ಚಿತ್ರಿಕೆ

ದಂಡುಪಾಳ್ಯ : ಸೆನ್ಸಾರ್ ಇಲ್ಲದ ಕ್ರೈಂಡೈರಿ

ಹಿಂಸೆಯನ್ನು ಕಲಾತ್ಮಕವಾಗಿ ತೋರಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟುಕೊಂಡು ಗಮನಿಸಿದರೆ ವಿಚಿತ್ರವಾದ ಅಭಿಪ್ರಾಯ ಮೂಡಬಹುದು. ಹಿಂಸೆಯೆಂಬುದೇ ಮಾನವ ವಿರೋಧಿ. ಅದನ್ನು ಕಲಾತ್ಮಕವಾಗಿ ತೋರಿಸುವುದು ಎಂದರೆ ಹೇಗೆ ಎಂದೂ ಅನಿಸಬಹುದು. 

ಹಿಂಸೆ ನಮ್ಮ ಬದುಕಿನ ಭಾಗವೂ ಆಗಿರುವುದರಿಂದ ಭೀಭತ್ಸದ ನೆಲೆಯಲ್ಲಿ ಅದಕ್ಕೊಂದು ಸ್ಥಾನವನ್ನೂ ಕಲ್ಪಿಸಿದ್ದೇವೆ. ಹಾಗೆ ನೋಡುವುದಾದರೆ ಆ ಭೀಭತ್ಸತೆಗೂ ಮಿತಿ ಇದೆಯೇ ಎಂಬುದು ಚರ್ಚೆಗೆ ಯೋಗ್ಯವಾದ ಪ್ರಶ್ನೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ನಿರ್ದೇಶಕ ಶ್ರೀನಿವಾಸ್ ಬಾಬು ಅವರ ದಂಡುಪಾಳ್ಯ ಇಂಥದ್ದೇ ಪ್ರಶ್ನೆಯನ್ನು ಚರ್ಚೆಗೆ ಆಗು ಮಾಡುತ್ತದೆ.

ಓಂ ಚಿತ್ರದಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಆರಂಭಗೊಂಡ ಲಾಂಗು-ಮಚ್ಚು ಗಳ ಅಧ್ಯಾಯ ಇ ಂದಿಗೂ ಮುಗಿದಿಲ್ಲ. ಮುಂಗಾರುಮಳೆಯ ನಂತರ ಅದರ ತೀವ್ರತೆ ಕಡಿಮೆಯಾಯಿತಾದರೂ ಪೂರ್ಣವಿರಾಮ ಬಿದ್ದಿಲ್ಲ. ಇಲ್ಲಿಯೂ ಕಂಡಲ್ಲಿ ಕೊಚ್ಚಿಹಾಕುವಂಥ ಸನ್ನಿವೇಶಗಳನ್ನು ಕಂಡು ಜನ ಕಣ್ಣುಮುಚ್ಚಿಕೊಂಡಿದ್ದರ ಕಾರಣ ಆ ಹಿಂಸೆಯ ತೀವ್ರತೆ ಕರ್ನಾಟಕದಂಥ ಸಂದರ್ಭದಲ್ಲಿ ಕಂಡಿದ್ದೇ ಕಡಿಮೆ. ಆಂಧ್ರ ಪ್ರದೇಶದ ರಾಯಲಸೀಮೆಯ ಪ್ರಾಂತ್ಯದಲ್ಲಿ ಹಿಂಸೆಯ ತೀವ್ರತೆ ಹೆಚ್ಚಿದೆ. ಅಲ್ಲಿನ ಜನರಿಗೆ ಅದರ ಪರಿಚಯವಿದೆ. ಹಾಗಾಗಿ, ಅಂಥದೊಂದು ಚಿತ್ರವಾಗಲೀ, ಸನ್ನಿವೇಶವಾಗಲೀ ಅಸಹಜವೆಂದು ತೋರದು. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ರೂಪುಗೊಂಡಿರುತ್ತದೆ. ಅಂಥದೊಂದು ವಾತಾವರಣವಾಗಲೀ, ಸನ್ನಿವೇಶವಾಗಲೀ ನಮ್ಮಲ್ಲಿ ಬಂದದ್ದು ಇಲ್ಲ, ಬಂದಿದ್ದರೂ ತೀರಾ ಕಡಿಮೆ.

