ನಮ್ಮ ಬ್ರಹ್ಮಚಾರಿಗಳ ಪುಟಗಳು ಬಹಳ ದಿನಗಳ ಮೇಲೆ ಮತ್ತೆ ಆರಂಭವಾಗಿದೆ. ಇನ್ನು, ನಿಲ್ಲುವುದಿಲ್ಲ…!

ಇಂತಿರ್ಪ ನಮ್ಮ ಬ್ರಹ್ಮಚಾರಿಗಳ ಮನೆಯೊಳಗೆ ಏನೆಲ್ಲಾ ಆಗಬೇಕಿತ್ತೋ ಅದೆಲ್ಲಾ ಆಗಬೇಕಿತ್ತು. ನಮ್ಮ ಮನೆ ಮೀಡಿಯಾ ಸರ್ಕಲ್ ನಲ್ಲಿ ಎಷ್ಟು ಜನಪ್ರಿಯವಾಗಿತ್ತೆಂದರೆ ಹೇಳುವಂತಿಲ್ಲ. ಹೊಸಬರು ನಮ್ಮ ಮನೆಗೆ ಅರ್ಜಿ ಹಾಕಿಕೊಂಡು ಕಾದದ್ದೂ ಇದೆ. OPINION

ಇದ್ದ ನಾಲ್ಕು ವರ್ಷದಲ್ಲಿ ನಾವೆಲ್ಲರೂ ಹೋಟೆಲ್ಲಿಗೆ ಹೋಗಿದ್ದೇ ಕಡಿಮೆ. ಎಲ್ಲೋ ರಾತ್ರಿ ಎಲ್ಲರೂ ತಡವಾಗಿ ಬಂದು ಬೆಳಗ್ಗೆ ತಿಂಡಿ ಮಾಡದಿದ್ದಾಗ ಬಿಟ್ಟರೆ ಉಳಿದಂತೆ ಮನೆಯೇ. ಒಂದು ವಿಶೇಷವೆಂದರೆ ನಮ್ಮ ಮನೆಯಲ್ಲಿ ಸವಿ ರುಚಿಗಳಷ್ಟನ್ನೇ ಮಾಡುತ್ತಿದ್ದೆವು. ಹೊಸ ರುಚಿಗಳನ್ನು ಪ್ರಯತ್ನಿಸುತ್ತಿರಲಿಲ್ಲ. ಬೆಳಗ್ಗೆಗೆ ಒಂದು ಚೆಂದವಾದ ತಿಂಡಿ, ರಾತ್ರಿಗೆ ಒಂದು ಸಾರು ಅಥವಾ ಸಾಂಬಾರು ಸಿದ್ಧಗೊಳ್ಳುತ್ತಿತ್ತು. ಮಧ್ಯಾಹ್ನ ಹೋಟೆಲೇ ಗತಿ. 

ಅತ್ಯಂತ ಅಪರೂಪಕ್ಕೆ ಸೋಮಾರಿತನ ನಮ್ಮನ್ನು ಕಾಡಿದ್ದರೆ ಹಲಸೂರು ಪೊಲೀಸ್ ಸ್ಟೇಷನ್ ಬಳಿಯೇ ಒಂದು ಹೋಟೆಲಿತ್ತು. ಅದಕ್ಕೆ ಹೋಗಿ ತಿನ್ನುತ್ತಿದ್ದೆವು. ಅದರ ರುಚಿಯೂ ಹಿಡಿಸದೇ ಸುಮ್ಮನೆ ಇದ್ದ ಪ್ರಸಂಗಗಳೂ ಇವೆ. ಬೆಳಗ್ಗೆ ತಿಂಡಿ ಮಾಡುವ ಹೊಣೆ ನನ್ನದು (ಅರವಿಂದ ನಾವಡ). ನನ್ನ ಟೀಮಿನ ಸದಸ್ಯರು ನವೀನ್, ಹರ್ಷ, ರಮೇಶ್ ಕುಮಾರ್. ರಾತ್ರಿ ಊಟವನ್ನು ಒದಗಿಸಬೇಕಾದ ಹೊಣೆಯನ್ನು ಅರವಿಂದ ಸಿಗದಾಳ, ಅರುಣ್ ಮತ್ತು ಯೋಗೀಶರಿಗೆ ನೀಡಲಾಗಿತ್ತು. ಯೋಗೀಶ್ ಕೆಲವು ಕಾಲವಷ್ಟೇ ಇದ್ದು ಲಂಡನ್‌ಗೆ ಹೋಗಿ ಸ್ಥಿರಗೊಂಡ.

