ಹೀಗೆ ಮತ್ತೊಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇವು ಹೊಸತು. ಸುಮ್ಮನೆ ಓದಿ, ಅಷ್ಟೊಂದು ಚೆನ್ನಾಗಿಲ್ಲ ಎಂದು ನನಗೇ ಗೊತ್ತು. ಆದರೂ ಹಾಕಿದ್ದೇನೆ. ಬಿಕ್ಕಿದ ಸಾಲೆಂದೇ ಹೊಸ ವಿಭಾಗ ಮಾಡಿದ್ದೇನೆ. ಈ ಹಿಂದಿನ ಸಾಲುಗಳೆಲ್ಲಾ ಪದ್ಯ ವಿಭಾಗದಲ್ಲಿ ಸೇರಿಕೊಂಡಿವೆ.


ಗಾಳಿಪಟಕ್ಕೆ
ಮೇಲಕ್ಕೇರುವ
ಹುಚ್ಚು
ಬೆರಳುಗಳಿಗೆ
ಕೆಳಕ್ಕೆಳೆಯುವ
ಪ್ರೀತಿ
ದಾರಕ್ಕೆ
ಇಬ್ಬರನ್ನೂ
ಉಳಿಸಿಕೊಳ್ಳುವ
ಕಾಳಜಿ
***
ತನ್ನ ಕೈಯ
ಮೇಲೆ
ಆ ಹೆಸರನ್ನೇ
ಹಚ್ಚೆ ಹಾಕಿಸಿಕೊಂಡ
ಅವಳು
ಸದ್ಯಕ್ಕೆ ಅವನನ್ನೇ
ಮರೆತಿದ್ದಾಳೆ
**
ನಿಂತ ಬಿದಿರು
ಮಲಗಿದ
ಹುಲ್ಲಿಗೆ
ಹೇಳಿತು
ಸ್ವಲ್ಪ
ಎದ್ದು ಕುಳಿತುಕೊಳ್ಳುವುದನ್ನು
ಕಲಿ
ನಂತರ
ಸಾಧ್ಯವಾದರೆ ನನ್ನಂತೆ
ನಿಲ್ಲು !
**
ಆಗಾಗ್ಗೆ
ಕಾಡುತ್ತಿರುವ
ಮೌನಕ್ಕೆ
ಸ್ವಲ್ಪ ಸುಮ್ಮನಿರು
ಎಂದು ಹೇಳಿದ್ದೇನೆ
ಆದರೂ ಅದು
ಕೇಳುತ್ತಲೇ ಇಲ್ಲ
**
ನನ್ನೊಳಗೆ
ತುಳಸಿಕಟ್ಟೆ ಕಟ್ಟಿಸಿ
ಗಿಡ ನೆಟ್ಟಿದ್ದೇನೆ
ನೀರನ್ನು
ಹೊಯ್ಯಲು
ದೀಪ ಹಚ್ಚಲು
ಆಕೆ
ಬರಬೇಕು
***
ಮಗುವಿಗೆ
ಹೆಸರಿಡಲು
ಹೊಸ ಹೆಸರು
ಬೇಕು
ಇದ್ದರೆ ಹುಡುಕಿ ಕೊಡಿ
ಬಹಳ ಅರ್ಜೆಂಟಿಲ್ಲ !
***
ತಾವರೆ ಮೇಲಿನ
ಹನಿಗೆ
ನಮಸ್ಕಾರ ಹೇಳುತ್ತಾನೆ
ಎಷ್ಟೊತ್ತು
ಶೀರ್ಷಾಸನ
ಮಾಡಿಕೊಂಡಿರುತ್ತೆ
***
ಗೆರೆಗಳ
ಮೇಲೆ
ಹೇಳುತ್ತಿದ್ದುದ್ದನ್ನು
ಸಾಲುಗಳಲ್ಲಿ
ಹೇಳಲು
ಅಭ್ಯಾಸ ಮಾಡುತ್ತಿದ್ದೇನೆ
ಗೆರೆಗಳೇ
ಚೆಂದ
ಕಂಡಷ್ಟೂ ಅರ್ಥ
ಪದಗಳಲ್ಲಿ
ಹೇಳಿದಷ್ಟೇ ಅರ್ಥ