ಇದು ವರ್ತಮಾನದ ಕಥೆಗಳು. ಇತ್ತೀಚೆಗೆ ಒಂದಿಷ್ಟು ಬರೆದದ್ದು. ಇವುಗಳನ್ನು ಒಂದೊಂದೇ ಪೋಸ್ಟ್ ಮಾಡುವೆ. ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ದಯವಿಟ್ಟು ಹೇಳಿ.

ಒಂದು ಬೇಸಗೆಯಲ್ಲಿ

ಒಂದೂರಿನಲ್ಲಿ ಒಬ್ಬನೇ ರಾಜನಿದ್ದ. ದಿನವೂ ನೋಡಿಕೊಂಡಷ್ಟೇ ಪ್ರದೇಶವನ್ನು ನೋಡಿಕೊಂಡು ಬೇಸರವಾಗಿತ್ತು. ಚಿಕ್ಕ ಪ್ರದೇಶವಾದರೂ ಸಿಕ್ಕಾಪಟ್ಟೆ ಆಸ್ತಿ, ಕಾಲಾಳು, ಸೈನ್ಯ ಎಲ್ಲವಿತ್ತು. ಯಾವುದಕ್ಕೂ ಬರವಿರಲಿಲ್ಲ, ಒಳ್ಳೆ ಸಚ್ಚಾರಿತ್ರ್ಯದ ಹೆಂಡತಿಯೂ ಇದ್ದಳು. ಆದರೂ ಏಕೋ ಬೇಸರ ಹೋಗಲಿಲ್ಲ. ರಾಜ್ಯ ವಿಸ್ತರಣೆ ಮಾಡಬೇಕೆಂದು ತೀರ್ಮಾನಿಸಿ ದಿಗ್ವಿಜಯಕ್ಕೆ ಹೊರಟ. ಅಶ್ವಮೇಧ ಕುದುರೆಯನ್ನು ಬಿಟ್ಟು ವ್ಯವಹಾರ ಮುಗಿಸೋಣವೆಂದರೆ ಕುದುರೆಗಳಿಲ್ಲದ ಕಾಲವದು. ಸರಿ, ಇನ್ನೇನು ಮಾಡುವುದೆಂದು ಒಬ್ಬ ನರಪೇತಲ ವ್ಯಕ್ತಿಯ ಹಣೆಯ ಮೇಲೆ `ಇವನನ್ನು ಕಂಡ ಎಲ್ಲರೂ ತಲೆಬಾಗಿ ನಮಿಸಬೇಕು. ಅವನಿಗೆ ಮಾಡಿದ ನಮಸ್ಕಾರ ನನಗೆ ತಲುಪುತ್ತದೆ. ಅಲ್ಲಿಗೆ ನೀವು ನನ್ನನ್ನು ಒಪ್ಪಿಕೊಂಡ ಹಾಗೆ. ನೀವೇನೂ ಪ್ರದೇಶವನ್ನು ನನಗೆ ಕೊಡಬೇಕಿಲ್ಲ, ಕಪ್ಪವನ್ನೂ ಕೊಡಬೇಕಿಲ್ಲ. ಎಲ್ಲ ಕಡೆ ನನ್ನ ರಾಜ್ಯದ ವ್ಯಾಪ್ತಿಗೆ ಸೇರಿದ ಪ್ರದೇಶವೆಂದು ಬೋರ್ಡು ಹಾಕಿ ಸಾಕು’ ಎಂಬುದು ಆ ಫಲಕದ ಸಾರವಾಗಿತ್ತು.
