ಸಿಂಗಾಪುರದ ಒಂದು ದೃಶ್ಯ- ಚಿತ್ರ : ಇಂಟರ್ ನೆಟ್.
ಸಿಂಗಾಪುರದ ಒಂದು ದೃಶ್ಯ- ಚಿತ್ರ : ಇಂಟರ್ ನೆಟ್.

ಒಂದು ಮಾಯೆ ನಮ್ಮನ್ನು ಆವರಿಸಿಕೊಂಡಾಗ ನಮ್ಮದು ಅನಿವಾರ್ಯ ಸ್ಥಿತಿ. ಯೋಚಿಸುವ ಕೆಲಸಕ್ಕೆವಿರಾಮ ಹೇಳಿರುತ್ತೇವೆ. ಅದು ಮಾಡಿಸುತ್ತಿರುತ್ತದೆ. ನಾವು ಮಾಡುತ್ತಿರುತ್ತೇವೆ. ಇಲ್ಲಿ ಮಾಯೆಯೆಂಬುದು ಸಂದರ್ಭವಷ್ಟೇ. ಅದು ನಿರ್ಗುಣಿ. ಗುಣಾವಗುಣ ಆರೋಪವಿದ್ದರೂ ಅದನ್ನು ಎದುರಿಸುವವನದ್ದು. ನಗರವೆಂಬುದೇ ಮಾಯೆ. ಅದರ ಒಳಗೂ-ಹೊರಗೂ ನಾವಿದ್ದೇವಷ್ಟೇ.

ಒಂದು ಮಸಾಲೆ ದೋಸೆ ನಮ್ಮೊಳಗೆ ಹೇಗೆ ನಗರ ಸಂವೇದನೆಯ ಬೀಜವನ್ನು ಬಿತ್ತಿದೆ ಎಂದು ಊಹಿಸಿಕೊಂಡರೆ, ನಿಜದಿ ನಾವೇನಾಗಿ ಉಳಿದಿದ್ದೇವೆ ಎನ್ನುವುದೇ ಸೋಜಿಗ. ಇದೊಂದು ಮಾಯೆ ಎನಿಸುವುದಿಲ್ಲವೇ? ಯಾಕೆಂದರೆ, ಮುಂಬು ಮಳೆಗೆ ಮುಳುಗಿತ್ತು, ಚೆನ್ನೈಯೂ ಮುಳುಗಿತ್ತು. ಈಗ ದಿಲ್ಲಿಯೇ ಮುಳುಗಿದೆ. ಮೂರು ದಿನಗಳ ಹಿಂದೆ ಸುರಿದ ಮಳೆಗೆ ದಿಲ್ಲಿಯ ಪ್ರಮುಖ ರಸ್ತೆಯಲ್ಲೇ ಮುಳುಗಿದ ಬಸ್ಸಿನಿಂದ ಏಣಿ ಇಟ್ಟು ಪಕ್ಕಕ್ಕೆ ಪ್ರಯಾಣಿಕರನ್ನು ದಾಟಿಸುವ ವಿಡಿಯೋ ದೃಶ್ಯಗಳನ್ನು ಕಂಡರೆ ಭಯವಾಗುತ್ತದೆ. ಕನಸು ಕಟ್ಟಿಕೊಂಡು ನಾವು ಗುಂಡಿಗೆ ಬೀಳುತ್ತಿದ್ದೇವೆಯೇ ಎಂದೂ ಅನಿಸುವುದಿದೆ. ಜತೆಗೆ ಬೆಂಗಳೂರಿನಲ್ಲಿ ಒಂದಿಷ್ಟು ಹಣ ಕೂಡಿಸಿ ನಿವೇಶನ ಪಡೆದು ಕಟ್ಟಿಸಿಕೊಂಡ ಮನೆಯೂ ಒತ್ತುವರಿಯ ಕಾರಣಕ್ಕೆ ಕೆಳಗೆ ಉರುಳುತ್ತಿವೆ. ಇವೆಲ್ಲ ಏನು? ಎನ್ನಿಸದಿರದು.

