ಲೇಖನ

ಹೊಸ ಲೋಕಾಯುಕ್ತರಿಗೆ ನಮ್ಮ ಬೆಂಬಲವಿರಲಿ

ರಾಜಕಾರಣಿಗಳನ್ನು ಹತಾಶ ಸ್ಥಿತಿಗೆ ತಲುಪಿಸಿ ಖೆಡ್ಡಾಕ್ಕೆ ಬೀಳಿಸಬೇಕು. ಲೋಕಾಯುಕ್ತರು ಖೆಡ್ಡಾವನ್ನು ತೋಡಬಹುದು, ಆದರೆ “ಆನೆ”ಯನ್ನು ಓಡಿಸಿಕೊಂಡು ಬಂದು ಗುಂಡಿಗೆ ಬೀಳಿಸಲು ನಾವೇ ಅಂದರೆ ಜನರೇ ಸಿದ್ಧರಾಗಬೇಕು.

ಹೊಸ ಲೋಕಾಯುಕ್ತರು ಬಂದಿದ್ದಾರೆ…ಮೊದಲಿಗೇ “ನಾನು ಬಿಜೆಪಿ ಲೋಕಾಯುಕ್ತ ಅಲ್ಲ, ಕರ್ನಾಟಕದ ಲೋಕಾಯುಕ್ತ” ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಲೆಕ್ಕಾಚಾರದಲ್ಲಿ ಅಂತಹದೊಂದು ಉನ್ನತ ಹುದ್ದೆಯಲ್ಲಿರುವವರಿಗೆ ಹೀಗೆ “ಸ್ಪಷ್ಟೀಕರಣ” ಕೊಡುವಂತಹ ಪರಿಸ್ಥಿತಿ ಬರಬಾರದು. ಆದರೆ ಏನೂ ಮಾಡುವಂತಿಲ್ಲ, ಸನ್ನಿವೇಶ ಮತ್ತು ಸಂದರ್ಭಗಳು ಆ ಪರಿಸ್ಥಿತಿಯನ್ನೂ ಸೃಷ್ಟಿಸುತ್ತವೆ.

ಮಾನ್ಯ ಶಿವರಾಜ್ ಪಾಟೀಲರಿಗೂ ಆದದ್ದು ಅದೇ. ಯಡಿಯೂರಪ್ಪನವರು ಹಿಂದಿನ ಲೋಕಾಯುಕ್ತರಿಂದ ತೀರಾ ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಗಣಿ ವರದಿಯನ್ನು ಸೋರಿಕೆ ಮಾಡಿ, ತಾಂತ್ರಿಕ ನೆಲೆಯಿಂದ ತಪ್ಪಿಸಿಕೊಳ್ಳಬಹುದೆಂದು ಯಡಿಯೂರಪ್ಪನವರು ಅಂದುಕೊಂಡಿದ್ದರು. ಅದಕ್ಕೆ ತಮ್ಮದೆ ಸಮುದಾಯದ ಒಬ್ಬ ಉತ್ತರಾಧಿಕಾರಿಯನ್ನು ಲೋಕಾಯುಕ್ತಕ್ಕೆ ಸೇರಿಸಿದರೆ, ನಮ್ಮನ್ನು ಕಾಯಬಹುದೆಂಬುದು ರಾಜಕೀಯ ಲೆಕ್ಕಾಚಾರವಾಗಿತ್ತು. ಈ ಮಾತಿನ ಅರ್ಥ ಶಿವರಾಜ ಪಾಟೀಲರಿಗೆ ಅರ್ಹತೆ ಇರಲಿಲ್ಲವೆಂದಲ್ಲ, ಅವರಿಗೆ ಅರ್ಹತೆ ಇದ್ದೇ ಇದೆ. ಹತ್ತು ಹಲವು ಆಯೋಗಗಳಲ್ಲೂ ಚೆನ್ನಾಗಿ ಕೆಲಸ ಮಾಡಿದವರು. ಸುಭಾಷಿತದ ಒಂದು ಮಾತು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.

