ಬೆಳೆದು ನಿಂತ
ಚಿಗುರಿಗೀಗ
ಹರಯ
ಸೂರ್ಯನನ್ನೇ
ಮಣಿಸುವ
ಹುಮ್ಮಸ್ಸು
ಅದಕ್ಕೇ
ತಲೆ ತಗ್ಗಿಸಿ
ತನ್ನ ಪಾದವನ್ನೂ
ನೋಡಿಕೊಳ್ಳುವಷ್ಟೂ
ಪುರಸೊತ್ತಿಲ್ಲ !
***
ಎಂದೋ
ಹೊರಟಿದ್ದ
ಸಮುದ್ರದ ಮೊದಲ
ಅಲೆ
ದಡವನ್ನು ಅಪ್ಪಿದ
ಅನುಭವವನ್ನು
ಮತ್ತೊಂದು ಅಲೆಯೊಂದಿಗೆ
ಹಂಚಿಕೊಂಡಿತು
ಅಮ್ಮನನ್ನು
ಅಪ್ಪಿಕೊಂಡ ಹಾಗೆ
***
ಅಲೆ
ಸೂರ್ಯನನ್ನು
ಪ್ರೀತಿಸಿತು
ಸೂರ್ಯ
ಅವಳನ್ನು
ವರಿಸಿದ
ಅವರ
ಮಕ್ಕಳು
ಧರೆಗಿಳಿದರು
ಮಳೆ ಜೋರಾಯಿತು !
***
ಗೋಡೆಯನ್ನು
ಗೀಚುತ್ತಿದ್ದ
ಪುಟ್ಟ ಮಗು
ದೊಡ್ಡದೊಂದು
ಗೋಳ ಹಾಕಿ
ಮೂಗು, ಕಣ್ಣು
ಬರೆದು
ಇವಳು ನನ್ನಮ್ಮ
ಎಂದು ಕರೆದ
ಮನೆಗೆ
ಹೊಸ ಅಮ್ಮ
ಬಂದಳು !
***
ಮಗುವಿಗೆ
ಏನಾದರೂ ಕಲಿಸಿ ಕೊಡಿ
ದೊಡ್ಡವನಾಗುವುದೊಂದನ್ನು
ಬಿಟ್ಟು
***