ಲೇಖನ

ಲೋಕಾಯುಕ್ತರಿಗೆ ಧನ್ಯವಾದಗಳು

ಪ್ರಜಾತಂತ್ರ ಪ್ರೀತಿಸುವ ಪ್ರತಿಯೊಬ್ಬರೂ ಲೋಕಾಯುಕ್ತರಾಗಿ ಮೊನ್ನೆಯಷ್ಟೇ ನಿವೃತ್ತರಾದ ಎನ್. ಸಂತೋಷ್ ಹೆಗ್ಡೆಯವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಕಾನೂನಿಗೆ ಇರಬಹುದಾದ ಸಾಧ್ಯತೆಯನ್ನು ತೋರಿಸುತ್ತಲೇ, ಕಾನೂನನ್ನು ನಮ್ಮನ್ನಾಳುವ ಮಂದಿ ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲರು ಹಾಗೂ ಊನಗೊಳಿಸಬಲ್ಲರೆಂಬುದನ್ನು ತೋರಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಪರ್ವ ಮುಗಿದಿದೆ. ಐದು ವರ್ಷಗಳ ಹಿಂದೆ ಹುದ್ದೆಗೇರಿದಾಗ ಸದ್ದು ಮಾಡಿರಲಿಲ್ಲ. ತಣ್ಣಗೆ ಬಂದು ಕುಳಿತಿದ್ದರು. ಆದರೆ, ಅವಧಿ ಪೂರೈಸಿ ಹೊರಡುವಾಗ ಬಹಳಷ್ಟು ಮಂದಿಯ ಬುಡಕ್ಕೆ ಬಿಸಿನೀರು ಸುರಿದು ಹೊರಟಿದ್ದಾರೆ. ಅದರಲ್ಲೂ ನಮ್ಮನ್ನಾಳುವ ಮಂದಿಗೆ ಪಾಠ ಕಲಿಸಿದ್ದಕ್ಕೆ ನಾವೆಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.
ಇಂದು ಹೆಗ್ಡೆ ರಾಜಕಾರಣಿಗಳ ಕಣ್ಣಿನಲ್ಲಿ ತೀರಾ ಟೀಕೆಗೊಳಗಾದವರು. ಆದರೆ, ಪ್ರಜಾತಂತ್ರವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅವರಿಗೆ ‘ಹ್ಯಾಟ್ಸಾಫ್’ ಹೇಳಬೇಕು. ಅಣ್ಣಾ ಹಜಾರೆಯಂತಹವರು ನಮ್ಮೊಳಗೆ ಹೊಸ ಕನಸನ್ನು ಸೃಷ್ಟಿಸಿದವರು. ಹೊಸ ತಲೆಮಾರು ಭ್ರಷ್ಟಾಚಾರದಿಂದ ಬೇಸತ್ತು ದೇಶವೇ ಸಾಯುತ್ತದೆಂದುಕೊಂಡಾಗ ಅಣ್ಣಾ ಹಜಾರೆ ‘ಹಾಗೆ ಭಯಪಡಬೇಕಿಲ್ಲ. ಕೈ ಜೋಡಿಸಬೇಕಷ್ಟೇ’ ಎಂದರು. ಹಾಗಾಗಿ ಜನ್ ಲೋಕಪಾಲ್ ಮಸೂದೆ ಸಂಬಂಧ ದೇಶಾದ್ಯಂತ ಅಣ್ಣಾರ ಹೋರಾಟಕ್ಕೆ ಸಾಥ್ ದೊರೆತದ್ದು ಹೆಚ್ಚಾಗಿ ಯುವ ತಲೆಮಾರುಗಳಿಂದ.

ಈ ದಿಸೆಯಲ್ಲೇ ನಮ್ಮ ರಾಜಕಾರಣಿ, ಅಧಿಕಾರಿಗಳಿಗೂ ಒಂದಿಷ್ಟು ಭಯ ಮೂಡಬೇಕಿತ್ತು. ‘ನಾವು ಏನು ಮಾಡಿದರೂ ಸೈ’ ಎಂದುಕೊಂಡವರಿಗೆ ಸಣ್ಣದೊಂದು ಬರೆ ಕೊಟ್ಟು ‘ಬಿಸಿ’ ಅನುಭವ ಕೊಡಬೇಕಿತ್ತು. ಅದನ್ನು ಸಂತೋಷ್ ಹೆಗ್ಡೆಯವರು ಚೆನ್ನಾಗಿಯೇ ಮಾಡಿದ್ದಾರೆ. ಕೊಟ್ಟ ಬರೆ ಹೇಗಿದೆಯೆಂದರೆ, ಬೇರೆಯವರೂ ತಮ್ಮ ತಮ್ಮ ತೊಡೆಗಳನ್ನು ಮುಟ್ಟಿನೋಡಿಕೊಳ್ಳುತ್ತಿರಬೇಕು.