ಗೌರವ, ಕೊಡುವ ವ್ಯಕ್ತಿ ಮತ್ತು ಅವನ ಸ್ಥಾನದಿಂದ ನಿರ್ಧಾರವಾಗುತ್ತದೆ. ಈ ಮಾತು ಇಲ್ಲಿ ಎಷ್ಟು ಸೂಕ್ತವೆಂದರೆ, ಹಲವು ಹಗರಣಗಳ ಆರೋಪ ಹೊತ್ತ ಸರಕಾರದ ಪ್ರಮುಖ ಪ್ರತಿನಿಧಿ ಇಂತಹದೊಂದು ಹುದ್ದೆ ಕೊಟ್ಟದ್ದು ಮತ್ತು ಆ ಸಂದರ್ಭ ಶಿವರಾಜಪಾಟೀಲರಿಗೆ ಸ್ಪಷ್ಟೀಕರಣ ಕೊಡುವಂತಹ ಪರಿಸ್ಥಿತಿ ನಿರ್ಮಿಸಿತು. ಈ ಸ್ಪಷ್ಟೀಕರಣದ ನಂತರವೂ ಜನ ಕೊಂಚ ಅನುಮಾನದಿಂದಲೇ ಇರುತ್ತಾರೆ. ಪ್ರಸ್ತುತ ಜನ ಒಂದುಕಡೆ, ಶಿವರಾಜ ಪಾಟೀಲರು ಒಂದು ಕಡೆ ಇದ್ದಾರೆ. ಪಾಟೀಲರ ಪ್ರತಿ ನಡೆಯೂ ಭ್ರಷ್ಟಾಚಾರ ವಿರುದ್ಧದ ಸಮರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದಕ್ಕೆ ಪೂರಕವಾಗಿರಬೇಕು. ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವತ್ತ ನಡೆಯಬೇಕು. ಆಗ ಜನ ನಿಧಾನವಾಗಿ ಅವರ ಕಡೆಯೆ ವಾಲತೊಡಗುತ್ತಾರೆ.ಅವಧಿ ಮುಗಿಸುವಷ್ಟೊತ್ತಿಗೆ ಜನ ಅವರ ಹಿಂದೆ ನಿಲ್ಲುತ್ತಾರೆ. ಆಗ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಪಾಟೀಲರು ನಾಯಕರಂತಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ.

ನಮ್ಮ ಅದೃಷ್ಟ. ಮೂರು ಅವಧಿಗಳಿಂದಲೂ ಲೋಕಾಯುಕ್ತಕ್ಕೆ ಸಮರ್ಪಕರ ಆಯ್ಕೆಯೇ ಆಗಿದೆ. ವೆಂಕಟಾಚಲ ಅವರು ಆರಂಭಿಸಿದ ಆಂದೋಲನವನ್ನು ಹೆಚ್ಚು ಸಮರ್ಥವಾಗಿಯೇ ಎನ್.ಸಂತೋಷ್ ಹೆಗ್ಡೆಯವರು ಮುನ್ನಡೆಸಿದ್ದಾರೆ. ಈಗ ಶಿವರಾಜಪಾಟೀಲರ ಸರದಿ. ಅವರ ಹೊಣೆಗಾರಿಕೆ ಹೆಚ್ಚು ಇದೆ. ಸಂತೋಷ್ ಹೆಗ್ಡೆಯವರು ತಮ್ಮ ದಿಟ್ಟ ಕ್ರಮದಿಂದ ಜನರಲ್ಲಿ ಒಂದಿಷ್ಟು ಹೊಸ ಉತ್ಸಾಹವನ್ನು ಮೂಡಿಸಿದ್ದಾರೆ. ಅದು ಇಮ್ಮಡಿಗೊಳ್ಳುವಂತೆ ಮಾಡಬೇಕಾದದ್ದಷ್ಟೇ ಪಾಟೀಲರ ಹೊಣೆಯಲ್ಲ, ಆ ಇಮ್ಮಡಿ ಉತ್ಸಾಹದ ಜನ ಭ್ರಷ್ಟಾಚಾರ ವಿರುದ್ಧದ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅದಕ್ಕೆ ಪ್ರೇರಣಾ ಮತ್ತು ಚಾಲನಾ ಶಕ್ತಿಯಾಗಿ ಪಾಟೀಲರು ದುಡಿಯಬೇಕು. ಅದೇ ನಿಜವಾದ ಹೊಣೆಗಾರಿಕೆ.

