ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಇನ್ನಿಲ್ಲ.

72 ವರ್ಷ ವಯಸ್ಸಿನವರಾದ ಅವರು, ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.

ಗುಲ್ವಾಡಿಯವರು, ಒಂದು ತಲೆಮಾರಿನ ಪತ್ರಿಕೋದ್ಯಮವನ್ನು ಬೆಳೆಸಿದವರು. ಅದರಲ್ಲೂ ವಾರಪತ್ರಿಕೆಯ ಟ್ರೆಂಡ್ ನ್ನು ಭಿನ್ನ ನೆಲೆಯಲ್ಲಿ ಸಾಗುವಂತೆ ಮಾಡಿದವರೂ ಅವರೇ. “ತರಂಗ” ವಾರಪತ್ರಿಕೆಯ ಸಂಪಾದಕರಾಗಿ ಹೊಸ ಹೊಸ ಪ್ರಯೋಗಗಳತ್ತ ಮುಖ ಮಾಡಿದವರು.

ನಂತರ ಸಾಕಷ್ಟು ವರ್ಷ ಆ ಪತ್ರಿಕೆಯಲ್ಲಿ ದುಡಿದ ಅವರು, ಹತ್ತು ವರ್ಷದ ಹಿಂದೆ ವಿಜಯ ಸಂಕೇಶ್ವರರು ಆರಂಭಿಸಿದ ‘ನೂತನ’ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಮುಂಬಯಿನಲ್ಲೂ ಸಾಕಷ್ಟು ಕಾಲವಿದ್ದ ಅವರಿಗೆ ಕಲೆಯ ಹುಚ್ಚು. ಕಲೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ಆ ನೆಲೆಯಲ್ಲಿ ಬಹಳಷ್ಟು ಕೆಲಸ ಮಾಡಿದವರು. ಹೊಸ ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದವರು. ಪತ್ರಿಕೋದ್ಯಮದ ಒಂದು ನೆಲೆಯಾಗಿದ್ದ ಅವರ ನಿಧನದಿಂದ ಮತ್ತೊಂದು ಹಳೆಯ ಕೊಂಡಿಯನ್ನು ಕಳೆದುಕೊಂಡಂತಾಗಿದೆ.