ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಎಲ್ಲ ಮಕ್ಕಳ ಮುಂದೆ ಹೋಗಿ. ಅವರು ನಿಮ್ಮನ್ನು ದಂಗು ಬಡಿಸುವಂತೆ ಸುಳ್ಳು ಹೇಳುತ್ತಾರೆ.
ಹಾಗಾದರೆ, ಈ ಮಾತು ಏಕೆ ಹುಟ್ಟಿತು ಎಂಬ ಪ್ರಶ್ನೆಯನ್ನು ಸೃಷ್ಟಿಸಿಕೊಂಡು ನಮ್ಮೊಳಗೆ ನಾವು ಹೊಕ್ಕೋಣ. ಆಗ ಎಲ್ಲವೂ ತಿಳಿದೀತು.
ನನ್ನ ಮಗನಿಗೆ ಜೋರು ನಿದ್ದೆ ಮಾಡುವ ಅಭ್ಯಾಸ. ಅಂದೂ ಸಹ ಬೆಳಗ್ಗೆ ಮಳೆ ಬೇರೆ ಬರುತ್ತಿತ್ತು. ರಾಯರು ಏಳುವಾಗ ತಡವಾಯಿತು. ಶಾಲೆ ವ್ಯಾನ್ ಗೆ ಸಿದ್ಧವಾಗಲು ಇರುವುದು ಕೇವಲ ೧೫ ನಿಮಿಷ. ಅಷ್ಟರಲ್ಲಿ ಆತ, ಹಲ್ಲು ತಿಕ್ಕಿ, ಸ್ನಾನ ಮಾಡಿ, ತಿಂಡಿ ತಿಂದು ಹೋಗಬೇಕು. ಅವನಿಗೆ ಗೊತ್ತು ಇದು ಸಾಧ್ಯವೇ ಇಲ್ಲವೆಂದು. ಅದನ್ನು ಹೇಳಿದರೆ, ನಾನು ಬೈಯುತ್ತೇನೆಂದು ಇದ್ದಕ್ಕಿದ್ದಂತೆ ರಾಗ ಶುರು ಮಾಡಿದ.
ನನಗೆ ಅಚ್ಚರಿ ಎನಿಸಿ, ಏನು? ಯಾಕೆ ಅಳುತ್ತಿದ್ದೀ ಎಂದು ಕೇಳಿದೆ. ಅವನು ಅಳು ನಿಲ್ಲಿಸಲಿಲ್ಲ, ಬದಲಾಗಿ ಜೋರಾಗಿಸಿದ. ನನಗೆ ಅವನ ಅಳುವಿನ ಕಾರಣ ತಿಳಿಯಿತು. ಯಾಕೆ ಶಾಲೆಗೆ ಹೋಗುವುದಿಲ್ಲವೋ ಎಂದು ಕೇಳಿದೆ. ಅದಕ್ಕೆ ಅಳುತ್ತಲೇ, ಈಗ ಸಮಯವಾಯಿತು. ತಡವಾಗಿ ಹೋದರೆ ವ್ಯಾನ್ ಡ್ರೈವರ್ ಬಯ್ಯುತ್ತಾರೆ ಎಂದ. ಎಲ್ಲ ಕಷ್ಟಪಟ್ಟು ಮುಗಿಸಿದರೂ ಆ ಸಮಯಕ್ಕೆ ಕಷ್ಟ ಎಂದು ನನಗನ್ನಿಸಿತು. ಅದಕ್ಕೆ ಒಂದೆರಡು ಕ್ಷಣ ಯೋಚಿಸಿದಂತೆ ಮಾಡಿ, ಸರಿ, ಹೋಗೋದು ಬೇಡ. ಮನೆಯಲ್ಲಿ ಕುಳಿತು ಓದಬೇಕು ಎಂದೆ. ಆಗ ಆಯಿತು ಅಂದವನ ಅಳು ಮೆಲ್ಲಗೆ ಕಡಿಮೆಯಾಗತೊಡಗಿತು. ಐದು ನಿಮಿಷ ಎನ್ನುವಷ್ಟರಲ್ಲಿ ಟಿವಿ ಆನ್ ಆಯಿತು. ತಕ್ಷಣವೇ ನಾನು, ಬೆಳಗ್ಗೆ ಬೆಳಗ್ಗೆ ಟಿವಿ ಹಾಕಬೇಡ, ಓದಿಕೋ ಎಂದೆ. ಆಗ ಅವನು, ಓದೋದೆಲ್ಲ ಮುಗಿದಿದೆ ಎಂದು ಉತ್ತರಿಸಿದ. ಈಗ ತಾನೇ ಓದ್ತೀನಿ ಎಂದಿದ್ದೆ ಎಂದು ಕೇಳಿದ್ದಕ್ಕೆ, ಹೌದು, ಈಗ ನೋಡಿದೆ. ಯಾವುದೂ ಇಲ್ಲ ಎಂದ. ಅವನು ಅಂದಂತೆ ರಾತ್ರಿ ಓದಿ ಮುಗಿಸಿದ್ದ.
