ನಿಜಕ್ಕೂ ಘೋರ. ಬುಧವಾರ ರಾತ್ರಿ ೧೧ ರಿಂದ ಕಣ್ಣು ಕೀಳದೇ ಸುಮಾರು ಬೆಳಗಿನ ಜಾವ ೩. ೩೦ ವರೆಗೂ ಟಿ. ವಿ. ಮುಂದೆ ಕುಳಿತಿದ್ದೆ. ಪ್ರತಿ ಕ್ಷಣದ ಆತಂಕ ನಮ್ಮ ವ್ಯವಸ್ಥೆಯ ಬಗ್ಗೆಯೇ ಅಸಹನೆ ಹುಟ್ಟಿಸಿತು. ರೋಸಿ ಹೋಗಿ ಮಲಗಿಕೊಂಡೆ. ಗುರುವಾರ ಬೆಳಗ್ಗೆ ಎಲ್ಲವೂ ಮುಗಿದು, ಸಾವಿನ ಸಂಖ್ಯೆಗೂ ವಿರಾಮ ಸಿಕ್ಕಿ, ಒಳಗಿದ್ದ ಉಗ್ರರೆಲ್ಲಾ ಸತ್ತು ಇಲ್ಲವೋ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾರೆಂದು ಬೆಳಗ್ಗೆ ೯ ಕ್ಕೆ ಟಿ. ವಿ. ಹಾಕಿದರೆ ಮತ್ತಷ್ಟು ವಿಷಾದ ಆವರಿಸಿಕೊಂಡಿತು. ನಂತರ ಮನೆಯ ಟಿ. ವಿ. ಆರಿಸಲಿಲ್ಲ. ಕಚೇರಿಗೆ ಬಂದ ಮೇಲೂ ಟಿ. ವಿ. ಮುಂದೆ ವಿಷಾದದಿಂದಲೇ ಪೊಲೀಸರ ಕಾರ್ಯಾಚರಣೆ ನೋಡುತ್ತಾ ಹತಾಶನಾದೆ.

“ಮುಂಬಯಿ ಮೇರೆ ಜಾನ್’ ನ ಹಲವು ದೃಶ್ಯಗಳು ಹಸಿ ಹಸಿಗೊಂಡಂತೆ ಅನಿಸಿತು. ನಿಜವಾಗಲೂ ಯಾರು ಏನು ಬೇಕಾದರೂ ತಿಳಿಯಲಿ. ಇದುವರೆಗೆ ಬಾಂಬ್ ಸ್ಫೋಟದಲ್ಲಿ ಭಾಗಿಯಾದವರಲ್ಲಿ ಒಂದಷ್ಟು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲೇಬೇಕು. ಇಲ್ಲವಾದರೆ ಈ ಕೃತ್ಯಗಳು ನಿಲ್ಲುವುದಿಲ್ಲ, ಸರಣಿ ಮುಂದುವರಿಯುತ್ತದೆ.
ನಾವು ಜಾತ್ಯತೀತ ಹಣೆಪಟ್ಟಿಯನ್ನು ನಂತರ ಕಟ್ಟಿಕೊಳ್ಳೋಣ. ಸಾರ್ವಜನಿಕರ, ಅಮಾಯಕರ ಬದುಕನ್ನು ದಿನೇ ದಿನೇ ಬಲಿಗೊಡುತ್ತಾ, ಅಸಹನೀಯಗೊಳಿಸುತ್ತಾ ವಿಶ್ವದ ನಕಾಶೆಯಲ್ಲಿ “ಶಾಂತಿಯ ಭಾರತ’ ಎಂಬ ಕೀರ್ತಿ ಕಳೆದುಹೋಗುತ್ತದಲ್ಲಾ ಎಂದು ಆತಂಕ ಪಡುವ ಅಗತ್ಯವಿಲ್ಲ.

