ಆಕಾಶದ ಮತ್ತೊಂದು ತುದಿಯನ್ನು ಕಾಣುವ ಹಂಬಲ ಸದ್ಯಕ್ಕೀಗ. ನನ್ನ ಕಾರ್ಯಕ್ಷೇತ್ರ ಬದಲಾಗಿದೆ. ಮಂಗಳೂರಿನ ವಿಜಯ ಕರ್ನಾಟಕದ ಬಳಗಕ್ಕೆ ಸದಸ್ಯನಾಗುತ್ತಿದ್ದೇನೆ. ಆ ಬಳಗದೊಂದಿಗೆ ಒಂದಾಗುವುದು ನನ್ನ ಮುಂದಿನ ನಡೆ.

ನನ್ನೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದಿದ್ದಾಗ ಉಡುಪಿಯ ಕೋಡಿ, ಕೊಡಪಾಡಿ. ಈಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಂದು ಹೇಳಬೇಕು. ಆದರೆ ಬೆಳೆದದ್ದು ಬೇರೆ ಬೇರೆ ಕಡೆ. ಶಿವಮೊಗ್ಗದಿಂದ ಹಿಡಿದು ಮೈಸೂರುವರೆಗೆ. ಪತ್ರಿಕೋದ್ಯಮ ಜೀವನದಲ್ಲಿ ಮಂಗಳೂರು ವಿಭಾಗದಲ್ಲಿ ಕೆಲಸ ಮಾಡಿಲ್ಲ. ಆ ಭಾಗದಲ್ಲೂ ಕೆಲಸಮಾಡಬೇಕೆಂಬ ತೀವ್ರತೆ ಇದ್ದದ್ದು ನಿಜ. ಅದಕ್ಕೀಗ ಅವಕಾಶ ಸಿಕ್ಕಿದೆ.

ಕಾಯಕದ ಜತೆಗೆ ಗುರುತಿಸಿಕೊಂಡ ನಮ್ಮಂಥ ಮಂದಿಗೆ ಎಲ್ಲರೂ ಆಪ್ತರಾಗುತ್ತಾರೆ, ಹಾಗೆಯೇ ಕೆಲವರು ದೂರವಾಗುತ್ತಾರೆ. ಇದು ಇದ್ದದ್ದೇ, ಅದರಲ್ಲಿ ನನಗೆ ಬೇಸರವೂ ಇಲ್ಲ, ಖುಷಿಯೂ ಇಲ್ಲ. ಮೈಸೂರಿನ ವಿಜಯ ಕರ್ನಾಟಕದ ಬಳಗಕ್ಕೆ ಸದಸ್ಯನಾದದ್ದು ನವೆಂಬರ್ 1, 2006. ನಾಲ್ಕೂವರೆ ವರ್ಷದಲ್ಲಿ ನಾನು ಸಾಕಷ್ಟು ಬೆಳೆದಿದ್ದೇನೆ. ನನ್ನೊಳಗಿನ ಸಾಮರ್ಥ್ಯವನ್ನು ಮೈಸೂರು ವಿಜಯ ಕರ್ನಾಟಕದ ಬಳಗ ಸಾಕಷ್ಟು ಬೆಳೆಸಿದೆ. ಸಂಪಾದಕೀಯ, ಜಾಹೀರಾತು, ಪ್ರಸಾರಾಂಗ, ಮುದ್ರಣ ವಿಭಾಗ ಸೇರಿದಂತೆ ಎಲ್ಲರೂ ನನ್ನೊಂದಿಗೆ ಸಹಕರಿಸಿದ್ದನ್ನು ಎಂದಿಗೂ ಮರೆಯಲಾಗದು. ವಾಸ್ತವವಾಗಿ ನನಗನ್ನಿಸಿದ್ದೂ ಇದೇ.

