ಒಂದು ಮುಂಜಾನೆ, ಒಂದು ಕುನ್ನಕುಡಿ, ಒಂದು ಗಂಟೆಯ ಆಟ ಹಾಗೂ….

ಆರು ತಿಂಗಳಿಂದ ನನಗೆ ಭಾನುವಾರದ ಬೆಳಗ್ಗೆಯಾಗುವುದು ಸಂಪಾಜೆ ದಾಟಿದ ಮೇಲೋ, ಸಕಲೇಶಪುರ ದಾಟಿ ಚಾರ್ಮಾಡಿ ಮುಟ್ಟಿದಾಗಲೋ. ಸಾಮಾನ್ಯವಾಗಿ ಪ್ರತಿ ಶನಿವಾರ ರಾತ್ರಿ ಊರಿಗೆ ಹೊರಡುತ್ತೇನೆ. ಅಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಅಮ್ಮ. ರಾತ್ರಿ ಹನ್ನೊಂದುವರೆ ಬಸ್ಸಿಗೆ ಹತ್ತಿದರೆ ಬೆಳಗ್ಗೆ ಆರರ ಹೊತ್ತಿಗೆ, ಕಂಡಕ್ಟರ್ “ಸಾರ್, ಮಾಣಿ ಬಂತು’ ಎನ್ನುತ್ತಾರೆ. ಇಳಿದು, 6.15 ಬಸ್ಸಿಗೆ ಕಾಯಬೇಕು, ಎಲ್ಲ ಮುಗಿದು ಮನೆಗೆ ಮುಟ್ಟುವಾಗ 7.30. ಮಗಳು ಒಂದು ಮಗ್ಗಲು ಬದಲಾಯಿಸಿರುತ್ತಾಳೆ (ಅಂಥ ಮಗ್ಗುಲು ಎಷ್ಟೋ ಬದಲಾಯಿಸುತ್ತಾಳೆ ರಾತ್ರಿ, ನೀವಿಲ್ಲದಿದ್ದರೆ ನಮಗೆ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ನನ್ನ ಹೆಂಡತಿ ಮತ್ತು ಅಮ್ಮ ದೂರುತ್ತಲೇ ಇರುತ್ತಾರೆ). ‘ಅಪ್ಪನ ಎದುರೇ ಬೇರೆ ವೇಷ, ನಮ್ಮ ಎದುರೇ ಇನ್ನೊಂದು ವೇಷ’ ಎಂಬ ಆರೋಪವೂ ನನ್ನ ಮಗಳ ಮೇಲಿದೆ. ನನ್ನ ಬಳಿ ಬಾಲಗೋಪಾಲದ ಬಾಲೆಯರು, ಅವರ ಬಳಿ ರಾಕ್ಷಸ ವೇಷ..ಹ್ಹ..ಹ್ಹ..ಹ್ಹ

