ತಕ್ಷಣವೇ ನವೀನ ಮತ್ತು ಹರ್ಷ ಸೌತ್ ಡಿಸಿಪಿ ಗೆ ಫೋನ್ ಮಾಡಿದರು. ನನಗೋ ಕುತೂಹಲ. ಆ ಬದಿಯಿಂದ ಶುರುವಾದ ಸಂಭಾಷಣೆ ಇವರಿಬ್ಬರ ಮುಖದಲ್ಲೂ ಗೆಲುವು ತರಲಿಲ್ಲ. ಕೆಲ ಕ್ಷಣಗಳ ನಂತರ ನವೀನ್ ಫೋನ್ ಆಫ್ ಮಾಡಿ ಇದು ಕೊಲೆಯಲ್ಲವಂತೆ ಎಂದು ಹೇಳಿದ. ನಿಜ, ನಮಗಿಬ್ಬರಿಗೂ ಬೇಸರವಾಗಿತ್ತು. ಒಳ್ಳೆ ಸ್ಕೂಪ್ ಸಿಗಬಹುದೆಂದು ನಿರೀಕ್ಷಿಸಿದ್ದವರಿಗೆ ಸಿಂಗಲ್ ಕಾಲಂ ಸುದ್ದಿ ಸಿಕ್ಕಿತ್ತು.
ಆ ಹೆಣದ ಕುಲಗೋತ್ರ ಗೊತ್ತಿರಲಿಲ್ಲ. ಪತ್ರಿಕಾ ಭಾಷೆಯಲ್ಲಿ ಅದರಲ್ಲೂ ಕ್ರೈಮ್ ಬೀಟ್ನಲ್ಲಿ ಇದನ್ನು ಯುಡಿಆರ್ ಎಂದು ಪರಿಗಣಿಸಿ ಪುಣ್ಯಾರ್ಥವಾಗಿ ಹಾಕೋ ಸುದ್ದಿ. ಇವನ ಸಂಬಂಧಿಕರ್ಯಾರಾದರೂ ಗುರುತು ಪರಿಚಯ ಹಚ್ಚಿ ಹೆಣ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡ್ಲಿ ಎನ್ನೋ ಧಾಟಿಯಲ್ಲಿ ಹಾಕ್ತೀವಿ. ಅದಕ್ಕೆ ಕೊಡೋ ಶೀರ್ಷಿಕೆಯೂ ಅದೇ ತೆರನಾದದ್ದು. ಯಾವುದೋ ಪುಟದ, ಕಾಲಮ್ಮಿನ ಫಿಲ್ಲರ್ ಆಗಿ “ಅಪರಿಚಿತ ಶವ ಪತ್ತೆ’ ಎನ್ನೋ ಶಿರೋನಾಮೆಯಲ್ಲಿ ಮಾರನೇ ದಿನ ಸುದ್ದಿ ಪ್ರಕಟವಾಗುತ್ತದೆ.
ಇಷ್ಟೆಲ್ಲಾ ಆದ್ಮೇಲೆ ಆ ಹೆಣದ ಪೂರ್ವಾಪರ ತಿಳಿದ ನಮಗೆ ಅದು ಭಿಕ್ಷುಕನ ಹೆಣ ಅಂತ ತಿಳೀತು. ಇನ್ನೇನೂ ಮಾಡುವಂತಿರಲಿಲ್ಲ. ಸುಮ್ಮನೆ ಹೊರಟೆವು ಅಲ್ಲಿಂದ ಕಚೇರಿಗಳಿಗೆ. ಭಾನುವಾರವಾದರೇನು ? ಸೋಮವಾರವಾದರೇನು ? ದೇವಸ್ಥಾನಕ್ಕೆ ಹೋಗೋಕೆ ವಾರವಿದೆಯಾ? ಅನ್ನೋ ಹಾಗಿ ಕಮೀಷನರ್ ಕಚೇರಿಯತ್ತ ಹೊರಟೆವು. ಕಚೇರಿಗೆ ಹೋಗಿ ಕುಳಿತು ಬರೆಯೋವಷ್ಟು ಸುದ್ದಿ ಇರಲಿಲ್ಲ.
