ಗುಲ್ವಾಡಿಯವರು ನಿಧನರಾಗಿದ್ದಾರೆ.

ಕನ್ನಡ ಪತ್ರಿಕೋದ್ಯಮ ಗುಲ್ವಾಡಿಯವರನ್ನು ನೆನಪಿಸಿಕೊಳ್ಳಲು ಹಲವು ಕಾರಣಗಳಿವೆ. ಹತ್ತು ಹಲವು ಹೊಸ ನೆಲೆಗಳನ್ನು ಶೋಧಿಸಿದ ಅವರಿಗೆ ಹೊಸತನದ ಬಗೆಗಿದ್ದ ಆಪ್ತತೆಯೇ ಅವರನ್ನು ಪತ್ರಿಕೋದ್ಯಮದಲ್ಲಿದ್ದಷ್ಟೂ ಕಾಲ ಹಸಿರಾಗಿರಿಸಿತ್ತು.

ನನಗೂ ತರಂಗ ಆಪ್ತವಾಗುವುದಕ್ಕೆ ಬಹಳಮುಖ್ಯವಾದ ಕಾರಣವೆಂದರೆ, ಅವರ ಅಂತರಂಗ-ಬಹಿರಂಗ. ಸಂಪಾದಕೀಯ ಬರಹಗಳು ಹೊಸ ಬಗೆಯಲ್ಲಿ ಆಲೋಚಿಸುವಂತೆಯೂ ಮಾಡಿದ್ದವು. ಅಷ್ಟೇ ಅಲ್ಲದೇ, ನಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಎತ್ತಿ ಹೇಳುತ್ತಿದ್ದವು.

ನನ್ನ ಅರಿವಿಗೆ ಬಂದಂತೆ (ನನ್ನ ವಿದ್ಯಾರ್ಥಿಯ ದೆಸೆಯಲ್ಲಿದ್ದಾಗ) ಗುಲ್ವಾಡಿಯವರೊಬ್ಬರೇ ವಾರಪತ್ರಿಕೆಯಂಥ ಕಡೆಯೂ ತೀಕ್ಷ್ಣವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಿದ್ದುದು ಅನಿಸುತ್ತದೆ. ದಿನಪತ್ರಿಕೆಗಳ ಉಸಾಬರಿಗೆ ನಾನು ಹೋಗುವುದಿಲ್ಲ.

ಒಂದು ವಾರಪತ್ರಿಕೆಗೆ ಉತ್ಪನ್ನದ ಮೌಲ್ಯವನ್ನೂ ನೀಡಿದವರು ಬಹುಶಃ ಅವರೇ. ಉತ್ಪನ್ನದ ಮೌಲ್ಯ ಎಂದ ಕೂಡಲೇ ನಕಾರಾತ್ಮಕ ನೆಲೆಯಲ್ಲಿ ಅರ್ಥೈಸಲು ಹಲವು ಸಂಗತಿಗಳಿವೆ. ಪತ್ರಿಕೋದ್ಯಮವನ್ನೇ ಲಾಭವೆನ್ನುವಂತೆ ಮಾಡಿದರೆಂಬ ಆರೋಪಕ್ಕೂ ಗುರಿಯಾಗಬೇಕಾದೀತೇನೋ. ಆದರೆ ಅದ್ಯಾವುದೂ ಅಲ್ಲ. ಬಹಳ ಪ್ರಮುಖವಾಗಿ ಪತ್ರಿಕೆಯೂ ಉತ್ಪನ್ನದ ಮಾದರಿಯಾಗಬೇಕೆಂಬುದರ ಹಿಂದೆ ಇರಬಹುದಾದ ಒಂದು ಸಕಾರಾತ್ಮಕ ನೆಲೆಯೆಂದರೆ ವೃತ್ತಿಪರತೆ.

