ಇದು ಸಂಪೂರ್ಣ ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ನಿಲುವು. ಇದನ್ನು ಸಾಂಸ್ಥಿಕ ನೆಲೆಯಲ್ಲಿ ನೋಡಬೇಕಿಲ್ಲ ಮತ್ತು ಅರ್ಥೈಸಬೇಕೂ ಇಲ್ಲ.

ಹಿಂದೆಲ್ಲಾ ಗೌರವ, ಪ್ರಶಸ್ತಿ ಹೇಗೆ ಬರುತ್ತೆ ಎಂಬುದು ಮುಖ್ಯವಾಗಿತ್ತು. ಅದೇ ದೊಡ್ಡ ಸಂಗತಿಯೂ ಆಗಿತ್ತು. ಈಗೆಲ್ಲಾ ಗೌರವ, ಪ್ರಶಸ್ತಿ ಯಾರು ಕೊಡುತ್ತಾರೆ ಎನ್ನುವುದಕ್ಕಿಂತಲೂ ಯಾರೊಂದಿಗೆ ನಾವು ಪಡೆಯುತ್ತೇವೆ ಎನ್ನವುದೂ ಬಹಳ ಮುಖ್ಯವಾಗಿದೆ. ಕನ್ನಡ ಸಾಹಿತ್ಯದಲ್ಲೋ, ಸಂಗೀತದಲ್ಲೋ, ಸಂಸ್ಕೃತಿ ಕ್ಷೇತ್ರದಲ್ಲೋ, ವಿಜ್ಞಾನದಲ್ಲೋ, ತಂತ್ರಜ್ಞಾನದಲ್ಲೋ ಸಾಕಷ್ಟು ಕೆಲಸ ಮಾಡಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಮಂದಿಯ ಸಾಧನೆಯನ್ನೂ, ಒಂದಿಷ್ಟು ವಾಹಿನಿಗಳಲ್ಲಿ ಹರಟೆ ಹೊಡೆದುಕೊಂಡು, ಜೋಕು ಕಟ್ ಮಾಡಿಕೊಂಡು ಚಪ್ಪಾಳೆ ಗಿಟ್ಟಿಸುವ ಮಂದಿಗಳ ಸಾಧನೆಯನ್ನೂ ಒಟ್ಟಿಗೆ ತೂಗು ಹಾಕುವುದಿದೆಯಲ್ಲ ಅದೇ ದೊಡ್ಡ ಸರಕಾರದ ಅವಿವೇಕದ ನಿರ್ಧಾರ.

ಇಡೀ ಪ್ರಶಸ್ತಿಯ ಪಟ್ಟಿಯನ್ನು ಕುರಿತು ಹೇಳುವುದಾದರೆ ಅದೇ ಅವಘಡಗಳು. ಅಧಿಕಾರಿಗಳು ತಮ್ಮನ್ನು ಓಲೈಸುವವರ ಒಂದು ಪಟ್ಟಿಯನ್ನು ಅಖೈರುಗೊಳಿಸಿದ್ದರೆ, ಅದಕ್ಕೆ ಉಳಿದ ಮಂತ್ರಿ ಮಹೋದಯರು ತಮ್ಮ ಹೆಸರನ್ನು ಸೇರಿಸಿದ್ದಾರೆ. ಪ್ರಶಸ್ತಿಯನ್ನೇ ದಂಧೆಯನ್ನಾಗಿಸಿಕೊಂಡಿರುವ ಕೆಲವು ಖಾಸಗಿ ಸಂಸ್ಥೆಗಳೂ ಉದ್ದೇಶಪೂರ್ವಕವಾಗಿ ಇಂಥದೆ ತಪ್ಪನ್ನು ಎಸಗುತ್ತವೆ. ಅದು ಸಾರ್ವಜನಿಕರನ್ನು, ಮಾಧ್ಯಮಗಳನ್ನು ವಂಚಿಸುವ ತಂತ್ರ ಅಂದರೆ ಅವರ/ಅವುಗಳ ಕಣ್ಣಿಗೆ ಮಣ್ಣೆರಚುವ ತಂತ್ರ. ಒಂದಿಷ್ಟು ಮಂದಿ ಹೇಳ ಹೆಸರಿಲ್ಲದ, ಸಾಧಕರೇ ಅಲ್ಲದವರಿಂದ ಅರ್ಜಿ ಪಡೆದು, ಹಣಕ್ಕಾಗಿ ಪ್ರಶಸ್ತಿ ಮಾರಿ, ಕೆಲವು ಮಹೋನ್ನತ ಸಾಧಕರ ಹೆಸರನ್ನು ಆ ಪಟ್ಟಿಗೆ ಸೇರಿಸಿ ಪ್ರಶಸ್ತಿ ಪ್ರದಾನ ಮಾಡುವ ದಂಧೆ ರಾಜ್ಯದಲ್ಲಿ ಹೊಸದೇನೂ ಅಲ್ಲ. ಜನರೂ ಮತ್ತು ಮಾಧ್ಯಮಗಳೂ “ಅಂಥ ಸಾಧಕರಿಗೆ ಕೊಡಲೇ ಬೇಕಿತ್ತು’ ಎಂದು ಹೇಳಿ ಉಳಿದವರನ್ನೆಲ್ಲಾ ಸಹಿಸಿಕೊಂಡು ಕಾರ್ಯಕ್ರಮಕ್ಕೂ ಬರುತ್ತಾರೆ, ಪ್ರಚಾರವನ್ನೂ ಕೊಡುತ್ತಾರೆ. ಇದು ಉದ್ದೇಶಪೂರ್ವಕವಾಗಿ ನಡೆಯುವ ಪ್ರಯತ್ನ. ನಿಜವಾದ ಅರ್ಥದಲ್ಲಿ ವಂಚನೆ.

ಹೀಗೆ ಮಾಧ್ಯಮಗಳನ್ನು ಸಂತೃಪ್ತಿಗೊಳಿಸುವಲ್ಲಿ ಪ್ರಯತ್ನಿಸಿದ ಸರಕಾರವೆಂದರೆ ಶ್ರೀಮಾನ್ ಯಡಿಯೂರಪ್ಪನವರದೇ ಮೊದಲಿನದು. ಒಂದು ರೀತಿಯಲ್ಲಿ ಬುಕ್ ಮಾಡಿಕೊಳ್ಳುವಂಥ ಪ್ರಯತ್ನ ಎಷ್ಟೊಂದು ಢಾಳಾಗಿದೆಯೆಂದರೆ ನಿಜಕ್ಕೂ ಅಚ್ಚರಿಯೂ ಆಗುತ್ತದೆ, ನಾಚಿಕೆಯೂ ಆಗುತ್ತದೆ. ಈ ಹಿಂದೆಯೂ ಕೆಲವು ಮುಖ್ಯಮಂತ್ರಿಗಳು “ಮೀಡಿಯಾ ಮ್ಯಾನೇಜ್” ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹೀಗೆ ಸಾರಾಸಗಟಲ್ಲ, ಢಾಳು ಢಾಳಾಗಿಯೂ ಅಲ್ಲ. ಏನಿದ್ದರೂ ಸೊಫಿಸ್ಟಿಕೇಟೆಡ್ ಆಗಿ ಮತ್ತು ಆಯ್ಕೆ ಮಂದಿಯನ್ನಷ್ಟೇ ಮ್ಯಾನೇಜ್ ಮಾಡುತ್ತಿದ್ದರು. ನಮ್ಮ ಶ್ರೀಮಾನ್ ಯಡಿಯೂರಪ್ಪನವರದ್ದು ಏನಿದ್ದರೂ ಹೋಲ್ ಸೇಲ್ ವ್ಯಾಪಾರ. ಅದಕ್ಕೇ ಇಂಥದೊಂದು ಐಡಿಯಾವನ್ನು ಪ್ರಯೋಗಿಸಿದ್ದಾರೆ. ಯಾವ ಮಹಾನುಭಾವ ಈ ಐಡಿಯಾ ಕೊಟ್ಟರೋ, ಅವರನ್ನು ಅಭಿನಂದಿಸಲೇಬೇಕು. ಅಂಥವರ ಐಡಿಯಾವನ್ನು ಮತ್ತಷ್ಟು ಕೇಳಿದರೆ ಯಡಿಯೂರಪ್ಪನವರ ಸರಕಾರ ಜನರ ಮುಂದೆ ಮತ್ತಷ್ಟು ಬಾರಿ ಹರಾಜು ಆಗಲು ಏನೂ ಅಡ್ಡಿಯಿಲ್ಲ.