ಧಾರಾಳಿ ಮಹಾ ಎನ್ನುವಷ್ಟು. ಕೇಳಿದವರಿಗೆಲ್ಲಾ ಹಂಚುತ್ತಲೇ ಇರುವಾತ. ಲೆಕ್ಕವೇನನ್ನೂ ಕೇಳುವುದಿಲ್ಲ. ಹಾಗೆಂದು ಲೆಕ್ಕವಿಟ್ಟುಕೊಳ್ಳುವುದಿಲ್ಲ ಎನ್ನುವಂತಿಲ್ಲ. ಅದಕ್ಕೆ ಬೇರೊಬ್ಬನಿದ್ದಾನೆ. ಅವನು ಮಹಾ ಜಿಪುಣ. ಪಕ್ಕದಮನೆಯಿಂದ ಒಗ್ಗರಣೆಗೆಂದು ತಂದ ಎರಡು ಸಾಸಿವೆ ಕಾಳನ್ನೂ ಬರೆದಿಟ್ಟುಕೊಳ್ಳುತ್ತಾನೆ.

ಮೊನ್ನೆ ಹೀಗೇ..ಇದ್ದಕ್ಕಿದ್ದಂತೆ ಭರ್ರನೆ ಮಳೆ ಸುರಿದಂತೆ ಗಿರಾಕಿಗಳು ಬಂದು ತುಂಬಿಕೊಂಡರು. ಎಲ್ಲಿದ್ದರೋ, ಎಲ್ಲರ ಮುಖದಲ್ಲೂ ಹಸಿವೆಯ ಕಳೆಯಂತೂ ಕುಣಿಯುತ್ತಿತ್ತು. ಇದ್ದದ್ದು ಹತ್ತೇ ಟೇಬಲ್ಲುಗಳು. ಅವುಗಳಲ್ಲಿ ಈ ಮೊದಲೇ ಬಂದವರೆಲ್ಲಾ ತುಂಬಿದ್ದರು. ಇನ್ನು ಇವರಿಗೆಲ್ಲಿ ಜಾಗ ? ಹಸಿವೆಗೆ ಹೇಳಲು ಬೇರೆ ಉತ್ತರವಿರಲಿಲ್ಲ, ಅದಕ್ಕಾಗೇ ಕಾದರು ಅವರ ಊಟದ ಆಟ ಮುಗಿಯುವವರೆಗೆ.

ಆ ಮಧ್ಯ ಟೇಬಲ್ಲಿನಲ್ಲಿ ಕುಳಿತಿದ್ದವ ಕೊಂಚ ಠೊಪಣ. ಕುಳಿತಲ್ಲೇ ಕೂಗಿದ , “ಪಲ್ಲೆ ಹಾಕುತ್ತೀರೇನು?’. ಆ ಮಹಾ ಧಾರಾಳಿ ತುಸು ನಿಧಾನದ ಹೆಜ್ಜೆ ಇಡುತ್ತಾ ಬಂದ. “ಹಾಕದೇ ಇರುತ್ತೀವೇನು?’ ಎಂಬುದು ಆತನ ಪ್ರಶ್ನೆ ಈತನಿಗೆ. ಇಬ್ಬರದೂ ಉತ್ತರವಿಲ್ಲ. ಇವರಿಬ್ಬರ ಮಧ್ಯೆ ತೂರಿಕೊಂಡು ಬಂದವ ಒಂದಿಷ್ಟು ಪಲ್ಯ ಸುರಿದು ಆಚೆಗೆ ಹೋದ. ಅವನೀಗ ಬಾಲ್ಯವನ್ನು ಮೀರುವುದರಲ್ಲಿದ್ದಾನೆ, ತಾರುಣ್ಯಕ್ಕಿನ್ನೂ ಬಾಲ್ಯ. ಹಾಗಾಗಿ ನಿಯಮದ ತಕ್ಕಡಿ ತೂಗಿ ಬಾಲ ಕಾರ್ಮಿಕನೆಂದು ಘಂಟಾಘೋಷ ಹೊಡೆಯುವಂತಿಲ್ಲ. ಅಂಥದೊಂದು ಬೆದರಿಕೆ ಹಾಕಿ ಧಾರಾಳಿಯಿಂದ ನಾಲ್ಕು ಕಾಸು ಪೀಕಲಿಕ್ಕೆ ಪರವಾಗಿಲ್ಲ.

