ಲೇಖನ ಮಾಲಿಕೆ

ಚಲನಚಿತ್ರ ಅಕಾಡೆಮಿಗೆ ಹೊಸಬರು ಬೇಕಾಗಿದ್ದಾರೆ

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಮುಖ ಬೇಕಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಗುಪ್ತಗಾಮಿನಿಯಂತೆ ಇದ್ದ ಸಿನಿಮಾ ಚಳವಳಿಗೆ ಒಂದು ವೇಗ ಕೊಡಲು ರಾಜ್ಯ ಸರಕಾರ ಅಕಾಡೆಮಿಯನ್ನು ರಚಿಸಿತು. ಮೊದಲ ಅವಧಿಗೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದರ ಚುಕ್ಕಾಣಿ ಹಿಡಿದರು. ಈಗ ಅವರ ಅವಧಿ ಮುಗಿದಿದೆ.

ಅಕಾಡೆಮಿಯ ಮೊದಲ ಅವಧಿಯ ಸಾಧನೆಯನ್ನು ತುಲನೆ ಮಾಡಿದರೆ ಬಹಳಷ್ಟು ನಿರೀಕ್ಷೆ ಈಡೇರದಿದ್ದರೂ, ನಿರಾಶೆ ಮೂಡದು. ಸಾಮಾನ್ಯವಾಗಿ ಒಂದು ಸಂಸ್ಥೆಯ ಮೊದಲ ಒಂದೆರಡು ವರ್ಷ ಕಂಡ ಕನಸಿಗೆ ಮೂರ್ತ ರೂಪ ನೀಡುವ ಪ್ರಯತ್ನವಷ್ಟೇ ನಡೆಯುತ್ತದೆ. ಬಹಳ ನೇರವಾಗಿ ಹೇಳುವುದಾದರೆ, ಕನಸಿಗೆ ಕಾಲು, ಕೈ, ಮೂಗು-ಬಾಯಿ ಮೂಡಿಸುವ ಹೊಣೆ. ಎಷ್ಟೋ ಬಾರಿ ಹೀಗೂ ಆಗುವುದುಂಟು. ಮೂರ್ತ ರೂಪ ಕೊಡುವ ಹೊಣೆ ಹೊತ್ತ ಮಂದಿ ಕಾಲು, ಕೈ-ಮೂಗು-ಬಾಯಿ ಎಲ್ಲವನ್ನೂ ಕೊಟ್ಟು ಹೃದಯವನ್ನು ಕೊಡುವುದನ್ನೇ ಮರೆಯುವ ಅಪಾಯವಿದ್ದೇ ಇರುತ್ತದೆ. ಅಂಥ ಅವಘಡ ಈ ಅಕಾಡೆಮಿಯ ಸಂದರ್ಭದಲ್ಲಿ ಘಟಿಸಿಲ್ಲ. ಬೆಳೆಯಬೇಕಾದ ಅಂಗಗಳು ಕ್ರಮಬದ್ಧವಾಗಿ ಬೆಳೆಯದಿರಬಹುದು, ಹೃದಯವನ್ನು ಕೊಡಲು ಮರೆತಿಲ್ಲವೆಂಬುದೇ ಸದ್ಯದ ಸಮಾಧಾನ.
