ವಿಶ್ವಕನ್ನಡ ಸಮ್ಮೇಳನಕ್ಕೆ ಮೂರು ದಿನ ಇರುವಾಗ ಆ ವ್ಯವಸ್ಥೆಯೊಳಗಿನ ಅಪಸವ್ಯಗಳನ್ನು ಪಟ್ಟಿ ಮಾಡುತ್ತಲೇ ಯಾವ ಕಾರಣಕ್ಕೆ ಸಮ್ಮೇಳನ ಯಶಸ್ವಿಯಾಗಬೇಕೆಂಬುದನ್ನು ಇಲ್ಲಿ ವಿವರಿಸಿದ್ದೇನೆ. ಓದಿ, ಅಭಿಪ್ರಾಯಿಸಿ.

ವಿಶ್ವಕನ್ನಡ ಸಮ್ಮೇಳನಕ್ಕಿರುವುದು ಇನ್ನು ಮೂರೇ ದಿನ. ಮಾರ್ಚ್ ೧೧ ರಂದು ಬೆಳಗಾವಿಯಲ್ಲಿ ಕನ್ನಡದ ಧ್ವಜ ಅರಳಬೇಕು. ಮೂರು ದಿನದ ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಸರಕಾರದ್ದು. ಆದರೆ ಅಂಥ ಸಂಭ್ರಮವೇನೂ ಎಲ್ಲೂ ತೋರಿ ಬರುತ್ತಿಲ್ಲವೆನ್ನುವುದು ವಿಷಾದನೀಯ.

೭೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದದ್ದು, ಅದಕ್ಕೆ ಸಿಕ್ಕ ಯಶಸ್ಸು, ಹರಿದು ಬಂದು ಜನಸಾಗರ…ಎಲ್ಲವನ್ನೂ ಕಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ‘ವಿಶ್ವ ಕನ್ನಡ ಸಮ್ಮೇಳನ’ ನಡೆಸಿಯೇ ತೀರಬೇಕೆಂಬ ಹಠ ಶುರುವಾಯಿತು. ಆ ಮೂಲಕ ಒಂದಿಷ್ಟು ರಾಜಕಾರಣದ ಲಾಭ ಎಂದರೆ ಕೀರ್ತಿ ಪಡೆಯುವ ಆಸೆ. ಅದಕ್ಕಾಗಿ ಇದುವರೆಗಿನ ಸಿದ್ಧತೆಯ ಬಗ್ಗೆ ಚೂರೂ ಮಾಹಿತಿ ಪಡೆಯದೇ ಎರಡು ದಿನದ ನಂತರ ಏಕಾಏಕಿ ಶಿಸ್ತಾಗಿ ಅಧಿಕಾರಿಗಳ ಸಭೆ ಕರೆದು (ಸಮ್ಮೇಳನಕ್ಕೆ ಸಂಬಂಧಪಟ್ಟ ಹಾಗೂ ಬೆಳಗಾವಿಯ ಸ್ಥಳೀಯ)‘ನೀವು ಏನಾದರೂ ಮಾಡಿ. ಮಾರ್ಚಿಯಲ್ಲಿ ಸಮ್ಮೇಳನ ನಡೆಯಲೇಬೇಕು’ ಎಂದು ಫರ್ಮಾನು ಹೊರಡಿಸಿದರು. ಅದಕ್ಕಾಗಿ ವಿಶೇಷಾಧಿಕಾರಿಯನ್ನು ಕರೆತಂದರು. ವಿಚಿತ್ರವೆಂದರೆ ಅದುವರೆಗೆ ಹೊಣೆ ಹೊತ್ತ ಇಲಾಖೆಯ ಮಂದಿ ಮಾಡಿದ್ದೇನೆಂದು ಕೇಳುವ ಗೋಜಿಗೆ ಹೋಗಲಿಲ್ಲ.