ದಂಡುಪಾಳ್ಯ ಒಂದು ಪ್ರದೇಶದ ಹೆಸರು. ಅಲ್ಲಿಯ ಗುಂಪೊಂದರ ವಿಕೃತತೆ, ಅಮಾನವೀಯತೆಯನ್ನು ವೈಭವೀಕರಿಸುವ ಪ್ರಯತ್ನವೇ ಚಿತ್ರ. ಆ ಮೂಲಕ ಒಂದಿಷ್ಟು ಹಣ ಮಾಡುವುದರ ಉದ್ದೇಶ ಇಡೀ ಚಿತ್ರದುದ್ದಕ್ಕೂ ಸ್ಪಷ್ಟ.

ಈ ಸಂದರ್ಭದಲ್ಲಿ ಯಾವುದನ್ನು ತೋರಿಸುವುದು ಔಚಿತ್ಯ ಯಾವುದು ಅನುಚಿತವೆಂಬುದಾಗಲೀ, ನಮ್ಮ ಜನಸಮುದಾಯದ ಅಭಿರುಚಿಯ ನೆಲೆಯನ್ನಾಗಲೀ ಗಮನಿಸಿಯೇ ಇಲ್ಲ.

ಎಂಟು ಮಂದಿಯ ಒಂದು ತಂಡ, ಒಬ್ಬಂಟಿಯಾಗಿರುವ ಮಹಿಳೆಯರನ್ನು ಹಗಲಲ್ಲೇ ಕೊಂದು, ಮನೆ ದೋಚುವುದಲ್ಲದೇ, ಅತ್ಯಾಚಾರವೆಸಗುತ್ತಿರುತ್ತದೆ. ಅದನ್ನು ಪತ್ತೆ ಹಚ್ಚಲು ಪೊಲೀಸರು ಪಡುವ ಶ್ರಮವನ್ನು ತೋರಿಸುವುದು ಸಿನಿಮಾದ ತಿರುಳು. ಇದು ಅನ್ ಸೆನ್ಸಾರ‍್ಡ್ ಕ್ರೈಂ ಸ್ಟೋರಿಯಂತಿದೆಯೇ ಹೊರತು ಸಿನಿಮಾದಂತಿಲ್ಲ.

ವಾಸ್ತವವಾಗಿ ಸಿನಿಮಾ ಎಂಬ ಮಾಧ್ಯಮ ತೆರೆದುಕೊಳ್ಳುವುದೇ ದೃಶ್ಯಗಳ ನೆರಳಿನಲ್ಲಿ (ಶೇಡ್). ಒಂದು ನಿರ್ಧಾರಿತ ದೃಶ್ಯ ಸೃಷ್ಟಿಸುವ ಹಿನ್ನೆಲೆಯ ಪರಿಸರ, ಹೇಳಲಾಗುವ ಕ್ರಮ ವಾಚ್ಯವೆನಿಸುವ ದೃಶ್ಯವನ್ನೂ ಹೊರತುಪಡಿಸಿ ಮತ್ತೇನನ್ನೋ ಹೇಳುತ್ತದೆ. ಆಗಲೇ ತೀವ್ರತೆಯ ಅನುಭವ ಉಂಟಾಗುವುದು. ಇಡೀ ಸಿನಿಮಾ ನೋಡಿದಾಗ, ಲವಲೇಶದ ಭೀತಿಯೂ ಉಂಟಾಗದು, ಅದರ ಬದಲಿಗೆ ಹೇಸಿಗೆ ಹುಟ್ಟಿಸುತ್ತದೆ. ಆದರೆ, ದಂಡುಪಾಳ್ಯದ ಕೃತ್ಯಗಳನ್ನು ಪತ್ರಿಕೆಗಳಲ್ಲಿ ಓದಿ ಜನರು ಭಯಭೀತಿಯಲ್ಲಿ ಬದುಕಿದ್ದುಂಟು. ಅಷ್ಟೇ ಅಲ್ಲ, ಇಂದಿಗೂ ನಮ್ಮ ಸುತ್ತಲಿನ ಬಡಾವಣೆಯಲ್ಲಿ ಭೀಕರ ಕೊಲೆಗಳಾದರೆ (ವಿನಾಕಾರಣ-ಇಂಥ ದರೋಡೆ ಇತ್ಯಾದಿಗೆ) ಮೊದಲಿಗೆ ಜನರಲ್ಲಿ ವ್ಯಾಪಿಸಿಕೊಳ್ಳುವುದು ಅಭದ್ರತೆಯ ಭೀತಿ. ಆ ಅನುಭವವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿಯೇ ಇಲ್ಲ. ಇದನ್ನೇ ದೃಶ್ಯಗಳ ಸರಣಿಯ ಹಿನ್ನೆಲೆಯಲ್ಲಿ ಉಂಟಾಗುವ ಪರಿಣಾಮ ಎನ್ನುವುದು.