“ನಾವೆಲ್ಲಾ ಒಂದು ಕುಟುಂಬದವರು’ ಎಂದು ಬಾಯಿ ಮಾತಿನಲ್ಲಿ ಹೇಳಿಬಿಡಬಹುದು, ಹಾಗೆ ಭಿನ್ನ ಭಿನ್ಣ ನೆಲೆಯವರು ಸೇರಿ ಬದುಕುವುದು, ಹಾಗೆ ಪ್ರಯತ್ನಿಸುವುದು ಬಹಳ ಕಷ್ಟ. ಆದರೆ, ಇದು ಬಾಯಿ ಮಾತಲ್ಲ. ನಿಜಕ್ಕೂ ಮೈಸೂರು ವಿಜಯ ಕರ್ನಾಟಕ ಬಳಗ ಅಂಥ ಕಷ್ಟವನ್ನು ಹಗುರಾಗಿಸಿತು. ಎಲ್ಲ ವಿಭಾಗದವರೂ ಪರಸ್ಪರ ಗೌರವಯುತವಾಗಿಯೇ ವ್ಯವಹರಿಸಿದ್ದೇವೆ. ಈ ವ್ಯವಹರಿಸುವುದೆಂದರೆ ತೀರಾ ವಾಣಿಜ್ಯ ನೆಲೆಯ ಪದವೆಂದೆನಿಸಬಹುದು. ಅದನ್ನು ಆ ನೆಲೆಯಲ್ಲೇ ಅರ್ಥೈಸಿಕೊಳ್ಳಬೇಕಿಲ್ಲ. ಇಲ್ಲಿ, ಈ ಸಂದರ್ಭದಲ್ಲಿ ಪ್ರಸ್ತಾಪಿಸಿರುವುದು ನಮ್ಮ ಕಾರ್ಯ ಹೊಣೆಯನ್ನು ನಿಭಾಯಿಸಿರುವ ರೀತಿ ಹೇಳಲು.

ವಿಕ ಫೋನ್ ಇನ್ ನಿಂದ ಹಿಡಿದು, ಹಲವು ಪ್ರಯೋಗಗಳನ್ನು ಮಾಡಲು ಸಾಧ್ಯವಾಗಿದ್ದು ಮೈಸೂರಿನಲ್ಲಿ. ನಮ್ಮ ಸಂಪಾದಕೀಯ ಬಳಗದ ಆಸಕ್ತಿ ನನಗೂ ಪಾಠ ಕಲಿಸಿದ್ದು ನಿಜ. ಅದನ್ನು ಒಪ್ಪಿಕೊಳ್ಳಲೇಬೇಕಾದ ಸಂಗತಿ.
ನನ್ನ ಕುಟುಂಬ ಇರುವುದು ಅಲ್ಲಿಗೇ ಹತ್ತಿರುವಿರುವ ಪುತ್ತೂರಿನಲ್ಲಿ. ಮಗ, ಮಗಳು, ಪತ್ನಿ ಮತ್ತು ಅಮ್ಮ ನನ್ನ ಬರುವಿಗೆ ಕಾಯುತ್ತಿದ್ದಾರೆ.

ಮೈಸೂರು ಬಳಗದಲ್ಲಿ ಒಂದು ತಂಡವಾಗಿ ಕಾರ್ಯ ನಿರ್ವಹಿಸಿದ್ದು ನಿಜದ ಸೊಗಸು. ಎಲ್ಲರ ಸಹಕಾರದಿಂದ ಬೆಳೆದಿದ್ದು ನಾನೂ ಸಹ. ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾದದ್ದು ಎಲ್ಲರ ಸಹಕಾರದಿಂದಲೇ, ಅದರಲ್ಲಿ ಎರಡು ಮಾತಿಲ್ಲ. ಒಬ್ಬೊಬ್ಬರಿಂದಲೂ ಪಾಠ ಕಲಿಯುತ್ತಲೇ ನನ್ನನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು.

ನನ್ನ ಮೊದಲ ದಿನದವರೆಗೂ ಮೈಸೂರು ಕಚೇರಿಯನ್ನು ನೋಡಿಯೇ ಇರಲಿಲ್ಲ. ಅಂದು ಬೆಂಗಳೂರಿನಿಂದ ಬೆಳಗ್ಗೆ 7 ಕ್ಕೆ ಹೊರಟು ಹತ್ತೂವರೆಗೆ ಆಟೋದಲ್ಲಿ ದೇವರಾಜ ಅರಸ್ ರಸ್ತೆಯ ದರ್ಗಾ ಬಳಿ ಇಳಿದು ಯಾರನ್ನೋ ಕೇಳಿದೆ. ಅವರು ಹಿಂದೆ ಹೋಗುವಂತೆ ತಿಳಿಸಿದರು. ಒಂದು ಬ್ಯಾಗ್ ಹಿಡಿದುಕೊಂಡು ಕೆಳಗಿಳಿದು ಬಂದಾಗ, ವಿಜಯ ಕರ್ನಾಟಕ ಕಚೇರಿ ಬೋರ್ಡ್ ಕಾಣಿಸಿತು. ಒಳಹೊಕ್ಕೆ, ಸಿ. ಕೆ. ಮಹೇಂದ್ರ ಅವರು ನನ್ನನ್ನು ಎಲ್ಲರಿಗೂ ಪರಿಚಯಿಸಿದರು. ನಂತರ ನನ್ನ ಕೆಲಸ ಪ್ರಾರಂಭವಾಯಿತು. ಮೊದಲ ತಿಂಗಳು ಏನೂ ಮಾಡಲಿಲ್ಲ. ನಂತರ ನಿಧಾನವಾಗಿ ಎಲ್ಲರೊಂದಿಗೆ ಸೇರಿಕೊಂಡೆ. ಹೊಸತನ್ನು ಮಾಡಲು ಅನುವಾದಾಗ ಎಲ್ಲರ ಸಹಕಾರವೂ ಸಿಕ್ಕಿತು.

