ಇದು ಮಳೆ ನಿಂತ ಮೇಲಿನ ಹನಿ.

ಕೆಲ ದಿನಗಳಿಂದ ಬ್ಲಾಗ್‌ಗಳಲ್ಲಿ ಒಂದೇ ಬಗೆಯ ಚರ್ಚೆ. ಬ್ಲಾಗ್‌ಗಳಲ್ಲಿ ಏನನ್ನು ಬರೆಯಬೇಕು ? ವಿಚಾರವೋ ? ಭಾವ ಲಹರಿಯೋ ? ಮಾಹಿತಿಯೋ ? ಹೊಸ ಬಗೆಯ “ವರದಿ’ಗಳೋ?- ಏನು ? ಯಾವುದು ಬ್ಲಾಗ್‌ಗಳಿಗೆ ಆಹಾರವಾಗಬೇಕು?
ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಾತ್ವಾಕಾಂಕ್ಷೆಯಿಂದ ಪ್ರಣತಿ ಆಯೋಜಿಸಿದ್ದ ಬ್ಲಾಗಿಗರ ಭೇಟಿಯಲ್ಲಿ ಎದುರಾದ ಪ್ರಶ್ನೆಗಳೂ ಇವೇ. ದಟ್ಸ್ ಕನ್ನಡದ ಎಸ್. ಕೆ. ಶಾಮಸುಂದರ್ “ಹಿರಿಯ ಪ್ರಜೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲೂ ಮಾಹಿತಿಯಿಲ್ಲ’ ಎಂದು ಹೇಳುವ ಮೂಲಕ ಅಂಥದೊಂದು ಬ್ಲಾಗ್ ಮಾಡಿದರೆ ಸೂಕ್ತ ಎಂದರು. ಅಂದರೆ ಮಾಹಿತಿ ಧಾಮವಾಗಲಿ ಎಂಬುದು ಆಶಯ. ಜತೆಗೆ ಬರೀ ಕಥೆ, ಕವನ ಬರೆದ್ರೆ ಏನು ಪ್ರಯೋಜನ ? ಎಷ್ಟು ದಿನ ಬರೀತೀರಿ ? ಬ್ಲಾಗ್ ನಲ್ಲೂ ಸಾಹಿತ್ಯ ಓದಬೇಕಾ? ಎಂದು ಕೇಳುವ ಧಾಟಿಯೂ ವ್ಯಕ್ತವಾಯಿತು.
ಸುಶ್ರುತ ತಮ್ಮ ಇತ್ತೀಚಿನ ಬರಹದಲ್ಲಿ ಅದೇ ಗೊಂದಲವನ್ನು ತೋಡಿಕೊಂಡು, ಯುಗಾದಿ ಬಗ್ಗೆ ಶುಭಾಶಯ ಹೇಳಿದ್ದಾರೆ. ಅಲ್ಲೂ ಒಂದು ಭಾವದ ಎಳೆ ತಂದು ಬರಹವನ್ನೇ ಸೊಗಸುಗೊಳಿಸಿದ್ದಾರೆ. ನನ್ನೊಳಗೂ ಬರೆಯಬೇಕಾದದ್ದು ಏನು ? ಬ್ಲಾಗ್ ಆರಂಭವಾಗಿದ್ದು ಏಕೆ ? ಇಂಥ ಪ್ರಶ್ನೆಗಳು ದೊಂಬರಾಟ ನಡೆಸುತ್ತಲೇ ಇವೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲರೂ ಓದುವುದನ್ನು ಬರೆದರೆ ಸಾಕು. ಅದು ಕವಿತೆ, ಕಥೆ ಎಂಬ ಭಾವವೇಕೆ? ಇಂದು