ಹರ್ಷನ ಪ್ರಸಂಗ ನೆನಪಿಸುವಾಗ ನನ್ನ ಪ್ರಸಂಗ ನೆನಪಾಯಿತು. ಆದರೆ ನನ್ನ ಪ್ರಸಂಗ ಕಲಿಸಿದ್ದು ಬಹಳ ಇದೆ. ಆ ಪಾಠ ಹೇಳಿದವನನ್ನು ಮಾರನೇ ದಿನ ಹುಡುಕಿಕೊಂಡು ಅದೇ ಸರ್ಕಲ್ಲಿಗೆ ಹೋದೆ. ಸಿಗಲಿಲ್ಲ…ಇಂದಿಗೂ ಸಿಕ್ಕಿಲ್ಲ.

ಗಾಂಧಿಗಿರಿ ಪ್ರದರ್ಶಿಸಿದ ಹರ್ಷರ ಕಥೆ ಕೇಳಿದಿರಿ. ಮಾರನೇ ದಿನ ಆ ಪೋಲಿಸ್ ಸ್ಟೇಷನ್ ಅವರಿಗೆ ಇದು ಯಾರ ಸೈಕಲ್ ಅಂತಾ ಗೊತ್ತಾಗಿ, ಫೋನ್ ಮಾಡಿ ತಂದುಕೊಡುವಂಥ ಪರಿಸ್ಥಿತಿ. ಈ ಪ್ರಸಂಗ ನಮಗಂತೂ ಒಂದು ವಾರದ ಹೂರಣವಾಗಿದ್ದು ಸುಳ್ಳಲ್ಲ. ಹರ್ಷ ಹಾಗೆಲ್ಲಾ ಮತ್ತೊಬ್ಬರ ಮನಸ್ಸು ನೋಯಿಸಿದ್ದಿಲ್ಲ, ಅವನಿಗೇ ಸಿಟ್ಟು ಬಂತೆಂದರೆ ಆ ಪೇದೆ ಹೇಗೆ ಆಡಿಸಿರಬಹುದು ? ಇದೇ ಪ್ರಸಂಗ ನಮ್ಮಲ್ಲಿ ಯಾರ ಎದುರಿಗೂ ನಡೆದಿದ್ದರೂ ಒಂದಲ್ಲ ಒಂದು ಅನಾಹುತವಾಗಿರುತ್ತಿತ್ತು, ಅದರಲ್ಲಿ ಸುಳ್ಳಲ್ಲ.

ನನಗೆ ಮುಂಗೋಪ. ಸಿಟ್ಟು ಬರುವುದಿಲ್ಲ, ಬರುವುದಿಲ್ಲವೆಂದೇ ಒಮ್ಮೊಮ್ಮೆ ಬರಿಸಿಕೊಳ್ಳುವವನು. ನನಗೆ ಇಷ್ಟೆಲ್ಲಾ ಆಗಿರ್ಲಿಲ್ಲ ಬಿಡಿ, ಆದರೆ ಕ್ರೈಮ್ ರಿಪೋರ್ಟರ್ ಆದ ಶುರುವಿನಲ್ಲಿ, ಒಮ್ಮೆ ಹೀಗೆ ಸುದ್ದಿಗಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದೆ. ಅಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಹೋಗಿ ನಮಸ್ಕಾರ ಹೊಡೆದು, ಏನೆಂದು ಕುಶಲವನ್ನು ವಿಚಾರಿಸಿ ನಮ್ಮ ಆಯಕಟ್ಟಿನ ಸ್ಥಾನ (ಕಮೀಷನರ್ ಕಚೇರಿಯ ಮೀಡಿಯಾ ರೂಂ)ಕ್ಕೆ ಬಂದು ಕುಳಿತುಕೊಳ್ಳುತ್ತಿದ್ದೆವು. ಅಂದು ನನ್ನ ವೃತ್ತಿಯ ನಾಲ್ಕನೇ ದಿನ. ನಾನೇನೂ ಅಷ್ಟೊಂದು ಪರಿಚಯವಾಗಿರಲಿಲ್ಲ. ಮೊದಲೆರಡು ದಿನ ನಾನು ಅಬ್ಬೇಪಾರಿ.

