ಅವಳು ಅತ್ತಳು. ಹೌದು. ನಾವು ಅಳುವ ಹಾಗೆ. ಇಷ್ಟೊಂದು ದೊಡ್ಡವಳಾಗಿಯೂ ಅವಳು ಅಳುತ್ತಾಳೆ. ವರ್ಷಗಳೇ ಕಳೆದು ಹೋಗಿದ್ದವು. ವೆಂಕು ಅವಳು ಅತ್ತದ್ದನ್ನು ಕಂಡಿರಲಿಲ್ಲ. ಆದರೆ ಮೊನ್ನೆ ಅತ್ತಿದ್ದಾಳೆ, ಚಿಕ್ಕ ಮಕ್ಕಳ ಹಾಗೆ. 
*  *  *  *  *  *  *  *
ಬದುಕಿನ ಸೇತುವೆಯ ತುದಿಯಲ್ಲಿದ್ದಾಳೆ ಅವಳೀಗ. ಹತ್ತ್ಹೆಜ್ಜೆ ಇಟ್ಟರೆ ಬಹುಶಃ ಪಯಣ ಮುಗಿಯಬಹುದು ; ಒಂದು ತುದಿ ತಲುಪಿದಂತೆ. ಅಲ್ಲಿಂದ ಮತ್ತೊಂದು ತುದಿಯತ್ತ ಪಯಣಿಸುವುದು ನಂತರದ್ದು. ಮೊದಲಿನ ಹಾದಿಯಂತೂ ಪೂರ್ಣ.
ಅವಳ ಮನೆಯಲ್ಲೀಗ ಯುಗಳ ಗೀತೆ. ತಾನಾಯಿತು, ತನ್ನ ಪತಿಯಾಯಿತು, ಅಷ್ಟೇ. ಬದುಕೇ ಮತ್ತೊಂದು ಮಗ್ಗಲು ಬದಲಿಸಿದೆ. ಮೊನ್ನೆವರೆಗಿದ್ದ ಭಾವನೆಗಳೇ ಬೇರೆ. ಈಗಲೇ ಬೇರೆ. ಅಂದು ಇವರಿಬ್ಬರೂ ಬರೀ ಅಪ್ಪ-ಅಮ್ಮ. ಈಗ ಅಜ್ಜಿ-ತಾತನೂ ಆಗಿದ್ದಾರೆ. ಬೇರೆಯದೇ ಆದ ಜವಾಬ್ದಾರಿಗಳಿವೆ. ಅದಕ್ಕಾಗಿ ಒಂಟಿತನ ಎನಿಸುವುದಿಲ್ಲ.
ಹೇಮಂತ ಗಾನದಲ್ಲೇ ಲೀನವಾಗುತ್ತಲೇ ಅಸ್ತಿತ್ವವನ್ನು ಕಳೆದುಕೊಳ್ಳುವ ಮರ ಮತ್ತೆ ವಸಂತನ ಹಾಡಿಗೆ ಚಿಗುರುತ್ತಾ ಬರುವ ಹಾಗೆ, ಇವರೂ ಮೊಮ್ಮಕ್ಕಳ ಆರೈಕೆಯಲ್ಲಿ ಚಿಗುರುತ್ತಿದ್ದಾರೆ. ನಮ್ಮ ಹೊಣೆಯಿನ್ನೂ ಮುಗಿದಿಲ್ಲ ಎನ್ನುವ ಭಾವ ಇವರಿಬ್ಬರದ್ದೂ.
ಬೇಸರವಾಯಿತೆಂದರೆ ಮಾತನಾಡಲು ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ. ಅವರೊಂದಿಗೆ ನೆನೆಸಿಕೊಂಡಾಗಲೆಲ್ಲಾ ಆಡಲು ಅವಕಾಶವಿಲ್ಲದಿದ್ದರೂ ಮಾತನಾಡಬಹುದು. ಮಕ್ಕಳೆಲ್ಲಾ ಸೇರಿ ದೂರದ ಹಳ್ಳಿಯಲ್ಲಿರುವ ಅವಳ ಮನೆಗೆ ಫೋನ್ ಹಾಕಿಸಿದ್ದಾರೆ. ಅದುವೇ ಸಂಪರ್ಕ ಸೇತು. ಎಲ್ಲಿಯವರೆಗೆ ಮೊಮ್ಮಕ್ಕಳು ತಮ್ಮ ಅಜ್ಜಿಗೆ ಪಪ್ಪಿ ಕೊಡಬೇಕೆಂದರೂ ಫೋನ್ ಬೇಕು. ಅಲ್ಲಿಯವರೆಗೆ ಇದು ಸಂಪರ್ಕ ಸಾಧನ.
ಕೊರತೆ ಇವಳನ್ನೂ ಬಿಟ್ಟಿಲ್ಲ. ಬಹಳ ಸಾರಿ ಥೂ ಎಂಥಾ ಜೀವನ? ಹಡೆದ ಮಕ್ಕಳನ್ನು ಕಾಲ ಬಳಿ ಇರಿಸಿಕೊಳ್ಳೋದು ಒಂದು ಬದುಕೇ? ನೆನೆಸಿಕೊಂಡಾಗ ನೋಡಲಾಗದ್ದೂ ಜೀವನವೇ? ಎಂದೆಲ್ಲಾ ಅನಿಸಿದ್ದುಂಟು. ತಕ್ಷಣವೇ ಸಮರ್ಥನೆ ಅವಳನ್ನು ಆವರಿಸಿಕೊಂಡು ಬಿಡುತ್ತದೆ. ಬದುಕಿನಲ್ಲಿ ಭವಿಷ್ಯ ಹುಡುಕಿಕೊಂಡು ಹೋದವರೆಲ್ಲಾ ಒಂದಲ್ಲಾ ಒಂದು ಬಾರಿ ದಾರಿ ತಪ್ಪಲೇಬೇಕು. ಸಂತೋಷದ ಸಂಗತಿಯೆಂದರೆ ಭವಿಷ್ಯ ಸಿಕ್ಕ ಮೇಲಾದರೂ ದಾರಿಗೆ ಬರುತ್ತಾರಲ್ಲ ಅದು.
