ಲೇಖನ

ಕನ್ನಡ ಜಾತ್ರೆಗೆ ಬನ್ನಿ…ಮರೆಯಬೇಡಿ

ಬೆಂಗಳೂರಿನಲ್ಲಿ ಫೆ. 4 ರಿಂದ 6 ರವರೆಗೆ ನುಡಿಜಾತ್ರೆ. 40 ವರ್ಷಗಳ ನಂತರ ಬೆಂಗಳೂರಿಗೆ ಬಂದಿದೆ ನುಡಿತೇರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ತೇರನೆಳೆಯಲು ಸರ್ವ ಸಿದ್ಧತೆಯೂ ನಡೆದಿದೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಮತ್ತು ಪದಾಧಿಕಾರಿಗಳ ತಂಡ ಸಿದ್ಧತೆಯ ಬೆನ್ನಿಗಿದೆ ಎಂದರೆ ಮಾತು ಮುಗಿಯುವುದಿಲ್ಲ. ಸಂಪ್ರದಾಯದಂತೆ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು…ಹೀಗೆ ಅಸಂಖ್ಯಾತ ಅಧಿಕಾರಿಗಳ ತಂಡವೂ ಊರನ್ನು ಸಜ್ಜಾಗಿಸಲು ತೊಡಗಿದೆ. ಇವರ ಮಧ್ಯೆಯೇ ಅಲ್ಲಲ್ಲಿ ತೋಳಗಳೂ ಸೇರಿಕೊಂಡಿವೆ, ದೊಡ್ಡ ಸಮಾರಾಧನೆ, ಸಿಕ್ಕಷ್ಟು ಸಿಗಲಿ, ಜೋಳಿಗೆ ತುಂಬಿಕೊಳ್ಳೋಣ ಎಂಬ ಮನೋಧರ್ಮದ ಕೆಲ ಅಧಿಕಾರಿಗಳು, ಕೆಲ ಸಾಹಿತ್ಯಾಸಕ್ತ ಸ್ವಯಂ ಸೇವಕರಂತೆ ಸೋಗು ಹಾಕಿಕೊಂಡವರೂ ಇದ್ದಾರೆ. ಇವರೆಲ್ಲಾ ಶೇ. 10 ರೊಳಗೆ ಬರುವವರು. ನಮ್ಮ ಸಮಾಜದಲ್ಲಿ ಇಂಥವರಿಲ್ಲದೇ ಏನೂ ನಡೆಯದು. ದೃಷ್ಟಿಬೊಟ್ಟಿನಂತೆ ಎಲ್ಲೆಲ್ಲೂ ರಾರಾಜಿಸುತ್ತಿರುತ್ತಾರೆ, ಹೆಚ್ಚು ಶೋಭಾಯಮಾನವಾಗದಂತೆ ಉಳಿದವರೆಲ್ಲರೂ ಎಚ್ಚರದಿಂದಿರಬೇಕಷ್ಟೇ.

40 ವರ್ಷಗಳ ಹಿಂದೆ ಚಾಮರಾಜಪೇಟೆ ಹೈಸ್ಕೂಲ್ ನ ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮ್ಮೇಳನಕ್ಕೆ ದೇ.ಜವರೇಗೌಡರು ಅಧ್ಯಕ್ಷತೆ ವಹಿಸಿದ್ದರು. ಸುಮಾರು 5 ಸಾವಿರ ಮಂದಿ ಭಾಗವಹಿಸಿರಬಹುದೆಂಬುದು ಒಂದು ಅಂದಾಜು. ಈಗ ಹತ್ತರಷ್ಟೋ, ಇಪ್ಪತ್ತರಷ್ಟೋ ಮಂದಿ ಭಾಗವಹಿಸಬಹುದು.