ಅಕಾಡೆಮಿ ಸಿನಿಮಾ ಚಳವಳಿಯನ್ನು ಪ್ರೋತ್ಸಾಹಿಸಲು, ರಾಜ್ಯಾದ್ಯಂತ ಬೆಳ್ಳಿಸಾಕ್ಷಿ-ಬೆಳ್ಳಿ ಮಂಡಲದಂಥ ಕಲ್ಪನೆಗಳ ಮೂಲಕ ಫಿಲ್ಮ್ ಸೊಸೈಟಿಗಳನ್ನು ಸೃಷ್ಟಿಸಲು ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಶೇ. ೭೦ ರಷ್ಟು ಯಶಸ್ವಿಯಾಗಿದೆ. ಕೆಲವೆಡೆ ಬೆಳ್ಳಿ ಸಾಕ್ಷಿ-ಬೆಳ್ಳಿಮಂಡಲಗಳು ಬಹಳ ಸಕ್ರಿಯವಾಗಿದ್ದರೆ, ಕೆಲವೆಡೆ ಇನ್ನೂ ಎದ್ದೇ ಇಲ್ಲ. ಇದು ಬಿತ್ತಿದ ಎಲ್ಲವೂ ಮೊಳಕೆಯೊಡೆಯುವುದಿಲ್ಲವೆಂಬ ಮಾತಿಗೆ ನಿದರ್ಶನ. ಉಳಿದಂತೆ ನಮ್ಮ ಹಿಂದಣವನ್ನು ನೆನಪಿಸಿಕೊಳ್ಳಲು ‘ಬೆಳ್ಳಿಹೆಜ್ಜೆ’ ಎಂಬ ಕಾರ್‍ಯಕ್ರಮ ನಡೆಸಿತು. ಕನ್ನಡದ ಹಿರಿಯ ನಟ-ನಟಿ, ನಿರ್ದೇಶಕರೂ ಸೇರಿದಂತೆ ಸಿನಿ ಜಗತ್ತಿನ ಮಹನೀಯರನ್ನು ಕರೆದು ಕುಳ್ಳಿರಿಸಿ, ಅವರ ಅನುಭವವನ್ನು ಕೇಳುವಂಥ ಕಾರ್‍ಯಕ್ರಮ. ಇದು ಕೊಂಚ ಜನಪ್ರಿಯತೆ ತಂದುಕೊಟ್ಟಿದೆ. ಉಳಿದಂತೆ ನಡೆಯುವ ಮಾರ್ಗದ ನಕ್ಷೆಯನ್ನು ರೂಪಿಸಿಕೊಂಡಿದ್ದು ದೊಡ್ಡದು, ಮುಟ್ಟಿದ್ದು ಕಡಿಮೆ.

ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಸಿದ ೪ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವವೂ ಅಕಾಡೆಮಿಯ ಹೆಗ್ಗಳಿಕೆ. ಈ ಹಿಂದೆ ಸುಚಿತ್ರಾ ಫಿಲಂ ಸೊಸೈಟಿಯವರು ಸರಕಾರದ ಅಲ್ಪ ಸಹಾಯದಿಂದ ನಡೆಸುತ್ತಿದ್ದರು. ಅಕಾಡೆಮಿಯು ಅಂತಾರಾಷ್ಟ್ರೀಯ ಸಿನಿಮೋತ್ಸವ ಸಂಘಟಿಸಿದ ರೀತಿ ಅಷ್ಟೊಂದು ಖುಷಿ ಕೊಡಲಿಲ್ಲ. ಸಿನಿಮೋತ್ಸವ ಸಿನಿಮಾಸಕ್ತರ ಚರ್ಚೆಯ ವೇದಿಕೆಯಾಗಬೇಕಿದ್ದ ಸಂದರ್ಭ ಅಂಥ ವಾತಾವರಣಕ್ಕೆ ಆಸ್ಪದವೇ ಕೊಟ್ಟಿರಲಿಲ್ಲ. ಹಣಕ್ಕೇನೂ ಬರವಿರಲಿಲ್ಲ. ರಾಜ್ಯ ಸರಕಾರ ಸಾಕಷ್ಟು ಸಹಾಯ ಮಾಡಿತ್ತು. ಉತ್ಸವಕ್ಕೆ ಆಯ್ಕೆಯಾದ ಸಿನಿಮಾಗಳೂ ಪರವಾಗಿಲ್ಲ. ಆದರೆ, ಸಿನಿಮಾ ನಿರ್ಮಾತೃಗಳು ಮತ್ತು ಸಿನಿಮಾಸಕ್ತರ ನಡುವಿನ ಚರ್ಚೆಗೆ ಅವಕಾಶ ಕಲ್ಪಿಸುವತ್ತ ಅಕಾಡೆಮಿ ಬಹಳ ಆಸಕ್ತಿ ತಳೆದಿರಲಿಲ್ಲ. ಉದಾಹರಣೆಗೆ ಲಿಡೋ ಚಿತ್ರಮಂದಿರದಲ್ಲಿ ನಾಲ್ಕು ಕಡೆ ಚಿತ್ರ ಪ್ರದರ್ಶಿತವಾಗುತ್ತಿತ್ತು. ಶೇ. ೬೦ ರಷ್ಟು ಚಿತ್ರಪ್ರೇಮಿಗಳು ಅಲ್ಲೇ ಸೇರುತ್ತಿದ್ದರು. ಇಂತಹ ಹೊತ್ತಿನಲ್ಲಿ ಮಧ್ಯಾಹ್ನದ ಸಂದರ್ಭದಲ್ಲಿ ಹೊರಗೆ (ನೆಲಅಂತಸ್ತಿನಲ್ಲಿ)ಸಂವಾದವನ್ನು ನಡೆಸಿದ್ದು ಬಿಟ್ಟರೆ ಬೇರೇನೂ ಇಲ್ಲ. ಅದರಲ್ಲೂ ಒಂದು ದಿನವಿದ್ದರೆ ಮತ್ತೊಂದು ದಿನವಿಲ್ಲದಂತಹ ಪರಿಸ್ಥಿತಿ. ಹಾಗೆ ಹೇಳುವುದಾದರೆ ಸುಚಿತ್ರಾದವರು ಬಡತನದಲ್ಲೇ ಏರ್ಪಡಿಸಿದ್ದ ಚಿತ್ರೋತ್ಸವದಲ್ಲಿ ಸಿನಿಮಾ ಮಾಧ್ಯಮದ ಕುರಿತಾದ ಚರ್ಚೆಗೆ ವಿಫುಲ ಅವಕಾಶವಿತ್ತು ಎಂಬುದನ್ನು ಸುಮ್ಮನೆ ಹೊಗಳಲು ಹೇಳುತ್ತಿಲ್ಲ.

ಇರಾನಿನ ನಿರ್ದೇಶಕ ದರೂಷಿ ಮೆಹರ್ಜುಯಿ ಅಷ್ಟೂ ದಿನ ನಮ್ಮೊಡನೆ ಇದ್ದರು. ಅವರೊಂದಿಗಿನ ಸಂವಾದವನ್ನು ಪತ್ರಿಕೆಗಳಿಗಷ್ಟೆ ಮೀಸಲಿಡಲಾಯಿತೇ ಹೊರತು, ಎಲ್ಲ ಸಿನಿಮಾ ಪ್ರೇಮಿಗಳಿಗಲ್ಲ. ಚೀನಾ ಸೇರಿದಂತೆ ಹಲವು ದೇಶಗಳ ಚಿತ್ರ ನಿರ್ದೇಶಕರು ಬಂದಿದ್ದರು. ಅವರ ಬಗ್ಗೆ ಮಾಹಿತಿ ಕೊನೆವರೆಗೂ ಎಲ್ಲರಿಗೂ ಸಿಗಲಿಲ್ಲ. ಇಂದು ಇಂಥ ಚಿತ್ರಮಂದಿರಲ್ಲಿ ಸಂಜೆವರೆಗೂ ಲಭ್ಯವಿರುವ ಚಿತ್ರ ನಿರ್ದೇಶಕರು, ತಂತ್ರಜ್ಞರು ಎಂಬ ಪಟ್ಟಿಯನ್ನು ಬೆಳಗ್ಗೆಯೇ ಪ್ರಕಟಿಸಿದ್ದರೆ, ಸಂಬಂಧಪಟ್ಟ ಆಸಕ್ತರು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿತ್ತು. ಚೀನಾದ ನಿರ್ದೇಶಕರೊಬ್ಬರನ್ನು ಹುಡುಕಲು ಎರಡು ದಿನ ಬೇಕಾಯಿತು. ಇಂತಹ ಅಪಸವ್ಯಗಳನ್ನು ಸರಿಪಡಿಸಲು ಬಹಳ ಕಾಸು ಬೇಕಿರಲಿಲ್ಲ. ಹಾಗಾಗಿ ಕೈಗೆ ಸಿಕ್ಕಷ್ಟು ಸಿನಿಮಾ ನೋಡಿದೆವು ಎನ್ನುವ ಅಲ್ಪ ಸಮಾಧಾನ ಸಿಕ್ಕಿತೇ ಹೊರತು ಸಿನಿಮೋತ್ಸವದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಿದ ಪೂರ್ಣ ಸಮಾಧಾನ ಸಿಗಲಿಲ್ಲ. ಜತೆಗೆ ಅಂತಾರಾಷ್ಟ್ರೀಯ ಸಿನಿಮೋತ್ಸವವೆಂದರೆ ಊರು ಇರಲಿ, ಸುತ್ತಮುತ್ತಲಾದರೂ ಉತ್ಸವದ ಸಂಭ್ರಮವಿರಬೇಕಲ್ಲ. ಅದ್ಯಾವುದೂ ತೋರಲಿಲ್ಲ. ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಏರ್ಪಡಿಸಿದ ಕೀರ್ತಿ ಅಕಾಡೆಮಿಗೆ ದಕ್ಕಬೇಕು.

ಹೀಗೆ ಮೂರು ವರ್ಷಗಳನ್ನು ಕಳೆದ ಅಕಾಡೆಮಿಗೆ ಹೊಸಬರು ಬೇಕಾಗಿದ್ದಾರೆ. ಈಗಿನ ಅಧ್ಯಕ್ಷರಾದ ಟಿ.ಎಸ್. ನಾಗಾಭರಣರ ಹೆಸರು ಎರಡನೇ ಅವಧಿಗೆ ಕೇಳಿಬರುತ್ತಿದ್ದರೆ, ನಟಿ ಜಯಮಾಲಾ, ತಾರಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಮುಂತಾದವರ ಹೆಸರು ಚಾಲ್ತಿಯಲ್ಲಿದೆ. ಈ ಮಧ್ಯೆಯೇ ಅಕಾಡೆಮಿ ಎಂಬುದು ಮತ್ತೊಂದು ವಾಣಿಜ್ಯ ಮಂಡಳಿಯಂತಾಗಬೇಕೋ ಅಥವಾ ಅಧ್ಯಯನಶೀಲತೆಯ ನೆಲೆಯಲ್ಲಿ ಕೆಲಸ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ.