ಅಷ್ಟಕ್ಕೇ ಸುಮ್ಮನಾಗುತ್ತಾಳೆ. ಗಡಿಯಾರದ ಮುಳ್ಳು ನಿಂತಿರುವುದಿಲ್ಲ, ಓಡುತ್ತಲೇ ಇರುತ್ತದೆ. ಹಾಗೆಯೇ ಇವಳ ತಲೆಮೇಲಿನ ಒಂದು ಕಪ್ಪುಕೂದಲು ಬಹಳ ವರ್ಷದ ತಪಸ್ಸೆಂಬಂತೆ ಬೆಳ್ಳಗಾಗಿ ನಗುತ್ತಲಿರುತ್ತದೆ. ಕಲ್ಲಾದ ಅಹಲ್ಯೆಗೆ ಮತ್ತೆ ಜೀವವಾದ ಕ್ಷಣದಂತೆ ಈ ಕೂದಲಿಗೆ. 
ಆಗಾಗ್ಗೆ ಅಂದುಕೊಳ್ಳುತ್ತಾಳೆ ಇವಳು. “ನಾನೋ ವಾಸಿ. ನನ್ನ ಅಮ್ಮನ ಕಾಲದಲ್ಲಿ ಫೋನೆಲ್ಲಿತ್ತು? ಬಹಳ ಹತ್ತಿರವೆನಿಸುವ ಬೆಂಗಳೂರಿಗೂ ಹೋಗಲಿಕ್ಕೆ ಎರಡು ದಿನ ಬೇಕಿತ್ತಂತೆ. ಒಂದಾಣೆ ಗಳಿಸುವುದೂ ಕಷ್ಟವೆಂದಿದ್ದಾಗ ಬಸ್ಸಿನಲ್ಲಿ ಹೋಗುವುದೆಂದರೆ ಮೊನ್ನೆ ಮೊನ್ನೆಯ ಏರೋಪ್ಲೇನ್‌ನಲ್ಲಿ ಹೋದಷ್ಟೇ ದುಬಾರಿ. ಈಗ ಕಪ್ಪುಮಸಿಯಂತಿನ ಟಾರು ಬಳಿದ ರಸ್ತೆಗಳೆಲ್ಲಾ ಸಿಂಗರಿಸಿಕೊಂಡಿವೆ. ಅವುಗಳನ್ನು ಮೆಟ್ಟಿಕೊಂಡು ಹೋಗಲು ನೂರಾರು ಬಸ್ಸಿವೆ, ಪ್ರತಿ ಅರ್ಧಗಂಟೆಗೊಮ್ಮೆ ಶಿವಮೊಗ್ಗದ ಬಸ್ಸು ನಿಲ್ದಾಣದಿಂದ ಬೆಂಗಳೂರಿಗೆ ಬಸ್ಸು ಹೊರಡುತ್ತದೆ. ಕಂಡಕ್ಟರ್ ಕೂಗಿ ಕರೆಯುತ್ತಾನೆ, “ಬೆಂಗಳೂರಿಗೆ ಬರುವವರು ಬನ್ನಿ’ ಎಂದು. ಹೀಗೆ ಬೆಳೆದ ಊರಿನ ಕಥೆ.
ಊರು ಬೆಳೆದದ್ದು ನಿಜ, ಹಳ್ಳೆಯಲ್ಲಾ ಕರಗಿ ಪಟ್ಟಣವಾಗುವಾಗ ಬೆರಗಿನಿಂದ ಅದರ ಫಳಫಳ ಕಾಂತಿ ಕಂಡು ಮೂರ್ಛೆ ಹೋದವರಿದ್ದಾರೆ. ಅವರ ಕಣ್ಣಲ್ಲಿ ಇನ್ನೂ ಹೊಳಪು ಆರಿಲ್ಲ. ಆದರೆ ಇವಳಿಗೆ ವಯಸ್ಸಾಗಿದೆ. ಜತೆಗೆ ಇವಳ ಪತಿಗೂ.  ಮಕ್ಕಳೆಲ್ಲಾ ಈಗ ಬೆಂಗಳೂರಿನ ನಿವಾಸಿಗಳು. ಒಬ್ಬೊಬ್ಬರದೂ ಒಂದೊಂದು ಉದ್ಯೋಗ.
ಮೊದಲೇ ಹೇಳಿದಂತೆ ಮನೆಯಲ್ಲೀಗ ಇವರಿಬ್ಬರೇ. ಎಪ್ಪತ್ತೈದು ತುಂಬಿದ ಪತಿ, ಅರವತ್ತು ತುಂಬಿದ ಸತಿ ಅಂದರೆ ಇವಳು. ಮೊನ್ನೆವರೆಗೂ ಈತನೂ ಸುಮ್ಮನಿರಲಿಲ್ಲ. ಏನಾದರೊಂದು ಮಾಡುತ್ತಲೇ ಇದ್ದ. ಯಾವುದೂ ಕೈಗೆ ಹತ್ತಲಿಲ್ಲ ಎಂಬ ಬೇಸರಕ್ಕಿಂತಲೂ ಎಲ್ಲವನ್ನೂ ಪ್ರಯತ್ನಿಸಿದ್ದೇನೆ ಎಂಬ ಸಮಾಧಾನ ಅವನದ್ದು. ಹಾಗಾಗಿ ಬೇಸರದ ಭಾರ ಹೊತ್ತು ದಿನ ಕಳೆಯುತ್ತಿಲ್ಲ. ಅತ್ಯಂತ ಹಗುರಾಗಿ ತನ್ನ ಪ್ರಯತ್ನಶೀಲ ಮನೋಭಾವಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟುಕೊಂಡಿದ್ದಾನೆ. ಅವನ ಲೆಕ್ಕದಲ್ಲಿ ಪಾಸ್ !
