ನನ್ನ ಬರವಣಿಗೆಯ ಪಯಣ ಮತ್ತೆ ಬ್ರಹ್ಮಚಾರಿಗಳ ಪುಟಗಳಿಂದಲೇ ಆರಂಭ. ಇದು ಒಂದು ಪ್ರಸಂಗದ ಕಥೆ. ಇದರಲ್ಲಿ ಪತ್ರಕರ್ತ, ಪತ್ರಿಕೋದ್ಯಮ..ಹೀಗೆ ಎಲ್ಲೆಲ್ಲೋ ಹರಿದು ಕೊನೆಗೆ ನಿಂತದ್ದು ನಮ್ಮ ನಮ್ಮ ನೆಲೆಯಲ್ಲಿಯೇ. ಓದಿ ಅಭಿಪ್ರಾಯಿಸಿ.

ಪತ್ರಕರ್ತರೆಂದರೆ ನಿಶಾಜೀವಿಗಳು ಎನ್ನುವ ಮಾತಿತ್ತು, ನಾವು ಕೆಲಸ ಮಾಡುವಾಗ. ಅದರಲ್ಲೂ ನಾವು ಕ್ರೈಂ ರಿಪೋರ್ಟರ್ ಗಳು. ಸಾಮಾನ್ಯವಾಗಿ ಎಲ್ಲರ ಕೆಲಸ (ಸರಕಾರಿ ನೌಕರರು, ಖಾಸಗಿ ಕಚೇರಿ ಇತ್ಯಾದಿ) ಸಂಜೆ ಆರಕ್ಕೋ, ಏಳಕ್ಕೋ ಮುಗಿದರೆ ಪತ್ರಕರ್ತರದ್ದು ಶುರುವಾಗುವುದೇ ಆವಾಗ. ಎಲ್ಲರ ಪತ್ರಕರ್ತರ ಕಥೆ ಹೀಗಾದರೆ ಕ್ರೈಂ ರಿಪೋರ್ಟರ್ ಗಳ ಕಥೆಯೇ ಬೇರೆ.

ರಾತ್ರಿ…ಕಡುರಾತ್ರಿ..ಹೀಗೆ ಡೆಡ್ ಲೈನ್ ಮುಗಿಯುವವರೆಗೂ ಕಾಯ್ತಾನೇ ಇರ್ತಾರೆ, ಇರಲೇಬೇಕನ್ನಿ. ಇನ್ನೇನು ಅಂಗಡಿ ಮುಚ್ಚಿದವು ಎನ್ನೋವಾಗಲೂ, ಅದಕ್ಕೆ ಹತ್ತು ನಿಮಿಷ ಇದ್ದಾಗಲೂ ಎಲ್ಲಾದರೂ ಬೆಂಕಿ ಹೊತ್ತಿಕೊಂಡಿದ್ದರೆ ಕಚೇರಿಯಿಂದ ಪೋನ್ ಬರುತ್ತೆ, ಇಲ್ಲವೇ ನಾವೇ ಮಾಡ್ತೇವೆ…”ನೋಡ್ರೀ, ಎಲ್ಲಿಗೋ ಬೆಂಕಿ ಹತ್ತಿಕೊಂಡಿದೆಯಂತೆ, ಮೇಜರ್ರೋ…ಹತ್ತು ನಿಮಿಷದಲ್ಲಿ ಎರಡು ಪ್ಯಾರಾ ಕೊಟ್ಬಿಡಿ…ಫ್ರಂಟ್ ಪೇಜ್ ನಲ್ಲಿ ಹಾಕಿಕೊಳ್ತೇವೆ. ನಾಳೆ ಫಾಲೋ ಅಪ್ ಮಾಡಿ’ ಎಂಬ ಸೂಚನೆ ನೈಟ್ ಶಿಫ್ಟ್ ನಲ್ಲಿರೋ ಮುಖ್ಯಸ್ಥರಿಂದ ಬರುತ್ತೆ. ಮತ್ತೆ ಶುರು ಹಚ್ಚಿಕೊಳ್ಳಬೇಕು..ಪೋಲೀಸರು…ಫೈರ್ ಬ್ರಿಗೇಡರ್…ಸೋರ್ಸ್ ಗಳು…ಹೀಗೆ…!

ಅದಕ್ಕೇ ಸುದ್ದಿಮನೆಯೊಳಗೆ ಮತ್ತೊಂದು ಕಥೆ ಇರುತ್ತೆ. ಬೇರೆ ಬೀಟ್ ನವರು (ಪೊಲಿಟಿಕಲ್, ಎಜುಕೇಷನ್, ಸಿಟಿ ಇತ್ಯಾದಿ) ರಾತ್ರಿ 9 ಕ್ಕೆ ಅಂಗಡಿ ಮುಚ್ಚಿಕೊಂಡು “ಬರ್ಲಾ ಸ್ವಾಮಿ..’ ಎಂದು ಹೇಳಿ ಹೋಗುವಾಗ ನಾವು ಬರೀ ಸನ್ನೆ ಮಾಡೋ ಸ್ಥಿತಿಯಲ್ಲಿರುತ್ತಿದ್ದೆವು. ಈಗಲೂ ಆ ಕಾಟ ತಪ್ಪಿಲ್ಲ ಅನ್ನಿ. ಈಗಿನ ಕ್ರೈಂ ರಿಪೋರ್ಟರ್ ಗಳದ್ದು ಸ್ವಲ್ಪ ಕಥೆ ಬೇರೆ. ಮನೆಗಳಲ್ಲಿ ಕಂಪ್ಯೂಟರ್ ಇದೆ, ಕೆಲವರಲ್ಲಂತೂ ಲ್ಯಾಪ್ ಟಾಪ್ ಗಳೂ ಬಂದಿವೆ. ಆದ ಕಾರಣ ಮನೆಯಲ್ಲೂ ಕುಳಿತು ಕಾರ್ಯಾಚರಣೆ ನಡೆಸಬಹುದು. ನಮಗೆ ಆಗ ಲ್ಯಾಪ್ ಟಾಪ್ ಇರಲಿ, ಮನೆಯಲ್ಲಿ ಲ್ಯಾಂಡ್ ಲೈನ್ ಇರಲಿಲ್ಲ. ಆಮೇಲೆ ಬಂದರೂ, ಸಿಕ್ಕಾಪಟ್ಟೆ ಫೋನ್ ಮಾಡಿದರೆ ಕಟ್ಟೋದಕ್ಕೆ ದುಡ್ಡೂ ಇರ್ತಿರಲಿಲ್ಲ. ನಾಲ್ಕೈದು ಮಂದಿ ಒಟ್ಟೊಟ್ಟಿಗೆ ಬದುಕಿದರೂ ಅವೆಲ್ಲಾ ಸಂಗತಿಗಳು ಮಿಲಿಟರಿ ಸಿಸ್ಟಂ.

ಹೀಗೆ ಕಥೆ ಸಾಗುತ್ತಿರುವಾಗ ಬ್ರಹ್ಮಚಾರಿಗಳ ಪುಟಗಳಲ್ಲಿನ ಒಬ್ಬ ಹೀರೋ ಹರ್ಷ ಎದುರಾಗುತ್ತಾನೆ. ಈಗಾಗಲೇ ಹೇಳಿದಂತೆ ಹರ್ಷ ರಾವ್ ಬಹಳ ಒಳ್ಳೆಯ ಹುಡುಗ. ಅತ್ಯಂತ ನವಿರಾಗಿ ಹೇಳುವುದಾದರೆ, ಗುಲಾಬಿಗೆ ಮುಳ್ಳೇ ನೋವು ಮಾಡಿದ್ದರೂ ಅದನ್ನೇ ಕ್ಷಮಿಸಿಬಿಡಬಲ್ಲ ಮನುಷ್ಯ. ಎಂದಿಗೂ ಯಾವುದೋ ಸಣ್ಣ ಸಣ್ಣ ಸಂಗತಿಗಳನ್ನು ಮನದೊಳಗೆ ಇಟ್ಟುಕೊಂಡು ಕೊಳೆಸಿ ಕಾರಿದ್ದು ಎಂದೂ ಇಲ್ಲ, ಇಂದೂ ಇಲ್ಲ. ಅಂಥವನೇ ಇಕ್ಕಟ್ಟಿಗೆ ಸಿಲುಕಬೇಕಾದ ಪ್ರಸಂಗ ನಡೆದರೆ ಹೇಗಿರಬೇಕು ?