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಮಾಧ್ಯಮದವರಿಗೆ ಅತಿ ಹೆಚ್ಚು ಸ್ಥಾನ ಸಿಕ್ಕಿದೆ. ಇದುವರೆಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸಾಧಕರಿಗೆ ಅತಿ ಹೆಚ್ಚು ಸಿಗುತ್ತಿತ್ತು. ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಎಂದರೆ 15 ಮಂದಿ ಮಾಧ್ಯಮದವರಿಗೆ ಪ್ರಶಸ್ತಿ ನೀಡಲಾಗಿದೆ. ಸಾಹಿತ್ಯ, ಸಮಾಜಸೇವೆ, ಕ್ರೀಡೆ ಎಲ್ಲವೂ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕೊಟ್ಟಿರುವುದು 10 ಮಂದಿಗೆ ಮಾತ್ರ. ಮಾಧ್ಯಮದಲ್ಲಿಯೂ ಅದೇ ಸಂಖ್ಯೆಗೆ ಮಿತಿಗೊಳಿಸಬಹುದಿತ್ತು. ಆದರೆ ಅದು ಏಕೆ ಸಾಧ್ಯವಾಗಲಿಲ್ಲವೆಂದರೆ ಓಲೈಸುವುದು ಸರಕಾರಕ್ಕೆ ಅತ್ಯಂತ ತುರ್ತಾಗಿತ್ತು/ಇದೆ ಎಂದೇ ಅನಿಸುತ್ತದೆ.

ಇಷ್ಟೊಂದು ಮಾಧ್ಯಮ ಮಂದಿಗೆ ಕೊಟ್ಟರೆಂದು ಬೇಸರವೂ ಅಲ್ಲ, ಹೊಟ್ಟೆಕಿಚ್ಚೂ ಅಲ್ಲ. ವಿಪರ್ಯಾಸದಂತೆ ಕಾಣುವುದೆಂದರೆ ಅದಕ್ಕೊಂದು ಮಾನದಂಡ, ಹಿರಿತನ ಏನೂ ಬೇಡವೇ ? ಎಂಬುದು ನನ್ನ ಪ್ರಶ್ನೆ. ಯಾರು ವಿಭಾಗದ ಮುಖ್ಯಸ್ಥರಾಗಿರುತ್ತಾರೋ ಅವರಿಗೆಲ್ಲಾ ಪ್ರಶಸ್ತಿ ಕೊಡುತ್ತೇವೆಂದು ಇಳಿದು ಬಿಟ್ಟರೆ, ಇಂಥದೇ ಅನಾಹುತವಾಗುತ್ತದೆ. ಅದು ಆಗಿದೆ. ಹದಿನೈದು ಮಂದಿಯಲ್ಲಿ ಬಹುತೇಕರು ಯೋಗ್ಯರಿರಬಹುದು. ಅಂದರೆ ಹತ್ತು ಮಂದಿ ಎಂದಿಟ್ಟುಕೊಳ್ಳಿ. ಉಳಿದ ಐದು ಮಂದಿ ಆ ಹತ್ತು ಮಂದಿಯ ಮಾನವನ್ನೂ ಹರಾಜಿಗಿಟ್ಟರೆಂದರೆ ತಪ್ಪಾಗದು. ಪ್ರಶಸ್ತಿ ಪಡೆಯುವವರೂ ತಮ್ಮೊಳಗೆ ಆತ್ಮಾವಲೋಕನ ಮಾಡಿಕೊಂಡು ತಿರಸ್ಕರಿಸುವ ದೊಡ್ಡ ಗುಣವನ್ನೂ ಹೊಂದಿದರೆ ಇಂಥ ಮುಜುಗುರಗಳನ್ನು ಕಡಿಮೆ ಮಾಡಬಹುದೇನೋ ಎಂಬುದು ನನ್ನ ಅನಿಸಿಕೆಯಷ್ಟೇ.

