ಬಹಳ ದಿನಗಳಾಯ್ತು, ಬ್ಲಾಗಿನ ಬಾಗಿಲಿಗೆ ಬಂದು. ಇಂದಿನಿಂದ ಮತ್ತೆ ಬರುತ್ತಿದ್ದೇನೆ. ಒಂದಿಷ್ಟು ಅದು-ಇದು-ಬರಹಗಳ ಮೂಲಕ.
ರಾಜ್ಯದ ಮತದಾರರು ಕಾಂಗ್ರೆಸ್ ನ ಕೈ ಹಿಡಿದಿದ್ದಾರೆ. ಏಳು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ರಚಿಸುವುದರತ್ತ ಕಾರ್ಯೋನ್ಮುಖವಾಗಿದೆ. ಮುಖ್ಯಮಂತ್ರಿಗಳ್ಯಾರು ಎಂಬ ಪ್ರಶ್ನೆ ಸದ್ಯಕ್ಕೀಗ ಉದ್ಭವಿಸಿದೆ. ಈ ಗೆಲುವಿನ ಹಿಂದೆ ಹೋದರೆ, ಕಾಂಗ್ರೆಸ್‍ನ ಶಕ್ತಿಯೇ ಈ ಹಂತಕ್ಕೆ ತಂದಿತೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇದರಲ್ಲಿ ಕಾಣುವ ಸ್ಪಷ್ಟವಾದ ಅಂಶವೆಂದರೆ ಜನರ ಅನಿವಾರ್ಯತೆ ಮತ್ತು ಬಿಜೆಪಿ ಆಡಳಿತ ವಿರೋಧಿ ಅಲೆ ಕೈ ಹಿಡಿದಿದೆ.
ಬಿಜೆಪಿಯು ಅಭಿವೃದ್ಧಿಯ ಮಂತ್ರವನ್ನು ಜಪಿಸಿ 2004 ರಲ್ಲಿ ಅಧಿಕಾರಕ್ಕೆ ಬಂದಿತು. ಸರಳ ಬಹುಮತದತ್ತ ಹತ್ತಿರ ಹತ್ತಿರ ಬಂದು, ಒಂದಿಷ್ಟು ಅವರಿರವರನ್ನು ಸೇರಿಸಿಕೊಂಡು ಸರಕಾರ ನಡೆಸಿತು. ಆನರೂ ಅತ್ಯಂತ ವಿಶ್ವಾಸದಿಂದ ಪರ್ಯಾಯ ಶಕ್ತಿವಾದೀತೆಂಬ ನಂಬಿಕೆಯಿಂದ ಬಿಜೆಪಿ ಗೆ ಮತ ಚಲಾಯಿಸಿದ್ದರು. ಅಂಥ ಬಿಜೆಪಿಯ ಮೇಲೆ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿಯನ್ನು ಜನರು ಈಗ ತಿರಸ್ಕರಿಸಿದ್ದಾರೆ.
ಬಿಜೆಪಿಯ ಮನೆಯಲ್ಲಿ ಸೋಲಿನ ಆತ್ಮಾಲೋಕನಕ್ಕೆ ವೇದಿಕೆ ಸಿದ್ಧವಾಗಿದ್ದರೆ, ಕಾಂಗ್ರೆಸ್‍ನಲ್ಲಿ ಸರಕಾರ ರಚಿಸಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಮೂರ್ನಾಲ್ಕು ಮಂದಿ ಕೋಟುಗಳನ್ನು ಹೊಲಿಸಿಕೊಳ್ಳಲು ಸಿದ್ಧವಾಗುತ್ತಿದ್ದಾರೆ. ಜೆಡಿಎಸ್ ನ್ನು ಸಂಪೂರ್ಣ ಜನರು ಮರೆತಿಲ್ಲ ಎಂಬುದನ್ನು ಈ ಚುನಾವಣೆಯೂ ಸಾಬೀತು ಪಡಿಸಿದೆ. ಆದರೆ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷವನ್ನು ಜನರು ಒಪ್ಪಿಲ್ಲ. ಅದರೊಂದಿಗೇ ಬಿ. ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್ ಅನ್ನೂ ಅಷ್ಟೆ ದೂರವಿಟ್ಟಿದ್ದಾರೆ.
ಮುಳುವಾದದ್ದೇನು ?