ಒಂದು ರಾತ್ರಿ ನಾನು ಹೊಸದಿಗಂತದಲ್ಲಿ ಕೆಲಸ ಮಾಡುತ್ತಿದ್ದೆ. ಹರ್ಷ ಕ್ವೀನ್ಸ್ ರಸ್ತೆಯಲ್ಲಿರುವ ಎಕ್ಸ್ ಪ್ರೆಸ್ ಆಫೀಸಿನಲ್ಲಿದ್ದ. ನವೀನ್ ಆಗ ಉದಯವಾಣಿಯ ವರದಿಗಾರ. ನಾವೆಲ್ಲಾ ಇದ್ದದ್ದು ಬೆಂಗಳೂರಿನ ಹಲಸೂರಿನ ಮನೆಯಲ್ಲಿ. ಅಂದು ಹೆಚ್ಚು ಸುದ್ದಿಯಿರಲಿಲ್ಲ. ಸರಿ, ಹರ್ಷನಿಗೆ ಫೋನ್ ಮಾಡಿ ಮನೆಗೆ ಹೊರಟೆ. ಹಾಗೆಯೇ ನವೀನ್ ಗೂ ತಿಳಿಸಿದ್ದೆ. ಹರ್ಷ ಯಾವಾಗಲೂ ಸೈಕಲ್ ಸವಾರಿ. ನವೀನ್ ಗೆ ನಡೆದು ಬರುವಷ್ಟು ದಾರಿ. ಜತೆಗೆ ಯಾರಾದರೂ ಗೆಳೆಯರು ಸಿಕ್ಕುತ್ತಿದ್ದುದ್ದರಿಂದ ವಾಹನವೇರುವ ಯೋಜನೆ ಹೊಂದಿರಲಿಲ್ಲ. ನನ್ನದು ಸ್ಥಿತಿಯೇ ಬೇರೆ ಆಗಿತ್ತು.