ನಾವು ಕೊರತೆ ಅನುಭವಿಸುತ್ತಿರುವುದು ಅನುಭವದ ನೆಲೆಯ ಭಿನ್ನ ಭಿನ್ನ ಗ್ರಹಿಕೆಯನ್ನು. ನಮ್ಮ ಹಿರಿಯರ ದಿನಗಳಿಗೂ, ಈಗಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ
ನಾವೀಗ ಸಮಯವಿಲ್ಲವೆಂದು ತಿಳಿದುಕೊಂಡು “ಬ್ಯುಸಿ’ಯಾಗಿದ್ದೇವೆ.   ಮನುಷ್ಯರ ಮಧ್ಯೆ ಮುಖಾಮುಖಿ ಸಂಬಂಧ ಕ್ಷೀಣಿಸುತ್ತಾ, ಅದಕ್ಕಾಗಿ ನಾನಾ ಮಾಧ್ಯಮಗಳ ಸಾಧನಗಳನ್ನು ಆಶ್ರಯಿಸುತ್ತಾ ಬಂದಿದ್ದೇವೆ. ಇಂಥ ಸರಿಹೊತ್ತಿನಲ್ಲಿ ಕತ್ತಲೆಯ ಮಧ್ಯೆ ತೋರುವ ಮಿಣುಕು ಹುಳದಂತೆ ಕಂಡದ್ದು ಈ ಬ್ಲಾಗ್ ಸಹ. ಇದೂ ಅಂಥದೊಂದು ಸಂಬಂಧವನ್ನು ಹಸಿರಾಗಿಸಿಕೊಳ್ಳಲು ಹುಟ್ಟಿಕೊಂಡ ನೆಲೆಯೇ ಹೊರತು ಮತ್ತೇನೂ ಅಲ್ಲ.
ನಮ್ಮ ಬದುಕಿನ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತಾ, ಒಂಟಿತನದ ಬೇಗೆಯಿಂದ ಹೊರಬರಲು ರೂಪಿಸಿಕೊಂಡ ಮಾರ್ಗವೂ ಹೌದು. ೨೧ ನೇ ಶತಮಾನದ ತಲೆಮಾರಿನ ನಮಗೆ ಒಂಟಿತನ, ಏಕಾಂತ ಬಹು ಇಷ್ಟ. ಆದರೆ ಅದು ನಮ್ಮ ತಲೆ ಚಿಟ್ಟು ಹಿಡಿಸಲಾರದಷ್ಟಿರಲಿ ಎಂಬ ಆಶಯವೂ ಇದೆ. “ಫ್ರೀ ಸ್ಪೇಸ್’ ನಲ್ಲಿದ್ದ ಬಹಳಷ್ಟು ಮಂದಿ ಇಂದು ನಗರದಲ್ಲಿರುವುದರಿಂದ ಇಲ್ಲಿನ ಟ್ರಾಫಿಕ್ ಜಾಮ್, ಒತ್ತಡ ಎಲ್ಲವೂ ಹೊಸದೇ. ಅದಕ್ಕೇ ಆಗಾಗ್ಗೆ ನಮ್ಮ ಹಳ್ಳಿಗಳು, ನಮ್ಮೂರು ನೆನಪಾಗುತ್ತವೆ. ಅದನ್ನು ನೆಪ ಮಾಡಿಕೊಂಡು ಒಂದಷ್ಟು ನೆನಪುಗಳ ಜಾತ್ರೆಯನ್ನು ಹೊರಡಿಸುತ್ತೇವೆ. ಆ ಮೂಲಕ ನಮ್ಮೊಳಗೆ ಕಾಡತೊಡಗಿದ “ಹೋಮ್‌ಸಿಕ್‌ನೆಸ್’ ನ್ನು ಹಗುರ ಮಾಡಿಕೊಳ್ಳುತ್ತೇವೆ. ಇದು ನಮ್ಮ ಮಾಧ್ಯಮ ಸಹ.