ಸಂಡೇ ಎಂದರೆ ಒಂದು ಬಗೆಯಲ್ಲಿ ಡ್ರೈ ಡೇ. ಸಾಮಾನ್ಯವಾಗಿ ರಾತ್ರಿ ಎಂಟರವರೆಗೂ ಒಂದು ಪ್ಯಾರಾ ಸುದ್ದಿಯೂ ಇರೋದಿಲ್ಲ. ಎಲ್ಲೂ ಅಪಘಾತ ಆಗಿರೋದಿಲ್ಲ, ಯಾರೂ ಕುಡಿದು ಟೈಟಾಗಿ ಬಿದ್ದು ಸತ್ತಿರೋದಿಲ್ಲ, ಯಾರ ಮಧ್ಯೆಯೂ ಮಾರಾಮಾರಿ ನಡೆದಿರೋದಿಲ್ಲ. ಆದರೆ ಎಂಟಾಗುತ್ತಿದ್ದಂತೆ ಅಪರಾಧದ ಟಿಆರ್ಪಿ (ರೇಟ್) ಏರುತ್ತಾ ಹೋಗುತ್ತದೆ. ಒಂದೊಂದು ಭಾನುವಾರವಂತೂ ನಮ್ಮ ಹೆಣ ಬಿದ್ದು ಹೋಗುವಷ್ಟು ಅಪರಾಧಗಳು ನಡೆದಿರುತ್ತವೆ. ನಮ್ಮ ಚೀಫ್ ರಿಪೋರ್ಟರ್ ಸೇರಿದಂತೆ ವರದಿಗಾರರ ಎಲ್ಲರೂ ಮನೆಯಲ್ಲಿ ಹೋಗಿ ಉಂಡು ಮಲಗಿದ್ದಾಗಲೂ ನಮ್ಮ ಕೆಲಸ ನಡೆಯುತ್ತಲೇ ಇರುತ್ತದೆ.
ಇಂಥದ್ದರ ನಡುವೆ ಮಾಡಲು ಕೆಲಸವಿಲ್ಲವಾದ್ದರಿಂದ ಸೀದಾ ಕಮೀಷನರ್ ಕಚೇರಿ ಒಳಗೆ ಹೋಗುತ್ತಿದ್ದಂತೆ ಒಬ್ಬ ಮಿಕ ಕಂಡು ಬಂದ. ಬೆಳ್ಳಗಿನ ಚರ್ಮ, ಕೆಂಚನೆಯ ಕೂದಲು, ಕುರುಚಲು ಗಡ್ಡ. ವಿದೇಶಿ ಪ್ರಜೆ ಎಂಬುದು ಪಕ್ಕ ಆಯಿತು. ಕಮೀಷನರ್ ಕಚೇರಿಯಲ್ಲಿಯೇ ವಲಸಿಗರ ಕುರಿತ ಮಾಹಿತಿ ಕಚೇರಿ ಇರುವುದರಿಂದ ವಿದೇಶಿಯರ ಆಗಮನ ಸಾಮಾನ್ಯ. ಹಾಗಾಗಿ ಇವನೂ ಬಂದಿರಬಹುದು ಎಂದು ನಾನು ಸುಮ್ಮನೆ ಮುಂದಕ್ಕೆ ಹೋದೆ. ಹರ್ಷ, ನವೀನನೂ ಹಿಂಬಾಲಿಸಿದ.
ಅಷ್ಟರಲ್ಲಿ ಒಬ್ಬ ಪರಿಚಿತ ಪೇದೆ ಬಂದವನೇ, “ಸಾರ್, ಯಾರೋ ಇಂಗ್ಲೆಂಡ್ನವನು ಬಂದವ್ನೆ. ಏನೋ ಇಂಗ್ಲಿಷ್ ನಲ್ಲಿ ಹೇಳ್ತಾನೆ’ ಎಂದ. ಹೆಲ್ಪ್ ಮಾಡೋ ದೃಷ್ಟಿಯಿಂದ ನಾವು ಅತ್ತ ಸಾಗಿದೆವು. ಹರ್ಷ ಮಾತನಾಡಿಸಲು ಶುರು ಮಾಡಿದ. ಒಂದೊಂದೇ ವಿವರ ಹೊರಬಂತು. ಅದೆಲ್ಲವೂ ದೊಡ್ಕ ಸ್ಕೂಪ್ ಆಗಿಬಿಡಬೇಕೇ ?