ವೃತ್ತಿಪರತೆ ಇಲ್ಲದೇ ಯಾವ ಕೆಲಸವನ್ನೂ ಮಾಡಬಾರದು. ಹಾಗೆ ಪತ್ರಿಕೋದ್ಯಮದಲ್ಲಿ ಅದರಲ್ಲೂ ಕನ್ನಡ ಪತ್ರಿಕೋದ್ಯಮಕ್ಕೆ ವೃತ್ತಿಪರತೆಯನ್ನು ಆ ಮೂಲಕವೇ ಪರಿಚಯಿಸಿದವರಲ್ಲಿ ಗುಲ್ವಾಡಿಯವರೂ ಒಬ್ಬರೆಂದರೆ ತಪ್ಪೇನೂ ಅಲ್ಲ.

ಪ್ರತಿ ವಾರದ ಸಂಚಿಕೆಯನ್ನೂ ಅತ್ಯಾಕರ್ಷಕವಾಗಿ ಮಾಡಬೇಕೆನ್ನುವ ಹಠವೇ ಅವರನ್ನು ಎಷ್ಟೋ ಬಾರಿ ಗೆಲ್ಲಿಸಿತ್ತು. ವಾಸ್ತವವಾಗಿ ವಾರಕ್ಕೊಂದು ವಿಷಯವನ್ನು ಹುಡುಕುವುದು ಹಾಗೂ ಅದಕ್ಕೆ ಹತ್ತಾರು ಪುಟಗಳ ಸಾಮಗ್ರಿಗಳನ್ನು ಹೊಂದಿಸುವುದು ಅತ್ಯಂತ ಕಷ್ಟದ ವಿಷಯ. ಯಾವುದಾದರೂ ಸಮಕಾಲೀನ ಬೆಳವಣಿಗೆಗಳನ್ನು ಘಟಿಸುತ್ತಿದ್ದರೆ, ಅದರ ಹಿನ್ನೆಲೆಯನ್ನು ಕೆದಕುವುದೋ, ಭವಿಷ್ಯವನ್ನು ಹುಡುಕುವುದೋ ಒಂದಿಷ್ಟು ಗ್ರಹಿಕೆಯ ಸಾಧ್ಯತೆಗೆ ನಿಲುಕಿ ಮುಗಿದು ಹೋಗುತ್ತದೆ.

ಆದರೆ ಏನೂ ಘಟಿಸದಿದ್ದರೂ, ಏನಾದರೂ ಓದುವಂಥ ಸಾಮಗ್ರಿ ಕೊಡುವುದು ಸ್ವಲ್ಪ ಕಷ್ಟವೇ. ಅದರಲ್ಲೂ ಆ ಕಾಲದಲ್ಲಿ (90ರ ದಶಕ) ಹೀಗೆಲ್ಲಾ, ಇಷ್ಟೆಲ್ಲಾ ರಾಡಿಯೂ ಇರಲಿಲ್ಲ, ಘಟನೆಗಳೂ ಇರಲಿಲ್ಲ. ಜತೆಗೆ ಪ್ರತಿ ಓದುಗನಿಗೆ ಪತ್ರಿಕೆಯ ತರಿಸುವುದು ಕೇವಲ ಪ್ರತಿಷ್ಠೆಯ ಸಂಗತಿಯಾಗಿಯಷ್ಟೇ ಉಳಿದಿರಲಿಲ್ಲ. ವಾರಕ್ಕೆ ಓದುವಷ್ಟು, ನಾವು ತಿಳಿದುಕೊಳ್ಳುವಷ್ಟು ಅದರಲ್ಲಿ ಸಿಗುತ್ತದೆ ಎಂದಿದ್ದರೆ ಮಾತ್ರ ಖರೀದಿಸುವ ರಿಸ್ಕ್. ಅದರಲ್ಲೂ ನಾನು ಅಕ್ಕಪಕ್ಕದ ಮನೆಯಲ್ಲೋ ಓದಿ ಮುಗಿಸಿದವನು.

