ಈ ತಂತ್ರಜ್ಞಾನವೇ ನನಗೆ ದೂರವಾಗಿತ್ತು. ಬ್ಲಾಗ್ ಎನ್ನೋದೇ ಗೊತ್ತಿರಲಿಲ್ಲ. ನಿಧಾನವಾಗಿ ಸ್ವಯಂಭೂ ತರ ಕಲಿತೆ. ಕೆಲವರ ಬಳಿ ಕೇಳಿ ಕಲಿತೆ…ಅಂತೂ ಸ್ವಲ್ಪ ಪರವಾಗಿಲ್ಲ ಅನ್ನಿಸುತ್ತೆ.navilu-11

ಪ್ರವೀಣ ಹೆಗಡೆ (ಬಣಗಿ) ಮೈಸೂರಿನ ಕಾವಾದಲ್ಲಿ ಓದುತ್ತಿರುವವನು. ಕೊನೆಯ ಪದವಿ ವರ್ಷ. ಒಬ್ಬ ಒಳ್ಳೆಯ ಕಲಾವಿದ. ವಿಭಿನ್ನವಾಗಿ ಆಲೋಚಿಸ್ತಾನೆ. ಅದಕ್ಕಿಂತಲೂ ಮುಖ್ಯವಾಗಿ ಒಳ್ಳೆಯ ಮನಸ್ಸು ಉಳ್ಳವನು. ಏನಾದರೂ ಕೇಳಿದರೆ ಬೇಸರವಿಲ್ಲದೇ ಹೇಳುತ್ತಾ, ಸಂಕೋಚದಿಂದ ಕೊಡುವುದೆಲ್ಲವನ್ನೂ ತಿರಸ್ಕರಿಸುತ್ತಾ ಇರುವವನು.  ನಾನು ಮೈಸೂರಿಗೆ ಬಂದಾಗ ನಿರಂಜನ ವಾನಳ್ಳಿಯವರು (ಈಗ ಓಮನ್ ದೇಶದಲ್ಲಿದ್ದಾರೆ) ನನಗೆ ಪರಿಚಯಿಸಿದ ಹುಡುಗ ಇವನು.

ಹೀಗೇ ನನ್ನ ಹೊಸ ಪರಿಕಲ್ಪನೆಗಳಿಗೆ ಬರೆಯುವ ಹೊಸ ಹುಡುಗರು ಬೇಕಿತ್ತು. ರಂಗಾಯಣದ ಬಹುರೂಪಿ ಹಬ್ಬ. ವಾನಳ್ಳಿಯವರು ಅಲ್ಲಿನ “ಉತ್ಸವದ ಪತ್ರಿಕೆ”ಗೆ ಸಂಯೋಜಕರಾಗಿದ್ದರು. ಆಗ ಅವರಲ್ಲಿ ನಾನು, “ನಮ್ಮಲ್ಲಿ ಬಹುರೂಪಿಯ ಬಹುಪಾಲು ಸಂಗತಿಗಳನ್ನು ವರದಿ ಮಾಡಬೇಕೆಂದಿದ್ದೇವೆ. ಎಲ್ಲದಕ್ಕೂ ನಮ್ಮ ವರದಿಗಾರರನ್ನು ಕಳುಹಿಸುವುದು ಕಷ್ಟ. ಅದಕ್ಕೆ ಸಣ್ಣ ಸಣ್ಣ ಸಂಗತಿಯ ವರದಿ ಮಾಡುವವರಿದ್ದಾರಾ?’ ಎಂದು ಕೇಳಿದೆ. ಅದಕ್ಕೆ ಅವರು ತೋರಿಸಿದ್ದು ಇಬ್ಬರನ್ನು. ಒಬ್ಬ ಈ ಪ್ರವೀಣ, ಮತ್ತೊಬ್ಬ ಬೆಂಗಳೂರಿನಲ್ಲಿರುವ ಸಹೋದ್ಯೋಗಿ ಚೈತನ್ಯ ಹೆಗಡೆ.

ಯಾಕೋ ಅವರಿಬ್ಬರೂ ನನಗಿಷ್ಟವಾದವರು. ಚೈತನ್ಯ ಬುದ್ಧಿವಂತ. ಮುಖಕ್ಕೆ ರಾಚುವ ಹಾಗೆ ತನಗನ್ನಿಸಿದ್ದನ್ನು ಹೇಳಿಬಿಟ್ಟು ತನ್ನ ಮನಸ್ಸನ್ನು ಖಾಲಿ ಮಾಡಿಕೊಳ್ಳುವಾತ. ಅವನ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.

ಈ ಚಿತ್ರ ಸಂಪುಟ ಆರಂಭಿಸಲು ಬಹಳ ದಿನಗಳಿಂದ ಆಲೋಚಿಸುತ್ತಿದ್ದೆ. ಹೀಗೇ ನನ್ನ ಗೆಳೆಯರ, ನಾನು ಸಂಗ್ರಹಿಸಿದ ಉತ್ತಮ ಚಿತ್ರಗಳ, ಕಲಾಕೃತಿಗಳ ಗುಚ್ಛ ವಾರಕ್ಕೊಮ್ಮೆ ಇಲ್ಲಿ ಬದಲಾಗುತ್ತದೆ. ಆ ವಾರ ಬಳಸುವ ಸಂಪುಟದ ಚಿತ್ರಗಳ ಬಗ್ಗೆ, ಕಲಾಕೃತಿಗಳ ಬಗ್ಗೆ ಚಿಕ್ಕದೊಂದು ವಿವರ ಕೊಡಲು ಪ್ರಯತ್ನಿಸುತ್ತೇನೆ. ಅದು ನನಗೆ ಖುಷಿ ಕೊಡುವ ಕೆಲಸ.

ಇದು ಎಂದಿಗೂ ಅವರೊಂದಿಗಿನ ಗೆಳೆತನದ ಋಣ ತೀರಿಸುವ ಕೆಲಸವಲ್ಲ ; ಮತ್ತಷ್ಟು ಸಂಬಂಧ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ.

ಈ ವಾರದ ಚಿತ್ರ ಸಂಪುಟ ಗೆಳೆಯ ಪ್ರವೀಣನದು. ಆತನಿಗೆ ಫೋಟೋ ತೆಗೆಯುವ ಹುಚ್ಚಿದೆ, ಚಿಕ್ಕ ಚಿಕ್ಕ ವೀಡಿಯೋ ಫಿಲ್ಮ್ ಮಾಡಬೇಕೆಂಬ ಹುಚ್ಚಿದೆ. ಅವನು ಮತ್ತು ಅವನ ಗೆಳೆಯರು ಚಿತ್ರಕ್ಕಾಗಿಯೇ ಚಿತ್ರಕುಲುಮೆ ಬ್ಲಾಗ್ ಆರಂಭಿಸಿದ್ದಾರೆ. ಹೀಗೆ ನಾನಾ ಹುಚ್ಚು…ಅವನು ಜೋಗ, ಮೈಸೂರು ಸೇರಿದಂ ತೆ ವಿವಿಧೆಡೆ ತೆಗೆದ ಚಿತ್ರಗಳು ಈ ವಾರದ ಚಿತ್ರ ಸಂಪುಟ ಅಂದರೆ “ಇಲ್ಲಿದೆ ಸಂಭ್ರಮ” ನೋಡಲು ಮರೆಯಬೇಡಿ.