ಎಲ್ಲ ಪತ್ರಿಕೆಗಳ ವರದಿಗಾರರು ಒಳ್ಳೆಯವರೇ. ನಾನು ಹೊಸಬ. ಆಫೀಸಿನಲ್ಲಿ ಕಮೀಷನರ್ ಕಚೇರಿ, ಇನ್ ಫ್ರಾಂಟ್ರಿ ರಸ್ತೆಯಲ್ಲಿದೆ ಹೋಗಿ ಅಂದರು. ನನಗೆ ಆ ರಸ್ತೆನೂ ಗೊತ್ತಿರಲಿಲ್ಲ. ಮಿಕ್ಯಾರನ್ನೋ ಕೇಳಿ ಆಕಾಶವಾಣಿ ಹಿಂದೆ ಎಂದು ತಿಳಿದುಕೊಂಡು ಹುಡುಕಿಕೊಂಡು ಬಂದಿದ್ದೆ. ಯಾವಾಗಲೂ ಕಾಮನ್ ಸೆನ್ಸ್ ಪತ್ರಕರ್ತನಿಗೆ ಬೇಕೇ ಬೇಕು, ಸ್ಪೆಷಲ್ ಸೆನ್ಸ್ ಇರದೇ ಇದ್ದರೂ ಪರವಾಗಿಲ್ಲ ಎಂದು ಪ್ರತಿಪಾದಿಸುವವ ನಾನು. ಅಂದು ನನ್ನ ಕಾಮನ್ ಸೆನ್ಸ್ ಕೆಲಸ ಮಾಡಿರಲಿಲ್ಲ. ನಾನು ಕ್ವೀನ್ಸ್ ರಸ್ತೆಯಿಂದ ತಿರುಗಿ ವಿಧಾನಸೌಧಕ್ಕೆ ಹೋಗುವ ರಸ್ತೆಯಲ್ಲೇ ಮುಂದೆ ಹೋಗಿ ಕ್ಯಾಪಿಟಲ್ ಹೋಟೆಲ್ ಕಡೆಯಿಂದ ಆಕಾಶವಾಣಿ ಎದುರು ಬಂದು ಐಎಎಸ್ ಅಧಿಕಾರಿಗಳ ಸಂಘದ ಎದುರು ಹಾದು ಹೋಗಿದ್ದೆ.

ಮೂರು ಸೋಫಾಶೀಟ್ ಗಳಿದ್ದವು. ಅದ್ರಲ್ಲಿ ಮಧ್ಯದಲ್ಲಿ ಹೊರಗೆ ಹೋಗಿ ಬರುವವರನ್ನು, ಎಲ್ಲ ಚಟುವಟಕೆಗಳನ್ನು ತೀರಾ ಗಮನಿಸುವಂತೆ ಕುಳಿತುಕೊಂಡಿರುತ್ತಿದ್ದರು ಮಿ. ರಾಮಸ್ವಾಮಿ. ಈ ಸಂಜೆಯ ವರದಿಗಾರರು. ಒಂದು ಅರ್ಥದಲ್ಲಿ ಹೇಳುವುದಾದರೆ ಬೆಳಗಿನ ಪತ್ರಿಕೆಯ ಕ್ರೈಮ್ ಸೋರ್ಸಸ್ ಸಹ. ಅಂದರೆ ರೆಗ್ಯುಲರ್ ಅಪರಾಧಗಳನ್ನು ನಮಗಿಂತ ಮೊದಲೇ ಸಂಗ್ರಹಿಸಿಡುತ್ತಿದ್ದರು. ಅವರ ಸಂಜೆ ಪತ್ರಿಕೆಯಾಗಿದ್ದರಿಂದ ಅನಿವಾರ್ಯವೂ ಆಗಿತ್ತು. ಅಲ್ಲಿದ್ದ ಫೋನ್ ಗೆ ಕಿವಿ ಹಚ್ಚಿಕೊಂಡು ಎಲ್ಲ ಪೋಲಿಸ್ ಸ್ಟೇಷನ್ ಗಳಿಗೆ, ತಮ್ಮ ಸಂಪನ್ಮೂಲ ವ್ಯಕ್ತಿಗಳಿಗೆ ಪೋನ್ ಮಾಡುತ್ತಿದ್ದರೆ ನಾವೆಲ್ಲಾ ಸುಮ್ಮನಿರಬೇಕು. ಸ್ವಲ್ಪ ಗಲಾಟೆ ಮಾಡಿದರೆ, ಜೋರು ಮಾಡುತ್ತಿದ್ದ ರಾಮಸ್ವಾಮಿ ಎಲ್ಲರನ್ನೂ ಬರುವುದನ್ನೇ ಕಾಯುತ್ತಿದ್ದರು. ಪ್ರಧಾನ ಪತ್ರಿಕೆಗಳ ವರದಿಗಾರರು, ಅವರ ಗೆಳೆಯರು ಬಂದ ಮೇಲೆ ಬ್ರೀಫಿಂಗ್ (ಸುದ್ದಿ ವಿವರಿಸುವುದು) ಆರಂಭ.

ಅದುವರೆಗಿನ ಲಭ್ಯ ಅಪರಾಧಗಳ ವಿವರಗಳನ್ನು ಕೊಡುತ್ತಾರೆ. ಅದನ್ನು ಬರೆದುಕೊಂಡು ಹೋಗಬೇಕು. ನನ್ನ ದುರಾದೃಷ್ಟ ಅವತ್ತೊಂದು 307 ಆಗಿತ್ತು. ನನಗೆ ಅದೇನೆಂದು ಗೊತ್ತಿರ್ಲಿಲ್ಲ. ನಾನೋ ಮೂಲೆಯಲ್ಲಿ ಕುಳಿತಿದ್ದೆ. ದಿ ಹಿಂದೂವಿನ ಕೃಷ್ಣಕುಮಾರ್ (ಕೆಕೆ ಎಂದೇ ಖ್ಯಾತಿ, ಈಗ ಮೈಸೂರಿನ ಸಿಟಿ ಎಡಿಟರ್ ಆಗಿದ್ದಾರೆ) ಬಂದರು. ಎಲ್ಲರ ಗತ್ತು ನೋಡಿಯೇ ಅಬ್ಬೇಪಾರಿಯಂತಿದ್ದ ನಾನು ಹೇಗೆ ಇವರನ್ನೆಲ್ಲಾ ಮಾತನಾಡಿಸುವುದು ಎಂದು ಯೋಚಿಸುತ್ತಿದ್ದೆ. ರಾಮಸ್ವಾಮಿ ವಿವರಿಸತೊಡಗಿದರು, ಎಲ್ಲರೂ ಪಾಯಿಂಟ್ಸ್ ಗಳನ್ನು ತೆಗೆದುಕೊಳ್ಳತೊಡಗಿದರು. ನಾನು ಸುಮ್ಮನೆ ಕುಳಿತಿದ್ದೆ. ಪತ್ರಕರ್ತರಿಗೆ ಒಂದು ಅಭ್ಯಾಸವಿದೆ. ಅವರ ಸುತ್ತಲೂ ಅವರ ಜಾತಿ (ಪತ್ರಕರ್ತರಲ್ಲದವರು) ಇರಬಾರದು. ಹಾಗೇನಾದರೂ ಹೊಸಬರು ಕಂಡರೆ ಒಮ್ಮೆ ಯೋಚಿಸಿ, ಯಾರು ನೀವು ? ಏನು ಬೇಕಾಗಿತ್ತು ? ಇಲ್ಲಿ ಯಾಕೆ ಇದ್ದೀರಿ ? ಹೀಗೆ ಪ್ರಶ್ನೆಗಳ ಸುರಿಮಳೆಗರೆಯುತ್ತಾರೆ. ಅದೇ ಅನುಭವ ನನ್ನ ಮೇಲೂ ಆಯಿತು. ರಾಮಸ್ವಾಮಿಯವರೇ, ಏನು ? ಯಾರು ? ಎಂದು ಪ್ರಶ್ನೆ ಕೇಳಿದರು. ಅದು ದಬಾಯಿಸಿದ ಧ್ವನಿಯಲ್ಲಿತ್ತು. ಕ್ರಮೇಣ ಅವರ ಧ್ವನಿಯೇ ಹಾಗೆಂದು ಗೊತ್ತಾಗಿದ್ದು, ಬಹಳ ಒಳ್ಳೆಯ ಮನುಷ್ಯ.