ಆಗ ಪ್ರತಿ ಸಂಚಿಕೆಯ ಲೀಡ್ ಅನ್ನು ಓದಿ ಅರ್ಥೈಸಿಕೊಳ್ಳುವಷ್ಟು ಬೆಳೆದಿರಲಿಲ್ಲ. ನಮಗೆ ಬಾಲವನದಲ್ಲಿ ಕಾರಂತಜ್ಞ ಬಹಳ ಇಷ್ಟವಾಗುತ್ತಿದ್ದ ಕಾಲಂ. ಯಾವುದೋ ಮಕ್ಕಳು ಕೇಳುತ್ತಿದ್ದ ಪ್ರಶ್ನೆಗೆ ಹಿರಿಯ ಸಾಹಿತಿ ಶಿವರಾಮ ಕಾರಂತರು ಉತ್ತರಿಸುತ್ತಿದ್ದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿತ್ತು. ಮತ್ತೊಂದು ಸಂಗತಿಯೆಂದರೆ ಕಾರಂತರ ಬಗೆಗಿನ ಗೌರವ ಇಮ್ಮಡಿಸಲೂ ತರಂಗವೇ ಕಾರಣ. ಅಷ್ಟು ದೊಡ್ಡ ಸಾಹಿತಿ ಇಷ್ಟು ಚಿಕ್ಕ ಮಕ್ಕಳ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂಬುದೇ ಸೋಜಿಗ ಮೂಡಿಸಿತ್ತು. ನಾನೂ ಹಲವು ಬಾರಿ ಪೋಸ್ಟ್ ಕಾರ್ಡಿನಲ್ಲಿ ಪ್ರಶ್ನೆ ಬರೆದು ತರಂಗ ವಾರಪತ್ರಿಕೆ, ಮಣಿಪಾಲ, ಉಡುಪಿ ಎಂದು ವಿಳಾಸ ಬರೆದು ಕಳಿಸಿದ್ದು ಬೇಕಾದಷ್ಟಿತ್ತು. ನನ್ನ ದುರಾದೃಷ್ಟ ಒಂದು ಪ್ರಶ್ನೆಯೂ ಆಯ್ಕೆಯಾಗಲಿಲ್ಲ, ಕಾರಂತಜ್ಜ ಉತ್ತರಿಸಲಿಲ್ಲ.

ಹೀಗೇ ಹಪ್ಪಳ-ಸಂಡಿಗೆಯಿಂದ ಹಿಡಿದು ಹತ್ತು ಹಲವು ವೈವಿಧ್ಯಗಳನ್ನು ನೀಡಿದ ತರಂಗದ ಬೆನ್ನೆಲುಬಾಗಿ ದುಡಿದವರು. ಆಗ ಬರಿದೇ ಹಪ್ಪಳ ಸಂಡಿಗೆ ಬರುತ್ತೆ ಎಂದು ಹೀಗಳೆದವರೂ ಇದ್ದರು. ಆದರೆ, ಲೈಫ್ ಸ್ಟೈಲ್ ನಲ್ಲಿ ಬದಲಾಗುತ್ತಿದ್ದ ಪರಿಯನ್ನು ಗ್ರಹಿಸಿ ಇಂಥವೆಲ್ಲವೂ (ಹೊಸರುಚಿ, ಹಪ್ಪಳಸಂಡಿಗೆ, ಪರ್ಸನಾಲಿಟಿ ಡೆವಲಪ್ ಮೆಂಟ್ ಇತ್ಯಾದಿ) ಮುಂದಿನ ದಿನಗಳಲ್ಲಿನ ಸುದ್ದಿಯ ಜಾಗವನ್ನು ಆಕ್ರಮಿಸುತ್ತವೆ ಎಂದು ಆಗಲೇ ಗ್ರಹಿಸಿದ್ದು ಇದೆಯಲ್ಲ, ಅದು ಒಬ್ಬ ಪತ್ರಕರ್ತನ ಗ್ರಹಿಕೆ. ದುರಂತವೆಂದರೆ ದಿನಪತ್ರಿಕೆಯೂ ಸೇರಿದಂತೆ ಇಂದು ಹಲವೆಡೆ ಪ್ರಕಟವಾಗುತ್ತಿರುವ ಹಲವು ಅಂಕಣ ಬರಹಗಳಲ್ಲಿ ಇಂಥದೊಂದು ದೂರದ ನೆಲೆಯೇ ಗೋಚರಿಸುವುದಿಲ್ಲ. ಎಲ್ಲವೂ ಅಂದಂದು ಮಾಡಿದ ಅಡುಗೆ, ಹಳಸುವ ಮುನ್ನ ಬಳಸಿದರಷ್ಟೇ ಭಾಗ್ಯ ಎನ್ನುವಂತಾಗಿದೆ. ಈ ಮಧ್ಯೆ ಕೆಲವೇ ಮಂದಿ ಇದ್ದಾರೆ, ಒಂದಿಷ್ಟು ದೂರಕೇಂದ್ರವನ್ನಿಟ್ಟುಕೊಂಡು ಗ್ರಹಿಸುವವರು ಇದ್ದಾರೆ.