ನಮ್ಮ ಮುಖ್ಯಮಂತ್ರಿಯವರಿಗೆ ‘ತಮ್ಮ ಮಂದಿ’ಯವರೇ ಇರಬೇಕು. ನಂಬಿಕೊಂಡು ಸುಮ್ಮನಿದ್ದುಬಿಡ್ತಾರೆ. ಇಲ್ಲೂ ಆದದ್ದು ಅದೇ. ಇಲಾಖೆಯ ಮಂದಿ ಮುಖ್ಯಮಂತ್ರಿಯವರನ್ನೂ ತಮ್ಮವರೇ ಎಂದು ತಿಳಿದರು. ಮುಖ್ಯಮಂತ್ರಿಯವರೂ ಹಾಗೇ ನಿದ್ದೆ ಮಾಡಿದರು. ನಯಾಪೈಸೆ ಸಿದ್ಧತೆ ಆಗಲಿಲ್ಲ. ಕೊನೆಗೆ ಮಾನ ಉಳಿಸಿಕೊಳ್ಳಲು ಇಪ್ಪತ್ತು ದಿನದೊಳಗೆ ಇಡೀ ಸಿದ್ಧತೆ ಮುಗಿಸುವ ಹೊಣೆ ವಿಶೇಷಾಧಿಕಾರಿಗೆ ಕೊಟ್ಟರು. ಅವರೋ ಈಗ ಪುನರ್ ಸೃಷ್ಟಿಯ ಹೊಣೆ ಹೊತ್ತ ‘ಪರಶುರಾಮ’ನಂತೆ ಓಡಾಡುತ್ತಿದ್ದಾರೆ. ಆದರೆ ಅವರಿಗೂ ಗೊತ್ತಿದೆ ‘ಇದು ತೇಪೆ ಹಾಕುವ ಕೆಲಸ’. ಲೆಕ್ಕ ಹಾಕಿಕೊಳ್ಳಿ, ಇಪ್ಪತ್ತೈದು ವರ್ಷಗಳ ನಂತರ ನಡೆಯುತ್ತಿರುವಂಥ ಬೃಹತ್ ಕಾರ‍್ಯಕ್ರಮಕ್ಕೆ ವರ್ಷದಿಂದ ಸಿದ್ಧತೆ ನಡೆಯಬೇಕಿತ್ತು. ಇಲ್ಲವಾದರೂ ಕನಿಷ್ಠ ಆರು ತಿಂಗಳ ಮೊದಲಾದರೂ ಶುರುವಾಗಿ ಈ ಹೊತ್ತಿಗೆ ಅಂತಿಮ ಸ್ಪರ್ಶ (ಫೈನಲ್ ಟಚ್) ನೀಡಬೇಕಿತ್ತು. ಆದರೆ ಈಗಿನ್ನೂ ಸಿದ್ಧತೆಯ ಓಟ ಶುರು. ಈ ಓಟವೂ ಶುರುವಾಗಿರುವುದು ಮುಖ್ಯ ಕಾರ‍್ಯದರ್ಶಿ, ಸಿಎಂ ನವರ ಕಾರ‍್ಯದರ್ಶಿಗಳ ಸಮಯ ಪ್ರಜ್ಞೆಯಿಂದಲೇ ಹೊರತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದಲ್ಲ.

ಸಮ್ಮೇಳನ ಸಂಘಟಿಸುವ ಹೊಣೆ ಹೊತ್ತದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ. ೨೦೦೬ ರಲ್ಲಿ ಸುವರ್ಣ ಕರ್ನಾಟಕ ವರ್ಷದ ಸಂಭ್ರಮದಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ನಂತರದ ರಾಜಕೀಯ ಬೆಳವಣಿಗೆ ಅವಕಾಶ ಕೊಡಲಿಲ್ಲ. ಆ ವರ್ಷವೇ ಸಿದ್ಧತೆ ಆರಂಭಿಸಿದರೂ ನಂತರ ತಣ್ಣಗೆ. ಪ್ರತಿ ನವೆಂಬರ್ ಬಂದಾಗ ‘ಈ ವರ್ಷ ಕನ್ನಡ ಸಮ್ಮೇಳನ’ ಎಂದು ಘೋಷಿಸಿಕೊಂಡೇ ಬಂದೆವು. ಈಗ ಅಪಕ್ವವಾದ ಪೂರ್ವಸಿದ್ಧತೆ ದಂಗು ಬಡಿಸಿದೆ.

