ಇದು ನನ್ನ ಮತ್ತೊಂದು ಪುಟ್ಟ ಕಥೆ

ಒಂದು ಚೆಂದದ ಗೊಂಬೆಯನ್ನು ತಂದಿದ್ದ. ಬಹಳ ಚೆನ್ನಾಗಿತ್ತು, ನೋಡಿ ನೋಡಿ ಮೈ ಮರೆತ. ಯಾಕೋ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆನಿಸಿತು. ಕನ್ನಡಿ ಎದುರಿಗೆ ನಿಂತ. ಗೊಂಬೆಗಿಂತ ತಾನೇ ಕುರೂಪ ಎನಿಸಿತು. ಸಿಟ್ಟು ಬಂತು. ಗೊಂಬೆಯ ಒಂದೊಂದೇ ಅವಯವಗಳನ್ನು ಬಿಡಿಸುತ್ತಾ ಹೊರಟ. ಸ್ವಲ್ಪ ಶ್ರಮವೆನಿಸಿತು. ಆದರೂ ಕೊನೆಗೆ ಅವನೇ ಗೆದ್ದ. ಎಲ್ಲವೂ ಈಗ ಕಣ್ಣೆದುರು ಬಿದ್ದಿದೆ. ಈಗ ಮತ್ತೆ ಕನ್ನಡಿ ಎದುರು ನಿಂತ. ಈಗ ಯಾಕೋ ಮತ್ತಷ್ಟು ಕುರೂಪ ಎನಿಸತೊಡಗಿತು. ಬೇಸರದಿಂದ ಅವನ್ನೆಲ್ಲಾ ಜೋಡಿಸತೊಡಗಿದ್ದಾನೆ. ಮುಖದ ಮೇಲೆ ಮೆಲ್ಲಗೆ ಕಾಂತಿಯ ಪರಿಮಳ ಅರಳುತ್ತಿದೆ. ನಮ್ಮ ನಿಮ್ಮ ಸುತ್ತಲೆಲ್ಲಾ ಹರಡಿಕೊಳ್ಳಲಿಕ್ಕೆ ಒಂದಷ್ಟು ಹೊತ್ತು ತಗುಲಬಹುದು…ಗೊಂಬೆಗೆ ಮತ್ತೆ ಜೀವ ಬರಬಹುದು…!

ಚಿತ್ರ : ನನ್ನದೇ