ಎನ್. ವೆಂಕಟಾಚಲ ಇದೇ ಹುದ್ದೆಯಲ್ಲಿದ್ದಾಗ ಬರೀ ಪ್ರಚಾರಕ್ಕೆ ದಾಳಿ ಮಾಡುತ್ತಿದ್ದರೆಂದು ಒಂದಿಷ್ಟು ಮಂದಿ ಆರೋಪಿಸಿದ್ದರು. ಇದ್ದರೂ ಇರಬಹುದು. ಆದರೆ ವೆಂಕಟಾಚಲ ಅವರು ಬರುವ ಮೊದಲು ‘ಲೋಕಾಯುಕ್ತ’ ವೆಂಬುದೊಂದಿದೆ ಎಂದೇ ಗೊತ್ತಿರಲಿಲ್ಲ. ಕೊನೇಪಕ್ಷ ‘ಲೋಕಾಯುಕ್ತಕ್ಕೆ ನೀವು ದೂರು ಕೊಡಬಹುದು’ ಎಂದು ಹೇಳಿದವರೇ ವೆಂಕಟಾಚಲರು. ಆ ದಾಳಿ ಸಂದರ್ಭದಲ್ಲೆಲ್ಲಾ ಮಾಧ್ಯಮಗಳೆದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಜನ ನಿಜಕ್ಕೂ ಸಮಾಧಾನ ಪಟ್ಟುಕೊಂಡಿದ್ದರು. ಅದಕ್ಕಿಂತ ಮೊದಲು ಏನೇ ಮಾಡಿದರೂ ಈ ಅಧಿಕಾರಿಗಳಿಗೆ ಲಂಚ ಕೊಟ್ಟೇ ಬದುಕಬೇಕೆಂದಿದ್ದ ಜನ, ನಿಧಾನವಾಗಿ ಬುದ್ಧಿವಂತರಾದರು. ‘ನನ್ನ ಕೈಲಾದುದ್ದನ್ನು ಕೊಡಬಲ್ಲೆ. ಅದಕ್ಕಿಂತ ಹೆಚ್ಚಿನದಾದರೆ ಲೋಕಾಯುಕ್ತಕ್ಕೆ ದೂರು ಕೊಡುವುದೊಂದೇ ಬಾಕಿ’ ಎಂಬ ಲೆಕ್ಕಾಚಾರಕ್ಕೆ ಇಳಿದರು. ಅದರ ಪರಿಣಾಮ ಬೇಕಾದಷ್ಟಿದೆ.

ಹೀಗಿದ್ದ ಲೋಕಾಯುಕ್ತಕ್ಕಿರಬಹುದಾದ ಪುಟ್ಟ ಪುಟ್ಟ ಹಲ್ಲುಗಳಲ್ಲೂ(ಎಳಸು) ಬಲವಾಗಿ ಕಚ್ಚಬಹುದೆಂದು ಸಾಬೀತು ಪಡಿಸಿದವರು ಸಂತೋಷ್ ಹೆಗ್ಡೆ. ಈ ಮಾತುಗಳಲ್ಲಿ ಯಾವುದೇ ಅಚ್ಚರಿಯೂ ಇಲ್ಲ, ಉತ್ಪ್ರೇಕ್ಷೆಯೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಆಡಳಿತಾರೂಢ ಸರಕಾರದ ಮೂರ‍್ನಾಲ್ಕು ಮಂದಿಯ ಜುಟ್ಟು ಹಿಡಿದು ಕೆಳಗಿಳಿಸಿದ್ದಾರೆ. ಆ ಪೈಕಿ ಯಡಿಯೂರಪ್ಪ ಕೆಳಗಿಳಿದಿದ್ದಾರೆ, ಇನ್ನೂ ಮೂರ‍್ನಾಲ್ಕು ಮಂದಿ ಅದೇ ದಾರಿಯಲ್ಲಿದ್ದಿದ್ದಾರೆ. ಇನ್ನು ೭೮೭ ಅಧಿಕಾರಿಗಳ ಪೈಕಿ ಒಂದಿಷ್ಟು ಮಂದಿಗೆ ‘ಮೋಕ್ಷ’ ದೊರಕಬೇಕು. ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.