ಭಯೋತ್ಪಾದನೆಗೆ ಧರ್ಮವೂ ಇಲ್ಲ, ಜಾತಿಯೂ ಇಲ್ಲ. ಹಾಗಾಗಿಯೇ ಹೇಳಿದ್ದು. ಅಮಾಯಕರ ಬಲಿ ತೆಗೆದುಕೊಳ್ಳುವ ಭಯೋತ್ಪಾದಕರಿಗೆ ಹೀಗೆ ಉಗ್ರ ಶಿಕ್ಷೆ ವಿಧಿಸದಿದ್ದರೆ ಅಮಾಯಕರೂ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ನಾವೆಲ್ಲರೂ-ಸರಕಾರ-ನಮ್ಮ ಜಾತ್ಯತೀತವಾದಿಗಳು…ಇತ್ಯಾದಿ… ಇತ್ಯಾದಿ- ರಾತ್ರಿಯೆಲ್ಲಾ ದುಃಖಗೊಂಡು ಬೆಳಗ್ಗೆ ಎದ್ದು ತಿಂಡಿ ತಿಂದು ರೈಲಲ್ಲೋ, ಬಸ್ಸಲ್ಲೋ ಕೆಲಸಕ್ಕೆ ಹೋಗಿ ಮರೆತು ಬಿಡುವುದು ನಮ್ಮ ಜಾಯಮಾನವಾಗಿ ಹೋಗಿದೆ. ನಮ್ಮನ್ನಾಳುವವರೂ ದೊಡ್ಡ ಘೋಷಣೆ ಕೊಟ್ಟು, ನಂತರ ಎಂದಿನ ನಾಟಕದ ಪಾತ್ರಗಳಿಗೆ ತೆರಳಿ ಬಿಡುತ್ತಾರೆ. ಬರೀ ಪ್ರದರ್ಶನ ನೋಡಿ ಚಪ್ಪಾಳೆ ತಟ್ಟಿ ಕುಳಿತುಕೊಳ್ಳುವುದು ನಮ್ಮ ಅಭ್ಯಾಸ.

೧೨೫ ಕ್ಕೂ ಹೆಚ್ಚು ಮಂದಿಯ ಮಾರಣಹೋಮ ನಡೆದದ್ದು ಉಗ್ರರಿಂದ. ಇಂಥ ಎಷ್ಟು ಬಾಂಬ್ ಸ್ಫೋಟಗಳು ನಡೆದಿಲ್ಲ ? ಕಳೆದ ಆರು ತಿಂಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳು ನಡೆದಿವೆ. ಅಷ್ಟಕ್ಕೂ ನಾವು ಕೈಗೊಂಡಿರುವುದೇನು ? ತಕ್ಷಣವೇ ಕಂಪ್ಯೂಟರ್ ಭಾವಚಿತ್ರ ತಯಾರಿಸಿ ಮಾಧ್ಯಮದಲ್ಲಿ ಹಾಕಿ, ಕೆಲವರನ್ನು ಹಿಡಿದು ತನಿಖೆ ಮಾಡಿ ಜೈಲಲ್ಲಿ ಒಳ್ಳೆ ಊಟ ಕೊಟ್ಟು ಕೂರಿಸುವುದು ಬಿಟ್ಟರೆ ಮಾಡಿರುವುದೇನು ? ಅದಕ್ಕೇ, ನಮ್ಮಲ್ಲಿ ಭಯೋತ್ಪಾದಕರು ಮತ್ತಷ್ಟು ಉಗ್ರರಾಗುತ್ತಿದ್ದಾರೆ !