ಐದು ವರ್ಷಗಳ ಆಡಳಿತ ನಡೆಸಿದ ಬಿಜೆಪಿಗೆ ಕೇವಲ ಆಡಳಿತ ವಿರೋಧಿ ಅಲೆಯಷ್ಟೇ ಮುಳುವಾಯಿತೇ? ಎಂದು ಉತ್ತರ ಹುಡುಕ ಹೊರಟಿದರೆ ಹಾಗೇನೂ ಅಲ್ಲ. ಸೋಲಿಗೆ ಹಲವು ಕಾರಣಗಳು ತೋರುತ್ತವೆ. ಒಳಜಗಳ, ದುರಾಡಳಿತ, ಆಡಳಿತದ ಕಲ್ಪನೆಯ ಕೊರತೆ, ಭ್ರಷ್ಟತೆಯ ಅಪವಾದ ಎಲ್ಲವೂ ಸೋಲಿನ ಹಾದಿಯನ್ನು ತೋರಿಸಿದವು. ತಮ್ಮ ಒಳಜಗಳದ ಕಾರಣವನ್ನು ಬಿಜೆಪಿ ನಾಯಕರೂ ಒಪ್ಪಿಕೊಂಡಿದ್ದಾರೆ. ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿಯ ಎಲ್ಲ ಮುಖಂಡರೂ ಮೊದಲು ಹೇಳಿದ ಮಾತೆಂದರೆ, “ಹೌದು, ನಮ್ಮ ನಡೆ-ನುಡಿ ಇನ್ನಷ್ಟು ಚೆನ್ನಾಗಿರಬೇಕಿತ್ತು’ ಎಂಬುದನ್ನು. ಇದರರ್ಥ ತಮ್ಮ ಜನಪ್ರತಿನಿಧಿಗಳ ಸಾರ್ವಜನಿಕ ವರ್ತನೆಯ ಬಗ್ಗೆ ಜನರಿಗೂ ಕಾಳಜಿ ಇದೆ ಎಂಬುದು.
ಕಾಂಗ್ರೆಸ್ ಗೆ ವರವಾದದ್ದೇನು ?
ಬಿಜೆಪಿಯ ಆಡಳಿತ ವೈಫಲ್ಯವನ್ನು ಕಾಂಗ್ರೆಸ್ ತನ್ನ ಜಯದ ಬಂಡವಾಳವಾಗಿಸಿಕೊಂಡಿತೇ ? ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಗದು. 2004 ರಿಂದಲೂ ಕಾಂಗ್ರೆಸ್ ಒಂದು ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಿಯೇ ಇಲ್ಲ. ಆ ಲೆಕ್ಕದಲ್ಲಿ ಮಾಧ್ಯಮಗಳು ಪ್ರತಿಪಕ್ಷದ ಪಾತ್ರವನ್ನು ವಹಿಸಿದ್ದವು. ಹತ್ತು ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‍ಗೆ ವಿಷಯ ಪ್ರಸ್ತಾಪಿಸುವುದಕ್ಕೂ ಸಾಧ್ಯವಾಗಿರಲಿಲ್ಲ (ಗಣಿ ಪ್ರಕರಣ ಇತ್ಯಾದಿ). ಆದರೆ, ಕಾಂಗ್ರೆಸ್ ನ್ನು ಕೈ ಹಿಡಿದ ಅಂಶಗಳೇನು ? ಎಂದರೆ ಆಡಳಿತ ವಿರೋಧಿ ಅಲೆ ಮತ್ತು ಜನರ ಅನಿವಾರ್ಯತೆ. ಸುಸ್ಥಿರ ಸರಕಾರವನ್ನು ಬಯಸಿದ್ದ ಜನರು ಅನಿವಾರ್ಯದಿಂದ ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದಾರೆ ಎಂಬುದು ಸ್ಪಷ್ಟ.
ಜೆಡಿಎಸ್ ಕಥೆ ?
ಜೆಡಿಎಸ್ ಕೊಂಚ ವಿಶ್ವಾಸ ಮೂಡಿಸಿದ್ದು ನಿಜ. ಹಿಂದಿನ ಚುನಾವಣೆಗಿಂತ ಈ ಬಾರಿಯ ಪರಿಸ್ಥಿತಿ ಸುಧಾರಿಸಿದೆ. ಅದರಲ್ಲಿ ಅನುಮಾನವಿಲ್ಲ. ಒಟ್ಟು 26 ಸ್ಥಾನಕ್ಕಿಂತ ಈ ಬಾರಿ 40 ಕ್ಕೆ ಏರಿಕೆ ಕಂಡಿದೆ. ಆದರೆ, ಸರಕಾರದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿಶ್ವಾಸ ಮಾತ್ರ ಸುಳ್ಳಾಗಿದೆ. ಈಗ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲೂ ಜೆಡಿಎಸ್ ನ ಬಂಡಾಯ ಅಭ್ಯರ್ಥಿಗಳನ್ನು ಒಳಕ್ಕೆ ಸೇರಿಸಿಕೊಳ್ಳಬೇಕಾಗಿದೆ.