ನಾನು ತಡವರಿಸುತ್ತಲೇ, “ನಾನು ಹೊಸದಿಗಂತದಿಂದ ಬಂದಿದ್ದೇನೆ, ಹೊಸಬ. ನನ್ನ ಹೆಸರು ಅರವಿಂದ’ ಎಂದು ಪರಿಚಯಿಸಿಕೊಂಡೆ. ಎಲ್ಲರ ಪರಿಚಯವಾಯಿತು. ಮತ್ತೆ ಬ್ರೀಫಿಂಗ್ ಶುರು ಮಾಡಿದರು. “ಗಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ 307 ಆಗಿದೆ’ ಎಂದರು ರಾಮಸ್ವಾಮಿ. ನನಗೆ ಅರ್ಥವಾಗಲಿಲ್ಲ. ಮುಖ ಮುಖ ನೋಡಿದೆ, ಅಷ್ಟರಲ್ಲಿ ಕೃಷ್ಣಕುಮಾರ್ ನೆರವಿಗೆ ಬಂದರು. ಹಾಗೆಂದರೆ ಕೊಲೆ ಎಂದ ತಕ್ಷಣ ನಾನೂ ಬರೆದುಕೊಳ್ಳತೊಡಗಿದೆ. ಎಲ್ಲ ವಿವರ ಸಿಕ್ಕಿತು. ಅದಲ್ಲದೇ ಇನ್ನೂ ಕೆಲವು ಸುದ್ದಿಗಳಿದ್ದವು, ಎಲ್ಲ ಬರೆದುಕೊಂಡೆ. ಏನು ಬರೆಯಬೇಕೆಂಬುದು ಅರ್ಥವಾಗುವಷ್ಟರಲ್ಲಿ ನವೀನ ಬಂದ (ನವೀನ್ ಅಮ್ಮೆಂಬಳ-ಈಗ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿದ್ದಾನೆ). ಸ್ವಲ್ಪ ಉಸಿರು ಬಂದಂತಾಯಿತು. ಅವನು ಬಂದು ನನ್ನ ಪಕ್ಕದಲ್ಲಿ ಕುಳಿತ. ಎಲ್ಲ ಮುಗಿದು, ಹೊರಟೆ ಮತ್ತೆ ಆಫೀಸಿಗೆ.