ಹೀಗೆ ನಾನಾ ನೆಲೆಗಳಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತಾ ಹೋದ ಗುಲ್ವಾಡಿಯವರು “ನೂತನ” ಪತ್ರಿಕೆಯ ಸಂಪಾದಕರಾಗಿದ್ದಾಗ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆಗ ನಾನು ವಿಜಯ ಕರ್ನಾಟಕದ ನೌಕರ. ವಿಜಯ ಕರ್ನಾಟಕ ಪತ್ರಿಕೆಯಲ್ಲೂ ನನ್ನ ಕೆಲವು ವರದಿಗಳು ಪ್ರಕಟವಾಗುತ್ತಿದ್ದವು. ನಾನು ನನ್ನ ಹೆಸರನ್ನು ಹೇಳಿ ಅವರ ನೂತನ ಕಚೇರಿಯಲ್ಲೇ ಪರಿಚಯಿಸಿಕೊಂಡೆ. “ಹೌದು, ನೋಡ್ತೀನ್ರೀ ನಿಮ್ಮ ವರದಿಗಳನ್ನು, ಸಾಂಸ್ಕತಿಕ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬರೆಯುತ್ತೀರಿ’ ಎಂದು ಹೇಳಿ ಊರು-ಕೇರಿಯನ್ನೆಲ್ಲಾ ವಿಚಾರಿಸಿ ಬೆನ್ನುತಟ್ಟಿ ಕಳುಹಿಸಿದರು. ನಂತರ ಸಿಗಲು ಸಾಧ್ಯವಾಗಲೇ ಇಲ್ಲ.

ನನಗೆ ಎಷ್ಟೋ ಬಾರಿ ಅನಿಸಿದ್ದಿದೆ. ಪ್ರತಿ ಕಾಲಘಟ್ಟದಲ್ಲೂ ಸಮಾಜದೊಳಗೆ ಆಗುವ ಬದಲಾವಣೆಯನ್ನು ಸೂಕ್ಷ್ಮ ನೆಲೆಯಲ್ಲಿ ಗ್ರಹಿಸುತ್ತಲೇ ಅದಕ್ಕೆ ನಮ್ಮೊಳಗೂ ಬದಲಾವಣೆಯ ಗಾಳಿಯನ್ನು ಬಿಟ್ಟುಕೊಂಡು ತಯಾರಾಗಬೇಕಾದವನು ಪತ್ರಕರ್ತ. ಒಂದು ಸಂಸ್ಥೆ, ಒಂದು ವ್ಯವಸ್ಥೆಯೊಳಗೆ ಇರುವವರೆಗೂ ಅಂಥದೊಂದು ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಬದುಕಿರುತ್ತೇವೆ (ಹಾಗೆ ಬದುಕದವರು ಈಗ ಬೇಕಾದಷ್ಟು ಮಂದಿ ಇದ್ದಾರೆ, ಬಿಡಿ), ಬದುಕುವ ಪ್ರಯತ್ನ ನಡೆಸುತ್ತಿರುತ್ತೇವೆ. ಅಂಥದೊಂದು ವ್ಯವಸ್ಥೆಯಿಂದ ಹೊರಬಂದು ಬಿಟ್ಟರೆ, ಬಾಧಿಸುವ ದೊಡ್ಡ ಸಮಸ್ಯೆಯೆಂದರೆ ಆ ನಮ್ಮನ್ನು ನಾವು ಪರಿಷ್ಕೃತಗೊಳಿಸಿಕೊಳ್ಳುವ ಪ್ರಕ್ರಿಯೆಯಿಂದ ದೂರ ಉಳಿದು ಬಿಡುವುದೇ ಹೆಚ್ಚು.