 *  *  *  *  *  *  *  *
ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಇವಳು ಏನಾಗಿದ್ದಳು ? ತಲೆಯ ಮೇಲೆ ಮಕ್ಕಳ ಭವಿಷ್ಯ ರೂಪಿಸುವ ಹೊರೆ ಹೊತ್ತಿದ್ದಳು. ಅದನ್ನು ಇಳಿಸುವವರೆಗೂ ಅವಳದ್ದು ಕಷ್ಟದ ಜತೆಗೇ ದೋಸ್ತಿ. ಪೇಟೆಬೀದಿಯ ಬದಿಯಲ್ಲಿ ಪುಟ್ಟ ಅಂಗಡಿ ನಡೆಸುತ್ತಿದ್ದವಳು. ಅಪ್ಪ-ಅಮ್ಮ ಕಲಿಸಿದ್ದ ಆಗಿನ ಎಂಟನೇ ಇಯತ್ತೆಯಲ್ಲಿ ಕಲಿತ ಲೆಕ್ಕಗಳೆಲ್ಲವೂ ಇಲ್ಲಿ ಉಪಯೋಗಕ್ಕೆ ಬಂದಿತ್ತು. ಬದುಕಿನ ಲೆಕ್ಕಾಚಾರದಲ್ಲಿ ಸ್ವಲ್ಪ ಹಿಂದೆ ಮುಂದೆ ಆಗಿದ್ದರೂ ವ್ಯಾವಹಾರಿಕತನಕ್ಕೆ ಮೋಸವಿರಲಿಲ್ಲ. ಬೆಳ್ಳಂಬೆಳಗ್ಗೆ ಐದೂವರೆಗೆ ಅಂಗಡಿ ತೆಗೆದರೆ ರಾತ್ರಿ ೧೦ ರ ಕಡಿಮೆ ಮುಚ್ಚುವುದಿಲ್ಲ. ಅದರ ನಡುವೆಯೇ ಊಟ, ತಿಂಡಿ ಮಾಡಿಕೊಂಡರೆ ಕೈಗೆ ಬಂದ ಮಕ್ಕಳು ಮನೆ ನಿಭಾಯಿಸುತ್ತಾರೆ.
ಆಗಿನ ಎಂಟನೇ ಇಯತ್ತೆಯಂದರೆ ಈಗಿನ ಡಿಗ್ರಿಗೆ ಸಮಾನ. ಅವಳು ಪ್ರಾಥಮಿಕ ಶಾಲೆಯ ಟೀಚರ್ ಆಗಬೇಕಿತ್ತು. ಅದೂ ಅವಳಿಗೆ ಇಷ್ಟವಿತ್ತು. ಯಾಕೋ ಹಾಗಾಗಲಿಲ್ಲ. ಅದಕ್ಕೇ ಉದ್ಯಮಿಯಾಗಿದ್ದಳು. ಏನೆಲ್ಲಾ ಗೊಂದಲದ ಮಧ್ಯೆಯೂ ಬದುಕನ್ನು ತೂಗಿಸದಿದ್ದರೆ ಬಾಳಿದ್ದಕ್ಕೇನು ಸಾರ್ಥಕ ಎಂಬತಿದ್ದಳು. ಎಷ್ಟೋ ಬಾರಿ ಗೋಡೆಗೆ ಎದುರಾಗಿ ಅತ್ತಿದ್ದಾಳೆ, ಅವಳು.  ಅದನ್ನು ಕಂಡು ಮಕ್ಕಳೆಲ್ಲಾ ಅತ್ತಿವೆ, ಏನೂ ಅರ್ಥವಾಗದೇ, ಏನೂ ಮಾಡಲು ಸಾಧ್ಯವಾಗದೇ.
ಆತ ಪ್ರಯತ್ನಶೀಲತೆಯಲ್ಲಿ ಮುಳುಗಿದ್ದ. ಪ್ರಯತ್ನ ಫಲಕೊಡುವವರೆಗೆ ಹೊರೆ ಹೊರಬೇಕಾಗಿದ್ದವಳು ಇವಳೇ. ಆದರೆ ಪ್ರತಿಯೊಂದೂ ಪ್ರಯತ್ನವೇ ಆಗಿತ್ತು. ನೆಲದಲ್ಲಿ ಊರಿದ ಬೀಜ ಮೊಳೆಯುವ ಮೊದಲೇ ಒಣಗಿಬಿಟ್ಟರೆ, ಯಾವುದೋ ಹುಳು ತಿಂದು ಬಿಟ್ಟರೆ ಏನು? ಹೊರೆಯ ಭಾರ ಹೆಚ್ಚಾಗುತ್ತದಷ್ಟೇ. ಅಷ್ಟೇ ಆಗುತ್ತಿತ್ತು.
ಒಮ್ಮೆ ಕುಂಟುತ್ತಾ, ಮತ್ತೊಮ್ಮೆ ಅಕ್ಷರಶಃ ಬಿದ್ದೇ, ಮತ್ತೆ ಎದ್ದು ಹೇಗೋ ನಡೆದುಕೊಂಡು ಬಂದಿದ್ದಾಳೆ ಸೇತುವೆಯ ಒಂದು ತುದಿಗೆ. ಒಬ್ಬಳೇ ಬಂದಿಲ್ಲ, ಎಲ್ಲರನ್ನೂ ಸಂಗಡ ತಂದಿದ್ದಾಳೆ. ಅವರೆಲ್ಲಾ ಈಗ ದೂರದಲ್ಲಿದ್ದಾರೆ. ಇವರಿಬ್ಬರೇ ಹತ್ತಿರದಲ್ಲಿ, ಮುಖಾಮುಖಿ. ಅವಳಿಗನಿಸಿದ್ದನ್ನು ಇವನಿಗೆ ಹೇಳಬೇಕು. ಇವನ ಮಾತ ಕೇಳಬೇಕು. ದಿನ ಕಳೆಯುವುದಕ್ಕೆ ಅಷ್ಟಾದರೂ ಮಾಡಲೇಬೇಕು.
