ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವ ಕಾಲವಿದು.

ಅಣ್ಣಾ ಹಜಾರೆಯವರು ಜನಲೋಕಪಾಲ್ ಕಾಯಿದೆಗೆ ಒತ್ತಾಯಿಸಿ, ಭ್ರಷ್ಟಾಚಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದರೆ ಕೇಂದ್ರ ಸರಕಾರದವರು ಬಂಧಿಸುತ್ತದೆ. ಇದು ಎಂತಹ ಹೇಯವಾದುದು ಎಂದರೆ, ಪ್ರತಿಭಟಿಸಲೂ ಸ್ವಾತಂತ್ರ್ಯವಿಲ್ಲವೆಂದಾದರೆ 65 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಯೂ ಏನು ಪ್ರಯೋಜನ ?

ಇಂದಿನಿಂದ ಆರಂಭವಾದ (ಆ.16) ಸತ್ಯಾಗ್ರಹವನ್ನು ಪ್ರಾರಂಭದಲ್ಲೇ ಹತ್ತಿಕ್ಕಲು ಪ್ರಯತ್ನಿಸಿದ ಕೇಂದ್ರ ಸರಕಾರ ಅಣ್ಣಾ ಹಜಾರೆ ಮತ್ತು ಬೆಂಬಲಿಗರನ್ನು ಬಂಧಿಸಿದ್ದಾರೆ. ಕಾರಣವನ್ನೇ ನೀಡದೇ ಬಂಧಿಸುವುದು ಎಷ್ಟೊಂದು ಅಸಾಂವಿಧಾನಿಕವೆಂಬುದು ನಮ್ಮ ಅತ್ಯಂತ ಪರಿಣಿತ ಹಾಗೂ ವಿದ್ಯಾವಂತ ಪ್ರಧಾನಿಯವರಿಗೆ ಹೇಳಿಕೊಡಬೇಕಾದ ಕಾಲ ಬಂದಿರುವುದು ನಿಜಕ್ಕೂ ದುರಂತ. ಇದರೊಂದಿಗೆ ದಿನವೂ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಮತ್ತೊಬ್ಬ ಸಚಿವ ಕಪಿಲ್ ಸಿಬಲ್ ಸಹ ಬಹಳ ವಿದ್ಯಾವಂತರು.

ಈ ಸರಕಾರದಲ್ಲಿ ಎಲ್ಲರೂ ಬುದ್ಧಿವಂತರೇ. ಹಾಗಾಗಿಯೇ ದೊಡ್ಡ ಸಮಸ್ಯೆಯಾಗಿರುವುದು. ವೃಥಾ ಅಣ್ಣಾ ಹಜಾರೆಯವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಅದಾಗದ ಕಾರಣ,ಈಗ ಬಂಧಿಸಿದ್ದಾರೆ. ಜತೆಗೆ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಮಾತನಾಡಿದ ಮಾನ್ಯ ಪ್ರಧಾನಿಗಳು, ಉಪವಾಸ ಎಲ್ಲದಕ್ಕೂ ಮದ್ದಲ್ಲ ಎಂದು ಯಾರಿಗೂ ಗೊತ್ತಿಲ್ಲದಂತಹ ಹೇಳಿಕೆ ಕೊಟ್ಟಿದ್ದಾರೆ. ವಿಚಿತ್ರ. ಆದರೆ, ಇದೇ ಉಪವಾಸ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿತ್ತೆಂಬುದನ್ನು ಮರೆತಿರುವುದು ನಿಜಕ್ಕೂ ವಿಷಾದನೀಯ. ಹಾಗಾದರೆ, ಮಹಾತ್ಮಾ ಗಾಂಧಿಯವರ ಉಪವಾಸ ಸತ್ಯಾಗ್ರಹವೆಂಬ ಮಂತ್ರ ಪೊಳ್ಳೇ ? ನಮ್ಮ ಪ್ರಧಾನಿಯವರು ಅದನ್ನೇ ಈ ರೀತಿ ಹೇಳುತ್ತಿದ್ದಾರೆಯೇ ಅರ್ಥವಾಗುತ್ತಿಲ್ಲ.

ನಾವೆಲ್ಲಾ ಈಗ ಒಗ್ಗೂಡಬೇಕಿದೆ. ಈ ಚಳವಳಿಯಲ್ಲಿ ನಮ್ಮ ನಮ್ಮ ಪಾತ್ರಗಳನ್ನು ನಿರ್ವಹಿಸಬೇಕು. ಎಲ್ಲ ಕ್ಷೇತ್ರದ ಜನರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಎಲ್ಲರೂ ರಸ್ತೆಗಿಳಿಯಬೇಕು. ಅದಾಗದಿದ್ದರೆ ನಾವು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದೇವೆಯೋ ಅಲ್ಲಲ್ಲೇ ಪ್ರತಿಭಟನೆಗೆ ನಮ್ಮದೇ ರೂಪದಲ್ಲಿ ಬೆಂಬಲಿಸಬೇಕು. ಅದನ್ನು ನಾನು ಮಾಡುತ್ತಿರುವೆ, ನೀವೂ ಮಾಡಿ. ಕೈ ಜೋಡಿಸಿ, ಭ್ರಷ್ಟಾಚಾರಕ್ಕೆ ಮದ್ದು ಕಂಡು ಹಿಡಿಯದಿದ್ದರೆ ಹೊಸ ತಲೆಮಾರಿನ ಶಾಪಕ್ಕೆ ಗುರಿಯಾಗಬೇಕಾದೀತು.