ಒಂದು ಪುಟ್ಟ ಕಥೆ.

ಒಂದು ಗುಬ್ಬಚ್ಚಿ ಒಂದು ಗೂಡು ಕಟ್ಟಿಕೊಂಡು ಬದುಕುತ್ತಿತ್ತಂತೆ. ಒಮ್ಮೇ ಹೀಗೇ ಹಾರಿ ಹೋಗುವಾಗ ಹದ್ದೊಂದು ಎದುರಾಯಿತಂತೆ. ಅದು ಗುಬ್ಬಚ್ಚಿಯನ್ನು ತಡೆದು ನಿಲ್ಲಿಸಿ, “ನೀನು ಹೀಗೆ ಪುಟ್ಟಗೆ, ಗರ್ಜಿಸದೇ ಇದ್ದರೆ ಯಾರೂ ಗಮನಿಸುವುದಿಲ್ಲ. ಎಲ್ಲರೂ ನಿನ್ನ ಮೇಲೆ ಸವಾರಿ ಮಾಡುತ್ತಾರೆ. ಅದಕ್ಕೇ ನನ್ನ ಹಾಗೆ ಇರಬೇಕು, ನೋಡು ನನಗೀಗ ಯಾರೂ ಏನೂ ಮಾಡುವುದಿಲ್ಲ. ನಾನೆಂದರೆ ದಾರಿ ಬಿಡುತ್ತಾರೆ’ ಎಂದಿತಂತೆ.

ಮೊದಲು ಗುಬ್ಬಚ್ಚಿಗೆ ಸರಿ ಎನಿಸಲಿಲ್ಲ. “ಇಲ್ಲ, ನಾನಿರುವುದೇ ಹೀಗೆ, ಹೀಗಿದ್ದರೇ ನನ್ನನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ’ ಎಂದಿತಂತೆ. ಅದಕ್ಕೆ, ನೀನಂದುಕೊಂಡಿರುವುದು ಮೂರ್ಖತನ. ನಿನಗೆ ಗರ್ಜಿಸುವುದರ ಗೌರವದ ಅನುಭವವಿಲ್ಲ ಎಂದು ಟೀಕಿಸಿತಂತೆ. ಐಡಿಯಾಲಜಿ, ಇಸಂಗಳ ಪಾಠ ಕೇಳಿದ ಗುಬ್ಬಚ್ಚಿಗೆ  ಒಮ್ಮೆ ಗರ್ಜಿಸಿದರೆ ಹೇಗೆ ಎನಿಸಿತು.

ಬಳಿಕ ಗುಬ್ಬಚ್ಚಿ ಸತ್ತಿತು, ಹದ್ದು ಅವತರಿಸಿತು.