ಬೆಂಗಳೂರೆಂದರೆ ಒಂದಿಷ್ಟು ಆಕರ್ಷಣೆ ಬೇರೆ. ಹಾಗಾಗಿ ಬರುವವರಿಗೆ ಕೊರತೆಯಿಲ್ಲ, ಗೋಷ್ಠಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಜನರಿರುತ್ತಾರೋ ಇಲ್ಲವೋ ನಂತರದ ಮಾತು. ಪುಸ್ತಕ ಮಳಿಗೆಗಳಲ್ಲಿ ಜನರೊಂದಿಷ್ಟು ತೋರಬಹುದು, ತೋರದೆಯೂ ಇರಬಹುದು. ಆದರೆ ಬಸ್ಸುಗಳಲ್ಲಿ ಜನ ಖಂಡಿತಾ ತೋರುತ್ತಾರೆ, ಅದಕ್ಕೆ ಅಚ್ಚರಿ ಪಡಲೂ ಬೇಕಿಲ್ಲ.

ಸಮ್ಮೇಳನಕ್ಕೆ ಸಿದ್ಧತೆ ನಡೆಸುವವರಲ್ಲಿ ಹೀಗೇ ಮಾತನಾಡುತ್ತಿದ್ದಾಗ, “ನೋಡಿ, ಮೊದಲ ದಿನದ ಉದ್ಘಾಟನೆ, ಊಟ ಮತ್ತು ವಸತಿ ಸರಿ ಹೋದರೆ ಸಮ್ಮೇಳನ ಯಶಸ್ವಿಯಾದಂತೆಯೇ. ಎರಡನೇ ದಿನಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದರು. ಅದೂ ನಿಜವೆ, ವಿಮಾನ ಒಮ್ಮೆ ಟೇಕಾಫ್ ಆದರೆ ಮುಗಿಯಿತು, ಮತ್ತಿರುವ ಅಪಾಯ ಆಕಸ್ಮಿಕದ್ದು. ಮೊದಲನೆ ದಿನ ಮಾಧ್ಯಮದವರೂ ಬರೆದು ಮುಗಿಸುವ ಸಂಭ್ರಮದಲ್ಲಿರುತ್ತಾರೆ. ಅಂದು ಏನೇ ನಡೆದರೂ ಸುದ್ಧಿ ಹಾಗೂ ಮಿಸ್ ಆಗಬಾರದೆನ್ನುವ ಧಾವಂತ. ಬರೆದದ್ದೆಲ್ಲವೂ ಅಚ್ಚಾಗುತ್ತದೆ, ಅದೂ ಸಮಸ್ಯೆಯಲ್ಲ. ಆದರೆ, ಎರಡನೇ ದಿನ ಮಾಧ್ಯಮದವರ ಉತ್ಸಾಹವೇನೂ ಕುಂದುವುದಿಲ್ಲ, ಆದರೆ ಅವರು ಬರೆದರೂ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣವಿಷ್ಟೇ, ಅಲ್ಲಿರಬೇಕಾದ ಬಹುತೇಕ ಜನರೆಲ್ಲಾ ಬೇರೆಲ್ಲೋ ತಿರುಗುತ್ತಿರುತ್ತಾರೆ !