ಮಾಯೆಯೊಂದು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವಾಗ ಯಾವ ಅನುಭವವೂ ನಮ್ಮ ಅರಿವಿಗೆ ಬಾರದು. ಗಾಳಿಯಲ್ಲಿ ತೇಲುವ ಬಲೂನಿಗೆ ತನ್ನ ಭಾರ ತಿಳಿಯದು. ಅದೇ ಸ್ಥಿತಿ ನಮ್ಮದು. ಮಾಯೆ ಬಿಟ್ಟು ಹೋದ ಮೇಲೆ ಉಳಿದುಕೊಂಡದ್ದು ಲೆಕ್ಕ ಹಾಕಿದರೆ ವ್ಯವಕಲನವಷ್ಟೇ ನೆನಪಿಗೆ ಬರುತ್ತದೆ. ಹಾಗೆಂದು ಇಡೀ ಪ್ರಕ್ರಿಯೆಯೇ ಸಂಪೂರ್ಣ ನೇತ್ಯಾತ್ಮಕ (ನೆಗೆಟಿವ್) ವಲ್ಲ; ಹಾಗೆ ಇರುವುದೂ ಇಲ್ಲ.

ಯಾವ ಸಂದರ್ಭವೂ ನೇತ್ಯಾತ್ಮಕ ಅಥವಾ ಧನಾತ್ಮಕ (ಪಾಸಿಟಿವ್) ಆಗಿ ಇರದು. ಅದು ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. ಅದನ್ನು ಎದುರುಗೊಳ್ಳುವವನ ಮನಸ್ಥಿತಿ ಪರಿಣಾಮವನ್ನು ನಿರ್ಧರಿಸುತ್ತದೆ. ನಾವೂ ಅದೇ ಸರ್ಕಲ್ಲಿನಲ್ಲಿದ್ದೇವೆ. ದಾರಿಯ ಆಯ್ಕೆಯೂ ನಮ್ಮದೇ. ಒಂದು ಸಮಾಧಾನವೆಂದರೆ ನಗರಗಳಲ್ಲಿ ಡೆಡ್ ಎಂಡ್ ಎಂದಿರದು. ಎಲ್ಲೇ ಹೋದರೂ ವಾಪಸು ಮತ್ತೊಂದು ತುದಿಗೆ ಬಂದು ಸೇರುತ್ತೇವೆ !

ಇದೇ ನಂಬಿಕೆಯ ಮೇಲೆಯೇ ನಮ್ಮ ನಗರಗಳು ಬೆಳೆದದ್ದು. ವಲಸೆಯಿಂದ. ಮನುಷ್ಯನ ನಾಗರೀಕತೆಯ ವಿನ್ಯಾಸಕ್ಕೂ ಇದರ ಸ್ಪಷ್ಟ ಚಹರೆ ಇದೆ. ಸಂಸ್ಕೃತಿ ಮತ್ತು ನಾಗರೀಕತೆಯ ನೆಲೆಗಳೂ ಬರುವುದೂ ಇಂಥದ್ದೇ ಒಂದು ವಲಸೆಯಿಂದ. ಹಾಗಾಗಿ ಇದರ ಪರಿಧಿಯಲ್ಲೇ ಎಲ್ಲವೂ ರೂಪುಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಪುನರ್ ರೂಪಿಸಿಕೊಳ್ಳುತ್ತೇವೆ. ಈ ಪರಿವರ್ತನೆಯಲ್ಲಿ ನಾವು ಏನನ್ನು ಪಡೆಯುತ್ತಿದ್ದೇವೆ, ಪಡೆದೆವು, ನಮ್ಮದಾಗಿಸಿಕೊಳ್ಳುತ್ತಿದ್ದೇವೆ ಹಾಗೂ ಏನಾಗುತ್ತಿದ್ದೇವೆ ಎಂಬುದು ಸದಾ ಎದುರಾಗುತ್ತಿರುವ ಪ್ರಶ್ನೆಗಳು. ಈ ಗೇಮ್ ನಲ್ಲಿ ಪ್ರತಿ ಪ್ರಶ್ನೆಯ ಎದುರೂ ಎರಡು ಕ್ಷಣ ನಿಂತು, ಮೌನ ಧರಿಸಿ, ಆಲೋಚಿಸಿ ಮುಂದಡಿ ಇಡಬೇಕು. ಇದೇ ಪಂದ್ಯದ ನಿಯಮವೂ ಸಹ.

