ಇದು ನನ್ನ ಹೊಸ ಧಾರಾವಾಹಿ. ಮನೆ ಕಟ್ಟಿದ ಕುರಿತಾದದ್ದು. ನಮ್ಮದೊಂದು ಕಲ್ಪನೆ ಮೂರ್ತ ಸ್ವರೂಪ ಪಡೆಯುವಾಗ ಅನುಭವಿಸುವ ಸಂಕಟ, ಇದನ್ನೇ ಆಧಾರವಾಗಿಸಿಕೊಂಡು ನಿರ್ಮಾಣಗೊಳ್ಳುವ ಹತ್ತು ಹಲವು ವಲಯಗಳು..ನಿಜ..ಯಶವಂತ ಚಿತ್ತಾಲರ ಶಿಕಾರಿ ನೆನಪಾಗುತ್ತದೆ. ವಾರಕ್ಕೊಂದು ಅಧ್ಯಾಯ ಬರೆಯುವೆ…ಓದಿ ಅಭಿಪ್ರಾಯಿಸಿ..ಆ ಪೈಕಿ ಇದು ಮೊದಲ ಕಂತು. ಬಹಳ ದಿನದಿಂದ ಬ್ಲಾಗಿನಿಂದ ದೂರವಿದ್ದೆ..ಈಗ ಮತ್ತೆ ಅದೇ ಅಂಗಳಕ್ಕೆ..

first-home-buyers

ಮನೆ ಕಟ್ಟುವುದು ಒಂದು ದೊಡ್ಡ ಕನಸು. ಅದರಲ್ಲೂ ತನ್ನ ಮಧ್ಯ ವಯಸ್ಸಿನಲ್ಲಿ ಸ್ವಂತದ್ದೊಂದು ಸೂರು ಹೊಂದಬೇಕೆಂಬ ಮಹದಾಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದು ನನಗೂ ಇದ್ದಿತ್ತು. ಬಾಲ್ಯದಲ್ಲಿ ಅಡುಗೆ ಮನೆಯ ಆಟವಾಡುವಾಗ, ಅದೊಂದು ಎಂಥ ವೈಯಕ್ತಿಕ ಸ್ವಾತಂತ್ರ್ಯದ ಬಾಬ್ತು ಎಂಬುದೇ ತಿಳಿದಿರಲಿಲ್ಲ.
ಚೀನಿ ಸಿನಿಮಾ ಟು ಲಿವ್-ಇಂಥದ್ದೇ ವಿಷಯ ಕುರಿತು ಚರ್ಚಿಸುವಂಥದ್ದು. ಚೀನಾದಲ್ಲಿ ಮಾವೋವಾದ ಸಮಾನತೆ ಸಾಧಿಸುವತ್ತ ತನ್ನ ತತ್ವ್ತ-ಸಿದ್ಧಾಂತಗಳನ್ನು ಹೇರುವಾಗ ಎಲ್ಲೋ ಒಂದೆಡೆ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಕನಿಷ್ಠ ಗೌರವವನ್ನೂ ಕೊಡಲಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೆ ನಮ್ಮದೇ ಅಡುಗೆ ಮನೆ ಹೊಂದಿರಬೇಕೆಂಬ ಅರಿವೂ ಇತ್ತೀಚೆಗೆ ಬಂದದ್ದು.

ಬಾಲ್ಯವೇ ಬೇರೆ. ಯೌವ್ವನವೇ ಬೇರೆ. ಮುಪ್ಪೇ ಬೇರೆ. ಬಹುಶಃ ಯಾವುದೂ ಮನುಷ್ಯನ ಜೀವನದ ಈ ಮೂರು ಹಂತಗಳನ್ನು ಒಂದೇ ಬಗೆಯಲ್ಲಿ ಇಟ್ಟಿರಲಾರದು. ಒಳ್ಳೆ ಇಸ್ತ್ರಿಹಾಕಿದ ಗರಿಮುರಿ ಅಂಗಿಯಂತೆ ಎಂದಿಗೂ ಜೀವನ ಇರದು. ಯಾವುದೋ ಒಂದು ಹಂತದಲ್ಲಿ ಮುರಿದು ಗೊಪ್ಪೆಯಾಗಿ, ಸುಕ್ಕು ಕಟ್ಟುವುದು ಇದ್ದೇ ಇರುತ್ತದೆ. ಹಾಗಾಗಿ ಈ ಹಂತದಲ್ಲಿ ಹೀಗೇ ಇದ್ದೀನೆಂಬ ವಿಶ್ವಾಸ ಇರದಿದ್ದರೂ, ಹಾಗಾಗದೆಂಬ ನಂಬಿಕೆಯಷ್ಟೇ ನಮ್ಮನ್ನು ಮತ್ತೊಂದು ಹಂತಕ್ಕೆ ಹುರಿಗೊಳಿಸುತ್ತಿರುತ್ತದೆ.

ಈ ಧಾರಾವಾಹಿ ನನ್ನ ಬಾಲ್ಯದ ಕುರಿತೂ ಅಲ್ಲ, ನನ್ನ ಮುಂದಿನ ಜೀವನದ ಬಗೆಗಿನ ಊಹಾತ್ಮಕ ನೆಲೆಯೂ ಅಲ್ಲ. ಇಂದು ಸಂಪೂರ್ಣವಾಗಿ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಬಗೆಗೆ ಕುರಿತಾದದ್ದು. ಅದರಲ್ಲಿ ಮೊದಲ ಹಂತ ಮನೆ ಕಟ್ಟಿ ನೋಡಿದೆ. ನಿಜ, ಹಿರಿಯರು ಸುಮ್ಮನೆ ಈ ಗಾದೆಯನ್ನು ಸೃಷ್ಟಿಸಲಿಲ್ಲ. ಒಂದು ಮನೆಯೆಂಬ ಮಾನಸಿಕ ಕಲ್ಪನೆ ಭೌತಿಕ ಆಕಾರ ಪಡೆಯುವ ಹಂತದಲ್ಲಿ ಪಡೆಯುವ ಸ್ಥಿತ್ಯಂತರಗಳು ಹಾಗೂ ಬದಲಿಸುವ ನೆಲೆಗಳು, ಸ್ಪಷ್ಟಗೊಳ್ಳುವ ಸಂಬಂಧಗಳು, ತೊಳೆದುಹೋಗದಷ್ಟು ಗಟ್ಟಿಗೊಳ್ಳುವ ಮತ್ತಷ್ಟು ಸಂಬಂಧಗಳು, ಬೆಂದ ಮನೆಯಲ್ಲಿ ಗಳ ಹಿರಿಯುವಂಥ ಮನಸ್ಸಿನ ಸ್ಥಿತಿಗಳು..ಹೀಗೆ ಎಲ್ಲವೂ ಒಂದು ಮನೆ ಕಟ್ಟಿ ಮುಗಿಸುವಷ್ಟರಷ್ಟಿಗೆ ಜೀವನದ ಅನುಭವದ ಮತ್ತೊಂದು ಮಜಲನ್ನು ಮುಟ್ಟಿಸಿಬಿಟ್ಟಿರುತ್ತದೆ. ಅಲ್ಲಿಂದ ನೋಡುವಾಗ ಜನರು, ಸಂಬಂಧಗಳು, ಸಮಾಜದ ನಗ್ನತೆ ಕಣ್ಣಿಗೆ ಕಟ್ಟುತ್ತದೆ. ಇದೊಂದು ಬಗೆಯಲ್ಲಿ ಮಹಡಿ ಮೇಲೆ ನಿಂತು ಕೆಳಗೆ ನೋಡುವ ಹಾಗೆ. ಒಂದಂತೂ ಅಕ್ಷರಶಃ ಸತ್ಯ. ಮನೆ ಕಟ್ಟಿದ ಮೇಲೆ ಎಲ್ಲವೂ ಇದ್ದಂತೆ ಇರುವುದಿಲ್ಲ.

ಇಂದು ಪೂರ್ಣಗೊಂಡಿರುವ ನನ್ನ ಮನೆ ಖುಷಿಕೊಟ್ಟಿದೆ. ಎಚ್ಚರವಹಿಸಿ ಖರ್ಚಿನ ಬಾಬ್ತು ಕಡಿಮೆ ಮಾಡಲು ಗಮನಿಸಿದೆ. ಹಾಗಾಗಿ ಖರ್ಚಿನ ಕುದುರೆಯ ಓಟವನ್ನು ತಪ್ಪಿಸಲಾಗಲಿಲ್ಲ, ಆದರೆ ಅದರ ನಾಗಾಲೋಟವನ್ನು ನಿಯಂತ್ರಿಸಿದೆ. ಹೀಗೆ ಇಡೀ ಮನೆ ಕಟ್ಟಿಸುವ ಕಸರತ್ತಿನಲ್ಲಿ ಪಡೆದ ಸಿಹಿ-ಕಹಿ ಅನುಭವಗಳ ಬಗೆಗೆ ಒಂದು ಅವಲೋಕನವಿದು.

ಹಾಗೆಂದು ಬರಿದೇ ಅದಷ್ಟೇ ಅಲ್ಲ. ನನ್ನ ತಲೆಮಾರಿನವರು-ವಯೋಮಾನದವರು ಮನೆಕಟ್ಟಿಸುವ ಹಂಬಲವುಳ್ಳವರಿಗೆ ಒಂದು ಸಣ್ಣ ಸಲಹೆ ರೂಪವೂ ಈ ಧಾರಾವಾಹಿ. ಹಗಲು ಕಂಡ ಬಾವಿಗೆ ಬೀಳಬಾರದೆಂಬ ಎಚ್ಚರವೂ ಇದರ ಹಿನ್ನೆಲೆಯಲ್ಲಿದೆ. ಹೇಗೆ ನಾವು ಮೋಸ ಹೋಗುವುದೆಲ್ಲಿ ? ಎಲ್ಲಿ ಖರ್ಚು ಇಳಿಸಬಹುದು ? ಗುತ್ತಿಗೆದಾರರು ನಮ್ಮನ್ನೆಲ್ಲಿ ಹಳ್ಳಕ್ಕೆ ಎಳೆಯುತ್ತಾರೆ ? ಕಂಡೋರ ದುಡ್ಡಲ್ಲಿ ಮಜಾ ಮಾಡುವ ಮಂದಿಯ ಗುತ್ತಿಗೆದಾರರ ಮನಸ್ಥಿತಿ ಏನು ? ಇದೆಲ್ಲದರ ಮಧ್ಯೆ ಯಾವುದೋ ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ನಮ್ಮ ಸಹಕಾರವೂ ಇರಲಿ ಎಂಬ ಮಂದಿ ಹೇಗೆ ನಮ್ಮ ಆಸೆಯನ್ನು ಜೀವಂತವಾಗಿಡುತ್ತಾರೆ? ಇಷ್ಟೆಲ್ಲಾ ಮುಗಿದೂ ಔದಾರ್ಯದ ಉರುಳಲ್ಲಿ ಸಿಲುಕಿ ನರಳುವ ನರಳಿಕೆ ತಂದು ಕೊಡುವಂಥ ಬೇಸರವೆಂಥದ್ದು ? ಹೀಗೆ ನೂರು ಸ್ವರ. (pic courtesy : webwombat.com.au)