  *  *  *  *  *  *  *
ಕಾಲ ನೂಕಲಿಕ್ಕೆ ಟಿವಿ ಗೆ ಮೋರೆ ಹೋಗುತ್ತಾರೆ ಇಬ್ಬರೂ. ಅದೇ ಹಳಸಲು ಧಾರಾವಾಹಿಗಳು. ಪಾತ್ರಗಳಲ್ಲಿ ಜೀವಂತಿಕೆಯಿಲ್ಲ, ಜೀವವೂ ಇಲ್ಲ. ಜೀವನವೆಂದುಕೊಂಡು ಜೀವಿಸುತ್ತಾರೆ ; ಜೀವನದಲ್ಲಲ್ಲ. ಬಹಳ ಬೋರೋ ಬೋರು. ಅಲ್ಲಿನ ಒಂದೊಂದೂ ಪಾತ್ರ ಬದುಕಿನಿಂದ ಓಡಿಹೋಗಲು ಕಲಿಸುತ್ತಿವೆ ಎನಿಸುತ್ತದೆ. ಆತ ಹೇಳುತ್ತಾನೆ, “ಏನೇ, ಟಿ.ವಿ ಆಫ್ ಮಾಡು. ಎಂಥಾ ಕೆಟ್ಟ ಧಾರಾವಾಹಿ? ಸೀರಿಯಲ್ ಮಾಡೋವನಿಗೆ ಬದುಕಿನ ಕನಿಷ್ಟ ಅರ್ಥವೂ ತಿಳಿದಿರೋದಿಲ್ಲವಲ್ಲಾ?’ ಎನ್ನುತ್ತಾನೆ.
ಇವಳಿಗೂ ಹಾಗೆಯೇ ಅನಿಸುತ್ತದೆ. ಟಿ. ವಿ. ಆಫ್ ಮಾಡಿ ಮೂಲೆಗೆ ಸರಿದು ವರ್ತಮಾನ ಪತ್ರಿಕೆ ದಿಟ್ಟಿಸುತ್ತಾ ಕುಳಿತುಕೊಳ್ಳುತ್ತಾಳೆ. ಈತನೋ ಯಾವುದೋ ಧರ್ಮ ಜಿಜ್ಞಾಸೆಯ ಪುಸ್ತಕಕ್ಕೆ ಮೊರೆ ಹೋಗುತ್ತಾನೆ. ಯಾಕೆಂದರೆ ಜಿಜ್ಞಾಸೆಯಲ್ಲಿ ಮುಳುಗಿದವರಿಗೆ ಗಡಿಯಾರದ ಸದ್ದು ಕೇಳಿಸುವುದಿಲ್ಲ !
ವರ್ತಮಾನ ಪತ್ರಿಕೆಯಲ್ಲಿ ಏನಿದೆ? ಬದುಕಲಿಕ್ಕೆ ಏನಾದರೂ ಒಂಚೂರು. ಇಲ್ಲವಲ್ಲ ; ಅಲ್ಲೂ ಅದೇ, ಒಣಗಿದ ಪದಗಳು. ರಸವೂ ಇಲ್ಲ, ಆರ್ದ್ರವೂ ಇಲ್ಲ. ಸಾಯುವ ಮುನ್ನಾಗಿನ ವೈರಾಗ್ಯ ಕರುಣಿಸುವಂತೆ ಪತ್ರಿಕೆಗಳಿವೆ ಎಂದೆನಿಸುತ್ತದೆ . ಯಾಂತ್ರಿಕವಾಗಿ ಪುಟಗಳನ್ನು ತಿರುಗಿಸುತ್ತಾ ಹೋಗುತ್ತಾಳೆ. ಗಂಟೆ ಒಂಬತ್ತಾಗುವವರೆಗೂ ಇದನ್ನೇ ಮಾಡಬೇಕು.
ನಾವು ಬದುಕುತ್ತಿದ್ದಾಗ ಬದುಕು ಹೀಗಿತ್ತೇ? ಎಂದುಕೊಂಡವಳಿಗೆ ಏನೂ ಉತ್ತರ ಹೊಳೆಯುವುದಿಲ್ಲ. “ಏನ್ರೀ, ನಮ್ಮ ಕಾಲದಲ್ಲಿ ಬದುಕು ಹೀಗಿತ್ತಾ?’ ಎಂದು ಪತಿಯನ್ನು ಕೇಳುತ್ತಾಳೆ. “ನೋಡೇ, ಬದುಕು ಯಾವಾಗಲೂ ಹೀಗೆಯೇ ಇರುತ್ತದೆ. ಪ್ರತಿ ಹೂವು ಅರಳಿದಾಗಲೂ ಹೇಗಿರುತ್ತೇ ? ಮೊದಲ ಹೂವು ಅರಳಿದಂತೆ ತಾನೇ, ಅಂತೆಯೇ ಬದುಕೂ ಸಹ. ಕೆಲವೊಮ್ಮೆ ಬಿಸಿಲಿಗೆ ಬಾಡುತ್ತಿದ್ದೇನೆ ಎಂಬ ಭಾವ ಹೂವಿಗೆ ಬರುತ್ತೆ, ಉದುರಿ ಹೋಗುತ್ತೆ. ಹಾಗೆಯೇ ನಮಗೂ’ ಎಂದು ಅಧ್ಯಾತ್ಮದ ಶೈಲಿಯಲ್ಲಿ ಉತ್ತರ ಕೊಟ್ಟುಬಿಟ್ಟ.
ಇದರಿಂದ ತೃಪ್ತಿಯಾಗಲಿಲ್ಲ. ಮತ್ತೆ “ನಮ್ಮ ಕಾಲದಲ್ಲಿ ಬದುಕು ಹೀಗಿತ್ತಾ?’ ಎಂದು ತಲೆ ಕೆಡಿಸಿಕೊಂಡು ಕುಳಿತಳು. ಪುನಃ ಉತ್ತರ ಸಿಗಲಿಲ್ಲ. ವಾಸ್ತವವಾಗಿ ಉತ್ತರ ಸಿಗಲಿಕ್ಕೆ ಕಷ್ಟವಿದೆ. ಕಾರಣ ಗೊತ್ತೇ ಇದೆ. ಅವಳಿಗೆ ಬದುಕು ಹೇಗಿತ್ತು ಎಂದು ನೋಡಲಿಕ್ಕೆ ಪುರಸೊತ್ತಿರಲಿಲ್ಲ. ಅಂಗಡಿ, ಮನೆ, ಮಕ್ಕಳು, ಪತಿ ಎನ್ನುವುದರಲ್ಲೇ ದಿನ ಮುಗಿದು ಹೋಗುವಾಗ ಯಾವುದು ಹೇಗಿತ್ತು? ಎಂಬುದು ಅರ್ಥವಾಗೋದು ಹೇಗೆ?
