ಬೆಟ್ಟ ಹತ್ತಲು ಹೊರಟವನಿಗೆ ಏಕೋ ಬೇಸರ ಬಂದಿತು. ಇತ್ತ ಮತ್ತಷ್ಟು ಏರಲೂ ಬೇಸರ, ಇಳಿದು ಹೋಗಲೂ ಬೇಸರ. ನಿಂತಲ್ಲೇ ನಿಲ್ಲಲು ಮತ್ತಷ್ಟು ಬೇಸರ. ಏನು ಮಾಡಬೇಕೆಂದು ತೋಚದೇ ಸುಮ್ಮನೆ ಹಾಗೆಯೇ ನಿಂತುಬಿಟ್ಟ ಸ್ವಲ್ಪ ಹೊತ್ತು.

gokarna 215

ಹಾಗೆಂದು ಜಗತ್ತು ನಿಲ್ಲಲಿಲ್ಲ. ಇವನ ಮುಂದೆ ಇನ್ನೆಷ್ಟೋ ಮಂದಿ ಇಳಿದುಹೋಗುತ್ತಿದ್ದರು. ಮತ್ತೆಷ್ಟೋ ಮಂದಿ ಇವನನ್ನು ದಾಟಿ ಮೇಲೇರುತ್ತಿದ್ದರು. ಒಂದು ಪುಟ್ಟ ಮಗು ಮೆಟ್ಟಿಲಿನ ಅಂಚನ್ನು ಹಿಡಿದುಕೊಂಡು ಮೆಲ್ಲಗೆ ಹತ್ತಿ ಬರುತ್ತಿತ್ತು. ಅದರ ಹಿಂದೆ ಅದರ ಅಮ್ಮ. ಅಪ್ಪ ಯಾವಾಗಲೋ ಮುಂದಕ್ಕೆ ಹೋಗಿರಬೇಕು. ಎಲ್ಲೂ ತೋರುತ್ತಿರಲಿಲ್ಲ. ಅಮ್ಮನೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಂತೆ ತೋರುತ್ತಿರಲಿಲ್ಲ. ಅವಳಿಗೆ ತನ್ನ ಮಗಳಿಗೆ ಏರುವುದನ್ನು ಕಲಿಸುವ ಕಾಳಜಿ ಮತ್ತು ಕಲಿಸಿದ ಖುಷಿ ಅನುಭವಿಸುತ್ತಾ ಹಿಂಬಾಲಿಸುತ್ತಿದ್ದಾಳೆ.

ಈ ಮಗುವೋ ತನಗೆ ಬೇಕಾದಲ್ಲಿ ಕೊಂಚ ಹೊತ್ತು ನಿಲ್ಲುತ್ತದೆ. ಅತ್ತ ಇತ್ತ ನೋಡುತ್ತದೆ. ಅಮ್ಮನನ್ನು ಕಂಡು ಒಮ್ಮೆ ನಗುತ್ತದೆ. ಕೈ ಬೀಸಿ ಬಾ ಎಂದು ಕರೆಯುತ್ತದೆ. ಅಮ್ಮ ಹತ್ತಿರ ಬಂದ ಕೂಡಲೇ ಒಂದು ಮುತ್ತು ಕೊಟ್ಟು ಮುಂದಿನ ಮೆಟ್ಟಿಲಿನತ್ತ ಜಿಗಿಯುತ್ತದೆ. ’ಜಿಗಿಯಬೇಡ’ ಎಂದರೂ ಕೇಳುವ ಮನಸ್ಸಿಲ್ಲ. ’ಇಲ್ಲ’ ಎನ್ನುತ್ತಲೇ ಮತ್ತೆ ಜಿಗಿದೇ ತೀರುತ್ತದೆ. ಒಮ್ಮೊಮ್ಮೆ ಇನ್ನೆಷ್ಟು ಮೆಟ್ಟಿಲು ಇರಬಹುದೆಂದು ತಲೆ ಎತ್ತಿ ನೋಡುತ್ತದೆ ಅಷ್ಟೇ. ಏನೂ ಸಂಭಾಷಿಸುವುದಿಲ್ಲ.