ಪ್ರಸ್ತುತ ಕೇಳಿಬರುತ್ತಿರುವ ಹೆಸರುಗಳ ಪೈಕಿ ಹೆಚ್ಚು ವಾಣಿಜ್ಯ ಮಂಡಳಿಯೊಂದಿಗೆ ನೇರವಾಗಿ ಸಂಬಂಧಗಳನ್ನು ಇಟ್ಟುಕೊಂಡವರೇ. ಇದರರ್ಥ ವಾಣಿಜ್ಯ ಮಂಡಳಿಯೊಂದಿಗೆ ಸಂಬಂಧವಿಟ್ಟುಕೊಂಡ ವರಿಗೆ ಅವಕಾಶ ನೀಡಬಾರದೆಂದಲ್ಲ. ಆದರೆ, ಮಂಡಳಿ ಮತ್ತು ಅಕಾಡೆಮಿಯ ಸಂರಚನೆಯೇ ಬೇರೆಯಾಗಿರುವುದರಿಂದ ಅಕಾಡೆಮಿಗೆ ಆಯ್ಕೆ ಮಾಡುವಾಗಲೇ ರಾಜ್ಯ ಸರಕಾರ ಸ್ವಲ್ಪ ಎಚ್ಚರಿಕೆಯನ್ನು ವಹಿಸಲೇಬೇಕಿದೆ. ಕನ್ನಡದಲ್ಲಿ ಒಳ್ಳೆ ಚಿತ್ರಗಳು ಬರಬೇಕೆಂದರೆ ಅಕಾಡೆಮಿ ಚಿತ್ರ ನಿರ್ಮಾಪಕರತ್ತಲೂ ಮುಖ ಮಾಡಬೇಕು, ತನ್ನ ಸಲಹೆಯನ್ನು ಹಂಚಿಕೊಳ್ಳಬೇಕೆಂಬುದು ನಿರ್ವಿವಾದದ ಸಂಗತಿ. ಇದೇ ದಿಸೆಯಲ್ಲಿ ಅಕಾಡೆಮಿಯಂಥ ಸ್ಥಳಗಳಿಗೆ ಸ್ವಲ್ಪ ಸಿನಿಮಾ-ಸಾಹಿತ್ಯ-ನಾಟಕದ ನಡುವೆ ಅಂತರ್ ಸಂಬಂಧವಿಟ್ಟುಕೊಂಡಿರಬಹುದಾದ ವ್ಯಕ್ತಿಗಳನ್ನೇ ಆರಿಸುವುದು ಉಚಿತ. ಇಲ್ಲವಾದರೆ, ನಾಳೆ ಸರಕಾರ ಮತ್ತು ಚಿತ್ರೋದ್ಯಮದ ಮಧ್ಯೆ ಸೇತುವಾಗುವಂಥವರೇ ಇರಲಾರರು. ಯಾವಾಗಲೂ ಅಕಾಡೆಮಿಯಂಥ ವ್ಯವಸ್ಥೆ ಈ ಕೆಲಸವನ್ನು ನಿಭಾಯಿಸಬೇಕು.

ಇನ್ನೊಂದು ಮಾತಿದೆ. ಸರಕಾರವೂ ಅಂಥ ಹೊಣೆಯನ್ನು ಸಮರ್ಥರಿಗೇ ವಹಿಸಬೇಕೆಂದು ಆಲೋಚಿಸುವಾಗ ಕೆಲವರನ್ನು ಪಟ್ಟಿ ಮಾಡಿಕೊಳ್ಳುವುದುಂಟು. ಅವರನ್ನು ಸಂಪರ್ಕಿಸುವುದೂ ಇದ್ದೇ ಇದೆ. ಆಗ ತಮಗಿಷ್ಟವಿಲ್ಲ ಎಂದು ಬಿಡುವುದೂ ಕ್ಷೇತ್ರ ಬಡವಾಗುವುದಕ್ಕೆ ಕಾರಣವಾಗುತ್ತದೆ. ಒಂದು ಸಿನಿಮಾ ಚಳವಳಿಯನ್ನು ಬೆಳೆಸಲು, ಒಳ್ಳೆ ಪ್ರೇಕ್ಷಕರನ್ನು ರೂಪಿಸಲು ಎಲ್ಲರ ಕೊಡುಗೆಯೂ ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ನೆಲೆಯಲ್ಲಿ ಸಾಧ್ಯವಾದಷ್ಟನ್ನು ಪ್ರಯತ್ನಿಸುವುದೂ ಒಳ್ಳೆಯದೇ. ಅದಲ್ಲದೇ, ಬರೀ ‘ಒಳ್ಳೆ ಕೆಲಸವಾಗುತ್ತಿಲ್ಲ’ ಕೊರಗಿಕೊಂಡು ಇರುವುದೂ ಆ ಕ್ಷೇತ್ರಕ್ಕಾಗುವ ನಷ್ಟವೇ ಹೊರತು ಮತ್ತೇನೂ ಅಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s