ಆ ನೆಲೆ “ಹಳವಂಡ’ ವಾಗಿಯೂ ಬರಬಹುದು ಅಥವಾ ಕಥೆ, ಕವನಗಳ ಮೂಲಕ (ಸುಧನ್ವಾನ ಪೇಟೆ ಪಾಡ್ದನ ಇತ್ಯಾದಿ) ಹೊಸ ಬದುಕಿನ ನೆಲೆಗೆ ಮುಖಾಮುಖಿಯಾದಾಗಿನ ಅನುಭವ ಅನಾವರಣಗೊಳ್ಳಬಹುದು. ಅದು ಅವರವರ ಆಯ್ಕೆ. ಬರಿಯ ಪ್ರೀತಿ, ಪ್ರೇಮ, ಮರ ಸುತ್ತುವುದಕ್ಕೇ ಸೀಮಿತವಾಗದೇ ಹೊಸ ಬಗೆಯ ತಲ್ಲಣಗಳನ್ನು ದಾಖಲಿಸುವ ಮಾಧ್ಯಮವಾಗಿ ಬ್ಲಾಗ್ ಬರಬೇಕೆಂಬುದು ನನ್ನ ಆಶಯ ಸಹ.
ಇತ್ತೀಚೆಗೆ ನಮ್ಮ ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಇದೇ ಬ್ಲಾಗಿಗರ ಭೇಟಿ ಕುರಿತು ಪ್ರಸ್ತಾಪಿಸಿದರು. ಪ್ರಣತಿಯ ಮೊದಲ ಪುಸ್ತಕ ಬಿಡುಗಡೆಗೆ ಬಂದಿದ್ದ ಅವರು, ” ಈ ಭೇಟಿ ಬಗ್ಗೆ ನನಗೆ ಮಾಹಿತಿಯೇ ಲಭ್ಯವಾಗಲಿಲ್ಲ. ನನಗೂ ಬರಲು ಆಸೆಯಿತ್ತು’ ಎಂದರು. ಅವರು ಹೇಳಿದ ಮಾತಿದು. “ಮುಂದಿನ ಸಂದರ್ಭದಲ್ಲಿ ಇಲ್ಲಿನ ಬರಹಗಳೂ ಸಾಹಿತ್ಯದ ಮೌಲ್ಯವನ್ನು ಪಡೆಯಬಲ್ಲವು’.
ಹಾಗೆಂದು ನಾವೆಲ್ಲಾ ೨೦೪೦ ಕ್ಕೆ ಸಾಹಿತಿಗಳ ಪಟ್ಟ ಕಟ್ಟಿಕೊಳ್ಳುತ್ತೇವೆಂಬ ಅಭಿಪ್ರಾಯವಲ್ಲ. ಆದರೆ ಅವರ ವ್ಯಾಖ್ಯಾನ ಭಾಗಶಃ ಸತ್ಯವೂ ಹೌದು. ಒಂದೆಡೆ ಕುಳಿತು, ಬಿಡುವು ಮಾಡಿಕೊಂಡು ಮಹಾಕಾವ್ಯಬರೆಯುವವರು ತೋರುತ್ತಿಲ್ಲ. ಕುವೆಂಪು, ಕಾರಂತರು, ಅಡಿಗರು ಕಂಡ ವನ್ಯ ಪ್ರೇಮ ಇನ್ನು ಸಿಗಲಾರದು. ಪಶ್ಚಿಮ ಘಟ್ಟ, ಮಲೆ ಮಹದೇಶ್ವರ ಬೆಟ್ಟ -ಹೀಗೆ ಲ್ಲಾ ಕಾಡುಗಳು ಕರಗಿಹೋಗುತ್ತಿವೆ. ಕಾರಂತರ ಕಡಲಿದ್ದರೂ ಅಲ್ಲಿಯೂ ಏಕಾಂತವಿಲ್ಲ.  ನಮ್ಮ ತಲೆಮಾರು ಉದ್ಯೋಗದ ಅಗತ್ಯದೊಂದಿಗೇ ಅನುಭವವನ್ನು ದಾಖಲಿಸುವ ಅನಿವಾರ್ಯವನ್ನು ಸೃಷ್ಟಿಸಿಕೊಂಡದ್ದು.