ಈಗ ಹೊಸ ಸಮಸ್ಯೆ ಶುರುವಾಯಿತು. ಅವರಜ್ಜನಿಗೆ ಸಣ್ಣ ಸಣ್ಣ ನೆವ ಹೇಳಿ ಶಾಲೆಗೆ ಹೋಗದೇ ಇದ್ದರೆ ಕೋಪ ಬರುತ್ತದೆ. ಅಜ್ಜ ಅಂಗಳದಲ್ಲಿ ಓಡಾಡುತ್ತಿದ್ದ ಈತನ ಕಣ್ಣಲ್ಲಿ ಮತ್ತೆ ಹನಿ ಜಿನುಗತೊಡಗಿತು.’ಅಪ್ಪಾ, ಅಜ್ಜ ಕೇಳಿದರೆ ನಾನು ಏನು ಹೇಳೋದು?’ ಎಂದು ಕೇಳಿದ. ’ಆಗಿದ್ದನ್ನೇ ಹೇಳು’ ಎಂದದ್ದಕ್ಕೆ ಅವರು ಬೈತಾರೆ ಎಂದ.
ಕೆಲವು ಕ್ಷಣ ಏನೂ ಹೇಳಲಿಲ್ಲ. ಮತ್ತೆ ಅವನು ಅಳು ಜೋರಾಗಿಸಿ, ಏನು ಮಾಡಲಿ ಅಪ್ಪ ಏನು ಹೇಳಲಿ ಎಂದು ಪೀಡಿಸತೊಡಗಿದ. ನನಗೂ ಯಾಕೋ ಬೇಸರವಾಯಿತು. ಸರಿ, ಟಿವಿ ಆಫ್ ಮಾಡಿ ಕುರ್ಚಿಯಲ್ಲೇ ನಿದ್ದೆ ಮಾಡುವಂತೆ ಕುಳಿತುಕೋ. ಅಜ್ಜ ಬಂದರೆ, ಯಕೋ ಸ್ವಲ್ಪ ಜ್ವರ ಅನ್ನಿಸುತ್ತೆ ಅಂತೀನಿ ಅಂದೆ.
ತತ್ ಕ್ಷಣ ನಾನು ಹೇಳಿದಂತೆ ಅವನು ಮಾಡಿದ. ಅಜ್ಜನೂ ಬಂದರು, ಒಂದು ಸುಳ್ಳು ಹೇಳಿ ಕಳಿಸಿದೆ. ಆ ಮರುಕ್ಷಣ ಇವನು ಬಂದವನೇ ನನ್ನನ್ನು ತುಂಬಿಕೊಂಡು ಥ್ಯಾಂಕ್ಸ್ ಎಂದ. ಆಗಲೇನೋ ನನಗೆ ಖುಷಿಯಾಯಿತು. ಬಳಿಕ ಯೋಚಿಸತೊಡಗಿದೆ. ಈ ಉಪಾಯದ ಮೂಲಕ ಸುಳ್ಳು ಹೇಳಬಹುದೆಂಬುದನ್ನು ಸಾರಿದೆ ಎನಿಸತೊಡಗಿತು. ಅದು ತಪ್ಪಲ್ಲ ಎಂಬ ಭಾವನೆ ಅವನಲ್ಲಿ ಮೂಡಿಸಿದೆ ಎಂದನಿಸಿದ್ದು ನಿಜ.
ಅಲ್ಲಿಗೆ, ಆ ಮಾತು ನಿಜ. ಮಕ್ಕಳು ಸುಳ್ಳು ಹೇಳುವುದಿಲ್ಲ, ನಾವು ಕಲಿಸುತ್ತೇವೆ !
🙂