ಸಂಸ್ಕೃತಿ ಇಲಾಖೆ ದೀರ್ಘ ನಿದ್ರೆಯಲ್ಲಿತ್ತು. ಇಲಾಖೆಯ ಚುಕ್ಕಾಣಿ ಹಿಡಿದವರಿಗೆ ಅಮೆರಿಕ ಪ್ರವಾಸ, ನೂರಾರು ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳಲೇ ಸಮಯವಿಲ್ಲ. ತನ್ನ ಮೂಗಿನ ನೇರದ ಒಂದಿಷ್ಟು ಅಧಿಕಾರಿಗಳಿಗೆ ಇದೂ ಇಲಾಖೆಯ ಸಣ್ಣದೊಂದು ಕಾರ‍್ಯಕ್ರಮವೆಂಬಂತೆ ಸಿದ್ಧತೆಯ ಗುತ್ತಿಗೆ ಕೊಟ್ಟು ಕೈ ತೊಳೆದುಕೊಂಡರು. ದುರಂತವೆಂದರೆ ಪ್ರಜಾಸತ್ತಾತ್ಮಕ ಸರಕಾರ ಸಂಘಟಿಸುತ್ತಿರುವ ಸಮ್ಮೇಳನದಲ್ಲಿ ಏಕಪಕ್ಷೀಯವಾಗಿ ಕೈಗೊಂಡ ತೀರ್ಮಾನವೇ ಹೆಚ್ಚೆಂಬುದು ಸದ್ಯದ ಆರೋಪ.

ಹೀಗಾಗಿ ಎಲ್ಲೆಲ್ಲೂ ತಮ್ಮ ಅಕ್ಕಪಕ್ಕದವರೇ ತುಂಬಿಕೊಂಡರು, ಕನ್ನಡ ಭವನದಲ್ಲಿ ನೃತ್ಯ ಮಾಡಿದವರಿಗೆ ಇಲ್ಲೂ ಅವಕಾಶ, ಹಂಪಿ ಉತ್ಸವದಲ್ಲಿ ರಾರಾಜಿಸಿದವರೇ ಇಲ್ಲೂ ವಿರಾಜಮಾನ. ಗೋಷ್ಠಿಗಳ ಕಥೆಯೂ ಅದೇ. ತಮ್ಮ ‘ನಂಬುಗೆ’ಯ ಜನರಿಗೇ ಮಣೆ. ಇಂಥ ಉದ್ದೇಶಪೂರ್ವಕ ಅಚಾತುರ್ಯಗಳನ್ನು ನಡೆಸಲೆಂದೇ ಸಂಸ್ಕೃತಿ ಇಲಾಖೆಯಲ್ಲಿ ಕೆಲವರಿದ್ದಾರೆ. ಗಾಳಿ ಬೀಸುವಾಗ ಹತ್ತು ಕಾಳನ್ನು ಹೆಕ್ಕಿಕೊಂಡು, ಜೊಳ್ಳು ಪಡೆದವರಂತೆ ಹ್ಯಾಪೆ ಮೋರೆ ಹಾಕಿಕೊಂಡಿರುತ್ತಾರೆ. ಈ ಮಾತಿಗೆ ಉದಾಹರಣೆ ಎನ್ನುವುದಾದರೆ ಕಳೆದ ವರ್ಷದಲ್ಲಿ ಇಲಾಖೆಯ ನಾಲ್ಕೈದು ಕಾರ‍್ಯಕ್ರಮಗಳ ಫಲಾನುಭವಿಗಳಾದವರಿಗೇ ವಿವಿಧ ಅವಕಾಶ ಸಿಕ್ಕಿದೆ, ಆಯಾ ಕ್ಷೇತ್ರಗಳ ಮಹಾನ್ ಸಾಧಕರಿದ್ದರೂ ತಮ್ಮ ಆಪ್ತರಾಗಿದ್ದ ಮಾತ್ರಕ್ಕೇ ಅಂಥವರಿಗೆ ಸಮಿತಿಗಳ ಸದಸ್ಯರ ಅವಕಾಶ..ಇದು ಒಂದು ಬಗೆ. ಮತ್ತೊಂದು ಕಡೆ ಕಲಾಕೃತಿಗಳ ಪ್ರದರ್ಶನ, ಶಿಲ್ಪ ಕಲಾಕೃತಿಗಳ ಪ್ರದರ್ಶನ, ವಿವಿಧ ಸಂಗೀತ ಕಾರ‍್ಯಕ್ರಮ, ನೃತ್ಯ ಕಾರ‍್ಯಕ್ರಮ…ಇತ್ಯಾದಿಗೆ ಆಯಾ ಅಕಾಡೆಮಿಗಳ ಅಧ್ಯಕ್ಷರನ್ನು ಸೌಜನ್ಯಕ್ಕೂ ಸಂಪರ್ಕಿಸಿಲ್ಲ. ತಮ್ಮ ಸಂಪರ್ಕದವರಿಗೇ ಕೊಟ್ಟು, ಲೆಕ್ಕ ಮಾಡಿ ಮುಗಿಸಿ ಬಿಡುವುದು ಅಧಿಕಾರಿಗಳ ಗುತ್ತಿಗೆ ಪದ್ಧತಿಯ ಲೆಕ್ಕಾಚಾರ. ವಾಸ್ತವವಾಗಿ ಪ್ರತಿ ಹಂತದ ಕಾರ‍್ಯವೂ ಜನರಿಗೆ ತಿಳಿದು ಅವರಲ್ಲಿ ಸಂಭ್ರಮವನ್ನು ಮೂಡಿಸಬೇಕಾಗಿದ್ದ ಪ್ರಕ್ರಿಯೆಯೇ ರಹಸ್ಯ ಕಾರ‍್ಯಾಚರಣೆಯಂತಾಯಿತು.