ನಾನೇನೋ ಮನೆಗೆ ತಲುಪಿದೆ, ನವೀನ್ ನೂ ಬಂದ. ಉಳಿದ ಗೆಳೆಯರು ಸಿಗದಾಳ್, ಅರುಣ ಎಲ್ಲರೂ ಕುಳಿತು ಹರಟೆ ಹೊಡೆಯುತ್ತಿದ್ದೆವು. ಕುಳಮರ್ವ ಮಾಮ ತಮ್ಮ ಕೋಣೆಯಲ್ಲಿ ಚಾಚಿ ಮಾಡಿದ್ದಿರಬೇಕು. ಅವರು ತಮ್ಮ ಕೋಣೆ ಬಿಟ್ಟು ಬರುತ್ತಿದ್ದುದು ಕಡಿಮೆ. ನಮಗೂ ಅಷ್ಟೇ. ಬಹಳ ಬೇಸರವಾಯಿತು ಎಂದರೆ ಸುಮ್ಮನೆ ರೇಗಿಸಲೆಂದು ಕುಳಮರ್ವ ಮಾಮನ ರೂಮಿಗೆ ಹೋಗುತ್ತಿದ್ದುಂಟು. ಆ ಏಳು ರೂಮುಗಳ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು. ಅದಕ್ಕೂ ಆದ ಗಲಾಟೆ ಮತ್ತೊಮ್ಮೆ ಹೇಳುವೆ. ಹೀಗಿರುವಾಗ ಹರಟೆಯಲ್ಲಿ ಅದೇ ಆಫೀಸಿನ ರಗಳೆ, ಸತಾವಣೆ, ಅವರವರ ಆಫೀಸಿನಲ್ಲಿರುವ ದೊಡ್ಡಸ್ಥಿಕೆಯ ಮಂದಿಯ ಸಣ್ಣತನ…ಎಲ್ಲವನ್ನೂ ಹಾಕಿಕೊಂಡು ಅಗಿಯುತ್ತಿದ್ದೆವು. ಸಾಮಾನ್ಯವಾಗಿ ಮನೆಗೆ ಬೇಗ ಬಂದರೂ ಮಲಗುವ ಅಭ್ಯಾಸ ಇದ್ದದ್ದು ಕಡಿಮೆ. ಮಲಗುವಂತೆಯೂ ಇರಲಿಲ್ಲ. ಎಷ್ಟೋ ಬಾರಿ ಇವತ್ತು ಬೇಗ ಮಲಗೋಣ ಎಂದು ಒರಗಿಕೊಂಡಾಗಲೇ ಏನಾದರೊಂದು ಫೋನು ಬರ್ತಾ ಇತ್ತು…”ಸಾರ್, ಅಲ್ಲಿ ಆಕ್ಸಿಡೆಂಟ್ ಆಗ್ಬಿಟ್ಟಿದೆ…ಇಲ್ಲಿ ಮರ್ಡರ್ ಆಗಿದೆ..ಅಲ್ಲಿ ಥೆಫ್ಟ್ ಸಾರ್’ ಇಂಥ ಫೋನುಗಳಿಗೆ ಕಡಿಮೆ ಇರುತ್ತಿರಲಿಲ್ಲ. ಇದ್ಯಾವುದೂ ಇಲ್ಲ ಎಂದು ತಣ್ಣಗೆ ಮಲಗಿಕೊಂಡ್ರೂ ಆಫೀಸಿನಿಂದ ಯಾರಾದರೊಬ್ಬರು (ನೈಟ್ ಶಿಫ್ಟ್ ಇನ್ ಚಾರ್ಜ್) “ರೀ …ನಿಮ್ಮ ಫೈಲ್ ಸಿಕ್ತಾ ಇಲ್ವಂತಲೋ ? ಅಥವಾ ಏನು ಇವತ್ತು ಇಷ್ಟೊಂದು ಮಿಸ್ಠೇಕ್ಸ್ ಆಗ್ಬಿಟ್ಟಿದೆ ಎಂತಲೋ’ ಫೋನ್ ಮಾಡುವುದು ಇದ್ದೇ ಇರುತ್ತಿತ್ತು. ಇಂಥ ಫೋನ್ ಕರೆಗಳು ನನಗೆ ಬರುತ್ತಿದ್ದುದು ಕಡಿಮೆ. ಯಾಕೆಂದರೆ ನಮ್ಮಪೇಪರ್ 10 ಗಂಟೆಗೆ ಡೆಡ್ ಲೈನ್. ಅವರದ್ದು ಹಾಗಲ್ಲ.

ಹೀಗೆ ಹರಟೆ ಹೊಡೆಯುತ್ತಿರುವಾಗ ಹೊರಗೆ ಯಾರೋ ನಡೆದು ಬಂದ ಸದ್ದು. ಎರಡು ಕ್ಷಣದಲ್ಲಿ ಬಾಗಿಲು ಬಡಿಯತೊಡಗಿದರು. ಆಗ ಗಂಟೆಯೂ ಮಧ್ಯರಾತ್ರಿ ಹನ್ನೆರಡರ ಹತ್ತಿರ ಹತ್ತಿರ. ಹರ್ಷ ಬಂದಿರಲಿಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಆತನ ಸೈಕಲ್ ಶಬ್ದ ನಮಗೆ ಗೊತ್ತಿತ್ತು. ಸಾಮಾನ್ಯವಾಗಿ ಅವನು ಬಂದು ನಿಂತು ನವೀನನ ಹೆಸರು ಕೂಗುತ್ತಿದ್ದ, ಬಾಗಿಲು ಬಡಿಯುವ ಅಭ್ಯಾಸ ಇದ್ದದ್ದು ಕಡಿಮೆ. ಕರೆಗಂಟೆಯನ್ನು ಒತ್ತುತ್ತಿದ್ದುದೂ ಉಂಟು. ಇದ್ಯಾವುದೂ ಇಂದಿನ ಪ್ರಕ್ರಿಯೆಯಲ್ಲಿ ಇರಲಿಲ್ಲ. ಸರಿ, ನಾನು ಎದ್ದು ಹೋಗಿ ಬಾಗಿಲು ತೆಗೆದರೆ..ಸ್ವಾಮಿಗಳೇ ಎದುರು ನಿಂತಿದ್ದಾರೆ.