ಈ ಎಲ್ಲಾ ಅಂಶಗಳ ಮೂಲಕ ನಾನು ಬ್ಲಾಗ್‌ಗಳು ಸಾಹಿತ್ಯಕ್ಕೆ, ಕಥೆ, ಕವಿತೆಗೆ ಮೀಸಲಾಗಿರಬೇಕೆಂದು ಪ್ರತಿಪಾದಿಸಲು ಹೊರಟಿಲ್ಲ. ಆದರೆ ಬ್ಲಾಗ್‌ನ ಅಗತ್ಯ ಹುಟ್ಟಿದ್ದು ಅಂಥದೊಂದು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅಥವಾ ಹೇಳಿಕೊಳ್ಳುವ ತುಡಿತದಿಂದ ಎಂಬುದು ನನ್ನ ಅನಿಸಿಕೆ. 
ಪ್ರಸ್ತುತ ಇಂಥದೊಂದು ಬ್ಲಾಗ್ ಪ್ರಪಂಚದಲ್ಲಿ ಇರುವವರಲ್ಲಿ ಬಹುಪಾಲು ಮಂದಿ ತಂತ್ರಜ್ಞಾನ ಕ್ಷೇತ್ರದವರು, ತಂತ್ರಜ್ಞಾನವನ್ನು ನಿತ್ಯವೂ ಮುಖಾಮುಖಿಯಾಗುತ್ತಿರುವ ಕ್ಷೇತ್ರದವರು (ಮಾಧ್ಯಮ ಇತ್ಯಾದಿ). ಈ ಕ್ಷೇತ್ರ ನಮಗೆ ತೀರಾ ಹೊಸದು. ಹತ್ತು ವರ್ಷದಲ್ಲಿ ತಂತ್ರಜ್ಞಾನ ತಂದ ಬದಲಾವಣೆ ನಮ್ಮ ಜೀವನಶೈಲಿಯಿಂದ ಹಿಡಿದು ಎಲ್ಲ ಹಂತದಲ್ಲೂ ಪ್ರಭಾವ ಬೀರಿದೆ. ಅಷ್ಟೇ ಅಲ್ಲ, ಹಿರಿಯ ತಲೆಮಾರು ಕಂಗಾಲಾಗುವಂತೆ ಮಾಡಿದ್ದೂ ನಿಜ. ಮತ್ತೊಂದನ್ನು ಗಮನಿಸಬೇಕು. ಈ ಕ್ಷೇತ್ರದಲ್ಲಿರುವ ಬಹುತೇಕರೆಲ್ಲರೂ ಮಧ್ಯಮವರ್ಗದವರು. ಹಾಗಾಗಿ ನಾವು ಎದುರುಗೊಳ್ಳುತ್ತಿರುವ ಬದುಕಿನ ಹೊಸ ನೆಲೆಗೆ ಪ್ರತಿಕ್ರಿಯಿಸುವ ಬಗೆ ಬ್ಲಾಗ್‌ಗಳಲ್ಲಿ ಏಕೆ ಬರಬಾರದು ? ಹೊಸ ಅನುಭವದ ಗ್ರಹಿಕೆಯಲ್ಲಿ ಏರ್ಪಡುವ ಗೊಂದಲಗಳನ್ನು ಹೀಗೆ ಸಮಾನಾಸಕ್ತರ ಮಧ್ಯೆ ಬಗೆಹರಿಸಿಕೊಳ್ಳುವ ಸಂಕವೇಕಾಗಬಾರದು ? ಮತ್ತೆ ಹೇಳುತ್ತಿದ್ದೇನೆ. ಬ್ಲಾಗ್‌ಗಳಿಂದ ಕ್ರಾಂತಿ ಆಗಬೇಕೆಂದು ಏಕೆ ಬಯಸಬೇಕು ?