ಹಾಗೆಂದು ಸಿನಿಮಾ ಮಾಧ್ಯಮ ನಿರ್ದೇಶಕರಿಗೆ ತಿಳಿದಿಲ್ಲವೆಂದಲ್ಲ. ಆದರೆ, ಮಾಧ್ಯಮ ಗೊತ್ತಿದ್ದೂ ಏನನ್ನು ಹೇಳಬೇಕೆಂಬ ಗೊಂದಲದಲ್ಲಿ ಸಿಲುಕಿರುವ ನಿರ್ದೇಶಕರು, ಹೊರ ಬರುವ ಪ್ರಯತ್ನವನ್ನೂ ಮಾಡಿಲ್ಲ. ಹಾಗೇಹಾಗೆ ದಿನಚರಿಯಲ್ಲಿನ ಟಿಪ್ಪಣಿಗಳನ್ನು ಓದಿ ಮುಗಿಸಿಬಿಡುವ ಆತುರದಲ್ಲಿ ಚಿತ್ರ ಮಾಡಿ ಮುಗಿಸಿದ್ದಾರೆ.

ಹಿಂಸೆಗೂ ಒಂದು ಕಲಾತ್ಮಕ ಚೌಕಟ್ಟಿದೆ. ರೋಮನ್ ಪೋಲಂಸ್ಕಿಯವರ ದಿ ಟ್ರಾಜೆಡಿ ಡೆತ್ ಆಫ್ ಮ್ಯಾಕ್‌ಬೆತ್ ನಂಥ ಸಿನಿಮಾದ ತುಂಬ ಇರುವ ಹಿಂಸೆಯನ್ನು ಎಲ್ಲೂ ಹೇಸಿಗೆ ಹುಟ್ಟಿಸುವಂತಾಗಲೀ, ಭೀಭತ್ಸವೆನ್ನುವಂತಾಗಲೀ ಅನಾವರಣಗೊಳಿಸುವುದಿಲ್ಲ. ಇದೇ ಮಾದರಿ ನಮಗೆ ಕಂಡು ಬರುವುದು ರಾಮ್‌ಗೋಪಾಲ್ ವರ್ಮರ ರಕ್ತಚರಿತದಲ್ಲಿ. ಅಲ್ಲೂ ಹಿಂಸೆ ಇದೆ, ಆದರೆ ಅದು ಬಹಳ ಭಿನ್ನವಾದ ನೆಲೆಯಲ್ಲಿ. ವಿಕೃತಿಯ ಹಿಂಸೆಯೂ ಅತ್ಯಂತ ಅಪಾಯಕಾರಿಯಾದುದು, ಅಷ್ಟೇ ಅಲ್ಲ, ಅಮಾನವೀಯವಾದುದು. ಅದರ ಕುರಿತು ಈ ಚಿತ್ರದ ಕಥಾವಸ್ತುವನ್ನೇ ಬಳಸಿ ಬಹಳ ಸೂಕ್ಷ್ಮವಾಗಿ ಜನಪ್ರಿಯ ಮಾಧ್ಯಮ ಮತ್ತು ಮಾದರಿಯನ್ನೇ ಬಳಸಿ ಹೇಳಲು ಅವಕಾಶವಿತ್ತು.