ಅಮೆರಿಕದಲ್ಲಿ ಸೆಪ್ಟೆಂಬರ್ ೧೧ ರ ಘಟನೆ ನಂತರ ಹೇಳಿ, ನನ್ನ ಗಮನಕ್ಕೆ ಬಂದಂತೆ ಒಂದೇ ಒಂದು ಭಯೋತ್ಪಾದಕರ ದಾಳಿ ನಡೆದಿಲ್ಲ. ಲಾಡೆನ್ ಸಂತತಿ ಬೊಬ್ಬೆ ಹೊಡೆಯುತ್ತಿದೆಯೇ ಹೊರತು ಯಾವ ದಾಳಿಯೂ ನಡೆದಿಲ್ಲ. ಅದಕ್ಕೆ ಅಲ್ಲಿನ ಸರಕಾರ ಕೈಗೊಂಡ ದಿಟ್ಟ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಚೀನಾದ ಒಲಿಂಪಿಕ್ಸ್ ಮುನ್ನಾ ದಿನಗಳಲ್ಲಿ ಸ್ಫೋಟ ನಡೆಯಿತು. ಎಲ್ಲರೂ ಒಲಿಂಪಿಕ್ಸ್‌ನಲ್ಲಿ ಭಾರಿ ದುರಂತವಿದ್ದೀತೆಂದು ಗಾಬರಿಯಾಗಿದ್ದರು. ಆದರೆ ಅಲ್ಲಿಯ ಸರಕಾರವೂ ತಕ್ಷಣವೇ ಕೈಗೊಂಡ ಕ್ರಮ ಹೇಗಿತ್ತೆಂದರೆ ಭಯೋತ್ಪಾದಕರಿರಲಿ, ಶಂಕಿತರಾರೂ ಆ ದುಸ್ಸಾಹಸಕ್ಕೆ ಯೋಚಿಸಲೂ ಹೋಗಲಿಲ್ಲ. ಇಂಥ ದಿಟ್ಟ ಕ್ರಮ ನಮ್ಮಲ್ಲಿ ಏಕೆ ಸಾಧ್ಯವಾಗದು ?

ನಮ್ಮಲ್ಲಿ ಇಂದಿಗೂ ಉಗ್ರರಿಗೂ ಭಯವಿಲ್ಲ. ಅವರಿಗೆ ಸಹಕರಿಸುವವರಿಗೂ ಭಯವಿಲ್ಲ. ತನಿಖೆಗೆ ಒಂದಿಷ್ಟು ವರ್ಷ, ಶಿಕ್ಷೆಗೆ ಮತ್ತಷ್ಟು ವರ್ಷ…ಹೀಗೆ ಕಳೆಯುವಷ್ಟರಲ್ಲಿ ಅಂಥದ್ದೇ ಕೃತ್ಯದಲ್ಲಿ ತೊಡಗಿದ ಮತ್ತಷ್ಟು ಮಂದಿ ಅಮಾಯಕರ ಆಯುಷ್ಯವನ್ನು ಹರಣ ಮಾಡಿರುತ್ತಾರೆ. ಆದರೂ ನಮಗದು ಏನೂ ಅನಿಸದು. ಅಮಾಯಕರು ಬಲಿಯಾಗಬಾರದೆಂಬ ಕಾಳಜಿಯ ಮಧ್ಯೆ ಅವರಲ್ಲಿ ಯಾವ ಜಾತಿಯ ಅಮಾಯಕರು ಎಂದು ಜಾತಿ ಹುಡುಕುವಂಥ ಹೀನ ಕೆಲಸ ನಮ್ಮ ಆಳುವವರಿಂದಲೇ ನಡೆಯುತ್ತಿದೆ. ಇದೇ ನಮ್ಮ ದೊಡ್ಡ ದುರಂತ.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂಬುದು ನಿಜ. ಅದರರ್ಥ ಆ ಪ್ರಯತ್ನದಲ್ಲಿ ಸಾವಿರಾರು ಮಂದಿ ಅನ್ಯಾಯವಾಗಿ ಬಲಿಯಾಗಬೇಕೆಂಬುದು ನಿಜಕ್ಕೂ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡು ಮಾಡುವ ಸಂಗತಿ. ಮುಂಬಯಿಯ ಬುಧವಾರದ ದಾರುಣ ಘಟನೆಯಂತೂ ನೆನಪಿಸಿಕೊಳ್ಳಲಾಗದು. ಇಡೀ ದಿನಪೂರ್ತಿ ಬದುಕಲು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡ ಒತ್ತೆಯಾಳುಗಳ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. ಕ್ಷಣ ಕಾಲ ಆ ಪಾತ್ರಗಳನ್ನು ನಿಮ್ಮೊಳಗೆ ತುಂಬಿಕೊಳ್ಳಿ. ಅವರ ಅಸಹಾಯಕತೆ ಅರ್ಥವಾಗುತ್ತದೆ. ಅಂಥ ಪರಿಸ್ಥಿತಿ ಯಾರಿಗೂ ಬರಬಾರದು !