ನಿನ್ನೆಯ ಭಾನುವಾರಕ್ಕೆ ಬೇರೆಯದೇ ಖದರಿತ್ತು. ಮೈಸೂರಿಗೆ ಬಂದು ನಾಲ್ಕು ವರ್ಷಗಳಾದವು. ಚಾಮುಂಡಿ ಬೆಟ್ಟಕ್ಕೂ ಹಲವು ಬಾರಿ ಭೇಟಿ ನೀಡಿದ್ದೇನೆ. ಆದರೆ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಹೋಗಿರಲಿಲ್ಲ. ಸುರೇಶಣ್ಣರಿಗೆ ಪ್ರತಿ ಭಾನುವಾರ ಚಾಮುಂಡಿ ಬೆಟ್ಟ ಹತ್ತುವ ಹುಚ್ಚು. ಜತೆಗೆ ಮಾಳವಿಕಾ ಅಕ್ಕ, ಸಂತೋಷಣ್ಣ ಮತ್ತು ಅವರ ಪತ್ನಿಯರದ್ದೂ ಸಾಥ್. ಅದರಂತೆ “ನೀವು ಬರುವುದಿದ್ದರೆ ಬನ್ನಿ’ ಎಂದು ಆಹ್ವಾನ ಕೊಟ್ಟರು. ಸರಿ, ಯಾವುದಕ್ಕೂ ಇರಲಿ ಎಂದು ಬೆಳಗ್ಗೆ 4.30 ಕ್ಕೆ ಎದ್ದು, ಸ್ನಾನ ಮುಗಿಸಿ 5. 15 ಕ್ಕೆ ತಪ್ಪಲಲ್ಲಿದ್ದೆವು. 1, 200 ಮೆಟ್ಟಿಲುಗಳು. ಇಡೀ ರಸ್ತೆಗೆ ಇರುವುದು ಎರಡೇ ಟ್ಯೂಬ್ ಲೈಟ್ ಗಳು. ನಾವೇ ಬೇಗ ಎಂದು ಹೋದ ನನಗೆ, ಅಲ್ಲಿ ಹತ್ತುತ್ತಿದ್ದ ಮಂದಿ ಕಂಡು ಅಚ್ಚರಿಯೂ ಆಗಿತ್ತು.

ನಿಜ, ಮೊದಲ ಬಾರಿಗೆ ಇಷ್ಟೊಂದು ಮೆಟ್ಟಿಲು ಹತ್ತುತ್ತಿರುವುದು. ಅದರಲ್ಲೂ ಬೆಟ್ಟದ ಮೆಟ್ಟಿಲುಗಳು ಕಲ್ಲನ್ನು ಕಡೆದು ನಿರ್ಮಿಸಿರುವುದರಿಂದ ಒಂದೇ ಮಾದರಿಯಲ್ಲಿ ಇಲ್ಲ. ಕೆಲವೊಂದು ಎತ್ತರ, ಕೆಲವೊಂದು ಹತ್ತಿರ, ಕೆಲವೊಂದು ಬಹಳ ಆಳವಾದದ್ದು…ಹೀಗೆ ತರಹೇವಾರಿ ಮೆಟ್ಟಿಲುಗಳು. ಹತ್ತತೊಡಗಿದೆವು…ಮೊದಲೇನೋ ಹುಮ್ಮಸ್ಸು…200 ಮೆಟ್ಟಿಲು ದಾಟಿದಾಗ ಹುಟ್ಟಿಕೊಂಡಿತು ನಿರಾಕರಣೆಯ ನೆಲೆ. 300 ದಾಟಿದಾಗ, ಮೇಲೆ ಕತ್ತೆತ್ತಿ ನೋಡಿದೆ. ಇನ್ನೂ ಮುಗಿದದ್ದು ಕಾಲು ಎಂದರು ಸಂತೋಷಣ್ಣ. ಅದೂ ಇದೂ ಮಾಡಿ ಕೊನೆಗೂ ಅರ್ಧ ಕ್ರಮಿಸಿದಾಗ ಸಿಕ್ಕ ಉತ್ಸಾಹದ ಸಾಲೆಂದರೆ, ‘ಮುಂದೆ ಇಷ್ಟು ಕಷ್ಟವಿಲ್ಲ’ ಎಂಬುದು. ಎಲ್ಲ ಮುಗಿದು ಮೇಲೇರಿದಾಗ ಸಿಕ್ಕ ಸಂತೋಷವೇ ಬೇರೆ.