ದಂಡುಪಾಳ್ಯ ಗ್ಯಾಂಗ್ ಸಹ ಆ ಕೃತ್ಯವನ್ನು ಯಾಂತ್ರಿಕ ಎನ್ನುವಂತೆ ಕೈಗೊಳ್ಳುತ್ತಿತ್ತೇ ? ಎಂಬುದು ಅಧ್ಯಯನವಾಗಬೇಕಾದ ಸಂಗತಿ. ಚಿತ್ರವೂ ಅದೇ ನೆಲೆಯನ್ನು ಅನಾವರಣಗೊಳಿಸುತ್ತದೆ. ಯಂತ್ರದ ರೀತಿಯಲ್ಲಿ ಕೆಲಸ ಮಾಡುವಾಗ, ನಮ್ಮ ವಿವೇಕ ಕ್ರಿಯಾಶೀಲವಾಗಿರದು. ಆದರೆ, ಈ ಚಿತ್ರವನ್ನು ಒಂದು ಸೃಜನಶೀಲ ಪ್ರಯತ್ನವಾಗಿ ಮಾರ್ಪಡಿಸಿದ್ದರೆ, ಆ ಯಾಂತ್ರಿಕತೆಯನ್ನು ಹೋಗಲಾಡಿಸುವ ಶಕ್ತಿಯೂ ಇತ್ತು. ಅದೆಲ್ಲವನ್ನೂ ಕೈಚೆಲ್ಲಲಾಗಿದೆ.

ಛಾಯಾಗ್ರಹಣದ ಬಗ್ಗೆ ಎರಡು ಮಾತಿಲ್ಲ. ಕೆಲವು ಸನ್ನಿವೇಶಗಳಲ್ಲಂತೂ ತೀವ್ರತೆಯನ್ನು ತುಂಬುವ ಪ್ರಯತ್ನ ನಡೆದಿದೆ. ಅಭಿನಯದಲ್ಲಿ ಮಕರಂದ್ ದೇಶಪಾಂಡೆ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಪೂಜಾಗಾಂಧಿಯವರದ್ದು ಭಿನ್ನ ರೀತಿಯ ಅಭಿನಯವಾದರೂ, ಇಂಥ ಪಾತ್ರಗಳಲ್ಲಿನ ಹಸಿತನ (ರಾನೆಸ್)ವನ್ನು ತುಂಬಲು ಇನ್ನಷ್ಟು ತರಬೇತಿ ಪಡೆಯಬೇಕಿತ್ತು. ಕೇವಲ ಗಡಸು ದನಿಯಿಂದ ಉಳಿದ ಕೊರತೆಯನ್ನು ತುಂಬಿಸಲಾಗದು. ಇನ್ಸ್‌ಪೆಕ್ಟರ್ ಚಲಪತಿಯಾಗಿ ರವಿಶಂಕರ್‌ಚೆನ್ನಾಗಿ ಅಭಿನಯಿಸಿದ್ದಾರೆ.ಉಳಿದವರ ಅಭಿನಯವೂ ಮೆಚ್ಚುವಂತಿದೆ.

ಕುಟುಂಬ ಪೂರ್ತಿ ನೋಡಲಾಗದ ಚಿತ್ರ. ನಮ್ಮ ಸುತ್ತಲಿನ ಘಟನೆಯೆಂದು ನೋಡಬಹುದಾದರೂ, ಪರಿಣಾಮ ಬೀರುವುದರಲ್ಲಿ ಸೋಲುತ್ತದೆ. ಎರಡನೇ ಭಾಗವೂ ಇದೆಯಂತೆ, ಅದಾದರೂ ಮತ್ತಷ್ಟು ಕೊರತೆ ನೀಗಿಸಿಕೊಂಡು ರೂಪುಗೊಳ್ಳಲಿ. ಇಷ್ಟೆಲ್ಲದರ ಮಧ್ಯೆ ತೀರಾ ಅಸಹಜವೆನಿಸುವ, ಇಷ್ಟೊಂದು ಹಿಂಸೆಯ, ಹಸಿತನದ ಚಿತ್ರಗಳು ಇಲ್ಲಿನ ಅಭಿರುಚಿಗೆ ಒಗ್ಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹಾಗೂ ಸೆನ್ಸಾರ್ ಮಂಡಳಿಯೂ ಎ ಪ್ರಮಾಣಪತ್ರವನ್ನು ಕೊಟ್ಟು ಏನಾದರೂ ಮಾಡಿಕೊಳ್ಳಲಿ ಎಂಬ ನಿಲುವಿನಿಂದ ಹೊರಬರಬೇಕು. ಒಂದು ಚಿತ್ರ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮವನ್ನೂ ಗಮನದಲ್ಲಿಟ್ಟುಕೊಂಡು ಪ್ರಮಾಣ ಪತ್ರ ನೀಡುವುದೊಳಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s