ಅಧಿಕಾರ ವಹಿಸಿಕೊಂಡ ಮೊದಲಿಗೆ ‘ನಾನು ಹಾಗೆಲ್ಲಾ ದಾಳಿ ನಡೆಸೋದಿಲ್ಲ’ ಎಂದು ಹೇಳಿದವರು ಹೆಗ್ಡೆ. ನಂತರ ವಿಜಯ ಕರ್ನಾಟಕವೇ ದೊಡ್ಡದೊಂದು ಆಂದೋಲನ ಮಾದರಿಯ ಜನಾಭಿಪ್ರಾಯ ಸಂಗ್ರಹಿಸಿ ಆಗ್ರಹಿಸಿದ್ದು ‘ದಾಳಿ’ಯ ಅಗತ್ಯತೆಯನ್ನು. ಜನರಿಗೆ ದಾಳಿ ಮೇಲಿನ ನಂಬಿಕೆಯನ್ನು ದೃಢಗೊಳಿಸಿದ್ದೂ ಅದೇ ಆಂದೋಲನ. ನಂತರ ಹೆಗ್ಡೆಯವರು ತಮ್ಮ ಅಭಿಪ್ರಾಯ ಬದಲಿಸಿಕೊಂಡು ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟರು. ಅದು ಅವರ ಪ್ರಜಾತಂತ್ರದ ಮೇಲಿನ ಪ್ರೀತಿಯ ದ್ಯೋತಕವೂ ಹೌದು. ಅಂದಿನಿಂದ ಅವಧಿ ಮುಗಿಯುವವರೆಗೂ ದಾಳಿ ನಿಲ್ಲಿಸಲಿಲ್ಲ. ಬಹಳ ಸೂಕ್ಷ್ಮವಾಗಿ ಗಮನಿಸುವುದಾದರೆ ಹೆಗ್ಡೆಯವರ ನೇತೃತ್ವದ ದಾಳಿಗೂ, ವೆಂಕಟಾಚಲರ ನೇತೃತ್ವದ ದಾಳಿಗೂ ಸಣ್ಣದೊಂದು ವ್ಯತ್ಯಾಸವಿದೆ. ಹೆಗ್ಡೆಯವರ ತಂಡ ದಾಳಿ ನಡೆಸುವ ಮುನ್ನ ಮಾಡುತ್ತಿದ್ದ ಹೋಂ ವರ್ಕ್ ಅನನ್ಯ. ಬಹಳ ವ್ಯವಸ್ಥಿತವಾಗಿ ಮಾಹಿತಿ ಕಲೆಹಾಕಿ ಆದಷ್ಟು ದೊಡ್ಡ ದೊಡ್ಡವರನ್ನೇ ಹಿಡಿಯುವಲ್ಲಿ ಯಶಸ್ವಿಯಾದುದು ಸುಳ್ಳಲ್ಲ. ಒಂದು ಮಾದರಿಯ ಗೆರಿಲ್ಲಾ ದಾಳಿಯಂತೆ ಸದ್ದಿಲ್ಲದೇ ಬಲೆ ಬೀಸಿ ಬಿಡುತ್ತಿದ್ದರು. ಹಾಗಾಗಿ ದೊಡ್ಡ ಪ್ರಚಾರ ಪಡೆಯುವುದಕ್ಕಿಂತ ಮಾಧ್ಯಮಗಳಲ್ಲೇ ಪ್ರಚಾರ ಸಿಗುತ್ತಿತ್ತು.