ಇಂಗ್ಲೆಂಡ್ನ ಗ್ಲುಕೋಸ್ಟೈರ್ ಪ್ರದೇಶದವನು ಆತ. ಅವನ ಹೆಸರು ಕ್ರೆಗ್ ಆರ್ಕೆಲ್. ವಯಸ್ಸು ಸುಮಾರು ೨೮. ಕೆಲಸವೇನೂ ಇಲ್ಲ. ಹೀಗೆ ಊರೂರು ತಿರುಗಿ ಅಲ್ಲಿನ ಅನುಭವದ ಬಗ್ಗೆ ಪುಸ್ತಕ ಬರೆಯೋದು. ಹಾಗೆಯೇ ಭಾರತಕ್ಕೂ ಬಂದಿದ್ದ. ಮುಂಬಯಿಗೆ ಬಂದವ, ಹೀಗೆ ದಾರಿ ಹಿಡಿದು ಬೆಂಗಳೂರಿಗೂ ಬಂದಿದ್ದ. ಆದರೆ ಮುಂಬಯಿಯ ರೈಲಿನಲ್ಲಿ ಅವನ ಭವಿಷ್ಯವನ್ನೇ ಬದಲಿಸಿತ್ತು. ಯಾರೋ ಅವನಿಗೆ ಟೋಪಿ ಹಾಕಿದ್ದರು.
ಅವನ ಸ್ಥಿತಿ ಹೇಗಿತ್ತೆಂದರೆ ಮುಂಬಯಿಗೆ ವಾಪಸು ಹೋಗುವ ಟ್ರೈನಿನ ಟಿಕೇಟೂ ಸಹ ಇರಲಿಲ್ಲ. ಕೈಯಲ್ಲಿದ್ದ ಎಲ್ಲ ಹಣ ಕಳೆದುಕೊಂಡಿದ್ದ. ಅಗತ್ಯ ದಾಖಲೆಗಳೂ ಕಾಣೆಯಾಗಿದ್ದವು. ತೀರಾ ಹತಾಶನಾಗಿ ಕಮೀಷನರ್ ಅವರ ಸಹಾಯ ಕೋರಲು ಬಂದಿದ್ದ. ಎಲ್ಲ ವಿವರ ಪಡೆದಾಗ ನಮ್ಮ ಮುಖದಲ್ಲಿ ಗೆಲುವು ಕಂಡು ಬಂದಿದ್ದು ಸತ್ಯ.
ಅಂದು ಭಾನುವಾರ. ಯಾವ ಅಧಿಕಾರಿಯೂ ಸಿಗಲಾರರು. ಸೋಮವಾರದವರೆಗೂ ಆತ ಕಾಯಬೇಕು. ನಮ್ಮೊಳಗೆ ಒಮ್ಮೆಲೆ ಸ್ಕೂಪ್ ಪ್ರಜ್ಞೆ ಮತ್ತು ಮಾನವೀಯತೆ ಎರಡೂ ಜಾಗೃತವಾಯಿತು. ಎರಡನ್ನೂ ನಿರ್ವಹಿಸುವುದು ಹೇಗೆ ಎಂಬ ಜಿಜ್ಞಾಸೆಯೂ ಎದುರಾಯಿತು.
ಅಷ್ಟರಲ್ಲಿ ಮೂವರೂ ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆವು. ಅವನಿಗೆ ಒಂದು ಪಂಚತಾರಾ ಹೋಟೆಲ್ನಲ್ಲಿ ರೂಮ್ ಮಾಡಿಸಿ ಕೂರಿಸಲು ಒಂದು ದಿನದ ಕೋಣೆಯ ಬಾಡಿಗೆಯಷ್ಟೂ ಸಂಬಳ ನಮಗೆ ಬರುತ್ತಿರಲಿಲ್ಲ. ಅವನನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಇದೆಲ್ಲದರ ಜತೆಗೆ ನಮ್ಮ ಎದುರಿನ ಗುಂಪಿಗೆ ಮಿಸ್ ಮಾಡುವ ಸ್ಕೆಚ್ ನ್ನೂ ರೂಪಿಸಲಾಯಿತು. ಅದರಂತೆ ಹರ್ಷ ಕ್ರೆಗ್ನನ್ನು ಕರೆದೊಯ್ದು ತನ್ನ ಕಚೇರಿಯ ವಿಸಿಟರ್ ಲಾಂಜ್ನಲ್ಲಿ ಕುಳ್ಳಿರಿಸಿದ.