ನಗರದ ಇತಿಹಾಸಕ್ಕೆ ಹೋದರೆ ಭಾರತದ ಸಂದರ್ಭಕ್ಕೆ ಹರಪ್ಪ ನಾಗರೀಕತೆಯ ಎಳೆಯಿದೆ. ಒಂದು ನಗರ ಹೇಗಿರಬೇಕು ಮತ್ತು ಎಷ್ಟು ಯೋಜಿತವಾಗಿರಬೇಕು ಎನ್ನುವುದಕ್ಕೆ ಆ ನಾಗರೀಕತೆಯ ಕುರುಹುಗಳೇ ಸ್ಪಷ್ಟ ನಿದರ್ಶನ. ಆದರೆ, ಆಂಥದೊಂದು ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಂಡು ಆಧುನಿಕ ಸಂದರ್ಭಕ್ಕೆ ಸರಿಯಾಗಿ ಮಾರ್ಪಾಡು ಮಾಡಿಕೊಳ್ಳದದ್ದರ ಪರಿಣಾಮ ಇಂದು ನಗರಗಳೆಂದರೆ ಅವ್ಯವಸ್ಥೆಯ ಆಗರಗಳೆನಿಸಿವೆ. ಇದರ ಮಧ್ಯೆಯೂ ನಮಗೆ ನಗರಗಳು ತೋರುವುದು ಕನಸು ಮಾರುವ ಚೆಲುವರಂತೆ.

ಮುಂಬುಯಂಥ ನಗರ ಎಷ್ಟೊಂದು ಮಂದಿಗೆ ಬದುಕು ಕೊಟ್ಟಿಲ್ಲ, ಕೋಲ್ಕತ್ತಾದಲ್ಲಿ ಬದುಕು ಕಟ್ಟಿಕೊಂಡವರಿಗೆ ಲೆಕ್ಕವಿಲ್ಲ. ಅಷ್ಟೇಕೆ? ಬೆಂಗಳೂರಿನಲ್ಲಿ ಬದುಕಲು ಬಂದವರು ಎಷ್ಟೊಂದು ಜನ? ಹೀಗೆ ನಿತ್ಯವೂ ಸಣ್ಣ ಸಣ್ಣ ಹಳ್ಳಿಗಳಿಂದ ಬದುಕನ್ನು ಅರಸಿಕೊಂಡು ಬರುವವರ ಉತ್ಸಾಹವನ್ನು ಈ ಅವ್ಯವಸ್ಥೆಯ ಯಾವ ಉದಾಹರಣೆಗಳೂ ಕುಂದಿಸಿಲ್ಲ ಎನ್ನುವುದು ಮರೆಯಬಾರದು.

ಇಂಥ ಸರ್ವರಿಗೂ ಬೆಲ್ಲವೆನಿಸುವ ನಗರೀಕರಣಕ್ಕೂ ಪಶ್ಚಿಮದಲ್ಲಿ 18 ನೇ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಗೂ ಸಂಬಂಧವಿದೆ. ಈ ಕ್ರಾಂತಿ ನಮಗೆ ಕಾಲನಿಗಳನ್ನು ಸೃಷ್ಟಿಸಿ ಕೊಟ್ಟಿತು. ಈ ಕಾಲನಿಗಳೆಂದರೆ  ಗುಂಪುಗುಂಪಾಗಿರುವ ವಸತಿ ಪ್ರದೇಶ. ನಿರ್ದಿಷ್ಟ  ವೃತ್ತಿಯ/ಕಂಪೆನಿಯ ಕಾರ್ಮಿಕರು ಒಂದೆಡೆ ವಾಸಿಸುವ ಕ್ರಮ. ಇದರ ವಿಸ್ತೃತ ರೂಪವೇ ಈಗಿನ ನಗರ-ನಗರೀಕರಣ.

ಈ ಕಾಲನಿಯ ಕಲ್ಪನೆಯೂ ನನಗೆ ಅಚ್ಚರಿ ಮೂಡಿಸಿತ್ತು. ಆದರೆ ನನಗೆ ಅರ್ಥವಾದದ್ದು ಇದೇ ನೆಲೆಯಲ್ಲಿ. ಇದೂ 30 ವರ್ಷಗಳ ಹಿಂದಿನ ಮಾತೇ. ಭದ್ರಾವತಿಯಲ್ಲಿ ಓದುತ್ತಿದ್ದೆ. ಅಲ್ಲಿ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಕಾಗದದ ಕಾರ್ಖಾನೆಗಳಿದ್ದವು. ಸಾವಿರಾರು ಮಂದಿ ಕಾರ್ಮಿಕರಿದ್ದರಿಂದ ಅವರಿಗೆಲ್ಲಾ ಕಂಪೆನಿಗೆ ಹೊಂದಿಕೊಂಡ ಸ್ಥಳದಲ್ಲಿಯೇ ಕಾಲನಿಗಳನ್ನು ಸೃಷ್ಟಿಸಲಾಗಿತ್ತು. ಪೇಪರ್ ಕಾಲನಿ ಹಾಗೂ ವಿಐಎಸ್ ಎಲ್ ಕಾಲನಿ. ಅದರಲ್ಲೂ ಸಾಮಾನ್ಯ ಕಾರ್ಮಿಕರಿಗೆ ಮತ್ತು ಆಫೀಸರು ಗಳಿಗೆ ಪ್ರತ್ಯೇಕ.

ನಾವೆಲ್ಲಾ ಸಣ್ಣ ಸಣ್ಣ ಮನೆಯಲ್ಲಿದ್ದೆವು. ಎಲ್ಲ ಸೌಲಭ್ಯಗಳಿರಲಿಲ್ಲ. ಚರಂಡಿ, ಕುಡಿಯುವ ನೀರು ಎಂಬ ಸೌಲಭ್ಯವನ್ನು ಕಲ್ಪಿಸುವ ಹೊಣೆ  ಇದೆ ಎಂದು ಸ್ಥಳೀಯಾಡಳಿತಗಳು ಅರ್ಥ ಮಾಡಿಕೊಳ್ಳುತ್ತಿದ್ದ ಹೊತ್ತದು. ಆಗ ನಾವು ಈ ಕಾಲನಿಯ ಮಂದಿ ಕಂಡಾಗ ಸ್ವರ್ಗದಲ್ಲಿದ್ದಾರೆಂಬಂತೆ ಭಾಸವಾಗುತ್ತಿತ್ತು. ಯಾಕೆಂದರೆ, ಅವರಿಗೆ ಅಚ್ಚುಕಟ್ಟಾದ ಮನೆ, ನೀರು-ವಿದ್ಯುತ್ ದೀಪದ  ವ್ಯವಸ್ಥೆ, ಚರಂಡಿ, ಅವರ ಮಕ್ಕಳಿಗೆ ಶಾಲೆ ಇತ್ಯಾದಿ ಸೌಲಭ್ಯ. ನನ್ನೊಳಗೆ ನಗರದ ಬೀಜ ಬಿತ್ತಿದ್ದೇ ಅದು.ಇಡೀ ಭದ್ರಾವತಿಯಲ್ಲಿ ವಿದ್ಯುತ್ ಲೋಡ್ ಷೆಡ್ಡಿಂಗ್ ಅಥವಾ ಕರೆಂಟ್ ಹೋಗಿದ್ದರೆ, ಆ ಕಾಲನಿಯಲ್ಲಿ ದೀಪ ಉರಿಯುತ್ತಲೇ ಇರುತ್ತಿತ್ತು. ಆಗ ‘ನಮ್ಮ ಊರು ಹೀಗಿರಬೇಕು’ ಎಂದುಕೊಂಡದ್ದಿದೆ. ಕ್ರಮೇಣ ಕಾರ್ಖಾನೆಗಳ ವಿಭಾಗಗಳು ಜಾಸ್ತಿಯಾದವು. ನೌಕರರೂ ಬೇರೆಡೆಯಿಂದ ವಲಸೆ ಬಂದರು. ಮನೆಗಳು ಹೆಚ್ಚಾದವು. ಕ್ರಮೇಣ ಪೇಪರ್ ಟೌನ್ (ಕಾಗದದ ನಗರ) ಆಗಿ ರೂಪಾಂತರಗೊಂಡಿತು. ಇಂಥದೊಂದು ಪರಿಕಲ್ಪನೆ ಮಾದರಿಯಾಗಿ ಕಾಣದೇ ಇದ್ದದ್ದು ನಿಜಕ್ಕೂ ತಪ್ಪೇನೂ ಅಲ್ಲ. ಆದರೆ, ಇಂಥದೊಂದು ಕಲ್ಪನೆಯೇ ನಮಗೆಲ್ಲಾ ಇಂದಿಗೂ ನಗರದತ್ತ ಆಕರ್ಷಣೆ ಬೆಳೆಸಿರುವುದು.

