sasikala-panner

ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಸಂದರ್ಭ ಎದುರಾಗಿದೆ.

ಸುಮಾರು 120 ಕ್ಕೂ ಹೆಚ್ಚು ಶಾಸಕರ ಬಲವನ್ನು ಹೊಂದಿದ್ದು, ಇನ್ನೇನು ಮುಖ್ಯಮಂತ್ರಿ ಪಟ್ಟ ಏರಬೇಕೆಂದಿದ್ದ ಶಶಿಕಲಾ ನಟರಾಜನ್ ಗೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಆಘಾತವನ್ನು ನೀಡಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೋರ್ಟ್ 4 ವರ್ಷಗಳ ಜೈಲುವಾಸವನ್ನು ವಿಧಿಸಿದೆ. ಇದರೊಂದಿಗೆ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲುವಂತೆಯೂ ಇಲ್ಲ. ಹಾಗಾಗಿ ಸದ್ಯಕ್ಕಂತೂ ಶಶಿಕಲಾಳ ರಾಜಕೀಯ ಜೀವನ ಮುಗಿದಂತೆಯೇ.

ಪ್ರಕರಣ ಪಡೆದಿರುವ ಕುತೂಹಲ ಮತ್ತೊಂದು ಕಡೆ. ಯಾಕೆಂದರೆ, ಶಶಿಕಲಾರ ಮುಂದಿನ ನಡೆ ಏನು ಎಂಬುದು ಬಹಳಷ್ಟು ಕುತೂಹಲ ಉಳಿಸಿಲ್ಲ. ಜೈಲಿಗೆ ಹೋಗಬೇಕಾದುದು ಅನಿವಾರ್ಯ. ಆದರೆ, 120 ಜನರನ್ನು ಇಟ್ಟುಕೊಂಡು ಜೈಲಿನಿಂದಲೇ ಅಧಿಕಾರ ನಡೆಸುವ ಸಾಧ್ಯತೆ ಇದೆಯೇ? ಎಂಬುದು ಈಗ ಚರ್ಚೆಯ ಸಂಗತಿ.

ಮಾನಸಪುತ್ರ ಪನ್ನೀರ್ ಸೆಲ್ವಂ

ಜಯಲಲಿತಾ ಸಂಕಷ್ಟಗಳನ್ನು ಎದುರಿಸಿದ ಸಂದರ್ಭದಲ್ಲೇ ತನ್ನ ಅಧಿಕಾರ ಕೈ ತಪ್ಪಬಾರದು ಮತ್ತು ರಾಜಕೀಯ ಜೀವನ ಮುಗಿಯಬಾರದೆಂಬ ಎಚ್ಚರಿಕೆಯ ಹೆಜ್ಜೆಯಾಗಿ ಇಟ್ಟ ಪರಿಣಾಮವೆ ಒ. ಪನ್ನೀರ್ ಸೆಲ್ವಂ ಸೃಷ್ಟಿಗೆ ಕಾರಣವಾದದ್ದು. 2001 ರಲ್ಲಿ ಜಯಲಲಿತಾರನ್ನು ಸುಪ್ರೀಂಕೋರ್ಟ್ ಪದತ್ಯಾಗ ಮಾಡುವಂತೆ ಸೂಚಿಸಿದಾಗ ಪನ್ನೀರ್ ಸೆಲ್ವಂ ಜಯಲಲಿತಾರ ಅಣತಿಯಂತೆ ಆಡಳಿತ ನಡೆಸಲು ಒಪ್ಪಿದ ವ್ಯಕ್ತಿ. ಆರು ತಿಂಗಳ ಬಳಿಕ, ಜಯಲಲಿತಾ ಮತ್ತೆ ಗೆದ್ದು ಬಂದಾಗ ಕೈ ಮುಗಿದು ಮುಖ್ಯಮಂತ್ರಿ ಪಟ್ಟ ಕೊಟ್ಟು ಬಂದವರು.