“ಆಕ್ಟಿವಿಸಂ’ ಬಗ್ಗೆಯೂ ಕೆಲವೆಡೆ ಚರ್ಚೆಯಾಗಿದೆ. ಅದರ ಬಗ್ಗೆ ನನ್ನ ತಕರಾರಿಲ್ಲ. ನಮ್ಮ ಹೊಸ ನೆಲೆಯ ಮಧ್ಯೆ   ಎದುರಾಗುವ ಸಮಸ್ಯೆಗಳಿಗೆ ಸಮಾನಾಸಕ್ತರು ಸೇರಿ ಚರ್ಚಿಸುವ, ಪರಿಹಾರ ಹುಡುಕಿಕೊಳ್ಳುವ ವೇದಿಕೆಯಾದರೆ ಚೆನ್ನ. ಅದನ್ನೇ ಗೊಂದಲಗಳ ಪರಿಹಾರದ ಸಂಕ ಎಂದದ್ದು. ಇದರೊಂದಿಗೆ ನಾಗರಿಕ ಪತ್ರಕರ್ತರಂತೆ ಕಾರ್ಯ ನಿರ್ವಹಿಸುವುದೂ ಸೂಕ್ತವೇ. ಬರಿಯ ಮಾಹಿತಿಯ ಖಜಾನೆ ಆಗಬೇಕೆಂಬ ವಾದ ನನಗೆ ರುಚಿಸದು.
ಹತ್ತು ವರ್ಷಗಳ ಹಿಂದೆ ಮಾಹಿತಿ ಕ್ರಾಂತಿಯಾಗಿರಲಿಲ್ಲ. ಆದರೆ ತಂತ್ರಜ್ಞಾನದ ನೆಲೆಯಲ್ಲಿ ಉಂಟಾದ ಕ್ರಾಂತಿ ಇಂದು ಏನೆಲ್ಲಾ ಉಂಟು ಮಾಡಿದೆ.  ನಮ್ಮ ಬೆರಳಿನ ತುದಿಯಲ್ಲಿ ಮಾಹಿತಿ ಖಜಾನೆ ಇಟ್ಟುಕೊಂಡಿದ್ದೇವೆ. ಒತ್ತಿದ್ದರೆ ತೆರೆಯುತ್ತದೆ, ಬೇಕಾದಾಗ ಸುರಿದುಕೊಳ್ಳಬಹುದು. ಇಂಥ ಸಂದರ್ಭದಲ್ಲಿ ನಮ್ಮ ಬ್ಲಾಗ್‌ಗಳಲ್ಲೂ ಇನ್ಪರ್ಮೇಷನ್ ಡೈಜೆಸ್ಟ್,ಸ್ಪರ್ಧಾತ್ಮಕ ಪರೀಕ್ಷಾ ಗೈಡ್, ಸರಕಾರಿ ಇಲಾಖೆಗಳ ವೆಬ್‌ಸೈಟ್‌ಗಳಾಗಬೇಕಾದ ಅಗತ್ಯವಿದೆಯೇ ? ಇದೇ ಸಂದರ್ಭದಲ್ಲಿ ಈ ಬ್ಲಾಗ್‌ಗಳನ್ನು ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರದ ನಾವೆಲ್ಲರೂ ನಮ್ಮ ಭಾವ ಬರಹಗಳೊಂದಿಗೆ ಕ್ಷೇತ್ರದ ವಿಶೇಷತೆ, ಅಲ್ಲಿನ ಬೆಳವಣಿಗೆ, ಆಕರ ವಿಷಯವನ್ನು ಕನ್ನಡದಲ್ಲಿ ಕಟ್ಟಿಕೊಡಬಹುದು. ಆಗ ಕನ್ನಡವನ್ನು ವಿವಿಧ ನೆಲೆಗಳಲ್ಲಿ ಕಟ್ಟಿದಂತಾದೀತು.