ವಿಚಿತ್ರವೆಂದರೆ ಈ ವರ್ತಮಾನದಲ್ಲೇ ಅದೇ ನಗರಗಳು ಬಸವಳಿದಿವೆ, ಕಾಲನಿಗಳಲ್ಲಿ ಆ ಕಳೆ ಇಲ್ಲ. ಆ ನಗರದ ಮಂದಿಯೆಲ್ಲಾ ಮತ್ತೊಂದು ದೊಡ್ಡ ನಗರಕ್ಕೆ ವಲಸೆ ಹೋಗಿದ್ದಾರೆ-ಹೋಗುತ್ತಿದ್ದಾರೆ.  ಆ ಪರಿಕಲ್ಪನೆಯೇ ಢಾಳಾಗಿ ಕಾಣಿಸತೊಡಗಿದೆ. ಅವ್ಯವಸ್ಥಿತ, ಸಾಕಷ್ಟು ಕೊರತೆಯ ತಾಣವಾಗಿ ತೋರುತ್ತಿದೆ. ನಾವೀಗ ಇರುವ ನಗರಕ್ಕೂ ಆ ಅಳಿಯುತ್ತಿರುವ ಕಲ್ಪನೆಗೂ ಸಂಬಂಧವಿದೆ ಎಂದು ಅನಿಸುತ್ತಿದೆ.

ಮೂರು ದಿನದ ಹಿಂದೆ ಚೆನ್ನೈನಲ್ಲಿ ನಡೆದ ರೀಜನಲ್ ಎಡಿಟರ್‌ಸ್‌ ಕಾನ್ಫರೆನ್‌ಸ್‌ ನಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಕೊಟ್ಟ ಅಂಕಿಅಂಶಗಳ ಪ್ರಕಾರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿನಲ್ಲಿ ಶೇ. 17 ರಷ್ಟು ಮಂದಿಯಷ್ಟೇ ನಗರಗಳಲ್ಲಿದ್ದರು. 2011 ರಲ್ಲಿ ಈ ಪ್ರಮಾಣ 31 ಕ್ಕೇರಿತು. 2030 ರ ಹೊತ್ತಿಗೆ  ಇದು ಶೇ. 40 ಕ್ಕೆ ತಲುಪುತ್ತದೆ. 2050 ರ ವೇಳೆಗೆ ಹಳ್ಳಿಗಳಲ್ಲಿರುವವರಿಗಿಂತ ಹೆಚ್ಚು ಮಂದಿ ನಗರಗಳಲ್ಲಿರುತ್ತಾರೆ. ಇಡೀ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವುದು ಭಾರತದಲ್ಲೇ.