ಹೀಗೆಲ್ಲಾ ಆದರೂ, ನಮ್ಮ ಆಳುವವರು ಮತ್ತೆ ವೋಟಿನ ಲೆಕ್ಕಾಚಾರ ಮಾಡುತ್ತಾರೆ. ಅವರ ತೂಗಿ ಅಳೆಯುವ ಲೆಕ್ಕಾಚಾರದಲ್ಲಿ ಲೆಕ್ಕಕ್ಕಿಲ್ಲದೇ ಸಾವಿರಾರು ಮಂದಿ ಅಮಾಯಕರು ಸರಿದು ಹೋಗುತ್ತಾರೆ. ಅದು ಅವರ ಲೆಕ್ಕಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ ; ಯಾರ ಲೆಕ್ಕಕ್ಕೂ ಬಾರದು. ಬದುಕನ್ನು ಕಟ್ಟಿಕೊಳ್ಳಲು ಹೋದ ಮಂದಿ ಹೀಗೆ ಸದ್ದಿಲ್ಲದೇ ಸರಿದು ಹೋದರೆ ಹೇಗೆ…ಉತ್ತರ ಹೊಳೆಯುವುದಿಲ್ಲ. ಉತ್ತರವಿದ್ದರೂ ಪ್ರಶ್ನೆಯನ್ನೇ ಪ್ರೀತಿಸುವ ಮಂದಿಗೆ ಏನನ್ನೂ ಹೇಳಲು ಬಾರದು.

ಬುಧವಾರದ ದಾಳಿಯಲ್ಲಿ ಉಗ್ರರ ವಿರುದ್ಧ ಸೆಣಸುತ್ತಾ ಬಲಿಯಾದ ಪೊಲೀಸರಿಗೆ, ಯೋಧರಿಗೆ ನಾವೆಲ್ಲರೂ ಸದ್ಗತಿ ಕೋರಬೇಕು. ಇನ್ನಷ್ಟು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ತೆತ್ತವರಿಗೆ ನಮನ ಸಲ್ಲಿಸಬೇಕು. ಇವರ ಸಂಖ್ಯೆ ಹೆಚ್ಚಾಗಲಿ ಎಂದು ನಮ್ಮನ್ನಾಳುವ ಮಂದಿ ಮೊಸಳೆ ಕಣ್ಣೀರು ಸುರಿಸಿ ಹೇಳುತ್ತಾರೆ. ಅದರರ್ಥ “ಹೀಗೆ ನಮ್ಮ ಲೆಕ್ಕಾಚಾರಕ್ಕೆ ಸಾಯುವವರು ಹೆಚ್ಚಾಗಲಿ’ ಎಂಬುದು ಗೂಢಾರ್ಥ. ಈ ಮನಸ್ಸಿನೊಳಗಿನ ಕ್ರೌರ್ಯವನ್ನು ಎಲ್ಲರೂ ಖಂಡಿಸಬೇಕು. ಒಂದು ದಿನ ರೋಸಿ ಹೋದ ಜನ “ಎ ವೆಡ್ನೆಸ್ ಡೇ’ ಯನ್ನು ನಿಜಗೊಳಿಸಿ ಬಿಡುತ್ತಾರೇನೋ ಎನಿಸುತ್ತದೆ.

ಒಂದು ಸಂಘಟಿತ ವ್ಯವಸ್ಥೆಯ ವಿರುದ್ಧವೇ 24 ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಪ್ರತಿ ದಾಳಿ ನಡೆಸುವ ಮಟ್ಟಿಗೆ ಈ ಉಗ್ರರು ಶಸ್ತ್ರ ಸಜ್ಜಿತರಾಗಿದ್ದರೆಂದರೆ ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುವುದಿಲ್ಲವೇ? …ಒಟ್ಟಿನಲ್ಲಿ ಯಾರ ವೈಫಲ್ಯಕ್ಕೆ ಈ ಬಲಿ ?