ನಗರ ಕೇಂದ್ರಿತ ಅನುಭವಗಳನ್ನು ಬರಹಗಳಲ್ಲಿ ಕಟ್ಟಿ ಕೊಟ್ಟವರ ಪಟ್ಟಿಯಲ್ಲಿ ಯಶವಂತ ಚಿತ್ತಾಲರು, ಜಯಂತ ಕಾಯ್ಕಿಣಿ ಯಂಥ ಅನೇಕರಿದ್ದಾರೆ. ಇವರೆಲ್ಲರೂ ಇಂದಿನ ತಲೆಮಾರಿನವರಾಗಿದ್ದರೆ ತಮ್ಮ ಅಭಿವ್ಯಕ್ತಿಗೆ ಬ್ಲಾಗ್‌ಗಳನ್ನೇ ಬಳಸುತ್ತಿದ್ದರೇನೋ ? ಸಾಹಿತ್ಯದ ಹಣೆ ಪಟ್ಟಿ ಕಟ್ಟುವುದನ್ನು ಬಿಟ್ಟುಬಿಡೋಣ. ಅನುಭವದ ನೆಲೆಯಾಗಿಯಷ್ಟೇ ಅರ್ಥ ಮಾಡಿಕೊಳ್ಳುತ್ತಾ ಸಾಗೋಣ.
ಚಾರಣದ ಕುರಿತಾದ ಹಲವು ಬ್ಲಾಗ್‌ಗಳಿವೆ. ನಾನಂತೂ ನಿಜವಾಗಲೂ ಅವುಗಳನ್ನು ಮಾಹಿತಿಗೆ ಓದುವುದಿಲ್ಲ ; ಅದರ ಅನುಭವಕ್ಕಾಗಿ. ಕೊಡಚಾದ್ರಿ ಬೆಟ್ಟಕ್ಕೆ ಎಲ್ಲಿಂದ ಎಷ್ಟು ಕಿ. ಮೀ ಎಂಬ ಮಾಹಿತಿ ಅಲ್ಲಿ ಸ್ಥೂಲವಾಗಿರುತ್ತದೆಯೇ ಹೊರತು ಅದೇ ಬರಹದ ಸರ್ವಸ್ವವೂ ಅಲ್ಲ. ಹಾಗಾಗಿ ಕಥೆ, ಕವನ ಇತ್ಯಾದಿ ಶೀರ್ಷಿಕೆ ಕೈ ಬಿಟ್ಟು ಒಟ್ಟೂ ಅನುಭವಿಸುತ್ತಾ ಹೋಗೋಣ. ಇಲ್ಲವಾದರೆ ಮತ್ತೆ ಬ್ಲಾಗ್‌ಗಳೂ ಮಾಹಿತಿಯ ಹೊರೆಯಲ್ಲಿ  ಸೇರಿ ಹೋದೀತೆಂಬ ಭಯ ಸದಾ ನನ್ನನ್ನು ಕಾಡುವ ಅಂಶ . ನಾವೆಲ್ಲಾ ನಡೆಯುತ್ತಿರುವ ಭಿನ್ನ ಭಿನ್ನ ಹಾದಿಯಲ್ಲಿ ಈ ಬ್ಲಾಗ್ ಎಂಬ ಮಾಧ್ಯಮ ಒಂದು ಬೀದಿದೀಪವಿದ್ದಂತೆ. ಅದರ ಬೆಳಕು ಹರಿದಷ್ಟೂ ದೂರ ನಮ್ಮ ಹೆಜ್ಜೆ ಹಗುರಾದೀತಲ್ಲವೇ ? ಬ್ಲಾಗೆಂಬ ಆಕಾಶ ಉಳಿಯಲಿ, ನಮ್ಮೊಳಗಿನ ತಾರೆಗಳು ಹೊಳೆಯಲಿ !