ಒಂದಷ್ಟು ದಿನ ಸೋರ್ಸ್ ಡೆವಲಪ್ ಮಾಡಿಕೊಳ್ಳುವವರೆಗೆ ನನಗೆ ಈ ನವೀನ, ಹರ್ಷರೇ ದಿಕ್ಕು. ಪರಸ್ಪರ ಸುದ್ದಿ ಹಂಚಿಕೊಳ್ಳುತ್ತಿದ್ದೆವು. ನಾನು ಅವರ ವಿಶೇಷ ವರದಿಗಳಿಗೆ ಕೈ ಹಾಕುತ್ತಿರಲಿಲ್ಲ. ಹೀಗೆ ಆ ದಿನ ನಡೆದು ಬರುತ್ತಿರುವಾಗ ಕ್ವೀನ್ಸ್ ರಸ್ತೆಯಲ್ಲಿ ಸಿಗ್ನಲ್ ಇತ್ತು. ಪಾದಚಾರಿಗಳಿಗೆ ಗ್ರೀನ್ ಸಿಗ್ನಲ್ ಇದೆ ಎಂದು ಭಾವಿಸಿ ಯಾವುದೋ ಲೆಕ್ಕದಲ್ಲಿ ನಾನು ನುಗ್ಗಿ ಬಿಟ್ಟೆ. ನನ್ನ ಅದೃಷ್ಟಕ್ಕೆ ಯಾವ ವಾಹನಗಳೂ ಬರಲಿಲ್ಲ. ಆದರೆ ಹಾಗೆ ನಾನು ಕಾನೂನು ಉಲ್ಲಂಘಿಸಿದ್ದನ್ನು ಹತ್ತಿರದ ಸಂಚಾರಿ ಪೊಲೀಸ್ ಪೇದೆ ಕಂಡು ಬಿಟ್ಟ. ಒಮ್ಮೆಲೆ ಹತ್ತಿರಕ್ಕೆ ಕರೆದವನೇ, “ಏನ್ರೀ ಎಜುಕೇಟೆಡ್ ಥರ ಕಾಣ್ತೀರಾ ? ಅಷ್ಟೋ ಗೊತ್ಥಾಗಲ್ವಾ ? ನಿಮಗೆ ರೆಡ್ ಇದೆ. ಆದ್ರೂ ಬರ್ತೀರಲ್ರೀ. ಯಾವನಾದರೂ ಗುದ್ದಿದರೆ ಏನ್ ಮಾಡ್ತೀರಾ?’ ಎಂದು ದಬಾಯಿಸಿದ. ನನಗ್ಯಾಕೋ ಅವನ ಧ್ವನಿ ಬಹಳ ಕಿರಿಕಿರಿ ಎನಿಸುತ್ತಿತ್ತು. ಕಾಮನ್ ಸೆನ್ಸ್ ಕೈ ಕೊಟ್ಟಿತ್ತು. ತಕ್ಷಣವೇ ಐಡೆಂಟಿಟಿ ಕಾರ್ಡ್ ತೆಗೆದು ತೋರಿಸಿದೆ. ಅದನ್ನು ಕಂಡು ಅವನಿಗೇ ಗಲಿಬಿಲಿ. ನಾನು ಬೈದರೆ ಇವನೇನೋ ಕಾರ್ಡ್ ತೋರಿಸ್ತಾನಲ್ಲಾ ಅಂತಾ. ಅ ಕ್ಷಣದ ಅವನ ಉತ್ತರ ನನಗೆ ಜೀವನದ ಪಾಠ ಕಲಿಸಿತ್ತು. “ಪ್ರೆಸ್ ಆದ್ರೆ ಏನೂ ? ನಿಮಗೇನು ಕೋಡು ಇರುತ್ತಾ? ಅಷ್ಟಕ್ಕೂ ಗುದ್ದೋನಿಗೆ ಯಾವನಾದ್ರೆ ಏನು ?’ ಎಂದು ಬಿಟ್ಟ. ಅವನ ಮೊದಲ ಮಾತು ಉದ್ಧಟನತನ ಎನಿಸಿದ್ದು ನಿಜ. ನಂತರ ಮಾತೂ ವಾಸ್ತವವನ್ನು ನೆನಪಿಸಿದ್ದೂ ಅಷ್ಟೇ ಸತ್ಯ. ಆದರೆ ಆಗ, ಅದರಲ್ಲೂ ಪ್ರೆಸ್ ಎಂಬ ಐಡೆಂಟಿಟಿ ಸಿಕ್ಕ ನಾಲ್ಕನೇ ದಿನ(ಅದರ ಪ್ರಭಾವ ನೋಡಲಿಕ್ಕೆ ಸಿಕ್ಕ ಮೊದಲ ಪ್ರಸಂಗವೂ ಹೌದು) ನಿಜವನ್ನೆಲ್ಲಾ ಅರಿತುಕೊಳ್ಳುವ ಮನಸ್ಥಿತಿ ಇರಲಿಲ್ಲ.