ಈಗ ಸಮ್ಮೇಳನ ಸಿದ್ಧತೆಗೆ ಐ.ಎಂ. ವಿಠಲಮೂರ್ತಿ ಚುರುಕು ನೀಡಿದ್ದಾರೆ. ಸಮ್ಮೇಳನದ ಉದ್ಘಾಟನೆಗೆ ಇನ್ಫೋಸಿಸ್‌ನ ನಾರಾಯಣಮೂರ್ತಿಯವರನ್ನು ಆಹ್ವಾನಿಸಲಾಗಿದೆ. ಮರಾಠಿಯ ಗದ್ದಲದ ಬೆಳಗಾವಿಯಲ್ಲಿ ಕನ್ನಡದ ಕಂಪು ಬೀರಲು ಏನು ಬೇಕೋ ಅವೆಲ್ಲದಕ್ಕೂ ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರೂ ಬೆನ್ನಿಗೆ ನಿಂತಿದ್ದಾರೆ. ಜನರೂ ಬೆಂಬಲಿಸಬೇಕೆಂಬುದು ಸರಕಾರದ ಹಂಬಲ.
ಒಂದಂತೂ ಸತ್ಯ. ಇದು ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಸಮ್ಮೇಳನ. ಅಂದರೆ ಇಲ್ಲಿ ಪ್ರತಿನಿಧಿತವಾಗಬೇಕಿದ್ದು ‘ಕನ್ನಡ-ಕನ್ನಡಿಗ-ಕರ್ನಾಟಕ’ವೇ ಹೊರತು ಸಾಹಿತ್ಯ ಮಾತ್ರವಲ್ಲ. ಕನ್ನಡದ ಅಭಿವೃದ್ಧಿ, ಕನ್ನಡಿಗನ ಪ್ರಗತಿ, ಕರ್ನಾಟಕದ ಉದ್ಧಾರದವರೆಗೂ ಚರ್ಚೆಗೆ ವೇದಿಕೆ ನಿರ್ಮಿಸಬೇಕಾದದ್ದು ಸಂಘಟಕರ ಹೊಣೆ.