ಅವಧಿಯ ಕೊನೆ ಪ್ರಸಂಗ ಮತ್ತು ಜನ್‌ಲೋಕಪಾಲದ ಸದಸ್ಯರಾಗಿ ನಿರ್ವಹಿಸಿದ ಅವರ ಪಾತ್ರವನ್ನು ಉಲ್ಲೇಖಿಸಲೇಬೇಕು. ಜನ್ ಲೋಕಪಾಲ್‌ನಲ್ಲಿ ಜನರ ಧ್ವನಿಯಾಗಿದ್ದ ಅವರು, ಗಣಿ ಹಗರಣದಲ್ಲೂ ಭಿನ್ನವಾಗಿರಲಿಲ್ಲ. ಗಣಿ ಹಗರಣದ ವರದಿ ಯಾರ‍್ಯಾರ ತಲೆ ತೆಗೆಯಬಹುದೆಂದು ಅಂದಾಜಿಸಿ, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ನಡೆಸಿದ ಕುತಂತ್ರ ಗಣಿ ವರದಿಯ ಸೋರಿಕೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಆಗಲೂ ಅವರ ನೆರವಿಗೆ ಬಂದಿದ್ದು ಜನ ಅವರ ಮೇಲಿಟ್ಟುಕೊಂಡ ನಂಬಿಕೆಯೇ. ರಾಜಕಾರಣಿಗಳನ್ನು ಕಟ್ಟಿ ಹಾಕಿದ್ದು ಅದೇ. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟರು. ಈಗ ಜೈಲಿಗೆ ಹೋಗುವ ಭೀತಿ ಹಲವರನ್ನು ಕಾಡುತ್ತಿದೆ.

ಗಣಿ ವರದಿ ಸೋರಿಕೆಯಾದ ದಿನ ಮಾಧ್ಯಮಗಳೆದುರು ಹೆಗ್ಡೆಯವರು ಕಣ್ಣೀರು ಹಾಕಿದ್ದು ಮಾತ್ರ ಎಲ್ಲರನ್ನೂ ಕಲಕುವಂತೆ ಮಾಡಿತು. ಒಬ್ಬ ಪ್ರಾಮಾಣಿಕನನ್ನು ಇಡೀ ವ್ಯವಸ್ಥೆ ವ್ಯವಸ್ಥಿತವಾಗಿ ಮುಗಿಸಿಬಿಡುವ ಪ್ರಯತ್ನವದು. ಸೋರಿಕೆಯಾದದ್ದು ಅವರಿಗೆ ತಂದ ದುಃಖಕ್ಕಿಂತ ತಮ್ಮ ಪ್ರಯತ್ನವನ್ನು ವಿಫಲಗೊಳಿಸುವ ಹುನ್ನಾರ ಅವರಿಗೆ ನೋವು ತಂದಿರಬೇಕು. ಈಗ ಸಿಕ್ಕ ಸಿಕ್ಕ ಅವಕಾಶವನ್ನೆಲ್ಲಾ ತಮ್ಮ ಮೂಗಿನ ನೇರಕ್ಕೆ ಎಳೆದುಕೊಂಡು ಸ್ವಾರ್ಥಿಗಳಾದ, ಭ್ರಷ್ಟರಾದವರು ಮತ್ತೆ ‘ಅವರ ಕಥೆಯೇ ಬೇರೆ. ಅದೆಲ್ಲಾ ಸದ್ಯವೆ ಬಹಿರಂಗಗೊಳ್ಳುತ್ತದೆ’ ಎನ್ನುತ್ತಾ ತಿರುಗತೊಡಗಿದ್ದಾರೆ. ಹೀಗೆ ತಿರುಗುತ್ತಿರುವವರಲ್ಲಿ ಬರಿದೇ ರಾಜಕಾರಣಿಗಳಿಲ್ಲ, ಅಧಿಕಾರಿಗಳಿಲ್ಲ. ಇಂತಹ ಭ್ರಷ್ಟರಿಗೆ ಹತ್ತಿರವಾದ ಮಾಧ್ಯಮದವರೂ ಇದ್ದಾರೆ. ಏನೂ ಮಾಡುವಂತಿಲ್ಲ, ಮೊಸರಿನಲ್ಲಿ ಕಲ್ಲು ಹುಡುಕುವ ಮಂದಿಗೆ ಬುದ್ಧಿ ಹೇಳಲಾಗದು.

