಚರಿಯಾಯಿತು. ‘ನಿಮ್ಮದೇನಿದ್ದರೂ ಊಟಕ್ಕೇ ಬಹಳ ಪ್ರಸಿದ್ಧ. ಯಾಕೆ ಮಸಾಲೆ ದೋಸೆ ಯೋಚನೆ? ದೋಸೆ ಆರಂಭಿಸಿದರೆ ಊಟದ ಗಿರಾಕಿಗಳು ಕಡಿಮೆಯಾಗು ವುದಿಲ್ಲವೇ?’ ಎಂದು ಕೇಳಿದೆ. ‘ಇಲ್ಲಿ ಬಟ್ಟೆ ಇತ್ಯಾದಿ ಕೊಳ್ಳಲು ಬಂದವರು ಊಟಕ್ಕೆ ಬರುತ್ತಾರೆ. ಗಂಡಸರೇನೋ ಊಟ ಮಾಡಿಬಿಡಬಲ್ಲರು. ಆದರೆ, ಹಳ್ಳಿ ಮಹಿಳೆಯರು ನಗರಕ್ಕೆ ಬರುವುದೇ ಮಸಾಲೆ ದೋಸೆ ತಿನ್ನಲಿಕ್ಕೆ. ಅದಿಲ್ಲವೆಂದು ತಮ್ಮ ಗಂಡನನ್ನೂ ಕರೆದುಕೊಂಡು ದೋಸೆ ಇರುವಲ್ಲಿಗೆ ಹೋಗುತ್ತಾರೆ. ಅದರಿಂದ ನನಗೆ ಊಟದ ಗಿರಾಕಿಯೂ ಕಡಿಮೆಯಾಗುತ್ತದೆ’ ಎಂದ. ನಿಜ, ಮಸಾಲೆ ದೋಸೆ ಎಂಥಾ ಅದ್ಭುತವಾದ ಉದಾಹರಣೆ ಅರ್ಬನ್ ಸೆನ್ಸಿಬಿಲಿಟಿಗೆ! ಹೊರಗೆ ಹೋಗಿ ತಿಂಡಿ ತಿನ್ನುವುದೆನ್ನುವುದೇ ನಗರ ಸಂವೇದನೆಯ ಒಂದು ಭಾಗ. ಅದೊಂದು ಭಿನ್ನ ನೆಲೆಯ ಅಸ್ತಿತ್ವ (ಐಡೆಂಟಿಟಿಯ)ದ ಭಾಗವೂ ಹೌದು.

ಹಾಗಾಗಿಯೇ ನಮಗೆ ಸದಾ ನಗರ ಎಂಬ ಪರಿಕಲ್ಪನೆಯೇ ಮನಮೋಹಕ.