ಆವಿಷ್ಕಾರದಂಥ ವಿಜ್ಞಾನ ಪುಟ, ರೂಪಕದಂತ ಮೆಲು ದನಿಯ ಪುಟ, ಕಾಗದದೋಣಿಯಂಥ ಮಕ್ಕಳ ಪುಟ, ವಿಕ ಪೋನ್ ಇನ್, ವಿಕ ಅದಾಲತ್, ವಿಕ ಸಮೀಕ್ಷೆ, ವಿಕ ಅಭಿಯಾನ, ವಿಕ ವೇದಿಕೆಯಂಥ ಹತ್ತು ಹಲವು ಹೊಸತಿಗೆ ಎಲ್ಲರೂ ಸ್ಪಂದಿಸಿ, ಸಲಹೆ ನೀಡುತ್ತಿದ್ದುದರಿಂದ ರಾಜ್ಯ ಮಾನ್ಯತೆ ಪಡೆಯಿತು. ಮೂರು ದಿನದ ಹಿಂದೆ ನನ್ನ ಗೆಳೆಯರೆಲ್ಲಾ ಸೇರಿ ಬೀಳ್ಕೊಡುಗೆ ಕೊಟ್ಟರು. ಹೊಸದಾಗಿ ನನ್ನ ಹೊಣೆ ವಹಿಸಿಕೊಂಡಿರುವ ಚಂದ್ರಶೇಖರ್ ಅವರಿಗೆ ಸ್ವಾಗತಿಸಿದರು. ಆಗ ನನ್ನ ಕಾರ್ಯ ರೀತಿಯನ್ನು ಹಲವರು ನೆನೆಸಿಕೊಂಡರು, ಅವರಿಗೆ ಧನ್ಯವಾದ. ಬಹಳ ಖುಷಿಯಾದದ್ದೆಂದರೆ, ನನ್ನನ್ನು ಬೀಳ್ಕೊಡಲು ಎಲ್ಲ ವಿಭಾಗದವರೂ (ಪ್ರಸಾರಾಂಗ, ಜಾಹೀರಾತು, ಮುದ್ರಣ, ಬಿಎನ್ ಸಿ, ಲೆಕ್ಕ ವಿಭಾಗ ಎಲ್ಲರೂ) ಸೇರಿದ್ದು. ಅದು ನನ್ನ ಅದೃಷ್ಟವೂ ಸಹ. ಆ ದಿನ ನನ್ನ ಬಗ್ಗೆ ಎಲ್ಲರೂ ಸಾಕಷ್ಟು ಮಾತನಾಡಿದರು. ನನಗೇನೂ ಮಾತನಾಡಲು ಸಾಧ್ಯವಾಗಲಿಲ್ಲ, ತೀರಾ ಭಾವುಕನಾದೆ, ಕಣ್ಣುಗಳಲ್ಲಿ ಹನಿಗೂಡಿತು, ಗಂಟಲು ಕಟ್ಟಿಕೊಂಡಿತು. ಧನ್ಯವಾದಗಳನ್ನು ಹೇಳಿ, ಕೈ ಮುಗಿದೆ.

ನಿಜ, ಮೈಸೂರಿನಲ್ಲಿ ಎಲ್ಲರ ಸಹಕಾರದಿಂದ ನಾನು ಬೆಳೆದಿದ್ದೇನೆ,..ಇದು ತುಟಿಯ ಮೇಲಿನ ಮಾತಿನಲ್ಲ. ಅದಕ್ಕಾಗಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು, ಇಷ್ಟನ್ನು ಮಾತ್ರ ಹೇಳಬಲ್ಲೆ.