ನರಪತಲ ಹರಟ. ಒಂದೂರಿನಲ್ಲಿ ಒಂದಿಷ್ಟು ಜನ ತಡೆದು ಅದನ್ನು ಓದಿದರು. ಏನನಿಸಿತೋ ಏನೋ?, ಎಲ್ಲರೂ ತಲೆಬಾಗಿದರು. ನಂತರ ಫಲಕವನ್ನೂ ತೂಗು ಹಾಕಿದರು. ಮತ್ತೊಂದು ಊರಿಗೆ ಹೋದಾಗ ಅಲ್ಲೂ ಹಾಗೇ ಜನರು ತಣ್ಣಗೆ ಒಪ್ಪಿಕೊಂಡರು, ಎಲ್ಲ ಕಡೆಯೂ ಹಾಗೇ ಆಯಿತು. ಬಹಳ ದಿನಗಳ ಮೇಲೆ ನರಪೇತಲ ವಾಪಸು ಆಸ್ಥಾನಕ್ಕೆ ಬಂದ. ರಾಜ ಅವನನ್ನು ಎದುರುಗೊಳ್ಳುತ್ತಲೇ, ಕುಳಿತುಕೊಳ್ಳಲು ತನ್ನ ಪಕ್ಕದ ಸ್ಥಾನ-ಮಂತ್ರಿ ಆಗಿನ್ನೂ ಸಭೆಗೆ ಬಂದಿರಲಿಲ್ಲ. ಹಾಗಾಗಿ ಅವನ ಸೀಟು ಖಾಲಿಯಿತ್ತು-ವನ್ನು ತೋರಿಸಿದ. ಇವನು ಹೆದರಿಕೊಳ್ಳುತ್ತಲೇ ಕುಳಿತುಕೊಂಡ. ಸಭೆ ತುಂಬಿತ್ತು. ರಾಜನಿಗೆ ತನ್ನ ಕೀರ್ತಿಯನ್ನು ಕೇಳಬೇಕೆಂಬ ಉಮೇದಿತ್ತು, ತಾನು ಏನು ಮಾಡುತ್ತಿದ್ದೇನೆಂಬುದರ ಅರಿವೂ ಇರಲಿಲ್ಲ. ನರಪೇತಲನ ಕಾಲನ್ನು ಒತ್ತತೊಡಗಿದ. ಇವನಿಗೂ ಏನನಿಸಿತೋ ಸುಮ್ಮನಿದ್ದ. ಜನರಿಗೆಲ್ಲಾ ಅಚ್ಚರಿಯಾಯಿತು. `ಏನು ಹೇಳುವುದು ಮಹಾಪ್ರಭು, ನಿನ್ನನ್ನು ಎದುರಿಸುವವರೇ ಸುತ್ತಲಿನ ಪ್ರದೇಶದಲ್ಲಿಲ್ಲ. ಎಲ್ಲ ಕಡೆಯೂ ನಿನ್ನದೇ ನಾಮಫಲಕ’ ಎಂದು ತಾನು ಅನುಭವಿಸಿದ್ದನ್ನೆಲ್ಲಾ ಇನ್ನಷ್ಟು ವೈಭವೀಕರಿಸಿ ಹೇಳಿದ. ಪ್ರಭುವಿಗೆ ಬಹಳ ಖುಷಿಯಾಯಿತು, ತನ್ನ ಸ್ಥಾನದಲ್ಲಿ ಕುಳಿತು, ಎಲ್ಲರಿಗೂ ಚಪ್ಪಾಳೆ ತಟ್ಟಲು ಹೇಳಿದ. ಕರತಾಡನ ಮೊಳಗಿತು. 

ಮತ್ತೊಂದು ಮಳೆಗಾಲದಲ್ಲಿ
ಜೋರಾಗಿ ಮಳೆ ಸುರಿಯಲಾರಂಭಿಸಿತ್ತು. ರಾಜನಿಗೆ, ಒಮ್ಮೆ ತನ್ನ ಫಲಕ ಹಾಕಿದ ಪ್ರದೇಶವನ್ನೆಲ್ಲಾ ನೋಡಬೇಕೆನಿಸಿತು. ರೈನ್‌ಕೋಟನ್ನು ಹಾಕಿಕೊಂಡು, ಹೊಸದೊಂದು ಎನ್‌ಫೀಲ್ಡ್ ಬುಲೆಟ್‌ನೊಂದಿಗೆ ಹೊರಟ-ಅಗ ಕುದುರೆ ಇರಲಿಲ್ಲವಾದ್ದರಿಂದ, ಅಂಥದ್ದೇ ಮೋಟಾರ್ ಬೈಕ್ ಬೇಕೆಂದಾಗ ಮಂತ್ರಿ ಹುಡುಕಿ ತಂದದ್ದು ಇದನ್ನೇ-. ಒಂದು ಊರಿಗೆ ಹೋದ. ಜನರ್‍ಯಾರೂ ಕ್ಯಾರೇ ಎನ್ನಲಿಲ್ಲ. ಇವನಿಗೆ ಅಚ್ಚರಿಯಾಯಿತು. ಆದರೆ, ಫಲಕ ತೂಗು ಹಾಕಿತ್ತು. ಈ ಫಲಕದಲ್ಲಿರುವುದು ತನ್ನ ಹೆಸರೇ ಎಂದು ಹೇಳಬೇಕೆನಿಸಿತು. ಹತ್ತಿರದಲ್ಲಿದ್ದ ಕೆಲವರನ್ನು ಕರೆದು, `ಈ ಫಲಕದಲ್ಲಿರುವ ಹೆಸರು ಯಾರದ್ದು ಗೊತ್ತೆ?’ ಎಂದು ಕೇಳಿದ. ಅದಕ್ಕೆ, ಅಲ್ಲಿದ್ದವರು `ನಮ್ಮದಂತೂ ಅಲ್ಲ’ ಎಂದರಷ್ಟೇ. ಬೇಸರದಿಂದ ರಾಜ ಮುಂದಕ್ಕೆ ನಡೆದ. ಮತ್ತೊಂದು ಊರು, ಹಾಗೆಯೇ ಜನ ಮತ್ತು ಫಲಕ. ಅಲ್ಲಿಯೂ ರಾಜ, ಅವರನ್ನೆಲ್ಲಾ ಕರೆದು, `ಈ ಫಲಕದಲ್ಲಿರುವ ಹೆಸರು ಯಾರದ್ದು ಗೊತ್ತೇ?’ ಎಂದು ಕೇಳಿದರಂತೆ. ಅದಕ್ಕೆ ಅವರೂ ಹಾಗೆಯೇ ಉತ್ತರಿಸಿದರು. ಇವನು ಬೇರೆ ಯಾವ ಊರಿಗೂ ಹೋಗದೇ ಆಸ್ಥಾನಕ್ಕೆ ವಾಪಸಾದ. ಮಂತ್ರಿಗೆ ತನ್ನ ದುಃಖವನ್ನು ಹೇಳಿಕೊಂಡ. ಅದಕ್ಕೆ ಮಂತ್ರಿ, `ನೀವೇನೂ ಯೋಚನೆ ಮಾಡಬೇಡಿ, ಜನರಿಗೆಲ್ಲೋ ಗೊಂದಲವಾಗಿರಬೇಕು. ಸರಿಪಡಿಸುವೆ’ ಎಂದ.

ಕೊನೆ ಚಳಿಗಾಲದಲ್ಲಿ
ಚಳಿ ಸಿಕ್ಕಾಪಟ್ಟೆ ಇತ್ತು. ಸುತ್ತಲ ಪ್ರದೇಶ ಬೆಟ್ಟಗುಡ್ಡಗಳಾಗಿದ್ದರಿಂದ-ಅಲ್ಲೂ ಗಣಿಗಾರಿಕೆ ನಡೆದು ಹಾಳಾಗಿತ್ತು. ಉಳಿದದ್ದು ಅಲ್ಪಸ್ವಲ್ಪ. ಅದೂ ಕೈ ಬಿಟ್ಟು ಹೋಗುತ್ತಿತ್ತು-ಜೋರು ತಣ್ಣನೆಯ ಗಾಳಿ. ಜನ ಹೇಗೋ ಕಷ್ಟಪಟ್ಟು ಕಳೆಯುತ್ತಿದ್ದರು. ರಾಜನಿದ್ದಲ್ಲಿಗೆ ಬಂದ ಮಂತ್ರಿ, `ನಾನು ಎಲ್ಲ ಊರಿನಲ್ಲೂ ಜನರಿಗೆ ನಿಮ್ಮ ಫೋಟೋ ತೋರಿಸಿ, ಗೌರವ ಕೊಡಲು ಹೇಳಿಬಂದಿದ್ದೇನೆ. ಕಳೆದ ಬಾರಿಗೆ ಹೋದಾಗ ಜನರಿಗೆ ಗುರುತು ಸಿಕ್ಕಿರಲಿಲ್ಲವಂತೆ. ಈಗ ಕೂಡಲೇ ಹೊರಡಿ, ನಿಮ್ಮನ್ನು ಜನ ಆದರದಿಂದ ಗೌರವಿಸುತ್ತಾರೆ’ ಎಂದ. ಮತ್ತೆ ಹೊರಟರು ರಾಜರು ಎನ್‌ಫೀಲ್ಡ್ ಬುಲೆಟ್‌ನಲ್ಲಿ. ಮೊದಲನೇ ಊರು ಸಿಕ್ಕಿತು. ರಾಜನನ್ನು ಕಂಡ ಕೂಡಲೇ ಜನ ನಡುಗುತ್ತಾ ನಿಂತರು. ಅಚ್ಚರಿಯಾಯಿತು ರಾಜನಿಗೆ. ಬಹುಶಃ ಕಳೆದ ಬಾರಿ ಮಾಡಿದ ತಮ್ಮ ತಪ್ಪು ಅರಿವಾಗಿರಬೇಕು. ಶಿಕ್ಷೆಯ ಭಯದಲ್ಲಿ ಹೀಗೆ ನಡುಗುತ್ತಿದ್ದಾರೆಂದು ಕೊಂಡ ರಾಜ. `ಏನೂ ಚಿಂತೆ ಪಡೆಬೇಡಿ, ಆರಾಮಾಗಿರಿ. ನಾನು ನಿಮಗೆ ಏನೂ ಮಾಡುವುದಿಲ್ಲ’ ಎಂದು ಅಭಯ ನೀಡಿದ ರಾಜ. ಜನರೆಲ್ಲಾ ತಲೆ ಎತ್ತದೇ ತಲೆ ಆಡಿಸಿದರು. ರಾಜ ಮುಂದಿನೂರಿಗೆ ಹೋದ. ಅಲ್ಲೂ ಹೀಗೇ ಅಯಿತು. ಎಲ್ಲ ಮುಗಿಸಿ ತಿಂಗಳ ನಂತರ ಆಸ್ಥಾನಕ್ಕೆ ವಾಪಸು ಬಂದ. ಮಂತ್ರಿ ಮಹೋದಯರು, ಜನರು ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಿದರು-ಕುಂಭದಲ್ಲಿ ನೀರಿಲಿಲ್ಲ, ಕೊಳವೆ ಬಾವಿಗಳು ಬತ್ತಿದ್ದವು-ರಾಜ ಸಭೆ ಕರೆದ. ಎಲ್ಲರೂ ಸೇರಿದರು, ತನ್ನ ಅನುಭವವನ್ನು ವಿವರಿಸತೊಡಗಿದ. ಎಲ್ಲರೂ ಕಿವಿಗೊಟ್ಟು ಕೇಳಿದರು. ಎಲ್ಲವೂ ಮುಗಿಯಿತು, ಸಮೋಸ, ಜಾಮೂನು, ಬಾದಾಮಿ ಹಾಲು ಎಲ್ಲರಿಗೂ -ಚಳಿಗಾಲವಾಗಿದ್ದರಿಂದ ಐಸ್‌ಕ್ರೀಂ ಕೊಡಲಾಗಿರಲಿಲ್ಲ-ಬಂದಿತು. ಎಲ್ಲ ತಿಂದು ಸವಿಯುವಷ್ಟರಲ್ಲಿ, ಒಬ್ಬ ಸುದ್ದಿ ಹೊತ್ತು ಬಂದ. `ಮಹಾಪ್ರಭುಗಳೇ, ರಾಜ್ಯದಲ್ಲಿ ಚಳಿ ತಾಳಲಾರದೇ ನೂರಾರು ಜನ ಸಾಯತೊಡಗಿದ್ದಾರೆ’ ಎಂದು ವಿವರಿಸಿದ. ರಾಜನಿಗೆ ಆಶ್ಚರ್ಯವಾಯಿತು. `ಇಡೀ ಊರುಗಳಿಗೇ ಹೋಗಿ ಬಂದೆ, ಒಬ್ಬನೂ ಈ ಸಮಸ್ಯೆ ಹೇಳಲಿಲ್ಲವಲ್ಲ’ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ. ಆಗ ಅದೇ ನರಪೇತಲ ಎದ್ದು ನಿಂತು, `ಮಹಾಪ್ರಭುಗಳೇ, ತಪ್ಪು ತಿಳಿಯದಿದ್ದರೆ ಒಂದು ಮಾತು ಹೇಳುತ್ತೇನೆ’ ಎಂದ. ಹೇಳುವಂತೆ ಸೂಚಿಸಿದ ರಾಜ. `ಅವರು ನಡುಗುತ್ತಿದ್ದ ಚಳಿಯಿಂದಲೇ ಮಹಾಪ್ರಭುಗಳೇ!’ ಎಂದಾಗ ರಾಜ ಸಂಪೂರ್ಣ ತಣ್ಣಗಾಗಿ ಹೋದ !

ಇದುವರೆಗಿನದ್ದು ಇತಿಹಾಸ. ಈಗಿನ ವರ್ತಮಾನಕ್ಕೆ ಈ ಕಥೆಯನ್ನು ಡೀಕೋಡ್ ಮಾಡಿದರೆ, ಈಗಲೂ ಹಾಗೆಯೇ. ರಾಜನಂಥ ಐಡೆಂಟಿಟಿ ಕ್ರೈಸಿಸ್‌ನಲ್ಲಿರುವವರು ಬೇಕಾದಷ್ಟು ಮಂದಿಯಿದ್ದಾರೆ. ಅವರಿಗೆ ಎದುರಿಗೆ ನಿಂತವರೆಲ್ಲಾ ನಡುಗುವಂತೆಯೇ ತೋರುತ್ತದೆ. ಆದರೆ ಜನ ಸಾಯುವುದಿಲ್ಲ, ಈಗ ಹೀಟರ್, ಉಲ್ಲನ್, ಕೋಟು, ರಗ್ಗು ಎಲ್ಲ ಬಂದಿವೆ !