ಆದರೂ ಬದುಕು ಹೀಗಿರಲಿಲ್ಲ. ಅಪ್ಪ-ಅಮ್ಮನನ್ನೇ ಮರೆತು ಬಿಟ್ಟಿದ್ದೇವೆ ಎಂಬಂತೆ ಮಕ್ಕಳು ಇರಲು ಸಾಧ್ಯವೇ ಇರುತ್ತಿರಲಿಲ್ಲ. ಕುಂದಾಪುರದ ಐತಾಳರ ಮಾಣಿ ಮನೆ ಗಲಾಟೆ ಸಾಕು ಅಂತ ಬೆಂಗಳೂರು ಪೇಟೆಗೆ ಓಡಿದ್ ಮಾಣಿ  ಹತ್ತೇ ದಿನಕ್ಕೆ ವಾಪಸ್ಸಾಗಿರಲಿಲ್ವಾ? ಎಲ್ಲಿಗೆ ಹೋಗಿದ್ದೀ ಅಂತಾ ಕೇಳಿದರೆ, ಬೆಂಗಳೂರಿಗೆ ಹೋಗಿದ್ದು ನಿಜ. ಆದರೆ ಅಲ್ಲಿ ಇರೋದು ಹೇಗೆ? ಹೋಟೆಲಿನಲ್ಲಿ ಬೆಳಗ್ಗೆ ಮೀಯಲಿಕ್ಕೆ ಬಿಸಿನೀರು ಕೋಡೋಕೆ ಮ್ಯಾನೇಜರ್ ಎಷ್ಟೆಲ್ಲಾ ಮಾತಾಡ್ತಾನೆ? ಅಂದ ಮಾಣಿಗೆ ಜ್ಞಾನೋದಯವಾಗಿತ್ತು, ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಹೀಗೇ ಇತ್ತು ಬದುಕು ಎಂಬ ತೀರ್ಮಾನಕ್ಕೆ ಬಂದಳು. ಆತನೂ ಗ್ರಂಥ ಮುಚ್ಚಿಟ್ಟು ಊಟಕ್ಕೆ ಸನ್ನದ್ಧನಾದ. ಅವಳು ಅವನನ್ನು ಹಿಂಬಾಲಿಸಿದಳು. ಅರ್ಧ ಗಂಟೆಯ ತರುವಾಯ ದೀಪಗಳೆಲ್ಲಾ ವಿಶ್ರಮಿಸಿದವು.
 *  *  *  *  *  *  *
ಬೆಂಗಳೂರಿನಲ್ಲಿ ಮಕ್ಕಳೆಲ್ಲಾ ಸ್ಟಿಲ್ ಆಗಿದ್ದಾರೆ, ಇದೀಗ ತಾನೇ ತೊಳೆಸಿಟ್ಟ ಛಾಯಾಚಿತ್ರದಂತೆ. ಕಂಪನಿ, ಮಕ್ಕಳ ವಿದ್ಯಭ್ಯಾಸ, ಮನೆ-ಮುಗಿಯಿತು. ಆ ಪಾಲಿಸಿ, ಈ ಪಾಲಿಸಿ, ಆ ಸೈಟು, ಈ ಸೈಟು ಎನ್ನುವುದಕ್ಕೆ ಹಣ ಹೊಂದಿಸುವುದರಲ್ಲಿ ಇದ್ದ ಮನೆಯೂ ಮರೆತು ಹೋಗುವ ಸಂದರ್ಭ. ಅಂತದ್ದರ ನಡುವೆ ಅವರಿಗೂ ಮಕ್ಕಳಿವೆ, ಓದುತ್ತಿದ್ದಾರೆ ಕಾನ್ವೆಂಟ್‌ಗಳಲ್ಲಿ. ಹೊಸ ಭಾಷೆ, ಹೊಸ ಪದ್ಯ ಕಂಠ ಪಾಠ ಮಾಡಿಕೊಂಡು ಬಂದ ಮಕ್ಕಳು ಅಜ್ಜ-ಅಮ್ಮಮ್ಮರಿಗೂ ಕಲಿಸುವುದುಂಟು. ಕಲಿಯದಿದ್ದರೆ “ಏನ್ ಅಜ್ಜ, ನೀನು ದಡ್ಡ’ ಎನ್ನುತ್ತವೆ. ಅಜ್ಜ ಹೌದೆನ್ನುವಂತೆ ತಲೆಯಾಡಿಸುತ್ತಾನೆ.
ಸರಿ, ಒಮ್ಮೆ ಹೀಗೇ ಕೂತಿದ್ದಾಗ ಇವಳಿಗೆ ಮಕ್ಕಳೊಂದಿಗೆ ಮಾತನಾಡಬೇಕೆನ್ನಿಸಿತು. ಫೋನ್ ರಿಂಗಾದಾಗ ಅತ್ತಲಿಂದ ಅವಳ ಆಹ್ವಾನಕ್ಕೆ ಉತ್ತರ ಬಂತು. “ಇಲ್ಲ ಅಮ್ಮಾ, ಆಫೀಸಿನಲ್ಲಿ ಕೆಲವರು ರಜೆ ಹಾಕಿದ್ದಾರೆ. ನನಗೆ ರಜೆ ಸಿಗೋದು ಮುಂದಿನ ವಾರವೇ. ಆಗ ಬರೋಣವೆಂದರೆ ಮಗಳಿಗೆ ಪರೀಕ್ಷೆ. ಅದಕ್ಕೆ ಸಿದ್ಧಪಡಿಸಬೇಕು. ಮುಂದಿನ ಬೇಸಿಗೆಯೊಳಗೆ ಒಮ್ಮೆ ಬರುತ್ತೇವೆ. ಬೇಸಿಗೆಗಂತೂ ಬಂದೇ ಬರುತ್ತೇವೆ’ ಎಂದ ಮಗ.