ಅಮ್ಮ ಕುಳಿತ ಕುರ್ಚಿಯಲ್ಲಿ ತಾನು ಕುಳಿತುಕೊಳ್ಳುವುದಿಲ್ಲವೆಂದು, ಪಕ್ಕದಲ್ಲಿ ಬೇರೊಂದು ಕುರ್ಚಿಯನ್ನು ಹಾಕಿಸಿಕೊಂಡು ಅಧಿಕಾರ ನಡೆಸಿದ ಪನ್ನೀರ್ ಸೆಲ್ವಂ ಜಯಲಲಿತಾರ (ಅಮ್ಮ) ನಂಬಿಕಸ್ಥನ ಪಟ್ಟ ಗಟ್ಟಿ ಮಾಡಿಕೊಂಡಿದ್ದು ಸುಳ್ಳಲ್ಲ. ಮತ್ತೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾದದ್ದು ಇಂಥದ್ದೇ ಸಂಕಷ್ಟದ ಸಂದರ್ಭದಲ್ಲಿ. ಆಗ ಹಣಕಾಸು ಸಚಿವರಾಗಿದ್ದ ಪನ್ನೀರ್ ಸೆಲ್ವಂ ಅವರಿಗೆ 2014 ರ ಸೆಪ್ಟೆಂಬರ್ ನಲ್ಲಿ ಮತ್ತೆ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತೀರ್ಪು ನೀಡಿದಾಗ, ಪನ್ನೀರ್ ಸೆಲ್ವಂ ಮತ್ತೆ ಅಮ್ಮನ ಪರವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದಾದ ಬಳಿಕ ಮೇ 2015 ರಲ್ಲಿ ಕೋರ್ಟ್ ಜಯಲಲಿತಾ ಮತ್ತು ಶಶಿಕಲಾರನ್ನು ದೋಷಮುಕ್ತಗೊಳಿಸಿದಾಗ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ್ದರು.

ಮೂರನೇ ಬಾರಿ 2016 ರ ಡಿಸೆಂಬರ್ 6 ರಂದು ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾದರು. ಜಯಲಲಿತಾರ ನಿಧನದ ಹಿನ್ನೆಲೆಯಲ್ಲಿ ತತ್ ಕ್ಷಣದ ವ್ಯವಸ್ಥೆಯಾಗಿ ಪನ್ನೀರ್ ಸೆಲ್ವಂ ನೇಮಕವಾಗಿದ್ದರು. ಅಮ್ಮನ ಮಾನಸಪುತ್ರನ ಸ್ಥಾನವನ್ನು ಪಡೆದರು.

ಶಶಿಕಲಾ ಎಡವಿದ್ದೆಲ್ಲಿ?

ಅಧಿಕಾರಕ್ಕೆ ಸಂಬಂಧಿಸಿದಂತೆ ಪ್ರತಿ ಹಂತದಲ್ಲೂ ಜಯಲಲಿತಾರನ್ನು ಅನುಕರಿಸುವ ನೆಲೆಯಲ್ಲೇ ಮುಳುಗಿದ ಶಶಿಕಲಾ ಮತ್ತೊಂದು ಅಮ್ಮಳಾಗಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿದ್ದು ಸುಳ್ಳಲ್ಲ. ಈ ನೆಲೆಯಲ್ಲೇ ಎರಡು ಬಾರಿಯ ಪನ್ನೀರ್ ಸೆಲ್ವಂ ರ ವಿನಯವನ್ನು ಗ್ರಹಿಸಿ, ಚಿಕ್ಕಮ್ಮಳಾದ ತನಗೂ ಅಮ್ಮನಿಗೆ ತೋರಿಸಿದ ವಿನಯವೇ ಮುಂದುವರಿಸಬಹುದೆಂಬ ಸಣ್ಣದೊಂದು ಗ್ರಹಿಕೆ ಪನ್ನೀರ್ ಸೆಲ್ವಂ ಮೇಲಿತ್ತು. ಹಾಗಾಗಿ ಬಹಳ ಚಾಣಾಕ್ಷತನದಿಂದ ಜಯಲಲಿತಾರ ಸಾವಿನ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಅನುಕಂಪವನ್ನು ನಗದೀಕರಿಸಿಕೊಳ್ಳಲು ಪನ್ನೀರ್ ಸೆಲ್ವಂ ರೊಬ್ಬರೇ ಸೂಕ್ತ ವ್ಯಕ್ತಿ ಎನಿಸಿದ್ದರು. ಆ ಸಂದರ್ಭದಲ್ಲಿ ಬೇರೆಯವರನ್ನು ಆಯ್ಕೆ ಮಾಡಿದ್ದರೂ ಸಮಸ್ಯೆ ಬೇರೆ ತೆರನಾಗಿರುತ್ತಿತ್ತು. ಆ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಪನ್ನೀರ್ ಸೆಲ್ವಂರನ್ನೇ ಮುಖ್ಯಮಂತ್ರಿಯಾಗಿಸಿದ ಶಶಿಕಲಾ, ನಿಧಾನವಾಗಿ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದು. ಶಶಿಕಲಾರ ಆತುರತೆಯೇ ಎಡವಿ ಬೀಳುವಂತೆ ಮಾಡಿದ್ದು. ತನ್ನ ಮೇಲಿನ ಕೇಸು ಸಹಜವಾಗಿ ಇತ್ಯರ್ಥವಾಗುವವರೆಗೆ ಕಾದಿದ್ದರೆ ಬಹುಶಃ ಫಲಿತಾಂಶ ಬೇರೆ ಆಗುತ್ತಿತ್ತೇನೋ? ಈಗ ಸ್ಥಿತಿಯೇ ಬೇರೆಯಾಗಿದೆ.