ನನಗೆ ಅಂದಿನ ಅವನ ಮುಖಛಾಯೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಸಾಮಾನ್ಯವಾಗಿ ಏನು ? ಯಾವಾಗಲೂ ಹರ್ಷ ಸಿಟ್ಟು ಮಾಡಿಕೊಂಡಿದ್ದಿರಲಿಲ್ಲ. ಮುಖ ಕೆಂಪಾಗಿದ್ದರೆ ಅದಕ್ಕೆ ಬೇರೆ ಕಾರಣವಿರುತ್ತಿತ್ತೇ ಹೊರತು ಸಿಟ್ಟಲ್ಲ. ಅಂಥವನ ಮುಖದಲ್ಲಿ ಸಿಟ್ಟು ಬುಸುಗುಡುತ್ತಿತ್ತು..ಪಾಪ, ಅವನಿಗೆ ಸಿಟ್ಟು ತೋರಿಸಿಕೊಳ್ಳುವುದೂ ಬರುವುದಿಲ್ಲ. ತಕ್ಷಣವೇ ನನಗೆ ಗೊತ್ತಾಯಿತು…ಎಲ್ಲೋ ಎಡವಟ್ಟಾಗಿದೆ ಎಂದು. ‘ಅಣ್ಣಾ… ಜ್ಯಾದೋ ಕಥೆ (ಏನು ಕಥೆ’ ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ನಾವು ಮನೆಯಲ್ಲಿ ತುಳುವನ್ನೇ ಹೆಚ್ಚು ಮಾತನಾಡುತ್ತಿದ್ದೆವು. “ಇಟ್ಸ್ ಓಕೆ…’ಎನ್ನುತ್ಥಾ ಒಳಬಂದು ಶೂ, ಸಾಕ್ಸ್ ತೆಗೆದ. ಒಳಗೆ ಬಂದವನು ಸುಧಾರಿಸಿಕೊಳ್ಳುವವರೆಗೂ ನಮಗೆ ಆತಂಕ. ಸೈಕಲ್ ಆಕ್ಸಿಂಡೆಂಟೇನಾದರೂ ಆಯಿತೇ ಎಂದು ಅವನ ಕೈ, ಕಾಲು ಎಲ್ಲ ಪರಿಶೀಲಿಸಿದೆವು. ಏನೂ ಆಗಿರಲಿಲ್ಲ. ಇದೊಳ್ಳೆ ಕಥೆ, ಏನು ಹೇಳೋ ಮಾರಾಯ ಎಂದು ಆಗ್ರಹಿಸಿದೆವು ನಾವೆಲ್ಲರೂ.

“ಏನೂ ಆಗಿಲ್ಲ, ನನ್ನ ಸೈಕಲ್ ನ್ನ ಬಿಟ್ಟು ಬಂದೆ’ ಎಂದು ಮೆಲ್ಲಗೆ ಉಸುರಿದ. ನಾವು ಅಂದುಕೊಂಡದ್ದು ಕದ್ದಿರಬಹುದೇ ಯಾರಾದರೂ ಎಂಬ ಅರ್ಥದಲ್ಲಿ. ಅದನ್ನು ತಕ್ಷಣವೇ ಗ್ರಹಿಸಿದ ಆತ, “ಆಯೇ ಪೊಲೀಸೀಗೇ ಬುಡ್ತು ಬತ್ತೆ’ ಎಂದ. ಆ ಪೊಲೀಸಿನವನಿಗೇ ಕೊಟ್ಟು ಬಂದೆ ಎಂದದ್ದು ಕೇಳಿ ಇನ್ನೂ ನಿಗೂಢವಾಯಿತು. “ಇವನ್ಯಾಕೆ ಪೊಲೀಸಿಗೆ ಕೊಟ್ಟು ಬಂದ” ಎಂಬುದು ಹೊಸ ಪ್ರಶ್ನೆ. ಮನಸ್ಸಿನೊಳಗೆ ಎಲ್ಲವೂ ಶಾಂತಗೊಂಡಾಗ ಶುರುವಾದ ಕಥೆ ಕೇಳಿ ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು. ಅವನ ಸಾತ್ವಿಕ ಕೋಪಕ್ಕೆ ಶಹಭಾಷ್ ಅನ್ನೂ ನೀಡಿದೆವು ಅನ್ನಿ.