ನಮ್ಮೆದುರು ಇರುವ ಪ್ರಪಂಚವನ್ನು ನೋಡದೇ, ಇನ್ನೆಲ್ಲೋ ಸುತ್ತಾಡಲಿಕ್ಕೆ ಹೋಗ್ತೇವೆ ಎನ್ನಿಸಿದ್ದೂ ನಿನ್ನೆಯೇ. ಬೆಟ್ಟ ಹತ್ತಲಿಕ್ಕೆ ಎಂಥೆಂಥವರು ಬರುತ್ತಾರೆ. ನಮ್ಮೆಲ್ಲರ ಅಜ್ಜ ಎನ್ನಬಹುದಾದವರು, ಹೊಸ ತರುಣರು, ಅವರ ಮಧ್ಯೆ ನಾವು ಹೀಗೆ ಹವ್ಯಾಸಿಗಳು…ತರಹೇವಾರಿ ಮಂದಿ. 7 ರೊಳಗೆ ಹತ್ತ ತೊಡಗುವವರು ಆರೋಗ್ಯದ ಪ್ರತಿಪಾದಕರು, ನಂತರ ಹತ್ತುವವರು ಭಕ್ತಿಯ ಪ್ರತಿಪಾದಕರು. ಈ ಅಂಶ ಸ್ಪಷ್ಟವಾಗಿ ಗೋಚರವಾಗುತ್ತೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಅದಕ್ಕೆ ಸಣ್ಣದೊಂದು ಉದಾಹರಣೆ ನೋಡಿ.

ಎಲ್ಲ ಮುಗಿಸಿ 7 ರ ಹೊತ್ತಿಗೆ ಕೆಳಗಿಳಿಯತೊಡಗಿದೆವು. ಹೊಸದಾಗಿ ಮದುವೆಯಾದವರು, ಪರೀಕ್ಷೆಗೆ ಹೊರಟ ವಿದ್ಯಾರ್ಥಿನಿಯರು, ದೇವಿಯ ಆಶೀರ್ವಾದ ಪಡೆಯಲು ಬಂದಿರುವ ಇನ್ನೇನು ಮದುವೆಯಾಗಲಿರುವವರು, ಯಾವುದೋ ಹರಕೆ ಹೊತ್ತ ಭಕ್ತಾದಿಗಳು…ಹೀಗೆ ಸಾಲಿನ ಮಧ್ಯೆ ಒಂದಿಷ್ಟು ಮಹಿಳೆಯರು ಕೈಯಲ್ಲಿ ಕುಂಕುಮ ಅರಿಶಿನ ಹಿಡಿದು ಪ್ರತಿ ಮೆಟ್ಟಿಲಿಗೆ ಹಚ್ಚಿಕೊಳ್ಳುತ್ತಾ ಹೋಗುತ್ತಿರುವವರು. ಅವರಲ್ಲೂ ತರಹೇವಾರಿ ಜನ. ಮೇಲಿಂದ ಕೆಳಗಿಳಿಯವಾಗ ಮೂರು ತರಹದ ಮಂದಿ ಕಂಡೆವು. ಒಬ್ಬರು ತಮ್ಮಷ್ಟಕ್ಕೆ ಭಕ್ತಿಯಿಂದ ಬದಿಯಲ್ಲಿ ಹಚ್ಚಿಕೊಂಡು ಹೋಗುತ್ತಿದ್ದರು. ಮತ್ತೊಬ್ಬರದೂ ಹಾಗೆಯೇ ಮೆಟ್ಟಿಲಿನ ಮಧ್ಯಕ್ಕೆ ಯಾರ ಸಹಾಯವೂ ಇಲ್ಲದೇ, ತಮ್ಮಷ್ಟಕ್ಕೆ ಕತ್ತೆತ್ತಿ ಸಹ ನೋಡದೇ ಕಾಯಕದಲ್ಲಿ ಮುಳುಗಿದ್ದರು. ಇನ್ನೊಬ್ಬರದು ಸ್ವಲ್ಪ ಭಿನ್ನ. ಸುತ್ತಲೂ ಸಮೂಹ, ಜತೆಗೆ ತಮಾಶೆ ಮಾಡಿಕೊಂಡು ಹಚ್ಚಿಕೊಂಡು ಹೋಗುತ್ತಿದ್ದರು. ಇದರಲ್ಲಿ ಯಾವುದು ಭಕ್ತಿ, ಯಾವುದು ಅಲ್ಲ ಎಂಬುದರ ಚರ್ಚಗೆ ಹೋಗುವುದಿಲ್ಲ.