ಬರಿದೇ ದಾಳಿ, ವಿಚಾರಣೆ ನಡೆಸಿದರೆ ಮುಗಿಯದು. ಬಹಳ ಮಹತ್ವದ್ದೆನಿಸಿದ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ನಿಲುವನ್ನು ತಳೆಯುವ ಮೂಲಕ, ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದರೆ ಶಿವರಾಜ ಪಾಟೀಲರು ಅರ್ಧ ಸಮರವನ್ನು ಗೆದ್ದಂತೆ. ಇಂತಹದೊಂದು ಸಾಧ್ಯತೆಯನ್ನು ನಿರೀಕ್ಷಿಸುತ್ತಲೇ ಇರುವ ಜನ ಸಮುದಾಯದಲ್ಲಿ ನಾನೂ ಒಬ್ಬ. ನನ್ನ ತಲೆಮಾರು ದೇಶದ ಬಗ್ಗೆ, ರಾಜ್ಯದ ಬಗ್ಗೆ ಒಂದಿಷ್ಟು ಪ್ರೇಮವನ್ನು ಉಳಿಸಿಕೊಳ್ಳಬೇಕಾದರೆ, ರಾಷ್ಟ್ರ ಹಿತದ ಹಿನ್ನೆಲೆಯಲ್ಲಿ ಕಾರ್ಯೋನ್ಮುಖವಾಗಬೇಕಾದರೆ, ನನ್ನ ಮುಂದಿನ ತಲೆಮಾರಿಗೆ ರಾಷ್ಟ್ರ ಖ್ಯಾತಿಯನ್ನು ವಿವರಿಸಬೇಕಾದರೆ ನಿಮ್ಮಂತಹವರು ನೀಡುವ ನಾಯಕತ್ವವೇ ಮುಖ್ಯ. ಆ ನಿಟ್ಟಿನಲ್ಲೇ ನೀವು ನಡೆಯುತ್ತೀರೆಂಬ ಆಶಯವೂ ಇದೆ.

ಅಂದ ಹಾಗೆ, ಲೋಕಾಯುಕ್ತರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಸಾಧ್ಯತೆ ನಮ್ಮ ಮೇಲೂ ಇದೆ. ಅಂದರೆ ಸಾರ್ವಜನಿಕರ ಮೇಲೆ. ಪ್ರಸ್ತುತ ಗಣಿ ವರದಿಯ ಬಗ್ಗೆ ಮಾತನಾಡೋಣ. ಈ ಗಣಿ ವರದಿ ಮೇಲೆ ಕೈಗೊಳ್ಳುವ ಕ್ರಮಗಳೇನು ಎಂಬುದರ ಬಗ್ಗೆ ನಮ್ಮನ್ನಾಳುವವರನ್ನು ಅವಕಾಶ ಸಿಕ್ಕಾಗಲೆಲ್ಲಾ ಕೇಳುತ್ತಿರಲೇಬೇಕು. ಒಮ್ಮೆ ಕೇಳಿದ್ದಕ್ಕೆ, ಎರಡು ಬಾರಿ ಕೇಳಿದ್ದಕ್ಕೆ ಬದ್ಧತೆಯ ಉತ್ತರ ಕೊಡುವ ಸ್ಥಿತಿಯಲ್ಲಿ ಅವರಿಲ್ಲ. ಇದರರ್ಥ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರವೂ ಅಧಿಕಾರ ಗಳಿಸಲು ಒಂದು ಅರ್ಹತೆ ಎನ್ನುವ ಮಟ್ಟಿಗೆ ಮುಟ್ಟಿದೆ. ಕಾನೂನು ಉಲ್ಲಂಘನೆ ಮಾಡದವ ಮಂತ್ರಿಯಲ್ಲ, ಮುಖ್ಯಮಂತ್ರಿಯಾಗಲು ಅರ್ಹನಲ್ಲ ಎಂಬ ಸ್ಥಿತಿಯಿದೆ. ಹಾಗಾಗಿ ಬಿಡಿಎ ನಿಯಮ ಉಲ್ಲಂಘಿಸಿದ ಮಂದಿ ಮುಖ್ಯಮಂತ್ರಿ ಪಟ್ಟ ಹೋಗಿ ಬಿಡುತ್ತದೆಂದು ಅದನ್ನು ಒಪ್ಪಿಕೊಳ್ಳುವ ಸಾಹಸಕ್ಕೆ ಹೋಗುವುದಿಲ್ಲ, ನಾವು ಸರಿಯಾಗಿಯೇ ಇದ್ದೇವೆ ಎನ್ನುತ್ತಾರೆ. ಹಾಗಾಗಿ ಹಲವು ಬಾರಿ ಪ್ರಶ್ನೆ ಕೇಳಿದರೂ ಉತ್ತರಿಸಲಿಲ್ಲ ಎಂದು ಜನ ಮತ್ತು ಮಾಧ್ಯಮದವರು ನಿರಾಶೆಗೊಳ್ಳಬಾರದು.