ಯಾಕೆಂದರೆ, ಆ ಮೂಲಕ ಸರಕಾರದ ಎಲ್ಲ (ಪ್ರಶಸ್ತಿಯ ಪಟ್ಟಿಯಲ್ಲಿನ ಅನೈತಿಕತೆಯನ್ನೇ ಪಟ್ಟಿಮಾಡಿಕೊಂಡರೂ ಸಾಕು) ಅನೈತಿಕತೆಯನ್ನೂ ಒಪ್ಪಿಕೊಂಡಂತಾದೀತೆಂಬ ಎಚ್ಚರವೂ ಇದ್ದರೆ ಒಳಿತು. ಹೀಗೆ ಅರ್ಹರನ್ನು ಅನರ್ಹರೊಂದಿಗೆ (ಇದರ್ಥ ಯೋಗ್ಯರಲ್ಲವೆಂದಷ್ಟೇ) ಕುಳ್ಳಿರಿಸಿ ಸನ್ಮಾನಿಸುವುದೂ ಸತ್ಸಂಪ್ರದಾಯಕ್ಕೆ ಸಲ್ಲಿಸುವ ಗೌರವವಲ್ಲ. ಆ ಮೂಲಕ ಅರ್ಹರ ಸಾಧನೆಯನ್ನು ಕಡಿಮೆಗೊಳಿಸಿದಂತೆಯೇ. ಕೆಳಗಿರುವವನು ಮೇಲಿನವನಷ್ಟು ಎತ್ತರಕ್ಕೆ ಬೆಳೆಯದಿದ್ದಾಗ, ಮೇಲಿನವನನ್ನೇ ಕೆಳಗಿನವನ ಸಮಾನಕ್ಕೆ ತಂದರೆ ಹೇಗೆ ಎಂಬುದು ತತ್ ಕ್ಷಣದ ಮ್ಯಾನೇಜ್ ಮೆಂಟ್ ಎನಿಸಬಹುದೇನೋ ನಮ್ಮ ಆಡಳಿತ ಬೃಹಸ್ಪತಿಗಳ ಲೆಕ್ಕಾಚಾರದಲ್ಲಿ. ಆದರೆ, ಅದು ವಾಸ್ತವವಾಗಿ ಸಾಧಕನನ್ನು ಅವಮಾನಿಸುವುದಲ್ಲದೇ ಮತ್ತೇನೂ ಅಲ್ಲ. ಅಂಥ ಸಂಪ್ರದಾಯವನ್ನು ಸರಕಾರ ಮಾಡಬಾರದು, ಅದಕ್ಕೆ ಅರ್ಹರೂ ಅವಕಾಶ ಕಲ್ಪಿಸಬಾರದು ಎಂಬುದೂ ನನ್ನ ಅನಿಸಿಕೆ.

ಕನ್ನಡ ಪತ್ರಿಕೋದ್ಯಮಕ್ಕೆ ಕೊಟ್ಟಿರುವ ಕೊಡುಗೆಯೇನು ? ಕನ್ನಡಕ್ಕೂ ಅವರಿಗೂ ಏನು ಸಂಬಂಧ ? ಎಂಬುದನ್ನೂ ತಾಳೆ ಹಾಕಿ ನೋಡದೇ, ಎಲ್ಲ ಮುಖ್ಯಸ್ಥರಿಗೆ ಕೊಡುವ ಇರಾದೆಯಲ್ಲಿ ಓಲೈಸುವಿಕೆಯಲ್ಲದೇ ಬೇರೇನೂ ಕಾಣದು. ಕನ್ನಡಕ್ಕೂ ಕೆಲವರಿಗೂ ಸುತರಾಂ ಸಂಬಂಧವೇ ಇಲ್ಲದಿದ್ದರೂ ಅವರಿಗೆ ನೀಡಿರುವುದು ಸೋಜಿಗವೇ. ಆಯಾ ಪತ್ರಿಕೆಯಲ್ಲಿ, ವಾಹಿನಿಗಳಲ್ಲಿ “ಸುದ್ದಿಯನ್ನು ನಿರ್ಧರಿಸುವ ನೆಲೆಯ’ ಮುಖ್ಯಸ್ಥರಾಗಿದ್ದಾರೆಂಬ ಮಾತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸುವುದಾದರೆ ಯಾವುದಕ್ಕೆ ಗೌರವ ? ಪ್ರಶಸ್ತಿಗೋ ? ಅವರ ಸ್ಥಾನಕ್ಕೋ ? ಅವರ ಯೋಗ್ಯತೆಗೋ? ಎಷ್ಟೊಂದು ಬೇಸರದ ಸಂಗತಿಯಲ್ಲವೇ ಇದು. ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೊಡಿ, ಪರವಾಗಿಲ್ಲ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಹೀಗೆ ರಾಜಾರೋಷವಾಗಿ ಮಾಧ್ಯಮಗಳನ್ನು ಓಲೈಸುವ ಮಟ್ಟಕ್ಕೆ ಯಾವ ಸರಕಾರವೂ ಇಳಿದಿರಲಿಲ್ಲ. ಈ ಐಡಿಯಾ ಕೊಟ್ಟವರಿಗೆ ಮತ್ತೊಮ್ಮೆ ಹ್ಯಾಟ್ಸಾಫ್ !