ಇವರೆಲ್ಲರ ಮಧ್ಯೆ ಜಗತ್ತಿಗೆ ಕೇಳಿಸುವಂತೆ ತಮ್ಮ ಮೊಬೈಲ್ ನಲ್ಲಿ ಸಂಗೀತ ಹಾಕಿಕೊಂಡು ಹೋಗುತ್ತಿರುವವರೂ ಇದ್ದಾರೆ, ಇನ್ನೂ ಕೆಲವು ಮೆಟ್ಟಿಲು ವಿಹಾರಿಗಳು ಕಿವಿಗೆ ಶ್ರವ್ಯ ಉಪಕರಣ ಹಾಕಿಕೊಂಡು, ಮುಖ ಗಂಟಿಕ್ಕಿಕೊಂಡು ಹೋಗುತ್ತಿರುತ್ತಾರೆ, ಅವರ ಮಧ್ಯೆ ಛಲದಂಕ ಮಲ್ಲರಾಗಿ ಒಂದೊಂದೇ ಮೆಟ್ಟಿಲು ಇಳಿಯುತ್ತ, ಹತ್ತುತ್ತಾ ಇರುವ ವೃದ್ಧರೂ ಇರುತ್ತಾರೆ. ಅವರ ಆತ್ಮವಿಶ್ವಾಸಕ್ಕೆ ಮೆಚ್ಚಬೇಕು. ನಾವು ಹೀಗೆ ಹೋಗುತ್ತಿರುವಾಗ ಒಬ್ಬರು ವ್ಯಕ್ತಿ (ಸಂತೋಷಣ್ಣನ ಗೆಳೆಯರು) ಪರಿಚಯವಾದರು. ನಾವು ಮೇಲೆ ಹೋಗಿ ಕೆಳಗಿಳಿಯುವಷ್ಟರಲ್ಲಿ ಮೂರು ಬಾರಿ ಹತ್ತಿ ಇಳಿದರು…ನಿಜಕ್ಕೂ ಸಾಹಸವೇ.

ಹೊಸ ಅನುಭವ ನೀಡಿದ ಮುಂಜಾನೆಯದು…
***

ಕುನ್ನಕುಡಿ ವೈದ್ಯನಾಥನ್ ನನಗೆ ಇಷ್ಟವಾದ ಪಿಟೀಲು ವಾದಕರು. ಅವರ ಮೇಲಿನ ಎಲ್ಲ ಟೀಕೆಗಳನ್ನೂ ಬದಿಗೆ ಸರಿಸಿ, ಅವನನ್ನು ಒಪ್ಪಿಕೊಳ್ಳುತ್ತೇನೆ. ಕಾರಣವಿಷ್ಟೇ, ಅವರಂತೆ ಸಂಗೀತವನ್ನು ದಕ್ಕಿಸಿಕೊಂಡವರು ಕಡಿಮೆ. ತನ್ನ ಮೂಗಿಗೆ ನೇರವಾಗಿ ಮಾತನಾಡುವುದು ಸಮಯಸಾಧಕತನ ಎನಿಸಬಹುದು. ನನಗೆ ತನಗೆ ತಕ್ಕಂತೆ ಸಂಗೀತ ಉಪಕರಣವನ್ನು ದುಡಿಸಿಕೊಳ್ಳುವುದು ಹಾಗೆ ಎನಿಸುವುದಿಲ್ಲ. ಒಂದು ಪಿಟೀಲನ್ನು ತನ್ನದೇ ಲಯದಲ್ಲಿ ಕುಣಿಸಿದವರು ಕುನ್ನಕುಡಿ. ಈ ಮಾತನ್ನು ಸರ್ವಥಾ ಒಪ್ಪಲೇಬೇಕು.