ಮಗು ನೋಡಿದತ್ತಲೇ ಅಮ್ಮನೂ ನೋಡುತ್ತಾಳೆ. ಏನೋ ಎತ್ತಿಕೊಳ್ಳಲಾ ಎಂದು ಕೇಳುತ್ತಾಳೆ ಅಮ್ಮ. ಅದಕ್ಕೆ ಮಗು, ’ಬೇಡ’ ಎಂದು ನಿರಾಕರಿಸುತ್ತದೆ. ಆದರೆ, ಮುಖದ ಮೇಲೆ ಬೆವರಿನ ಗೆರೆ ಮೂಡಿದೆ. ಬಾಯಲ್ಲೂ ಉಸಿರು ಹೊಮ್ಮುತ್ತಿದೆ. ಕಾಲೆಲ್ಲಾ ದಣಿದಂತೆ ತೋರುತ್ತಿದೆ. ಬೆನ್ನಿಗೆ ಕೈ ಹಿಡಿದು ನಿಲ್ಲುವುದರಲ್ಲೇ ಅದಕ್ಕಾದ ದಣಿವು ಅರಿವಿಗೆ ಬರುತ್ತದೆ. ಆದರೂ ಮೇಲಕ್ಕೇರುವ ಹುಮ್ಮಸ್ಸು ಅವೆಲ್ಲವನ್ನೂ ಒಪ್ಪಿಕೊಳ್ಳಲು ಬಿಡುವುದಿಲ್ಲ. ಮತ್ತೆ ಎರಡು ಮೆಟ್ಟಿಲು ಹತ್ತುತ್ತಲೇ ನಿಂತು ಬಿಡುತ್ತದೆ.

ಅಮ್ಮನಿಗೆ ಅನಿಸಿತೀಗ ’ಇನ್ನಾಗದು’ ಇವನಿಂದ ಎಂದು. ತಕ್ಷಣವೇ ಅದನ್ನು ಎತ್ತಿಕೊಂಡು ಹತ್ತ ತೊಡಗಿದಳು. ಅಮ್ಮನಿಗೆ ಆಕಾಶವನ್ನು ಮುಟ್ಟಿಸುವ ಹಂಬಲ. ಮಗು ಅಮ್ಮನ ತೆಕ್ಕೆಗೆ ಹೋಗಿ ಸೋಲನ್ನು ಒಪ್ಪಿಕೊಂಡಿತು. ಈಗ ಮಗುವಿನ ಮುಖದಲ್ಲಿ ನಿರಾಳ. ಮತ್ತೆ ಉತ್ಸಾಹ ಹೆಚ್ಚುತ್ತಿದೆ. ಇಬ್ಬರೂ ತುದಿಯನ್ನು ಮುಟ್ಟಿ ಎರಡೂ ಕೈಗಳನ್ನು ಚಾಚಿ ಆಕಾಶವನ್ನು ಹಿಡಿಯುತ್ತಾ ನಿಂತು ಬಿಟ್ಟರು.

ಹೀಗೇ ಮಧ್ಯದಲ್ಲಿ ನಿಂತವನಿಗೆ ಏನನ್ನಿಸಿತೋ ಏನೋ ? ಸರಸರನೆ ಕೆಳಗಿಳಿದು ಹೋದ. ನೆಲದ ಮೇಲೆ ಮಲಗಿ ಎರಡೂ ಕೈಗಳನ್ನು ಚಾಚಿ ಭೂಮಿಯನ್ನು ತಬ್ಬಿಕೊಂಡ. ಗಳಗಳನೆ ಅತ್ತ. ಕೆಲ ಕ್ಷಣದಲ್ಲಿ ನಗತೊಡಗಿದ. ಅತ್ತ ಇತ್ತ ಹೋಗುವವರೆಲ್ಲಾ ವಿಸ್ಮಯದಂತೆ ಅವನನ್ನು ಕಂಡರು. ಅವನಿಗೆ ಅದಾವುದೂ ತೋರಲಿಲ್ಲ. ಬರೀ ಗೆಲ್ಲುವುದನ್ನೇ ಹಂಬಲವಾಗಿ ಹೊತ್ತವನು ಸೋಲುವುದನ್ನೂ ಕಲಿತಿದ್ದ.

ಮಳೆ ಹನಿಯತೊಡಗಿತು. ಕೆಲ ಕ್ಷಣದಲ್ಲಿ ಸ್ವಲ್ಪ ಬಿರುಸು. ಮೂರೂ ಮಂದಿ ಮಳೆಯಲ್ಲಿ ತೋಯುತ್ತಿದ್ದಾರೆ. ಮಗು ಮಳೆಹನಿಗಳನ್ನು ಎಣಿಸಲು ಹರಸಾಹಸ ಪಡುತ್ತಿದೆ. ಅಮ್ಮ ಮಗುವಿಗೆ ಕೊಡಲಿಕ್ಕೆಂದು ಬಿದ್ದ ಆಲಿಕಲ್ಲುಗಳನ್ನು ಎಣಿಸಲು ಕಷ್ಟ ಪಡುತ್ತಿದ್ದಾಳೆ. ಇತ್ತ ಅವನೋ, ಭೂಮಿಗೆ ಬೀಳುವ ಪ್ರತಿ ಹನಿಯನ್ನೂ ಅನುಭವಿಸುವ ಖುಷಿಯಲ್ಲಿ ಮುಳುಗಿದ್ದಾನೆ. ಒಟ್ಟೂ ಒಂದು ಮೇಘ ಮಲ್ಹಾರದ ಸಾಲು. (ಚಿತ್ರ : ನಾನೇ ತೆಗೆದದ್ದು)