ಎರಡೂ ಗುಂಪು ಪರಸ್ಪರ ಮಣಿಸಲು ಹಣಾಹಣಿ ನಡೆಸುತ್ತಿದ್ದರಿಂದ ಪತ್ತೇದಾರಿಕೆ ನಡೆಯುತ್ತಲೇ ಇತ್ತು. ಅವನಿಗೆ ಇವತ್ತು ಯಾವ ಸುದ್ದಿ ಸಿಕ್ಕಿರಬಹುದು? ನಮಗೆ ಯಾವುದು? ಹೀಗೆ ಫಾಲೋ ಮಾಡುತ್ತಲೇ ಇದ್ದವು. ನಮ್ಮ ನೆರವು ಕೋರಿದ್ದ ಪೇದೆಗೆ ಈ ವಿಷಯ ಯಾರಿಗೂ ತಿಳಿಸದಂತೆ ಹೇಳಿದ್ದೆವು. ನಾನು ಮತ್ತು ನವೀನ್ ನಮ್ಮಮ್ಮ ಕಚೇರಿಗೆ ಹೋಗಿ ಸುದ್ದಿ ಬರೆದೆ. ನನ್ನಲ್ಲಿ “ಆದರ್ಶ ಭಾರತ ಕಾಣಲು ಬಂದ, ಮೋಸ ಹೋದ’ ಎಂದು ಶೀರ್ಷಿಕೆ ಕೊಟ್ಟು ಸುದ್ದಿ ಬರೆದಾಯಿತು.
ಎಲ್ಲ ಮುಗಿಸಿ ಇಂಡಿಯನ್ ಎಕ್ಸ್ಪ್ರೆಸ್ ಬಸ್ ಸ್ಟಾಪ್ಗೆ ನಾನು ಬಂದೆ. ಕ್ರೆಗ್ ಆರ್ಕೆಲ್ ಅನ್ನು ನಮ್ಮೊಡನೆ ಎನ್ ಆರ್ ಕಾಲೋನಿಯ ಮನೆಗೆ ಕರೆದೊಯ್ದೆವು. ನಮ್ಮ ಮಾನವೀಯತೆಯ ಉಪಚಾರಕ್ಕೆ ಅವನು ಸೋತು ಹೋದ. ಅಂದು ಮಲಗಿದ್ದು ತೆರೇಸಿನಲ್ಲಿ. ಕಣ್ಣು ಬಿಟ್ಟರೆ ಆಕಾಶ, ಎಣಿಸಲಿಕ್ಕೆ ಸಾಕಷ್ಟು ತಾರೆ. ರಾತ್ರಿ ಕಳೆದದ್ದೇ ತಿಳಿಯಲಿಲ್ಲ !
ಬೆಳಗಾಗುವಷ್ಟರಲ್ಲಿ ಉದಯವಾಣಿ, ಹೊಸದಿಗಂತ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ನಮ್ಮ ಮುಖದಲ್ಲಿ ಕಾಂತಿ ಫಳಫಳಿಸುತ್ತಿತ್ತು ! (ಬ್ರಹ್ಮಚಾರಿಯ ಪುಟಗಳು ಆರನೆಯದನ್ನು ಬೇರೆ ಶೀರ್ಷಿಕೆಯಲ್ಲಿ ಹಾಕಿದ್ದೆ. ಆದರೆ ಓದುಗರಿಗೆ ಕಮ್ಯುನಿಕೇಷನ್ ಆಗಲಿಲ್ಲವೆಂದು ತೋರುತ್ತದೆ. ಅದಕ್ಕೇ ಹಳೇ ಶೀರ್ಷಿಕೆಯಲ್ಲೇ ಮುಂದುವರಿಸಿದ್ದೇನೆ)
ಮುಂದೇನಾಯಿತೆಂದು ತಿಳಿಸಲಿಲ್ಲ. ಆ ಇಂಗ್ಲೇಂಡ್ ಪ್ರಜೆ ಮತ್ತೆ ಎಲ್ಲಿಗೆ ಹೋದ..? ಮುಂದಿನ ವಿವರಗಳು ಮುಂದಿನ ಸಂಚಿಕೆಗಳಲ್ಲಿ ಅನಾವರಣಗೊಳ್ಳಲಿವೆಯೇ..? ಬಂದರೆ ನಾವಂತೂ ಸಂತೋಷಗೊಳ್ಳುತ್ತೇವೆ. ನಿಮ್ಮ ಕ್ರೈಂ ಬೇಟೆ ಈಗಲೂ ಮುಂದುವರಿಯುತ್ತಲಿದೆಯೇ..? ಇನ್ನೊಂದು ವಿಷಯ. ನೀವು ಪೊಲೀಸರೊಂದಿಗೆ, ಪೊಲೀಸ್ ಸುದ್ದಿಗಳೊಂದಿಗೆ ಗುದ್ದಾಡಿ ದಿನ ಕಳೆಯುವವರಾದ್ದರಿಂದ ಹೇಳುತ್ತಿದ್ದೇನೆ. ನನ್ನ ಬ್ಲಾಗ್ ನಲ್ಲಿ ಕೂಡಾ ಒಂದೆರಡು ಪೊಲೀಸರೊಂದಿಗಿನ ಪ್ರಸಂಗಳನ್ನು ನಿವೇದಿಸಿದ್ದೇನೆ. ಒಮ್ಮೆ ಕಣ್ಣು ಹಾಯಿಸಿ. http://www.pratispandana.wordpress.com/ ದಲ್ಲಿ ಹಾಕಿದ್ದೇನೆ.