ಈತ ಸೈಕಲ್ಲಿನಲ್ಲಿ ಬರುತ್ತಿದ್ದ. ಟ್ರಿನಿಟಿ ಸರ್ಕಲ್ ಬಳಿ (ಎಂಜಿ ರಸ್ತೆ, ತಾಜ್ ರೆಸಿಡೆನ್ಸಿಯ ಸರ್ಕಲ್) ಯಾರೋ ಪೊಲೀಸಿನವನು ಇವನಿಗೆ ಕಿಚಾಯಿಸಲು ಯತ್ನಿಸಿದ್ದಾನೆ. “ಏಯ್ ನಿಲ್ಲೋ…’ ಎಂದು ಕೂಗಿದವ ಪೊಲೀಸು. ನಮ್ಮ ಸಾಹೇಬರು ಆಜ್ಞಾ ಪಾಲಕನಂತೆ ನಿಂತ. ಹತ್ತಿರಕ್ಕೆ ಬಂದವನೇ ಪೊಲೀಸು, “ಈಗ ಹನ್ನೆರಡು ಗಂಟೆ (ಪೊಲೀಸರು ಯಾವಾಗಲೂ ಹತ್ತರಿಂದ ಹದಿನೈದು ನಿಮಿಷ ಹೆಚ್ದಿಗೆ ಹೇಳುತ್ತಾರೆ. ಅವರೇನಿದ್ದರೂ ರೌಂಡ್ ಫಿಗರ್). ಇಷ್ಟೊತ್ತಿಗೆ ಎಲ್ಲಿಂದ ಬರ್ತಿದ್ದೀಯಾ?’ ಎಂದು ಪ್ರಶ್ನಿಸಿದ. ನಮ್ಮ ಸಾಹೇಬರು ತಣ್ಣಗೆ, “ನಾನು ರಿಪೋರ್ಟರ್, ಇಂಡಿಯನ್ ಎಕ್ಸ್ ಪ್ರೆಸ್. ಕೆಲಸ ಮುಗಿಸಿ ಬರ್ತೀದ್ದೀನಿ’ ಎಂದು ವಿವರಿಸಿದ. ಇದು ಪೋಲಿಸ್ ಪೇದೆಗೆ ಸಾಕಾಗಲಿಲ್ಲ. ‘ತೋರ್ಸು ಐಡೆಂಟಿಟಿ ಕಾರ್ಡು ‘ ಅಂದ. ಅದು ಇವನಿಗೂ ಸಿಟ್ಟು ತರಿಸಿರಬೇಕು. ಸ್ವಲ್ಪ ಪರಸ್ಪರ ಮಾತಿನ ವಿನಿಮಯವಾಗಿದೆ. ಪೊಲೀಸ್ ಪೇದೆ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ “ಮಾಡ್ತೀನಿ ತಡಿ, ರೋಪ್ ಹಾಕ್ತೀಯಾ’ ಎಂದು ಹೇಳಿ ಸೈಕಲ್ ಟ್ಯೂಬ್ ನ ಗಾಳಿ ತೆಗೆದುಬಿಟ್ಟ. ಗಾಳಿ ತೆಗೆದ ಟೈರ್ ನೊದಿಗೆ ಸೈಕಲ್ ನ್ನು ಎಳೆದೊಯ್ಯುವ ಸುಖ ನೋಡಬೇಕೆಂಬುದು ಪೇದೆಯ ಇರಾದೆಯಾಗಿತ್ತು.