ರಾಜ್ಯ ಸರಕಾರದ ಪ್ರಶಸ್ತಿಗಳಲ್ಲೂ ವಶೀಲಿ, ಬಾಜಿ ಹೆಚ್ಚಿ, ಅಧಿಕಾರಿಗಳ ಮಧ್ಯವರ್ತಿತನ, ಮಂತ್ರಿ ಮಹೋದಯರ ಮತ್ತು ಅವರ ಸಹಾಯಕರ ಕ್ಷೇತ್ರಗಳಲ್ಲಿನ ಅರಿವಿನ ಅಜ್ಞಾನ ಎಲ್ಲವೂ ಪ್ರಶಸ್ತಿಯ ಮರ್ಯಾದೆಯನ್ನು ಕಳೆಯುತ್ತಿವೆ. ಯಾವುದ್ಯಾವುದೋ ಹಂತಗಳಲ್ಲಿ ಆಗುತ್ತಿರುವ ತಪ್ಪು ಖಾಸಗಿಯವರು ನೀಡುವ ಪ್ರಶಸ್ತಿಯಷ್ಟೇ “ಗೌರವವನ್ನು’ ತಂದುಕೊಡುತ್ತಿವೆ. ಜನ, ಮಾಧ್ಯಮಗಳು ಅನುಮಾನದಿಂದಲೇ ನೋಡುವ, ಅರ್ಥೈಸುವ ಮಟ್ಟಿಗೆ ಪ್ರಶಸ್ತಿ ತಲುಪುತ್ತಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡರೆ ಈ ಗೌರವ ಸಲ್ಲಿಸುವ ಪದ್ಧತಿಗೆ ಗೌರವ ಬಂದೀತು, ಇಲ್ಲದಿದ್ದರೆ ಬೆಟ್ಟಕ್ಕೆ ಕಲ್ಲು ಹೊತ್ತಂತೆಯೇ ಸರಿ, ಸಮುದ್ರಕ್ಕೆ ಹುಣಸೆಹಣ್ಣು ಕಿವುಚಿದಂತೆಯೇ, ಮತ್ತ್ಯಾವ ದೊಡ್ಡಸ್ಥಿಕೆಯೂ ತಾರದು. ಅಷ್ಟೇ ಆದರೆ ಪರವಾಗಿಲ್ಲ.

ಒಂದಷ್ಟು ಗೌರವಕ್ಕೆ ವಶೀಲಿ, ಬಾಜಿ ಅನಿವಾರ್ಯವೆಂದು ಹೇಳಿಕೊಟ್ಟು ಹಲವು ತಲೆಮಾರುಗಳ ನೈತಿಕ ಅಧಃಪತನಕ್ಕೆ ಸರಕಾರವೇ ಕಾರಣವಾದ ಪಾಪವನ್ನು ಕಟ್ಟಿಕೊಳ್ಳಬೇಕಾದೀತು. ಆ ಎಚ್ಚರ ಸದಾ ಆಳುವವರನ್ನು ಕಾಡಬೇಕು, ಜತೆಗೆ ಗುಂಪಿನಲ್ಲಿ ತೆಗೆದುಕೊಳ್ಳುವ ಒಂದಿಷ್ಟು ಮಂದಿ ಅರ್ಹರಿಗೂ ಸಹ. ಸ್ವತಃ ಅಪ್ಪ-ಅಮ್ಮನೇ ತಮ್ಮ ಮಕ್ಕಳನ್ನು ಅನೈತಿಕತೆಯ ದಾರಿಗೆ ತಳ್ಳಿದಷ್ಟೇ ಕೀರ್ತಿ ಇವರಿಗೂ ಸಹ. ಇಲ್ಲದಿದ್ದರೆ ಏನೂ ಮಾಡಲಾಗದು. ಪ್ರಶಸ್ತಿ ಪಡೆಯುವವರ ಕ್ಯೂ ಮುಗಿಯುವವರೆಗೆ ಕಾದು, ನಂತರ ಮುಚ್ಚಿ ಎನ್ನಬೇಕಷ್ಟೇ.