ಒಂದು ಮಾತಂತೂ ಅರ್ಥಪೂರ್ಣವಾದುದು. ಲೋಕಾಯುಕ್ತಕ್ಕೆ ಗುಡುಗಲೂ ಧ್ವನಿಯಿದೆ ಎಂಬುದು ಸಾಬೀತಾಗಿದೆ ಜತೆಗೆ ಕಚ್ಚಲು ಹಲ್ಲಿದೆಯೆಂಬುದೂ ಸಹ. ಪದವಿಗಾಗಿ ಬಣಗಳ ಶಕ್ತಿ ಪ್ರದರ್ಶನವಾಗುತ್ತಿರುವ ಹೊತ್ತಿನಲ್ಲಿ ಸಂತೋಷ್ ಹೆಗ್ಡೆಯವರ ಶಕ್ತಿ ಪ್ರದರ್ಶನವನ್ನು ಮೆಚ್ಚಲೇಬೇಕು. ಅವರಿಗೆ ಧನ್ಯವಾದಗಳು.

Advertisements

2 thoughts on “ಲೋಕಾಯುಕ್ತರಿಗೆ ಧನ್ಯವಾದಗಳು

  1. ಲೋಕಾಯುಕ್ತರಿಗೆ ಹೊಸಭಾಷ್ಯ ಬರೆದವರು ಎನ್.ಸಂತೋಷ್ ಹೆಗ್ಡೆಯವರು , ಭ್ರಷ್ಟರಾಜಕಾರಣಿಗಳನ್ನು ಶಿಕ್ಷಿಸುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಗಣಿ ವರದಿ, ವರದಿ ಸಲ್ಲಿಸಿದ್ದಾರೆ ನಿಜ ಆದರೆ ವರದಿಯಂತೆ ಗಣಿ ಹಗರಣದಲ್ಲಿನ ಭ್ರಷ್ಚಾಚಾರಿಗಳಿಗೆ ಶಿಕ್ಷೆಯಾದಾಗಲೆ ಹೆಗ್ಡೆಯವರ ಶ್ರಮಕ್ಕೆ ಸಾರ್ಥಕತೆ ಬರುತ್ತದೆ ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಲೋಕಾಯುಕ್ತಕ್ಕೆ ಒಂದು ಗೌರವರ ಬರುತ್ತದೆ. ಹಳೆಯ ವರಿದಿಗಳಂತೆ ಈ ವರದಿಯೂ ಮೂಲೆಗುಂಪಾದರೆ ಎಂಬ ಭಯ ಜನತೆಯಲ್ಲಿದೆಯಾದರೂ ಅಪರಾಧಿಗಳು ಶಿಕ್ಷೆಯಾಗುವದೆಂಬ ನಂಬಿಕೆಯು ಉಳಿದಿದೆ. ಲೋಕಾಯುಕ್ತರ ಈ ಪ್ರಯತ್ನಕ್ಕೆ ನಾವೆಲ್ಲರೂಶುಭಹಾರೈಸಲೇ ಬೇಕು ಸರ್, ನೂತನ ಲೋಕಾಯುಕ್ತ ಶಿವರಾಜ್ ಪಾಟೀಲ್ ರಾಜ್ಯದಲ್ಲಿನ ಮತ್ತಷ್ಟು ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವರೆ ಕಾದು ನೋಡಬೇಕು.

  2. ನಿಜ ನವೀನ್ ಕುಮಾರ್,

    ಆದರೆ ಇದುವರೆಗೆ ಇಂತಹದೊಂದು ಆಶಾಕಿರಣವೂ ಇರಲಿಲ್ಲ. ಆದರೀಗ ಪರವಾಗಿಲ್ಲ, ದೊಡ್ಡ ವಿಕೆಟ್ ಬಿತ್ತಲ್ಲ. ಇನ್ನು ಜನರೂ ಸ್ವಲ್ಪ ಕ್ರಿಯಾಶೀಲರಾಗಬೇಕು. ಮಂತ್ರಿ ಮಹೋದಯರು ಸಿಕ್ಕಸಿಕ್ಕಲ್ಲಿ “ಗಣಿ ವರದಿ ಏನ್ ಮಾಡಿದ್ರಿ?’ ಅಂತಾ ಕೇಳ್ತಾ ಇರ್ಬೇಕು. ಅವರಿಗೆ ತಲೆ ಚಿಟ್ ಅನ್ನಿಸುವಂತಾಗಬೇಕು. ಆಗ ಇನ್ನೊಂದಿಷ್ಟು ಕ್ರಮ ಸಾಧ್ಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s