“ಹಾಗಲ್ಲ ಕಣೋ, ನೋಡಬೇಕು ಅನಿಸಿದೆಯಲ್ಲ. ಭಾನುವಾರ ಹತ್ತಿ ಬಂದು ಬಿಡು’ ಎಂಬುದಕ್ಕೆ ’ಅದು ಕಷ್ಟ. ಎರಡು ರಾತ್ರಿ ನಿರಂತರ ಪ್ರಯಾಣ ಮಾಡಿದರೆ ಸುಸ್ತು, ಮರುದಿನ ಕೆಲಸ ಮಾಡಲಾಗುವುದಿಲ್ಲ. ಹಾಗಾಗಿ ಬರ್‍ತೀನಿ, ಸದ್ಯದಲ್ಲೇ’ ಎನ್ನುತ್ತಾರೆ.
ಸ್ವಲ್ಪ ಸಿಟ್ಟಿಗೆದ್ದವನಂತೆ ಕಂಡು ಬಂದದ್ದಲ್ಲದೇ ಈಗಿನ ಬದುಕಿನ ಧಾವಂತ ಅರ್ಥವಾಗಿ ಒಪ್ಪಿಕೊಂಡ ಫೋಸಿನಲ್ಲಿ ಇವಳ ಪತಿ ಗುಡುಗುತ್ತಾನೆ-“ನಿನ್ನದೊಂದು, ಯಾವಾಗ ಆಗುತ್ತೋ ಆವಾಗ ಬರಲಿ ಬಿಡು. ಯಾಕೆ ಒತ್ತಾಯ ಮಾಡ್ತೀಯಾ?’
“ನಿಮಗೇನ್ರಿ, ನಾನು ಮಗನ ಜತೆಗೆ ಮಾತನಾಡ್ತೀರೋದು’ ಎಂದು ಪ್ರತಿ ಗುಡುಗುತ್ತಾಳೆ. ಕೊನೆಗೂ ಬರುವುದಿಲ್ಲ ಎಂಬ ಫಲ ಪಡೆದೇ ಫೋನ್ ಇಟ್ಟಳು.
“ನೋಡು, ಹಾಗೆಲ್ಲಾ ಒತ್ತಾಯ ಮಾಡಬಾರದು. ಅವರಿಗೆ ಏನೇನೋ ಕೆಲಸವೋ? ಒಮ್ಮೆ ಬಂದು ಹೋಗಬೇಕಂದರೂ ೫೦೦ ರೂ. ಬೇಕು. ಬರೀ ಬಸ್ಸಿಗೆ, ರೈಲಿಗೆ ದುಡ್ಡು ಹಾಕಿದ್ರೆ ಮನೆ, ಮಠ ಮಾಡೋದು ಯಾವಾಗ?’ ಎಂಬ ಅವನ ಮಾತನ್ನು ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಾಳೆ. “ಹೌದು, ಹತ್ತು ಸಾರಿ ಬರೋದು ಎರಡು ಸಾರಿ ಬಂದ್ರೆ ಸಮಾಧಾನ ಪಟ್ಟುಕೊಳ್ಳಬೇಕು. ನಮದೇನು ಮುಗಿದ ಕಥೆ. ಅವರಿದಿನ್ನೂ ಈಗ ಆರಂಭವಾಗಿದೆಯಲ್ಲ’ ಎಂದು ಚಾಳೀಸು ಏರಿಸಿಕೊಂಡು ಪತ್ರಿಕೆಗೆ ಮುಖಿಯಾಗುತ್ತಾಳೆ. ಹೊರಗೆ ಬೀದಿಯಲ್ಲಿ ಊರ ದೇವರ ಮೆರವಣಿಗೆ. ಗದ್ದಲವೋ ಗದ್ದಲ. ದೇವರು ನೋಡಲಿಕ್ಕೆ ಇಬ್ಬರೂ ಹೊರಗೆ ಬರುತ್ತಾರೆ. ಆ ಜನಜಂಗುಳಿಯಲ್ಲಿ ದೇವರು ಕಾಣಿಸುವುದಿಲ್ಲ !
  *  *  *  *  *  *  *
ಬೆಳಗ್ಗೆ ಏಳರ ಸುಮಾರಿಗೆ ಕಾರ್ಪೋರೇಷನ್ ನಲ್ಲಿಯಲ್ಲಿ ನೀರು ಬಂತು. ಕಳೆದ ತಿಂಗಳಿನವರೆಗೂ ನೀರು ತುಂಬುವುದು ವಯಸ್ಸಾದ ಇಬ್ಬರಿಗೂ ಅತ್ಯಂತ ತ್ರಾಸದಾಯಕವಾದ ಕೆಲಸವೇ. ಈಗ ಸ್ವಲ್ಪ ಸುಧಾರಿಸಿದೆ. ಚಿಕ್ಕ ನೀರೆತ್ತುವ ಪಂಪ್ ಫಿಕ್ಸ್ ಮಾಡಿದ್ದಾರೆ. ತೊಟ್ಟಿಯಲಿ ನೀರು ಸಂಗ್ರಹವಾದ ಮೇಲೆ ಸ್ವಿಚ್ ಹಾಕಿದರೆ ಪೈಪ್ ಮೂಲಕ ತಮಗೆ ಬೇಕಾದ ಕಡೆ ತುಂಬಿಸಬಹುದು. ಹೊತ್ತು ತರುವ ತೊಂದರೆಯಿಲ್ಲ.
ಇದಕ್ಕೆ ಮುನ್ನ ಇವಳು ಕುಡಿಯುವ ನೀರು ತುಂಬಿದ ನಂತರ ಅವನ ಕಾರುಬಾರು. ಒಂದಷ್ಟು ನೀರು ತುಂಬಿಕೊಟ್ಟರೆ ಇವಳು ಮತ್ತೊಂದು ಕಡೆಗೆ ಸುರಿದು ಬರುತ್ತಿದ್ದಳು. ಕೇವಲ ಮುಕ್ಕಾಲುಗಂಟೆ ಬರೋ ನೀರಿಗೆ ದಿನವೆಲ್ಲಾ ಆರಾಮ ಕೆಡಿಸಿಕೊಳ್ಳಬೇಕಿತ್ತು. ಒಮ್ಮೊಮ್ಮೆ ನೀರು ಬಿಡೋ ಮಹಾಶಯನಿಗೆ ಬೇಸರ ಬಂದಿದ್ರೆ ಅವತ್ತು ಆ ಕೇರೀಗೇ ನೀರಿಲ್ಲ. ಸುಮ್ಮನೆ ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ ಕೊಟ್ಟು ಇರಬೇಕು. ಕಾರಣ ಬಹುಪಾಲು ಮಂದಿ ನೀರು ಬಾರದಿದ್ದಕ್ಕೆ ಯಾರನ್ನೂ ಕೇಳೋದಿಲ್ಲ. ಪಕ್ಕದ ಮನೆ ಬಾವಿಯಿಂದ ನೀರು ಸುರಿದುಕೊಳ್ಳುತ್ತಾರೆ. ಅದನ್ನೇ ಇವರೂ ಮಾಡಬೇಕಿತ್ತು.