ಲೆಕ್ಕಾಚಾರದಂತೆ ಫೆಬ್ರವರಿ 6, 2017 ರಂದು ಪನ್ನೀರ್ ಸೆಲ್ವಂ ರಾಜೀನಾಮೆ ಕೊಟ್ಟು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದರು. ಆಗಲೇ ಅಮ್ಮನ ಸಮಾಧಿ ಎದುರು ಬಂಡಾಯ ಘೋಷಿಸಿ ಇಂದಿನ ಸ್ಥಿತಿಯನ್ನು ಸೃಷ್ಟಿಸಿದ್ದು. ಇಂದು ಹನ್ನೊಂದು ಮಂದಿ ಸಂಸದರ ಮತ್ತು ಐದಾರು ಮಂದಿ ಶಾಸಕರ ಬೆಂಬಲವನ್ನು ಹೊಂದಿರುವ ಪನ್ನೀರ್ ಸೆಲ್ವಂ ಏನಾಗುತ್ತಾರೆ ಎಂಬ ಕುತೂಹಲ ಕಾಡುತ್ತಲೇ ಇದೆ.

ಮತ್ತೊಬ್ಬ ಪನ್ನೀರ್ ಸೆಲ್ವಂ?

ಜಯಲಲಿತಾ ತನ್ನ ಸಂಕಷ್ಟ ಸ್ಥಿತಿಗೆ ಮಾನಸಪುತ್ರನನ್ನು ಸೃಷ್ಟಿಸಿಕೊಂಡಂತೆ ಶಶಿಕಲಾ ಯಾರಾದರೊಬ್ಬರನ್ನು ಸೃಷ್ಟಿಸಿಕೊಳ್ಳುವವರೇ ಎಂಬುದೂ ಕುತೂಹಲಕ್ಕೆಡೆ ಮಾಡಿರುವ ಸಂಗತಿ. ಆದರೆ, ಅಂಥ ಮಾನಸ ಪುತ್ರ ಸಿಗುವ ಸಂಭವವೂ ಕಡಿಮೆ ಇದೆ. ಕಾರಣ, ಜಯಲಲಿತಾ ಹಲವು ವರ್ಷಗಳಿಂದ ನೇರವಾಗಿ ರಾಜಕೀಯದಲ್ಲಿದ್ದವರು ಮತ್ತು ಒಂದು ಬಗೆಯ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿದ್ದರು. ಶಶಿಕಲಾರ ವ್ಯಕ್ತಿತ್ವ ಹಾಗಲ್ಲ. ಬಹಳ ನೆಗೆಟಿವ್ ಶೇಡ್ ನಿಂದಲೇ ಜನರ ನೆಲೆಯಲ್ಲಿ ಗುರುತಿಸಲ್ಪಟ್ಟಿದ್ದು, ಎಲ್ಲ ಶಾಸಕರೂ ಬಹಳ ವಿನಯದಿಂದ ವರ್ತಿಸಿಯಾರು ಎಂದು ನಿರೀಕ್ಷಿಸಲಾಗದು.