ಬೆಂಗಳೂರಿನಲ್ಲಿದ್ದಾಗ ರಾಮನವಮಿ ಸಂಗೀತೋತ್ಸವದ ಸಂದರ್ಭದಲ್ಲಿ ಅವರ ಪ್ರತಿ ಕಛೇರಿಯನ್ನೂ ಕೇಳಿದವನು ನಾನು. ಕುನ್ನಕುಡಿ ಶಾಸ್ತ್ರೀಯತೆಯನ್ನು ಹಾಳು ಮಾಡುತ್ತಾರೆ ಎಂದು ಟೀಕಿಸುವ ಸಾಂಪ್ರದಾಯಕ ಮನಸ್ಸಿನವರೂ ಬೇಕಾದಷ್ಟು ಮಂದಿ ಇದ್ದಾರೆ. ಅವರದ್ದು ಸಂಗೀತವೇ ಎಂದು ಕೇಳುವವರೂ ಇದ್ದಾರೆ. ಅಂಥ ಟೀಕೆಗಳು ಪ್ರತಿ ಸಂದರ್ಭದಲ್ಲೂ ಇದ್ದೇ ಇರುತ್ತವೆ, ಕಾರಣ ಶೇ. 90 ರಷ್ಟು ಬಾರಿ ಅವೆಲ್ಲವೂ ಹುಟ್ಟಿಕೊಳ್ಳುವುದು ವ್ಯಕ್ತಿಯ ನೆಲೆಯಲ್ಲೇ ಹೊರತು ಪ್ರತಿಭೆಯ ನೆಲೆಯಲ್ಲಲ್ಲ. ಅದು ಖಚಿತವಾದದ್ದು.

ಒಬ್ಬ ಸಂಗೀತಗಾರನಿಗೆ ತನ್ನ ಕಲಾ ಪ್ರದರ್ಶನ ಅಥವಾ ಪ್ರತಿಭೆಯ ಪ್ರದರ್ಶನ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವೆಂದರೆ ಪರಂಪರೆಯ ಗಂಗಾನದಿಯನ್ನು ಸದಾ ಹರಿಯುವಂತೆ ನೋಡಿಕೊಳ್ಳುವುದು. ಹೊಸ ಹೊಸ ತಲೆಮಾರುಗಳನ್ನು ಒಳಗೊಳ್ಳದಿದ್ದರೆ ಪರಂಪರೆ ಬೆಳೆಯುವುದಿಲ್ಲ, ಹರಿಯುವ ನದಿಯ ಮಾನ್ಯತೆ ಪಡೆಯುವುದಿಲ್ಲ, ಕೊಚ್ಚೆಗುಂಡಿಯಂತಾಗಿ ಬಿಡುತ್ತದೆ. ಈ ಎಚ್ಚರ ಇಟ್ಟುಕೊಂಡವನು ಮಾತ್ರ ಪರಂಪರೆಯನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಬಲ್ಲ. ಕುನ್ನಕುಡಿ ಅಂಥ ಸಾಲಿನಲ್ಲಿರುವವರು. ಹೊಸ ತಲೆಮಾರನ್ನು ಆಕರ್ಷಿಸುವತ್ತ ಅವರಿಗಿದ್ದ ಆಸ್ಥೆ ಪ್ರತಿ ಕಛೇರಿಯಲ್ಲೂ ತೋರುತ್ತಿತ್ತು. ಚಾಮರಾಜಪೇಟೆಯ ಅಂದಿನ ಕಚೇರಿಯಲ್ಲಿ ಒಂದೂವರೆಗಂಟೆ ಶಾಸ್ತ್ರೀಯವಾಗಿ ನುಡಿಸಿದ ಮಹಾಶಯ, 9. 30 ಸುಮಾರಿನಲ್ಲಿ ಇನ್ನು ಮುಂದಿನ ನನ್ನ ಪ್ರದರ್ಶನ ಹೊಸಬರಿಗೆ ಎಂದು ಘೋಷಿಸಿಯೇ ಬಿಟ್ಟ.