ಹಾಗಾಗಿ ಸರಕಾರಗಳಿಗೂ ಆದಾಯ ಹುಟ್ಟುವುದಾದರೆ, ಉದ್ಯೋಗ ಸೃಷ್ಟಿಯಾಗುವುದಾದರೆ ಅದು ನಗರಗಳಿಂದಲೇ ಹೊರತು ಹಳ್ಳಿಯಿಂದಲ್ಲ ಎನ್ನುವ ನಂಬಿಕೆ ಜನರಿಗೆ ಬಂದು ವರ್ಷಗಳೇ ಕಳೆದಿವೆ. ಸರಕಾರಕ್ಕೆ ಬಂದಂತೆ ತೋರಿರಲಿಲ್ಲ. ಆದರೆ, ಮನಮೋಹನ್ ಸಿಂಗ್ ಪ್ರಧಾನಿಯಾದ ಮೇಲೆ ದೇಶದ ಆರ್ಥಿಕತೆ ಅಭಿವೃದ್ಧಿಯ ಕುರಿತು ಪ್ರಸ್ತಾಪ ಆರಂಭವಾತು. ಅಲ್ಲಿಂದ ಥ್ರೀ ಟೈರ್, ಟೂ ಟೈರ್ ಸಿಟಿ ಎಂಬುದೆಲ್ಲ ಚರ್ಚೆಯ ಮುನ್ನೆಲೆಗೆ ಬಂದವು. ಇವತ್ತು ಅದೇ ಗಾಡಿ ಸ್ಮಾರ್ಟ್ ಸಿಟಿಯೆಂಬ ಅಂಗಳಕ್ಕೆ ಬಂದು ನಿಂತಿದೆ. ದಿನವಿಡೀ ವಿದ್ಯುತ್, ನೀರು, ಎಲ್ಲದಕ್ಕೂ ನಿರ್ದಿಷ್ಟ ಸೇವೆ, ಮನರಂಜನೆ-ಎಲ್ಲವೂ ಇಂಥ ಸ್ಮಾರ್ಟ್ ಸಿಟಿಗಳಿಗಿದೆ ಎನ್ನುತ್ತಿದ್ದೇವೆ. ಅಲ್ಲಿಗೆ ನಗರೀಕರಣವೆಂಬ ಯಜ್ಞಕ್ಕೆ ಮತ್ತಷ್ಟು ತುಪ್ಪ ಸುರಿಯುತ್ತಿದ್ದೇವೆ. ಕೇಂದ್ರ ಸರಕಾರ ಹತ್ತು ಹಲವು ಯೋಜನೆಗಳನ್ನು ನಗರಕ್ಕೆಂದೇ ರೂಪಿಸುತ್ತಿದೆ.

ಹಾಗಾದರೆ ಈ ಬೆಂಕಿ ತಣಿಯದು. ಹಾಗಾಗಿ ಈ ಕಾವಿನಲ್ಲಿ ನಮ್ಮತನವನ್ನು (ಭಾಷೆಯಿಂದ ಹಿಡಿದು ಸಂಸ್ಕೃತಿವರೆಗೆ) ಹೇಗೆ ಕಾಪಾಡಿಕೊಳ್ಳುವುದು ಎಂಬುದಷ್ಟನ್ನೇ ಯೋಚಿಸಬೇಕು. ಇಲ್ಲದಿದ್ದಲ್ಲಿ ಅದು ನಮ್ಮನ್ನೂ ಕೊಚ್ಚಿಕೊಂಡು ಹೋಗುತ್ತದೆ. ಹಾಗಾಗದಂತೆ ಎಚ್ಚರಿಕೆ ವಹಿಸುವುದು ಜಾಣತನ. ಬದಲಾವಣೆಗೆ ನಮ್ಮನ್ನು ಒಗ್ಗಿಸಿಕೊಳ್ಳುತ್ತಲೇ ರೂಪಾಂತರಗೊಳ್ಳುವುದು ಬದುಕುವ ದಾರಿಯೂ ಸಹ.

ಬದುಕಲು ಎಲ್ಲಿಯಾದರೇನು? ಬದುಕು ಸಹ್ಯವೆನಿಸುವಂತಿರಬೇಕು ಎಂಬುದಷ್ಟೇ ಸಾಮೂಹಿಕ ಕಾಳಜಿ.