ಒಂದುವೇಳೆ ಯಾರೋ ಒಬ್ಬನನ್ನು ಸೃಷ್ಟಿಸಲು ಹೋದರೂ, ಉಳಿದವರೆಲ್ಲಾ ಬಂಡಾಯವೆದ್ದು, ಅಧಿಕಾರಕ್ಕಾಗಿ ಕಚ್ಚಾಟ ಶುರುವಾದರೂ ಅಚ್ಚರಿ ಇಲ್ಲ.ಆದ ಕಾರಣ, ಶಾಸಕರೇ ಒಮ್ಮತದಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಶಶಿಕಲಾ ಎಲ್ಲರ ಮನಸ್ಸ ಗೆದ್ದರೆ ಅಧಿಕಾರ ಪನ್ನೀರ್ ಸೆಲ್ವಂ ಕಡೆ ಹರಿಯುವ ಸಾಧ್ಯತೆ ಕಡಿಮೆ. ಆದರೂ, ಅಮ್ಮಳ ಪ್ರತಿನಿಧಿಯಂತೆ ತೋರಿರುವ ಪನ್ನೀರ್ ಸೆಲ್ವಂರನ್ನು ಒಪ್ಪಿಕೊಳ್ಳುವುದು ಸೂಕ್ತವೆನಿಸಿಯೂ ಶಾಸಕರು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.

ಇನ್ನೂ ಸುಲಭವಾಗಿಲ್ಲ ಪನ್ನೀರ್ ಹಾದಿ

ಇಷ್ಟೆಲ್ಲದರ ಮಧ್ಯೆ ಪನ್ನೀರ್ ಸೆಲ್ವಂ ಹಾದಿಯೇನೂ ಬಹಳ ಸುಲಭವಾಗಿಲ್ಲ. ಇದುವರೆಗೆ ಎಲ್ಲ ಶಾಸಕರೂ ನಡೆದುಕೊಂಡಿದ್ದು ಅಮ್ಮನಿಗೆ. ಅಮ್ಮನ ನೆರಳಿನಲ್ಲಿದ್ದ ಪನ್ನೀರ್ ಸೆಲ್ವಂ ಗಲ್ಲ. ಈಗ ಅಮ್ಮನಿಲ್ಲ. ಹಾಗಾಗಿ ಅಮ್ಮನ ನೆರಳಿಗೆ ಹಿಂದೆ ಸಿಕ್ಕಷ್ಟೇ ಗೌರವ, ಪ್ರೀತಿ ಸಿಕ್ಕೀತೆಂದು ಎಣಿಸಲು ಸಾಧ್ಯವಿಲ್ಲ. ಆದ್ದರಿಂದ ಪನ್ನೀರ್ ಸೆಲ್ವಂ ಯಾವ ರೀತಿ ಶಶಿಕಲಾರ ಗುಂಪಿನಲ್ಲಿರುವ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ ಎಂಬುದು ಅವರ ಭವಿಷ್ಯವನ್ನು ನಿರ್ಧರಿಸಬಲ್ಲದು. ಇಲ್ಲೂ, ಆತುರತೆ ತೋರಿದರೆ, ಯಾವುದ್ಯಾವುದೋ ಒತ್ತಡ, ಆಮಿಷಗಳಿಗೆ ಒಳಗಾದರೆ ಅಥವಾ ಆಮಿಷಗಳನ್ನು ಒಡ್ಡಿ ಬೆಂಬಲ ಪಡೆದರೆ, ಹೊಸ ಸಮಸ್ಯೆಯನ್ನು ಆಹ್ವಾನಿಸಿಕೊಂಡಂತೆ. ಅವಧಿ ಪೂರ್ಣಗೊಳಿಸಲೂ ಕಷ್ಟ ಪಡಬೇಕಾದೀತು.