ಇದ್ದಕ್ಕಿದ್ದಂತೆ ಆಗತಾನೇ ಬಿಡುಗಡೆಗೊಂಡು ಎರಡು ದಿನವಾಗಿದ್ದ ಹಿಂದಿ ಚಿತ್ರದ ಒಂದು ಹಿಟ್ ಗೀತೆ (ಝರಾ…ಝರಾ…) ತೇಲಿಬಂದಿತು ಪಿಟೀಲಿನಲ್ಲಿ. ಜನರೆಲ್ಲಾ ದಂಗಾದರು, ಶಾಸ್ತ್ರೀಯ ಮನಸ್ಥಿತಿಯವರೆಲ್ಲಾ ಹೊರಟು ನಿಂತರು. ಹಿಂದೆ ಕುಳಿತಿದ್ದ ಯುವ ಸಮೂಹ ಹತ್ತಿರವಾಯಿತು. ಅವರನ್ನು ನೋಡಿಕೊಳ್ಳುತ್ತಾ ಆ ಮಹಾಶಯ, ಮತ್ತೆ ಒಂದು ಗಂಟೆ ನುಡಿಸಿದ. ಪ್ರದರ್ಶನ ಮುಗಿಯುವಾಗ 10.30, ಜೋರಾದ ಚಪ್ಪಾಳೆ….ಇದ್ದದ್ದೆಲ್ಲಾ ಯುವ ಸಮೂಹವೇ. ಈಗಲಂತೂ ಸದಾ ಕೇಳಿಬರುತ್ತಿರುವ ಟೀಕೆಯೆಂದರೆ, “ಯುವ ತಲೆಮಾರಿಗೆ ಬರೀ ಡಿಸ್ಕೊ ಬೇಕು’ ಎಂಬುದು. ಹಾಗೇನೂ ಇಲ್ಲ, ತನ್ನ ಹುಮ್ಮಸ್ಸಿಗೆ ತಕ್ಕಂತೆ ಆರಿಸಿಕೊಳ್ಳುತ್ತಾರೆ. ಆದರೆ, ಅದೇ ನೆಲೆಯಲ್ಲಿ ಹೋಗಿ ಅವರನ್ನು ಪಕ್ಕದ ದಾರಿಗೆ ಕರೆದುಕೊಂಡು ಹೋಗಬೇಕಾದದ್ದು ಹಿರಿಯರ ಕೆಲಸ. ಅದನ್ನು ಸಮರ್ಥವಾಗಿ ಮಾಡುತ್ತಿದ್ದವರು ಕುನ್ನಕುಡಿ. ಅದಕ್ಕೆ ಉದಾಹರಣೆಯೆಂದರೆ ನಾನೂ ಒಬ್ಬ.

ಹೀಗೆ ಯಾಕೋ ಕುನ್ನಕುಡಿ ಬಹಳ ನೆನಪಾದರು. ಅವರ ಸಂಗೀತವೆಂದರೆ ಮೆರವಣಿಗೆ ಹೊರಟಂತೆ. ನನಗೆ ಅಂಥ ಸಂಭ್ರಮ ಬಹಳಷ್ಟು ಬಾರಿ ತೋರುವುದಿಲ್ಲ. ಮನೆಗೆ ಬಂದು ಅವರದೊಂದಿಷ್ಟು ಸಂಗೀತ ಕೇಳಿದೆ. ಮನಸ್ಸು ಉಲ್ಲಸಿತಗೊಂಡಿತು. ಅವರ ಮ್ಯಾನರಿಸಂ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ, ಮಹಾನ್ ಪ್ರತಿಭೆಗೆ ಜೈ.