ಮತ್ತೊಬ್ಬ, ಆ ತುದಿಯಲ್ಲಿ ಮತ್ತೊಬ್ಬರ ಆಟ ಮುಗಿಯುವುದನ್ನೇ ಕಾಯುತ್ತಾ ನಿಂತವ, “ಲೋ ಹುಡುಗಾ, ಇಲ್ಲಿ ಬಾರೋ ಒರೆಸೋ’ ಎಂದು ಕೂಗಿ ಕರೆದ. ಕಣ್ಣುಮುಚ್ಚುವಷ್ಟರಲ್ಲಿ ಅವನೇನೋ ಬಂದ,ಕೈಯಲ್ಲಿ ಬಟ್ಟೆ ಇರಲಿಲ್ಲ. “ಈಗ ಬಂದೆ’ ಎನ್ನುತ್ತಾ ಅವನ ಮತ್ತೆ ಒಳಗೆ ಹೋದ. ಈತನಿಗೆ ಸಿಟ್ಟು ಬಂದಿತು. “ಒಂದೇ ಸಾರಿ ಬಟ್ಟೆ ತರಲಿಕ್ಕೆ ಆಗಲ್ವೋನೋ? ಕೊಬ್ಬು’ ಎಂದು ಗುಡುಗಿದ ಎನ್ನುವುದಕ್ಕಿಂತ ಗೊಣಗಿದ ಎಂದಿಟ್ಟುಕೊಳ್ಳೋಣ. ಪಕ್ಕದಲ್ಲೇ ನಿಂತಿದ್ದ ಮಗದೊಬ್ಬನಿಗೆ ಅದು ಕೇಳಿಸಿತು. “ಯಾಕ್ ಸ್ವಾಮಿ, ಬಯ್ತೀರಾ? ಏನೋ ಮರೆತುಬಿಟ್ಟ ಬಿಡಿ’ ಎಂದ. ಇದು ಈತನನ್ನು ರೇಗಿಸಿತು. “ನಿಮಗ್ಯಾಕೆ?, ನಾನು ಬಯ್ದಿದ್ದು ಅವನಿಗೆ’ ಎಂದು ಮರು ಉತ್ತರಕೊಟ್ಟ. ಮಾತು ಮಾತಿಗೆ ಬೆಳೆಯತೊಡಗಿದೆ. ನಿಂತವರ ಹಸಿವು ಏರತೊಡಗಿದೆ, ಬೆಂಕಿಯ ಕಾವಿನಂತೆ.

ಒಳಗೆ ಬೆಂಕಿಯ ಎದುರು ನಿಂತು ಚಪಾತಿ ಬೇಯಿಸುತ್ತಿದ್ದವನಿಗೆ ಇವೆಲ್ಲ ಕೇಳುತ್ತಿದೆ. ನಗುತ್ತಿದ್ದಾನೆ ತನ್ನಷ್ಟಕ್ಕೇ. “ಜಗಳ ಆಡೋದಕ್ಕೇ ಕಾರಣವೇ ಬೇಕಿಲ್ಲ’ ಎಂಬ ವ್ಯಾಖ್ಯೆ ಕೊಟ್ಟವನ್ನು ಚಪಾತಿ ಲಟ್ಟಿಸುತ್ತಿದ್ದ ತುಸು ಹಿರಿಯ. ಈಗ ಎಲ್ಲರೂ ನಗತೊಡಗುತ್ತಿದ್ದಾರೆ, ತಟ್ಟೆ ಜೋಡಿಸುತ್ತಿದ್ದವ, ತಿಂದ ತಟ್ಟೆಗೆ ಸೋಪು ಹಚ್ಚುತ್ತಿರುವವ, ಆ ಸೋಪಿನ ತಟ್ಟೆ ತೊಳೆಯುತ್ತಲೇ ನೀರಿನಲ್ಲಿ ಮೂಡುತ್ತಿದ್ದ ಗುಳ್ಳೆಯನ್ನು ಒಡೆಯುತ್ತಿರುವವ…ಹೀಗೇ ಎಲ್ಲರೂ. “ಪರವಾಗಿಲ್ಲ, ಇನ್ನೂ ಮೂರು ನಿಮಿಷ ಬೇಯಬೇಕು’, ಎಂದು ಪ್ರಕಟಣೆ ಹೊರಡಿಸಿದ ಸ್ಟೀಮ್‌ನಲ್ಲಿ ಬೇಯುತ್ತಿದ್ದ ಅಕ್ಕಿಯ ಕಂಡವ. ಹೊರಗಿನಿಂದ ಗಲ್ಲಾಪೆಟ್ಟಿಗೆಗೆ ಒರಗಿ ನಿಂತು ಇವೆಲ್ಲವನ್ನೂ ತನ್ನದೇ ನೆಲೆಯಿಂದ ನೋಡಿ, ವ್ಯಾಖ್ಯಾನಿಸಿಕೊಳ್ಳುತ್ತಿದ್ದವನಿಂದ ಉತ್ತರ ಬಂದಿತು..”ಆದಷ್ಟುಬೇಗ..ನಿಂತವರೆಲ್ಲಾ ಕುಣಿಯುತ್ತಾರೆ ಈಗ’.