ರಾತ್ರಿ ಊಟದಲ್ಲಿ ಪ್ರಯೋಗ ನಡೆಯುತ್ತಿತ್ತು. ಕೆಲವೊಮ್ಮೆ ಪ್ರಯೋಗ ಎಷ್ಟಾಗಿರುತ್ತಿತ್ತು ಎಂದರೆ ಬೆಳ್ಳುಳ್ಳಿಯ ಘಾಟು ಜಾಸ್ತಿಯಾಗಿ ಊಟ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಯಾರೂ ಟೀಕಿಸುತ್ತಿರಲಿಲ್ಲ. ನಾನು ಸ್ವಲ್ಪ ನೇರವಾಗಿ ಇದು ಇಷ್ಟವಾಗಲಿಲ್ಲ ಎಂದು ಸಾಮೂಹಿಕ ನಿಯಮವನ್ನು ಮೀರಿದ್ದ ಪ್ರಸಂಗಗಳೂ ಇವೆ. ಆದರೆ, ಹೆಚ್ಚು ಸಂದರ್ಭಗಳಲ್ಲಿ ಮೊಸರಿನಲ್ಲಿ ಊಟ ಮಾಡಿ ಕೈ ತೊಳೆದಿದ್ದಿದೆ.

ಇವತ್ತಿಗೂ ಆ ಪ್ರಸಂಗಗಳನ್ನು ಗಮನಿಸಿದರೆ, ನಾವು ಬದುಕಿದ ರೀತಿಯೇ ಬಹಳ ವಿಚಿತ್ರವೆನಿಸುತ್ತದೆ. ನಾವು ಬಹುತೇಕ ಮಂದಿ ಒಂದೇ ಕ್ಷೇತ್ರದಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದರೂ ಅಭಿಪ್ರಾಯ ಭೇದಕ್ಕೆ ಕೊರತೆ ಇರಲಿಲ್ಲ. ಕೆಲವೊಮ್ಮೆ ಒಂದು ವಿಷಯಕ್ಕೆ ಏಳು ಅಭಿಪ್ರಾಯ ಬಂದದ್ದೂ ಇದೆ. ಬಹುಶಃ ಇಂದಿಗೂ ಪರಸ್ಪರ ಅಭಿಪ್ರಾಯಗಳನ್ನು ಗೌರವಿಸುವ ಅಥವಾ ಕೇಳುವಷ್ಟು ತಾಳ್ಮೆಯನ್ನು ಕಲಿಸಿದ್ದರೆ ಅದು ಆ ಮನೆ ಮತ್ತು ಪರಿಸರ. ಈ ಮಾತು ನನಗಷ್ಟೆ ಅಲ್ಲ, ಉಳಿದವರಿಗೂ ಅನ್ವಯವಾಗುತ್ತದೆಂದು ನನ್ನ ಅನಿಸಿಕೆ.

ಎಂದಿಗೂ ನಮ್ಮ ನಮ್ಮ ಅಭಿಪ್ರಾಯಗಳಿಗೆ ಆತುಕೊಂಡು ಜಗಳ ಮಾಡಿಕೊಂಡು ಮುಖ ಗಂಟಿಕ್ಕಿಕೊಂಡ ಪ್ರಸಂಗಗಳು ಆ ಮನೆಯಲ್ಲಿ ನಡೆದಿರಲಿಲ್ಲ. ಆ ಕ್ಷಣದಲ್ಲಿ ಮಾತಿಗೆ ಮಾತು ಬೆಳೆದು, ಚರ್ಚೆಯನ್ನು ಅರ್ಧಕ್ಕೆ ಅಂತ್ಯಗೊಳಿಸಿದ ಪ್ರಸಂಗಗಳು ನಡೆದಿವೆ. ಆದರೆ ಅದು ರಾತ್ರಿಗೆ, ನಾಳೆಗೆ, ಭವಿಷ್ಯಕ್ಕೂ ಎಳೆದುಕೊಂಡು ಹೋದ ಪ್ರಸಂಗಗಳು ನಡೆದ ನೆನಪಿಲ್ಲ.

