ದಾರಿಯುದ್ದಕ್ಕೂ
ಬಿತ್ತಿಕೊಂಡು ಹೋದೆ
ತಿರುಗಿ ಬರುವಾಗ
ಅಲ್ಲೆಲ್ಲಾ
ಹೂವು ಅರಳಿದ್ದವು
ಹಣ್ಣು ಬಿಟ್ಟಿದ್ದವು
ಎಲ್ಲರೂ ಸೇರಿದ್ದರು
ಯಾರು ಇವನ್ನೆಲ್ಲಾ
ಬೆಳೆಸಿದ್ದು ಎಂದು ಪ್ರಶ್ನಿಸುತ್ತಿದ್ದರು
ಅಷ್ಟರಲ್ಲಿ ಒಬ್ಬ
ಹಣ್ಣು ತಿಂದವನೇ
ಇದಕ್ಕಿಂತ ಶ್ರೇಷ್ಠವಾಗಿರುವುದು
ಬೇರೇನೂ ಇಲ್ಲ ಎಂದ
ಗುಂಪಿನ ಮಧ್ಯೆ
ಇದ್ದ ನನಗೇ ನಾಚಿಕೆ ಎನಿಸಿತು
ತಲೆ ತಗ್ಗಿಸಿಕೊಂಡು
ಹೊರಟೆ,
ಬಿತ್ತುವುದನ್ನು ನಿಲ್ಲಿಸಲಿಲ್ಲ !
***
ಅಂಗಳದಲ್ಲಿ
ಚೆಲ್ಲಿದ ರಂಗೋಲಿಯ
ಗೆರೆ ತನ್ನ ತುಳಿದುಕೊಂಡು
ಹೋಗುತ್ತಿದ್ದವರಿಗೆ
ಹೀಗೆ ಕೇಳುತ್ತಿತ್ತು
ಚೆಂದ ಎಂಬುವುದನ್ನು
ಎಂದಾದರೂ
ಅನುಭವಿಸಿದ್ದೀಯಾ?
***
ಆಗಸದಲ್ಲಿರುವ
ತಾರೆಗಳಿಗೆಲ್ಲಾ
ನಮಸ್ಕರಿಸುವೆ
ಅವಳನ್ನು
ತಮ್ಮ ಗುಂಪಿಗೆ
ಸೇರಿಸಿಕೊಂಡಿದ್ದಕ್ಕೆ
***
ಅವಳು
ಬಂದಾಗಲೆಲ್ಲಾ
ನನಗೆ
ಕನಸು
ಬೀಳುತ್ತದೆ
***
ಬೊಗಸೆಯ
ಗೆರೆಗಳದ್ದೇ
ಅರ್ಧಾಯುಷ್ಯ
ಯಾವುದೂ ನೆಟ್ಟಗೆ
ಬೆಳೆದಿರುವುದಿಲ್ಲ
***
ಮೌನದೊಳಗಿನ
ಚಿಟ್ಟೆ
ಬೆಳೆದು, ಬೆಳೆದು
ಮಾತಾಯಿತು
***
ನಿನಗೆ
ನನ್ನದು
ಒಂದೇ ಮನವಿ
ಮುಂದಿನ ಬಾರಿ
ನನ್ನ ಪ್ರೀತಿಸಬೇಡ
ನಾನೇ ನಿನ್ನನ್ನು
ಪ್ರೀತಿಸುತ್ತೇನೆ
***