ಸ್ಥಳೀಯ ಕಲಾವಿದರೂ ಸೇರಿದಂತೆ ಹೊರಗಿನ, ವಿದೇಶದಲ್ಲಿರುವ ನಮ್ಮ ಕನ್ನಡದ ಕಲಾವಿದರು, ಹಾಡುಗಾರರು, ಚಿತ್ರ ಕಲಾವಿದರು, ರಂಗತಂಡಗಳು, ಜಾನಪದ ಹಾಡುಗಾರರು, ಸುಗಮ ಸಂಗೀತ ಸಾಧಕರು, ಹೊರಗಿನ ಸಂಘಸಂಸ್ಥೆ, ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಪ್ರಾತಿನಿಧ್ಯ ಸಿಗಬೇಕು. ವಿಜ್ಞಾನ, ತಂತ್ರಜ್ಞಾನ, ಲಲಿತಕಲೆ, ಉದ್ಯಮ, ಶಿಕ್ಷಣ, ಪರಿಸರ…ಹೀಗೆ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ನೆರವಾದ ಎಲ್ಲ ಕ್ಷೇತ್ರಗಳ ಬೆಳವಣಿಗೆಯನ್ನು ದಾಖಲಿಸುವ ವೇದಿಕೆಯಾಗಬೇಕು. ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಣ ತಜ್ಞರು, ಭಾಷಾತಜ್ಞರು, ಸಾಹಿತಿಗಳು, ಸಾಂಸ್ಕೃತಿಕ ಗಣ್ಯರು, ಉದ್ಯಮಿಗಳೆಲ್ಲಾ ರಾರಾಜಿಸಬೇಕು. ಅವರನ್ನು ಗರವಿಸಬೇಕಾದದ್ದು ಸರಕಾರದ ಕರ್ತವ್ಯ. ನಮ್ಮೆಲ್ಲರ ಹೊಣೆಯೂ ಹೌದು. ಒಟ್ಟೂ ಕನ್ನಡ-ಕನ್ನಡಿಗ-ಕರ್ನಾಟಕದ ಅಭ್ಯುದಯಕ್ಕೆ ಚಿಂತಿಸುವ ವೇದಿಕೆಯಾಗುವಂತ ಕನಸು ಈಡೇರುವುದಾದರೆ ಪ್ರತಿ ಮೂರು ವರ್ಷಕ್ಕೊಮ್ಮೆ ಇಂಥದೊಂದು ಸಮ್ಮೇಳನ ನಡೆದರೆ ತಪ್ಪಿಲ್ಲ. ಇದು ಸದಾಶಯವಷ್ಟೇ. ಘಟಿಸುವುದೂ ಸಂಪೂರ್ಣ ಬೇರೆಯಾಗಬಹುದು. ರಾಜಕಾರಣಿಗಳು ಮತ್ತು ಅಧಿಕಾರಿಗಳದ್ದೇ ಸಮ್ಮೇಳನವಾಗಬಹುದು. ಅದಕ್ಕಿಂತ ದೊಡ್ಡ ಅಪಾಯವೆಂದರೆ, ಇದು ಅಧಿಕಾರಿಗಳ ಮತ್ತು ರಾಜಕಾರಣಿಗಳ ಸಮ್ಮೇಳನವೆಂದು ಜನರೂ ದೂರ ಉಳಿಯಬಹುದು. ಇದರ ಬಗ್ಗೆ ಸಂಘಟಕರು ಎಚ್ಚರವಹಿಸಬೇಕು. ಜನರಿಲ್ಲದ ಸಮ್ಮೇಳನಕ್ಕೆ ಅರ್ಥವಿಲ್ಲ, ಜನರಿಲ್ಲದ ನಾಯಕನಿಗೆ ಬೆಲೆಯೂ ಇರುವುದಿಲ್ಲ.

ಈ ಮಧ್ಯೆ ನಾರಾಯಣಮೂರ್ತಿಯವರನ್ನು ಉದ್ಘಾಟನೆಗೆ ಕರೆದಿದ್ದಕ್ಕೆ ಆಕ್ಷೇಪ ಕೇಳಿಬಂದಿದೆ. ಆಕ್ಷೇಪಿಸಿರುವುದು ಅವರ ನಿಲುವು. ಅದೇ ರೀತಿ ಮೂರ್ತಿ ಯವರೂ ಭಾಷಾ ಮಾಧ್ಯಮದ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ನಿಲುವಿಗೂ ಬೆಲೆಯಿದೆ. ಯಾವುದೂ ಹಾಗೂ ಯಾರದ್ದೂ ಸಂದರ್ಭದ ಲಾಭ ಪಡೆಯುವ ಹುನ್ನಾರ, ಗಿಮಿಕ್ ಆಗಬಾರದು. ಈ ಮಾತು ಹೇಳಿದರೆ ಉದ್ಧಟತನವೆಂದಾಗಲೀ, ಬೇಸರ ಪಡಿಸುವುದಕ್ಕಾಗಲೀ ಹೇಳುತ್ತಿಲ್ಲ. ಹಾಗೆ ಆದರೆ ವಿಷಾದವಿದೆ. ಬಹಳಷ್ಟು ಮಂದಿ ಕನ್ನಡ ಮಾಧ್ಯಮದ ಬಗ್ಗೆ ಮಾತನಾಡುವ ಮಂದಿಯೆಲ್ಲಾ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಲಿಸಿ, ಅಮೆರಿಕಕ್ಕೆ ರವಾನಿಸಿ ‘ವಾಸ್ತವ’ದಲ್ಲಿ ಬದುಕುತ್ತಿದ್ದಾರೆ. ನಾರಾಯಣಮೂರ್ತಿಯವರು ಭವಿಷ್ಯದ ನೆಲೆಯಲ್ಲಿ ಇಂಗ್ಲಿಷ್ ಪ್ರತಿಪಾದಿಸಿರಬಹುದು. ಎಷ್ಟೋ ಬಾರಿ ಡಬಲ್ ಸ್ಟ್ಯಾಂಡರ್ಡ್ ನಮ್ಮನ್ನೇ ನಗೆಪಾಟಲೀಗೀಡಾಗಿಸುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಮೂರ್ತಿಯವರ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಅತ್ಯಂತ ಹೇಸಿಗೆ ಸಂಗತಿಯೆಂದರೆ ಈ ಹೆಸರಲ್ಲಿ ನಡೆಯುತ್ತಿರುವ ಅಧಿಕಾರಿಗಳ ಸಣ್ಣತನದ ರಾಜಕಾರಣ. ಇನ್ಯಾರನ್ನೋ ಮಣಿಸಲು ಈ ಪ್ರಸಂಗವನ್ನು ಬಳಸಿಕೊಳ್ಳುತ್ತಿರುವ ಅಧಿಕಾರಿಗಳನ್ನು ಕಂಡೂ ನಮ್ಮ ಮಾನ್ಯ ಯಡಿಯೂರಪ್ಪನವರು ಸುಮ್ಮನಿದ್ದಾರೆ.