ಅವತ್ತೂ ಹಾಗೆ. ಬೆಳಗ್ಗೆ  ನೀರು ಬಂತು. ತಮಗೆ ಎಲ್ಲೆಲ್ಲಿಗೆ ಬೇಕೋ ಅಲ್ಲಿ ಭರ್ತಿ ಮಾಡಿದರು. ಅವಳು ಹಾಲ್‌ಬಿಸಿನೀರು ಸಿದ್ಧಪಡಿಸಿ ತಂದಾಗ ಫೋನ್ ರಿಂಗಾಯಿತು. ಬೆಳಗ್ಗೆಯೇ ಯಾರದ್ದಾಗಿರಬಹುದು ಫೋನ್? ಎಂಬ ಕುತೂಹಲ. ಅವನು ಫೋನ್ ತೆಗೆದುಕೊಂಡ. “ಮಾವ, ಅವ್ರಿಗೆ ಉಷಾರಿಲ್ಲ. ಏನೋ ಆಗಿದೆ. ಬಹಳ ಕಷ್ಟ ಪಡ್ತಾ ಇದ್ರೆ. ಏನ್ ಮಾಡೋದಂತ್ಲೇ ಅರ್ಥವಾಗ್ತಿಲ್ಲ. ಮಕ್ಕಳೀಗೂ ಪರೀಕ್ಷೆ. ನಾನು ಏನ್ ಮಾಡಲಿ?’ ಎಂಬ ಸೊಸೆ ಮಾತಿಗೆ ಇವನು ದಂಗಾಗಿ ಹೋದ. ಏನು ಮಾಡಬೇಕು ಎಂಬುದು ತೋಚಲಿಲ್ಲ, ಅವಳಿಗೆ ಫೋನ್ ವರ್ಗಾಯಿಸಿದ.
“ಹೇಳೇ’ ಎಂಬ ಪದ ಕೇಳಿ ಸೊಸೆ ಮತ್ತೆ ಮುಂದುವರಿಸಿದಳು. “ಇವ್ರಿಗೆ ನಾಲ್ಕೈದು ದಿವಸದಿಂದ ಉಷಾರಿಲ್ಲ. ನಾನು ಡಾಕ್ಟರಿಗೆ ತೋರಿಸ್ದೆ. ಔಷಧಿ ಕೊಡ್ತಾರೆ. ಆದ್ರೆ ಇವರು ಬಹಳ ಹೆದರಿಕೊಂಡಿದ್ದಾರೆ. ನಿಮ್ಮನ್ನೇ ಕನವರಿಸ್ತಾರೆ. ನಿನ್ನೆ ರಾತ್ರಿ ಎದ್ದು ಕೂತ್ಕೊಂಡು ಅಮ್ಮನತ್ತ ಕರ್‍ಕೊಂಡು ಹೋಗು ಅಂಥ ಹಠ ಮಾಡಿದ್ರು. ಮಧ್ಯರಾತ್ರೀಲಿ ನಾನು ಎಲ್ಲಿಗೆ ಹೋಗಲಿ. ನನಗೆ ಭಯವಾಗುತ್ತೆ , ಅತ್ತೆ’ ಎಂದಳು.
ಈಗ ಚಿಂತಾಕ್ರಾಂತಳಾಗುವ ಸರದಿ ಇವಳದ್ದು. “ನೀನೇನೂ ಭಯಪಡ್ಬೇಡ. ಎಲ್ಲಾ ಸರಿ ಹೋಗ್ತದೆ. ನಾನು ದೇವರಿಗೆ ಹರಕೆ ಹೊತ್ಕೊಳ್ತೀನಿ. ದೇವರು ನಮ್ಮ ಕೈಬಿಡುವುದಿಲ್ಲ. ಒಂದು ರೂ. ನಾಲ್ಕು ನಾಣ್ಯನ್ನಾ ನಿವಾಳಿಸಿ ಒಳ್ಳೇದಾಗಲಿ ಅಂತ ಕೇಳ್ಕೊಂಡು ಇಟ್ಬಿಡು. ಉಷಾರಾದ್ಮೇಲೆ ದೇವಸ್ಥಾನಕ್ಕೆ ಹೋಗಿಬಂದ್ರೆ ಆಯಿತು’ ಎಂದು ಆ ಹೊತ್ತಿನ ಸಮಾಧಾನ ನೀಡಿದಳು ಅತ್ತೆ. “ಒಂದ್ನಿಮಿಷ, ಅವ್ರು ಮಾತನಾಡ್ತಾರಂತೆ’ ಎಂದು ಸೊಸೆ ಹೇಳಿದಾಗ ಫೋನಿನಲ್ಲಿ ಮಗನ ಮಾತು ಕೇಳಿ ಅಳು ಬಂದದ್ದೇ ಇವಳಿಗೆ.
“ಏನ್ ಮಗ, ಹೇಗಿದ್ದೀಯಾ?’ ಎಂಬ ಪ್ರಶ್ನೆಗೆ ಅತ್ತಲಿಂದ ಉತ್ತರ ಬರಲಿಲ್ಲ. ಬರೀ ಅಳು ಬಂತು. ಇವಳನ್ನೂ ಬಿಡಲಿಲ್ಲ. ಆಗ ತಾನೇ ಸುರಿದ ಮಳೆಗೆ ತುಂಬಿ ಬಂದ ನದಿಯ ನೆರೆಯಂತೆ ಇವಳನ್ನೂ ವ್ಯಾಪಿಸಿಬಿಟ್ಟಿತು. ತಟಕ್ಕನೇ ಮಗನೇ ಫೋನಿಟ್ಟು ಬಿಟ್ಟ. ಇವಳೂ ರಿಸೀವರ್ ಹಿಡಿದುಕೊಂಡೇ, “ಏನ್ರೀ, ಸೂರಿ ಅಳುತ್ತಾನಲ್ರೀ. ಇದುವರೆಗೆ ಅವನು ಅತ್ತದ್ದೇ ಕೇಳಿರಲಿಲ್ಲ. ಸಹಿಸೋಕಾಗಲ್ರೀ’ ಅಂದಳು.