ನವೀನ್ ಯಾವಾಗಲೂ ಚರ್ಚೆಯನ್ನು ಆರಂಭಿಸುತ್ತಿದ್ದುದು ಅವನೇ, ಅಂತ್ಯಗೊಳಿಸುತ್ತಿದ್ದುದೂ ಅವನೇ. ಕೆಲವೊಮ್ಮೆ ಕೆಲವರದ್ದು ವಿತಂಡವಾದ ಎನಿಸಿದ್ದೂ ಇದೆ. ಆಗ ಉಳಿದವರು ಮೌನವನ್ನು ಧರಿಸುತ್ತಿದ್ದರೇ ಹೊರತು ಮತ್ತೇನೂ ಅಲ್ಲ. ಯೋಗೀಶ, ಅರುಣ್, ಕುಳಮರ್ವ ನಿತ್ಯ ಮೌನಿಗಳು. ಯಾರ ಪರವೂ ಇಲ್ಲ. ಅಖಾಡದಲ್ಲಿ ಕುಸ್ತಿ ನಡೆಯುವಾಗ ಕಟಾಂಜನದ ಹೊರಗೆ ನಿಂತು ನೋಡುವ ಪ್ರೇಕ್ಷಕರಂತೆ ಅವರು ಸದಾ ತೋರುತ್ತಿದ್ದರು. ಅರುಣ ನಗುವನ್ನಾದರೂ ಸೂಚಿಸುತ್ತಿದ್ದ. ಯೋಗೀಶ ನಗುತ್ತಲೂ ಇರಲಿಲ್ಲ, ಚಂದೂ ಮಾಮ (ಚಂದ್ರಶೇಖರ ಕುಳಮರ್ವ) ಮೌನ ಮುರಿದ ಪ್ರಸಂಗವೇ ಇರಲಿಲ್ಲ.

ಈ ನವೀನನೇ ಅವರ ಮೌನವ್ರತ ಭಂಗ ಮಾಡಲೆಂದು ಅಭಿಪ್ರಾಯಕ್ಕೆ ಒತ್ತಾಯಿಸಿದ್ದುಂಟು. ಅವರು ಹೆಗಲಿಗೆ ಹಾಕಿಕೊಂಡ ಅಂಗವಸ್ತ್ರವನ್ನು ಎಳೆದು ಪೀಡಿಸಿದ್ದುಂಟು. ಆದರೆ, ಕುಳಮರ್ವರೇ ಗೆದ್ದದ್ದು, ನಾವಲ್ಲ.

ಇದನ್ನೇ ಸಹವಾಸವೆನ್ನುವುದು. ಒಂದು ಬದುಕಿನಲ್ಲಿ ಯಾರೊಡನೆ ಇರುತ್ತೇವೆಯೋ, ಅಲ್ಲಿ ಮತ್ತು ಅದು ಏನಾದರೂ ಜೀವನದಲ್ಲಿ ಕಲಿಸಬೇಕು. ಇಲ್ಲದಿದ್ದರೆ ಆ ಸಹವಾಸ-ಆ ದಿನಗಳ ವ್ಯರ್ಥವೆಂದೇ ಅರ್ಥ. ನಮ್ಮ ಬ್ರಹ್ಮಚಾರಿಯ ದಿನಗಳು ಅದರಲ್ಲೂ ಹಲಸೂರಿನ ಮನೆ ಇಂಥದೊಂದು ಗುಣವನ್ನು ಕಲಿಸಿತು. ಅಭಿಪ್ರಾಯ ಭೇದಗಳನ್ನು ಗೌರವಿಸುವ, ತಾಳ್ಮೆಯಿಂದ ಕೇಳುವುದನ್ನು ಕಲಿಸಿತು. ಅದಕ್ಕೆ ನಾವೆಲ್ಲರೂ ಋಣಿ.