ಇನ್ನು, ಕೋಟ್ಯಂತರ ರೂ. ಸುರಿದು ಸಕಾರಣವೇ ಇಲ್ಲದೇ(ಮೊದಲ ಸಮ್ಮೇಳನಕ್ಕಾದರೂ ವಿಶ್ವ ತಮಿಳು ಸಮ್ಮೇಳನದ ನೆರಳಿತ್ತು. ೨೦೦೬ ರಲ್ಲಿ ಸುವರ್ಣ ಕರ್ನಾಟಕ ವರ್ಷದ ನೆಪವಿತ್ತು. ಈಗ ಅಂಥದ್ದೇನಿಲ್ಲ. ತಿಂಗಳ ಹಿಂದಷ್ಟೇ ದೊಡ್ಡ ಸಾಹಿತ್ಯ ಸಮ್ಮೇಳನ ಮುಗಿದಿದೆ) ಈ ಸಮ್ಮೇಳನ ಸಂಘಟಿಸಲು ಮುಂದಾದ ಇದೇ ಬಿಜೆಪಿ ಸರಕಾರ ಮತ್ತು ಚುಕ್ಕಾಣಿ ಹಿಡಿದ ಯಡಿಯೂರಪ್ಪನವರು, ಮತ್ತೊಂದೆಡೆ ರಾಜ್ಯದವರಿಗೆ ಸಿಗಬೇಕಿದ್ದ ಗೌರವವನ್ನು ಬೇರೆಯವರಿಗೆ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ. ಇವೆರಡೂ ವಿರೋಧಾಭಾಸಗಳೇ. ಅಷ್ಟೇ ಅಲ್ಲ, ರಾಜಕಾರಣದ ಲಾಭಕ್ಕೇ ಹುಟ್ಟಿಕೊಂಡವು. ವಿಶ್ವ ಕನ್ನಡ ಸಮ್ಮೇಳನ ನಡೆಸಿ ಕೀರ್ತಿ ಪಡೆಯುವ ಹಪಾಹಪಿತನ ಹಾಗೂ ಹೇಮಾಮಾಲಿನಿಯನ್ನು ರಾಜ್ಯಸಭೆಗೆ ಕಳುಹಿಸಿ ತಮ್ಮ ನಾಯಕರನ್ನು ತೃಪ್ತಿಪಡಿಸುವ ಎರಡೂ ದೂರಾಲೋಚನೆಯವೇ. ನಾರಾಯಣ ಮೂರ್ತಿಯವರ ಬದಲು ತಮ್ಮ ಹೈಕಮಾಂಡ್‌ನ ನಾಯಕರನ್ನೇ ಉದ್ಘಾಟನೆಗೆ ಕರೆದು ತರದಿರುವುದೇ ಸದ್ಯದ ಸಮಾಧಾನ.

ಈ ಎಲ್ಲ ಅಪಸವ್ಯಗಳ ಮಧ್ಯೆಯೂ ಬೆಳಗಾವಿಯಂಥ ಗಡಿ ಪ್ರದೇಶದಲ್ಲಿ ಕನ್ನಡದ ಸರಕಾರದ ಗೌರವವನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲೂ ಇದೆ. ಹಾಗಾಗಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗೆಗಿನ ಚರ್ಚೆಗೆ ಶುಭ ಹಾರೈಸಬೇಕು.