ನಾವು ಬದುಕುವುದು ಯಾವಾಗ ? ದಿಲ್ಲಿಯಲ್ಲಿ ಬಾಂಬ್ ಸ್ಫೋಟಗೊಂಡು ೩೦ ಕ್ಕೂ ಹೆಚ್ಚು ಮಂದಿ ಸತ್ತ ಸುದ್ದಿ ಕೇಳಿ ನನಗೆ ಮೊದಲು ಅನಿಸಿದ್ದು ಇದು. ಯಾಕೋ ಮನಸ್ಸಿಗೆ ಬಹಳ ವೇದನೆ ಎನಿಸಿತು. ಜತೆಗೆ ವ್ಯಗ್ರಗೊಂಡಿತೂ ಸಹ. ಈ ಭಯೋತ್ಪಾದನೆಗೆ ಇನ್ನೆಷ್ಟು ಮಂದಿಯ ಬಲಿ ಕೊಡಬೇಕೆಂದು ತಿಳಿಯುತ್ತಿಲ್ಲ. ಮೊನ್ನೆ ಬೆಂಗಳೂರು, ಹೈದರಾಬಾದ್, ಇಂದು ದಿಲ್ಲಿ. ನಾಳೆ ನಾವಿರುವ ಊರೇ…ಹೀಗಾದರೆ ನಾವು ಬದುಕುವುದು ಯಾವಾಗ ? ದಿನೇ ದಿನೇ ಭಯೋತ್ಪಾದನೆಯ ತೀವ್ರತೆ ಹೆಚ್ಚುತ್ತಿದ್ದರೂ ಸರಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೆ ಕಾರಣವೂ ತಿಳಿಯುತ್ತಿಲ್ಲ. ರಾಜಕಾರಣವೇ ಎಲ್ಲ ಹಂತದ ಕೊನೆಯಾಗಬೇಕೇ ಎಂಬುದು ಸದ್ಯದ ಪ್ರಶ್ನೆ. ಒಂದಂತೂ ನಿಜ. ದೇಶಕ್ಕೆ ಕಂಟಕ ಎನಿಸುವ ಮಂದಿ ಯಾವುದೇ ಸಮುದಾಯದಲ್ಲಿದ್ದರೂ ಅವರು ಆತಂಕವಾದಿಗಳೇ. ಅದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಸಾರ್ವಜನಿಕರ ಪ್ರಾಣ ಹಾನಿ ತಪ್ಪಿಸಲು ಅಂಥ ಆತಂಕವಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಾಕೆ ಹಿಂದೆ ಮುಂದೆ ನೋಡಬೇಕೋ ? ವಿಚಿತ್ರ ಎನಿಸುತ್ತದೆ. ವೋಟಿನ ರಾಜಕಾರಣವೇ ನಮ್ಮ ಎಲ್ಲವೂ ಆಗಬಾರದು ಎಂದೆನಿಸುತ್ತದೆ. ದಿಲ್ಲಿಯಲ್ಲಿ, ಅದೂ ವಾರಾಂತ್ಯದ ಶಾಪಿಂಗ್ ಗೆ ಸಿದ್ಧವಾಗುತ್ತಿದ್ದ ಮಾರುಕಟ್ಟೆ, ಅದರೊಳಗಿನ ಜನಜಂಗುಳಿ. ರಜೆಯ ಮೂಡ್‌ಗೆ ತೆರಳಬೇಕಿದ್ದ ೩೦ ಕ್ಕೂ ಹೆಚ್ಚು ಮಂದಿ ಹೊಕ್ಕಿದ್ದು ಸಾವಿನ ಮನೆಗೆ. ಅದರ ಚಿತ್ರಗಳನ್ನು ಎನ್‌ಡಿಟಿವಿ ಯ ವೆಬ್‌ಸೈಟ್‌ನಲ್ಲಿ ನೋಡಿದೆ. ಆ ದೃಶ್ಯಗಳನ್ನು ಕಂಡರೆ ರಾತ್ರಿ ನಿದ್ದೆ ಬಾರದು. ಒಂದುವೇಳೆ ಬರುವ ಅಲ್ಪಸ್ವಲ್ಪ ನಿದ್ರೆಯಲ್ಲೂ ಎಚ್ಚೆತ್ತು ಕುಳಿತುಕೊಳ್ಳಬೇಕು. ನಿಜವಾಗಲೂ ಭೀಕರ ದೃಶ್ಯಗಳವು. ಹೀಗೆ ಸತ್ತವರೆಲ್ಲಾ ಮಾಡಿದ್ದಾದರೂ ಏನು ? ಯಾರದೋ ಸೇಡಿಗೆ ಅಮಾಯಕರು ಯಾಕಾದರೂ ಸಾಯಬೇಕು ? ಹೀಗೆ ಮುಗ್ಧರು ಸಾಯುವಾಗಲೆಲ್ಲಾ ಸರಕಾರಗಳು “ಎಲ್ಲೆಡೆ ಹೈ ಅಲರ್ಟ್’ ಎಂದು ಘೋಷಿಸಿ ನಾಲ್ಕು ದಿನ ರಸ್ತೆಯನ್ನೆಲ್ಲಾ ಕಾದು ಮತ್ತೇಕೆ ಮಲಗಬೇಕು ? ಮತ್ತೊಮ್ಮೆ ಘಟನೆ ನಡೆದಾಗ ಪುನಾ ಬಡಬಡಿಸಿ ಸುಮ್ಮನಾಗಬೇಕು ?-ಇವೆಲ್ಲಾ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಹಾಗೆಯೇ ಇಂಥ ಹೇಸಿಗೆಯೂ ಇದೆ. ಬೆಂಗಳೂರಿನಲ್ಲಿ ಆ ಸಮಯದಲ್ಲಿ ನಡೆಯುತ್ತಿದ್ದ ಬಿಜೆಪಿ ರಾಷ್ಟ್ರೀಯ ಕಾರ್‍ಯಕಾರಿಣಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಯುಪಿಎ ಸರಕಾರದ ಭಯೋತ್ಪಾದನೆ ವಿರುದ್ಧದ ಮೃದು ಧೋರಣೆಯನ್ನು ಖಂಡಿಸುತ್ತಾರೆ. ಅಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಲಾಲ್ ಕೃಷ್ಣ ಆಡ್ವಾಣಿಯವರನ್ನು ಪ್ರಧಾನಿಯಾಗಿ ಮಾಡಿದರೆ ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಪ್ರಚಾರ ಆರಂಭಿಸುತ್ತಾರೆ. ಅಲ್ಲಿಗೆ, ಇಲ್ಲಿಯೂ ನಮ್ಮದು ಪ್ರಚಾರದ ಪ್ರಯತ್ನವೇ ? ಭಯೋತ್ಪಾದನೆ ನಮ್ಮ ಬದುಕನ್ನು ಸಹನೀಯಗೊಳಿಸುವುದಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅಂಶ. ಅದರಲ್ಲಿ ಎರಡು ಅಭಿಪ್ರಾಯ ಇರಲಾರದು. ವಾಸ್ತವದ ದೃಶ್ಯ ಕಣ್ಮುಂದೆ ಇಟ್ಟುಕೊಂಡು ಭಯೋತ್ಪಾದನೆಯನ್ನು ಖಂಡಿಸಲೇಬೇಕು. ಇಲ್ಲದಿದ್ದರೆ ಎಲ್ಲ ಸಮುದಾಯದ ನಮ್ಮ ನೆಚ್ಚಿನ ಗೆಳೆಯರನ್ನೇ ಕಳೆದುಕೊಳ್ಳಬೇಕಾದ ಸಂದರ್ಭ ಒದಗಿ ಬಂದೀತು. ದಿಲ್ಲಿಯ ಬಾಂಬ್ ಸ್ಫೋಟದಲ್ಲಿ ಮರಣಕ್ಕೀಡಾದವರ ಆತ್ಮಕ್ಕೆ ಸದ್ಗತಿ ಕೋರುವುದೊಂದೇ ನಮಗಿರುವ ಸಾಧ್ಯತೆ. ಅದಕ್ಕಿಂತ ಹೆಚ್ಚಿನದೇನೂ ಸಾಧ್ಯವಾಗದೇನೋ ? ಅಷ್ಟನ್ನಾದರೂ ಮಾಡೋಣ.