“ಯಾಕ್ರೀ ಹಾಗೆ ಮಾತಾಡ್ತೀರಾ ? ಕೋಡು-ಗೀಡು ಅಂತಾ? ಸರಿಯಾಗಿ ಮಾತನಾಡೋದು ಕಲೀರಿ’ ಎಂದು ನಾನೂ ದಬಾಯಿಸಿದೆ. ಅದಕ್ಕೆ ಪ್ರತಿಯಾಗಿ ಅವನು ಜಾಸ್ತಿ ಮಾತನಾಡಲಿಲ್ಲ (ಯಾಕ್ ಸುಮ್ಮನೆ ರಗಳೆ ಅಂತಾ ಬಿಟ್ಟಿರಬೇಕು) “ಹೋಗ್ರೀ, ಹೋಗ್ರಿ ನಿಮ್ಜೊತೆ ಜಗಳ ಮಾಡ್ಕೊಂಡು ನನಗೇನಾಗ್ಬೇಕು ? ಒಳ್ಳೇದಕ್ಕೆ ಹೇಳಿದ್ರೆ ಹೀಂಗೆ’ ಅಂದು ಮುಗಿಸುವುದರಲ್ಲಿದ್ದ. ನನಗೇ ಇಷ್ಟವಿರಲಿಲ್ಲ. “ಮತ್ಥೇನ್ರೀ ಗೊಣಗಾಟ’ ಎಂದು ಜೋರು ಮಾಡಲು ಹೊರಟೆ. ಅವನು ಕೈ ಮುಗಿಯೋದು ಬಾಕಿ, “ಹೋಗ್ರೀ ಸ್ವಾಮಿ,..ಹೋಗಿ’ ಎಂದ. ನಾನು ಗೆದ್ದವನಂತೆ ಬೀಗುತ್ತಾ ಒಂದ್ಹೆಜ್ಜೆ ಇಡುವಾಗ ಅವನು ಗೊಣಗಿದ್ದು ಮತ್ತೆ ಒಮ್ಮೆ ಅವನನ್ನು ನೋಡುವಂತೆ ಮಾಡಿತು. ಮತ್ತೆ ಮಾತನಾಡಲಿಲ್ಲ, ತಣ್ಣಗೆ ಹೊರಟೆ. ಬಹುಶಃ ಅದೇ ಕೊನೆ ಪ್ರಸಂಗ ನನ್ನ ಕೋಡು ಮುರಿದು ಹೋಗಿ, ಇಂದಿಗೂ ವಾಪಸು ಬರದಂತೆ ನೋಡಿಕೊಂಡಿದ್ದೇನೆ…ಅವನ ಕೊನೆ ಮಾತು ಕೇಳಿ…”ಪ್ರೆಸ್ ಕಾರ್ಡ್ ಏನು ಇನ್ಸುರೆನ್ಸ್ ಕಾರ್ಡ್ ಅನ್ನೋವಂಗೆ ಮಾಡ್ತೌನೆ’…!

ಅದೂ ನಿಜವೆ ತಾನೇ, ಪ್ರೆಸ್ ಕಾರ್ಡ್ ಇನ್ಸುರೆನ್ಸ್ ಕಾರ್ಡ್ ಅಲ್ಲವಲ್ಲ !
ಇಂದಿಗೂ ಹಾಗೆ ಜೋರು ಮಾಡಿದ್ದನ್ನು ನೆನೆಸಿಕೊಂಡ್ರೆ ಅದು ನನ್ನಿಂದ ಸಾಧ್ಯವೇ ಎನಿಸುವುದಿದೆ.