ಜಾಗ ಹುಡುಕುತ್ತಾ ನಿಂತವರೆಲ್ಲಾ ಅತ್ತ ಒಮ್ಮೆ ತಿರುಗಿದರು. ದೃಷ್ಟಿಯಲ್ಲಿ ಹಸಿವಿನ ಕುಣಿತವಿತ್ತು. ಧಾರಾಳಿಗೆ ಅರ್ಥವಾಯಿತು. “ಬನ್ನಿ’ ಎಂದು ಒಳಗೆ ಕರೆದೊಯ್ದ. ಎಲ್ಲರೂ ಒಳಗೆ ಹೋದರು. ದೊಡ್ಡದೊಂದು ಹಂಡೆಯನ್ನು ತರುವಂತೆ ಬಂದ ಸೂಚನೆಗೆ ಹುಡುಗರ ಉತ್ತರವೂ ಸಿದ್ಧವಾಯಿತು. ಆ ಹಂಡೆಗೆ ಒಂದಿಷ್ಟು ಅನ್ನ ಸುರಿದ. ಮತ್ತೊಬ್ಬ ಒಂದಿಷ್ಟು ಸಾಂಬಾರು. ಪಕ್ಕದಲ್ಲಿ ಚೊಂಬಿನಲ್ಲಿ ಮಜ್ಜಿಗೆ ತಂದಿಟ್ಟರು. ಉಪ್ಪಿನಕಾಯಿಯ ಬೆರಣಿಯೇ ತೆರೆದಿದೆ. ಧಾರಾಳಿ ಏನೂ ಹೇಳಲಿಲ್ಲ, ಅಷ್ಟೂ ಮುಗಿಸಿ ಹೊರಗೆ ಬಂದು ನಿಂತ. ಇಲ್ಲಿ ಖಾಲಿಯಾದ ಸೀಟಿನಲ್ಲಿ ಮತ್ತ್ಯಾರೋ ಕುಳಿತುಕೊಳ್ಳುತ್ತಿದ್ದರು. ತಟ್ಟೆ ಬರುತ್ತಿತ್ತು, ಅನ್ನ, ಸಾರು, ಪಲ್ಯ ಹೀಗೆ ಸಾಲುಗಟ್ಟುತ್ತಿತ್ತು. ಕೊನೆಗೆ ಖಾಲಿ ತಟ್ಟೆಯ ಲೆಕ್ಕಕ್ಕೆ ಆ ಹುಡುಗ ಬರುತ್ತಿದ್ದ. ಅಷ್ಟರಲ್ಲಿ ಹೊರಗೆ ಮಳೆ ಬಂದಿತು..ತುಸು ದೊಡ್ಡದೇ ಹನಿ…ಶಬ್ದ ಜೋರಾಗುವಷ್ಟರಲ್ಲಿ ಒಳಗಿನಿಂದಲೂ ಅಬ್ಬರ ಕೇಳಿಬಂದಿತು.

ಪಾತ್ರೆ ಮಗ್ಗುಲು ಬದಲಿಸಿದೆ. ಎಲ್ಲರೂ ಕೈ ನೆಕ್ಕಿಕೊಂಡರು. ಕುಡಿಯಲು ನೀರು ಬೇಕಿತ್ತು. ಧಾರಾಳಿಗೆ ಮರೆತುಹೋಗಿತ್ತು, ಅದನ್ನು ಕೊಡಲು. ಇವರೀಗ ಬಾವಿಗೆ ಇಳಿದಿದ್ದಾರೆ, ಬರುವವವರೆಗೆ ಧಾರಾಳಿ ಕಾಯಬೇಕು !

ಚಿತ್ರ : ನನ್ನದೇ