ಕೆಜೆಪಿ ಮ್ಯಾಜಿಕ್ ನಡೆಯಲಿಲ್ಲವೇಕೆ ?
ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದ ಜನರು ಬೆಂಬಲ ನೀಡುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ ಎಂಬುದು ಸದ್ಯಕ್ಕೆ ಕೆಜೆಪಿ ಸೋಲಿಗೆ ಸಿಗುವ ಉತ್ತರ. ಆದರೆ, ಅದಷ್ಟೇ ಅಲ್ಲ. ಬಿ.ಎಸ್. ಯಡಿಯೂರಪ್ಪನವರು ಬಿಜೆಪಿಯನ್ನು ತ್ಯಜಿಸಿದ್ದಾಗ ಎರಡು ಮಾತು ಹೇಳಿದ್ದರು. ಒಂದು, ಇಡೀ ಕರ್ನಾಟಕದಾದ್ಯಂತ ತಿರುಗಾಡಿ, ಪಕ್ಷ ಕಟ್ಟಿ ತಾವೇ ಸರಕಾರ ರಚಿಸುತ್ತೇವೆ ಎಂಬುದು. ಮತ್ತೊಂದು-ನನಗೆ ಬೆನ್ನಿಗೆ ಚೂರಿ ಹಾಕಿದವರ ಸೋಲಿಸುತ್ತೇವೆ ಎಂದೂ ಹೇಳಿದ್ದರು. ಮೊದಲನೆಯದು ಸಾಧ್ಯವಾಗಲಿಲ್ಲ, ಮತ್ತೊಂದು ಭಾಗಶಃ ಸಾಧ್ಯವಾಗಿದೆ. ಕೇವಲ 6 ಸ್ಥಾನವನ್ನು ನೀಡುವ ಮೂಲಕ ಮತ್ತು ಕಾಂಗ್ರೆಸ್ ಗೆ ಪೂರ್ಣ ಬಹುಮತ ನೀಡುವ ಮೂಲಕ ಬಿಎಸ್ ವೈ ಅವರ ಹಲವು ಕನಸನ್ನು ಮತದಾರು ನುಚ್ಚು ನೂರು ಮಾಡಿದ. ಬಿಎಸ್ಸಾರ್ ಕಾಂಗ್ರೆಸ್ ಗೂ ಅದೇ ಗತಿಯಾಯಿತು. ಬಿ. ಶ್ರೀರಾಮುಲು ಅವರು ಯಾರ್ಯಾರನ್ನೋ ಕರೆದುಕೊಂಡು, ಜಾಥಾಗಳನ್ನೂ ನಡೆಸಿದರೂ ಬಹಳ ದೊಡ್ಡ ಯಶಸ್ಸು ಕಾಣಲಿಲ್ಲ. ಬಿಎಸ್‍ವೈ ಗೆ ಹೋಲಿಸಿದರೆ, ಬಿಎಸ್ಸಾರ್ ಯಶಸ್ಸು ಸ್ವಲ್ಪ ದೊಡ್ಡದು ಎನಿಸುವುದು ಸಹಜ.
ಪಕ್ಷೇತರರಿಗೆ ಜೈ
ಇಷ್ಟೆಲ್ಲದರ ಮಧ್ಯೆಯೂ 12 ಮಂದಿ ಗೆದ್ದಿದ್ದಾರೆ. ಪಕ್ಷದ ಜತೆ ಜತೆಗೇ ವ್ಯಕ್ತಿಯನ್ನೂ ಬೆಂಬಲಿಸುವ ಧೋರಣೆ ಇನ್ನೂ ಇದೆ ಎಂಬುದಕ್ಕೆ ಇದು ಸಾಕ್ಷಿ. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಜಯಗಳಿಸಿರುವುದು, ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿ ಸತೀಶ್ ಸೈಲ್ ಕಾರವಾರದಲ್ಲಿ ಗೆದ್ದಿರುವುದು ಇಂಥ ಮಾತಿಗೆ ನಿದರ್ಶನ.
ಈಗ ಹೊಸ ಪ್ರಶ್ನೆ ಮುಖ್ಯಮಂತ್ರಿ ಕುರ್ಚಿಗೆ ಸೂಕ್ತವಾದವರನ್ನು ಆಯ್ಕೆ ಮಾಡುವುದು. ಅದೀಗ ಈಗಿನಿಂದಲೇ ಆರಂಭವಾಗಿದೆ. ಯಾರ ಬೆಂಬಲವೂ ಇಲ್ಲದೇ ಸರಕಾರ ರಚಿಸಲು ಸಾಧ್ಯವಾಗಿರುವುದರಿಂದ ಕಾಂಗ್ರೆಸ್ ಅಷ್ಟೊಂದು ತಲೆ ಕೆಡಿಸಿಕೊಳ್ಳದು.