ಈ ವರ್ತನೆ ನಮ್ಮ ಸಾಹೇಬರಿಗೂ ಹಿಡಿಸಿರಲಿಲ್ಲ. “ರೀ…ಇಷ್ಟು ಹೇಳಿದರೂ ನನ್ನ ಸೈಕಲ್ ಗಾಳಿ ತೆಗೆದಿದ್ದೀರಲ್ಲ…ನಾನೂ ಮಾಡ್ತೀನಿ’ ಎಂದವನೇ ಆ ಸೈಕಲ್ ಅನ್ನು ಅವನ ಮೇಲೇ ಬಿಟ್ಟು (ಎಸೆದವನಂತೆ) ಬಿರಬಿರನೆ ನಡೆದು ಹೊರಟು ಬಿಟ್ಟ. ಆಗ ಪೇದೆ ನಿಜವಾಗಲೂ ಸಂಕಟಕ್ಕೆ ಸಿಕ್ಕು ಬಿದ್ದದ್ದು. ಇಷ್ಟೊತ್ತಿಗೆ ಇದನ್ನು ಎಲ್ಲಿ ನಿಲ್ಲಿಸೋದು ? “ರ್ರೀ…ರ್ರೀ…ಬರ್ರೀ..ಈ ಸೈಕಲ್ ತಗೊಂಡು ಹೋಗ್ರೀ’ ಎಂದರೂ ನಮ್ಮ ಸಾಹೇಬರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಒಂದೇ ಉಸಿರಿನಲ್ಲಿ ಎನ್ನುವಂತೆ ಮನೆಗೆ ನಡೆದು ಬಂದುಬಿಟ್ಟರು. ಇದು ಇಡೀ ಪ್ರಸಂಗ.

ಸಾಹೇಬರ ಗಾಂಧಿಗಿರಿ ನೋಡಿ ನಿಜಕ್ಕೂ ವಿಚಿತ್ರವೆನಿಸಿತು. ನಾವಾದರೆ, ಒಂದಿಷ್ಟು ಬೈದೋ, ನಮ್ಮ ಸಂಪರ್ಕಗಳನ್ನು ಬಳಸಿ ರೋಪು ಹಾಕಿಯೋ, ಯಾರಾದರೂ ಬಳಿ ಹೇಳಿಸಿ ಬಿಡಿಸಿಕೊಂಡೋ, ಉನ್ನತ ಅಧಿಕಾರಿಗಳಿಂದ ಅವನಿಗೆ ಬೈಯಿಸಿ, ಅವನಿಂದ ಸಾರಿ ಎಂಬ ಕ್ಷಮಾಪಣೆಯ ಋಣ ಪಡೆದೋ ಬರುತ್ತೇವೆ. ಆದರೆ ಹರ್ಷ ಸಾಹೇಬರು ಅದ್ಯಾವುದನ್ನೂ ಮಾಡದೇ ಪಶ್ಚಾತ್ತಾಪದ ಶಿಕ್ಷೆ ಕೊಟ್ಟು ಬಂದು ಬಿಟ್ಟಿದ್ದರು. ಭಲೇ ಭಲೇ ಎನಿಸಿ ಬೆನ್ನಿಗೆ ಗುದ್ದಿ “ಅಂಚನೇ ಆವೊಡಿತ್ನು ಆಯೆಗ್’ (ಅವನಿಗೆ ಹಾಗೆ ಆಗಬೇಕಿತ್ತು) ಎಂದು ಪೇದೆಗೆ ಶಾಪ ಹಾಕುವುದಕ್ಕೆ ನಾವ್ಯಾರೂ ಮರೆಯಲಿಲ್ಲ.

ಅಂದಹಾಗೆ ಬೆಳಗ್ಗೆ ಅದೇ ಪೇದೆ ನಮ್ಮ ಸಾಹೇಬರ ಫೋನ್ ಪತ್ತೆ ಹಚ್ಚಿ , ‘ಸ್ವಾಮಿ, ನಿನ್ನೆ ಆದದ್ದು ಹೊಟ್ಟೆಯೊಳಗೆ ಹಾಕ್ಕೊಂಬಿಡಿ. ನಿಮ್ಮ ಸೈಕಲ್ ಸರಿಯಾಗಿದೆ. ತೆಗೆದುಕೊಂಡು ಹೋಗಿ’ ಎಂದು ಫೋನು ಮಾಡಿದ್ದ. ಅಂದು ರಾತ್ರಿ ಮತ್ತೆ ಮನೆ ಎದುರು ಸೈಕಲ್ ಶಬ್ದ ಕೇಳಿಸಿತು.