ಹಲವು ಬಾರಿ ಕೇಳಿ ಕೇಳಿ, ಅವರಲ್ಲಿ ಒಂದು ಹತಾಶ ಉಂಟುಮಾಡಬೇಕು. ಆ ಹತಾಶ ಮನೋಭಾವದಿಂದ ಉತ್ತರಿಸುವ ಇಕ್ಕಟ್ಟಿನ ಸ್ಥಿತಿಯನ್ನು ನಿರ್ಮಿಸಬೇಕು. ಇಂದಿನ ರಾಜಕಾರಣಿ, ಅಧಿಕಾರಿಗಳು ಹತಾಶ ಸ್ಥಿತಿಯಲ್ಲಿ ಮಾತ್ರ ಸತ್ಯವನ್ನು ಮಾತನಾಡುತ್ತಾರೆ. ಬ್ಲಾಗ್ ಗಳು ಸೇರಿದಂತೆ ಎಲ್ಲೆಡೆಯೂ ಇದರ ಬಗ್ಗೆಯೇ ಚರ್ಚೆಯಾಗಬೇಕು. ಆಗ ಒಂದು ಒತ್ತಡ ಸೃಷ್ಟಿಯಾಗುತ್ತದೆ. ಅದರಿಂದ ಲಾಭ ಸಿಕ್ಕರೂ ಸಿಗಬಹುದು. ಯಡಿಯೂರಪ್ಪನವರ ಉದಾಹರಣೆಯನ್ನೇ ನೋಡಬಹುದಲ್ಲಾ.

ಹಾಗೆ ಭ್ರಷ್ಟಾಚಾರದ ಸಂಗತಿಗಳ ಕುರಿತು ಬರಿದೇ ಮಾಧ್ಯಮದವರಲ್ಲ, ಜನರೂ ತಮಗೆ ಸಿಗುವ ಜನ ಪ್ರತಿನಿಧಿಗಳನ್ನೆಲ್ಲಾ ಕೇಳಬೇಕು. ಅವರು ಮುಖ್ಯಮಂತ್ರಿಯೇ ಆಗಿರಬೆಕೇಂದೇನೂ ಇಲ್ಲ. ತಾ.ಪಂ ಸದಸ್ಯನಿಂದ ಹಿಡಿದು ಮಂತ್ರಿಯವರೆಗೆ ಎಲ್ಲರಿಗೂ ಪ್ರಶ್ನಿಸುತ್ತಿದ್ದರೆ, ನಮ್ಮ ಅಭಿಪ್ರಾಯ ನಿಧಾನವಾಗಿ ಅವರಿಗೆ ವಿರುದ್ಧ ಎಂದೆನಿಸುತ್ತದೆ. ಆಗ ಸಣ್ಣದೊಂದು ಆಂದೋಲನದ ಮೆರವಣಿಗೆ ಶುರುವಾಗುತ್ತದೆ. ಅದನ್ನು ಆರಂಭಿಸುವುದರಲ್ಲಿ ನಾವೆಲ್ಲರೂ ಮೊದಲಿಗರೇ. ನಮ್ಮ ನಮ್ಮ ನೆಲೆಯಲ್ಲಿ ಈ ತಕ್ಷಣವೇ ಆರಂಭಿಸಬೇಕಾದ ಕೆಲಸವಿದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s