ಈ ಮಾತಿನ ಮಧ್ಯೆಯಲ್ಲೂ “ನೂತನ” ಬಂದ ಹೊತ್ತು ಕನ್ನಡ ಪತ್ರಿಕೋದ್ಯಮವಷ್ಟೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲೇ ತಂತ್ರಜ್ಞಾನ ಹುಟ್ಟುಹಾಕಿದ ಹತ್ತು ಹಲವು ಸವಾಲುಗಳಿದ್ದವು. ಅದನ್ನು ಗ್ರಹಿಸುವಾಗ ಸ್ವಲ್ಪ ಕಷ್ಟವಾಯಿತೇನೋ ? ನೂತನ ನಿಲ್ಲಲಿಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ತಂತ್ರಜ್ಞಾನ ನಮ್ಮ ಓದಿನ ವೈವಿಧ್ಯ, ಬಯಸುವ ಮಾದರಿ, ಮಾಹಿತಿಯ ರೀತಿ ಎಲ್ಲವನ್ನೂ ಬದಲಿಸಿತು. ಇಂಥ ಬೆಳವಣಿಗೆಯ ನೆಲೆಗೆ ಹೊಸತನ್ನು ತರುವ ಪ್ರಯತ್ನ ಗುಲ್ವಾಡಿಯವರದ್ದಾಗಿತ್ತಾದರೂ, ಅದೇಕೋ ಹೊಸ ತಲೆಮಾರಿಗೆ ರುಚಿಸಲಿಲ್ಲ. ಹಾಗಾಗಿ ಪ್ರಯತ್ನ ವಿಫಲವಾಯಿತು. ಇಂಥದೊಂದು ಗಳಿಗೆಯಲ್ಲಿ ಗುಲ್ವಾಡಿಯವರು ನೂತನದಿಂದ ಹೊರ ಹೊರಟಾಗ ನನಗೆ ಅನಿಸಿದ್ದ ಮಾತು…ಇಂದಿಗೂ ಅದೇ ನನ್ನ ವೇದವಾಕ್ಯವೂ ಹೌದು ಹಾಗೂ ನನ್ನ ಆತ್ಮ ವಿಶ್ವಾಸ ವೃದ್ಧಿಸಿದ ವಾಕ್ಯವೂ ಹೌದು. ನಾನು ನನ್ನ ಹೊಸ ಹುದ್ದೆಯನ್ನು ಸ್ವೀಕರಿಸುವ ಸಂದರ್ಭದಲ್ಲೂ ನನ್ನ ನೆರವಿಗೆ ಬಂದಿರುವ ವಾಕ್ಯ…”ಪ್ರಯತ್ನಕ್ಕೆ ಒಂದೇ ಕಾರಣ, ಫಲಿತಾಂಶಕ್ಕೆ ನಾನಾ ಕಾರಣ’. ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೆ.

ಇಂದೂ ಗುಲ್ವಾಡಿಯವರು ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಸೋತಿದ್ದರೆ ಅದಕ್ಕೆ ಅವರ ಪ್ರಯತ್ನವಲ್ಲ, ಫಲಿತಾಂಶದ ನೆಲೆಯಲ್ಲಿ ಕೇಂದ್ರೀಕೃತವಾದ ನಾನಾ ಅಂಶಗಳೆಂದೇ ಅನಿಸುತ್ತದೆ. ಯಾವುದಕ್ಕೂ ಗುಲ್ವಾಡಿಯವರ ಶ್ರಮ, ಸಜ್ಜನಿಕೆಗೆ ನಮಸ್ಕಾರ.