ನಿಮ್ಮವ
ಗಣೇಶ್.ಕೆ
ಒಂದೊಳ್ಳೇ ಪತ್ತೇದಾರಿ ಕಾದಂಬರಿ ಓದುವ ಹಾಗೆ ಓದಿಕೊಳ್ಳುತ್ತಿದ್ದೇನೆ. ಮುಂದಿನ ಭಾಗ ಯಾವಾಗ?
ನಾವಡರೆ,
ನಿಮ್ಮ ದಿನಚರಿ ಮಸ್ತಾಗಿದೆ. ರೈಲು ಅಪಘಾತ ಎಂದು ತಿಳಿದೇ ಜನ ಲೊಚಗುಟ್ಟಿದರೆ, ‘ಟೋಲೆಸ್ಟು?’ ಎಂದು ಕೇಳಿ, ನಾಲ್ಕೆಂಟು ಇದ್ದರೆ ‘ಇಷ್ಟೇನಾ!’ ಲೊಚಗುಟ್ಟಿಕೊಳ್ಳುವವರು ನಾವು!
ಸುದ್ದಿಮನೆಯೇ ಹಾಗೆ!
ಗಣೇಶ್ ಕೆ. ಅವರೇ ನಿಮ್ಮ ಪಂಚ್ ಲೈನ್ ನಲ್ಲಿ ಪೊಲೀಸ್ ಪ್ರಸಂಗಗಳು ಚೆನ್ನಾಗಿವೆ. ಓದಿದೆ.ಮುಂದಿನ ಭಾಗದಲ್ಲಿ ಇಂಗ್ಲೆಂಡ್ ಗೆ ಹೋದವನ ಕಥೆಯೂ ಬರುತ್ತೆ. ಅಭಿಪ್ರಾಯಕ್ಕೆ ಧನ್ಯವಾದ.
ಸುಪ್ತದೀಪ್ತಿಯವರೇ,ಕಾದಂಬರಿ ಹಾಗೆ ಓದಿಸಿಕೊಂಡು ಹೋಗುತ್ತಿದ್ದರೆ ಖುಶಿ. ನಿಯಮಿತವಾಗಿ ಬರೆಯುತ್ತೇನೆ.ಸದ್ಯವೇ ಬರ್ಲಿದೆ ! ನಿಮ್ಮ ಹಾಗೂ ಶ್ರೀಪ್ರಿಯೆಯವರ್ ಅಭಿಪ್ರಾಯಕ್ಕೂ ಧನ್ಯವಾದ.
ನಾವಡ
Hellllooo dhArAvAhi munduvaresi plzzzzzzzzzz…
ರೋಹಿಣಿಯವರೇ,
ನಿಜವಾಗ್ಲೂ ಮುಂದುವರಿಸುತ್ತೇನೆ. ಎಲೆಕ್ಷನ್ ಬ್ಯುಸಿಯಲ್ವಾ ? ಅದಕ್ಕೇ. ಸದ್ಯವೇ ಮುಂದಿನ ಕಂತು ಬರುತ್ತೆ. ನೀವು ಹೀಗೆ ಬರ್ತಾ ಇರಿ.
ನಾವಡ