ಇದೆಲ್ಲವನ್ನೂ ನೋಡುತ್ತಾ ಕುಳಿತಿದ್ದ ಮತ್ತೊಬ್ಬ ಮಗ ವೆಂಕುಗೆ ನಿಜಕ್ಕೂ ಅಚ್ಚರಿ. ಇವನೂ ಅಮ್ಮ ಅತ್ತದ್ದನ್ನು ಕಂಡಿರಲಿಲ್ಲ. ಚಿಕ್ಕವನಿದ್ದಾಗ ನೋಡಿರಬಹುದು. ಆಗ ಅಳು ಅರ್ಥವಾಗಿರಬೇಕಿತ್ತಲ್ಲ. ಅಮ್ಮನ ಕಣ್ಣ ನೀರು ಮನೆಯನ್ನೇ ತುಂಗಿಕೊಂಡಂತಾಯಿತು. ಕೆಲವು ಕ್ಷಣ ಮನೆಯೆಲ್ಲಾ ತೇವ ತೇವ. ದೊಡ್ಡವರಾದ ಮೇಲೂ ಅಳುತ್ತಾರಲ್ಲ ಎನ್ನುವ ಹಾಗೆ ಅಮ್ಮನನ್ನು ದಿಟ್ಟಿಸಿದ ವೆಂಕುಗೆ ಈಗಲೂ ಸರಿಯಾಗಿ ಅರ್ಥವಾಗಲಿಲ್ಲ.
*  *  *  *  *  *  *
“ನಾನು ನಾಳೆ ವೆಂಕು ಜತೆಗೆ ಬೆಂಗಳೂರಿಗೆ ಹೋಗ್ತೀದ್ದೀನಿ. ರಾತ್ರಿಯೂ ಸೂರಿಯದ್ದೇ ಕನಸು. ಪಾಪ, ಅವನು ಯಾವತ್ತೂ ಅತ್ತಿರಲಿಲ್ಲ. ನನಗೆ ನೋಡಲೇಬೇಕೆನಿಸಿದೆ’ ನಿರ್ಧರಿಸಿದವಳಂತೆ ಪತಿಗೆ ಅಂದಳು. ಆತನೂ ಸುಮ್ಮನಿದ್ದ. “ಸರಿ, ಹಾಗೇ ಮಾಡು’ ಎಂದು ಸ್ವಲ್ಪ ಕುಂಕುಮ ಕಾಗದದಲ್ಲಿ ಕಟ್ಟಿ ಕೊಟ್ಟ. ವೆಂಕು ಜತೆಗೆ ಅವಳೂ ಹೊರಟು ನಿಂತಳು. ರೈಲಿನಲ್ಲ್ಲಿ ಕುಳಿತ ಅವಳಿಗೆ ಮಗನದ್ದೇ ಚಿಂತೆ.
ವೆಂಕೂಗೆ ಇನ್ನೂ ಅಚ್ಚರಿಯಾಗೇ ಉಳಿದಿದೆ. ಉಪಮೆಯಿಲ್ಲದವಳು ಅತ್ತದ್ದು ಅರ್ಥವಾಗಿಲ್ಲ. ಎಷ್ಟು ವಿಚಿತ್ರವೆಂದರೆ ಬದುಕಿನುದ್ದಕ್ಕೂ ಅತ್ತೂ ಅತ್ತೂ ಅಭ್ಯಾಸವಾಗಿ ಹೋಗಿದ್ದ ಇವಳಿಗೆ ಅಳು ಸುಲಭ ಎನಿಸಿದ್ದುಂಟು. ಕೆಲ ವರ್ಷ ಅಳದ ಇವಳಿಗೀಗ ಮತ್ತೆ  ಅತ್ತಳು ; ಚಿಕ್ಕ ಮಕ್ಕಳ ಹಾಗೆ. ದೊಡ್ಡವರು ಅತ್ತರೆ ಸಮಾಧಾನಗೊಳಿಸುವವರು ಯಾರು, ದೇವರೇ? ಎಂದು ವೆಂಕು ತನ್ನಷ್ಟಕ್ಕೇ ಕೇಳಿಕೊಂಡ. ಅಮ್ಮ ಮೆಲ್ಲಗೆ ನಿದ್ರೆ ಹೋಗಿದ್ದಳು ; ಏನೂ ಆಗೇ ಇಲ್ಲವೆಂಬಂತೆ.
ಅವಳು ಮತ್ತೆ ಮಗುವಾಗುತ್ತಿರುವುದನ್ನು ಕಂಡ ವೆಂಕುವಿಗೂ ದುಃಖ ಉಮ್ಮಳಿಸಿ ಬಂತು. ಅವಳ ಸೆರಗಿನಲಿ ಕಣ್ಣನ್ನೊರೆಸಿಕೊಂಡ. ತಟಕ್ಕನೆ ಎದ್ದ ಅವಳು “ಹಾಗೆ ಅಳಬಾರದು’ ಎಂದು ಸಂತೈಸಿದವಳು ಗದ್ಗದಿತಳಾಗಿ ಮುಖ ಬದಿಗೆ ಸರಿಸಿದಳು. ಸಮುದ್ರವೇ ಅಳುತ್ತಿದೆ, ದ್ವೀಪದಂತೆ ಬದುಕಲು ಭೂಮಿಯ ತುಂಡೂ ಇಲ್ಲ !
*  *  *  *  *  *  *

(“ಹಂಗಾಮ” ದಲ್ಲಿ ಹಿಂದೆ ಪ್ರಕಟವಾದ ಕತೆ)