ಇವೆಲ್ಲದರ ಮಧ್ಯೆ ನಾವು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯನ್ನು ಕಂಡು ಸಂಭ್ರಮಿಸಬೇಕಾದದ್ದಕ್ಕೆ ಹಲವು ಕಾರಣಗಳಿವೆ. ಬೆಂಗಳೂರು-ಪರಭಾಷಿಗರದ್ದೇ ಊರು ಎಂಬ ಅಪವಾದಕ್ಕೆ ಗುರಿಯಾಗಿರುವ ಹೊತ್ತು. ಈ ಸಂದರ್ಭದಲ್ಲಿ ಆ ಜನ ಸಮುದಾಯಕ್ಕೆ ಉತ್ತರ ಕೊಡುವ ರೀತಿಯಲ್ಲಲ್ಲ, ನಮ್ಮ ಮನೆಯ ಹಿರಿಮೆಯನ್ನು ಹಿಡಿದು ಸಾರಲಿಕ್ಕಾದರೂ ಸಮ್ಮೇಳನಕ್ಕೆ ಬರಬೇಕು. ನಿಮ್ಮ ಜತೆಗೆ ಒಂದಿಷ್ಟು ನಿಮ್ಮ ಗೆಳೆಯರಾದ ಒಂದಿಷ್ಟು ತಮಿಳರನ್ನು, ತೆಲುಗಿರನ್ನು, ಮಲಯಾಳಿಗಳನ್ನು ಕರೆದುಕೊಂಡು ಬನ್ನಿ. ಸಾಹಿತ್ಯ ಪರಿಷತ್ತಿನವರು ಬೆಂಗಳೂರಿನಲ್ಲೇ ಇರುವ ಒಂದಿಷ್ಟು ಪರಭಾಷಿಗ ಸಾಹಿತಿಗಳನ್ನು ಆಹ್ವಾನಿಸಬೇಕಿತ್ತು. ಆ ಲೆಕ್ಕದಲ್ಲಿ ಒಂದು ಬಗೆಯ ಸೌಹಾರ್ದ ಸಮ್ಮೇಳನ ಎನಿಸಬಹುದಿತ್ತು.

ನಮ್ಮೂರಿನಲ್ಲಿ ಕನ್ನಡದ ಜಾತ್ರೆ ನಡೆಯುತ್ತಿರಬೇಕಾದರೆ, ಅದು ಹೇಗಿರುತ್ತದೆ ಎಂಬ ಕುತೂಹಲಕ್ಕಾದರೂ ನೋಡಬೇಕು. ಅದಕ್ಕಾದರೂ ಬನ್ನಿ, ಒಂದಿಷ್ಟು ಪುಸ್ತಕಗಳನ್ನು ಕೊಂಡು ಹೋಗಿ. ಪುರಸೊತ್ತಾದರೆ ಓದಿ, ಇಲ್ಲವಾದರೆ ಮುಂದಿನ 25 ವರ್ಷಗಳಲ್ಲಿ ಅದು ಆಂಟಿಕ್ ಪೀಸ್ ಆಗುತ್ತೆ.

ಫೆ. 4 ರಂದು ಸಮ್ಮೇಳನದ ಮೆರವಣಿಗೆ ಹೊರಡುತ್ತೆ. ಅದರಲ್ಲಿ ಹಿರಿಯಜೀವಿ ಜಿ. ವೆಂಕಟಸುಬ್ಬಯ್ಯನವರು ರಾರಾಜಿಸುತ್ತಿರುತ್ತಾರೆ. ಅವರ ಮೇಲೆ ರಾಜರಾಜೇಶ್ವರಿ. ಎಲ್ಲರನ್ನೂ ನೋಡೋಣ. ವಾಸ್ತವವಾಗಿ ಈ ಸಮ್ಮೇಳನ ಎಂಬುದು ನಮ್ಮೊಳಗಿನ ಔದಾರ್ಯದ ಸೆಲೆಯನ್ನು ಪುನರುಜ್ಜೀವಗೊಳಿಸಿಕೊಳ್ಳುವ ನೆಲೆಯೂ ಹೌದು. ನಮ್ಮೊಳಗಿನ ವ್ಯಕ್ತಿಯೊಬ್ಬನನ್ನೇ ಅವನ ಪ್ರತಿಭೆಗೆ, ಶ್ರಮಕ್ಕೆ ಗೌರವ ಕೊಟ್ಟು ಅತ್ಯುನ್ನತ ಸ್ಥಾನದಲ್ಲಿಟ್ಟು ಸಂಭ್ರಮಿಸುವುದಿದೆಯಲ್ಲ, ಅದು ಬಹಳ ದೊಡ್ಡದು. ಹಾಗಾಗಿ ತಪ್ಪದೇ ಬನ್ನಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s