ಸಂಸ್ಕೃತಿ ಇಲಾಖೆಯ ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಅವಾಂತರವಿದು.

ಇದುವರೆಗೂ ಇಂಥವರಿಗೆ ಇಷ್ಟೆಂದು ಕೋಟಾ ಫಿಕ್ಸ್ ಆಗಿರಲಿಲ್ಲ. ಈ ಸರಕಾರ ಅದನ್ನೂ ಮಾಡಿಬಿಟ್ಟಿದೆ. ‘ಮಾನ್ಯ’ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಅವರಿಗೆ ತಲಾ 15, ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ್ ರಿಗೆ 10, ಉಳಿದ ಸಚಿವರಿಗೆಲ್ಲಾ 2 ರಿಂದ 5 ಅಂತೆ, ಇದರ ಮಧ್ಯೆ ಎಂಟು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಿಗೆ 2 (ಇದರಲ್ಲೂ ತಮ್ಮ ಪಟ್ಟಿ ನಡುವೆ ನುಸಳಲು ಸಾಧ್ಯವಾದರೆ ಮಾತ್ರ ಈ ಅಧ್ಯಕ್ಷರಿಗೆ ಮಾನ್ಯತೆ, ಇಲ್ಲದೆ ಇದ್ದರೆ ಢಮಾರ್)…ಅಲ್ಲಿಗೆ ರಾಜ್ಯೋತ್ಸವ ಪಟ್ಟಿ ಮುಗಿದೇ ಹೋಯಿತು.

ಎಲ್ಲರೂ ತಮ್ಮ ತಮ್ಮ ಮೂಗಿಗೆ ನೇರವಾಗಿ ಮಾತನಾಡುವವರದ್ದೇ ಪಟ್ಟಿ ಮಾಡಿರುತ್ತಾರೆಯೇ ಹೊರತು “ಅರ್ಹ’ರನ್ನು ಕಡಿಮೆ. ಒಂದುವೇಳೆ ಅರ್ಹತೆ ಇದ್ದೂ ಹುಡುಕುವವರ ಕಣ್ಣಿಗೆ ಕಂಡರೆ “ಯೋಗ ಭಾಗ್ಯ’ ಎರಡೂ ಕೂಡಿ ಬಂದಿರಲೇಬೇಕು. ಮೊನ್ನೆಯಷ್ಟೇ ಪ್ರಶಸ್ತಿ ಸಮಿತಿಯ ಸಭೆ ನಡೆದಾಗ, ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷರು ಸಚಿವರನ್ನು ಪ್ರಶ್ನಿಸಿ ಇರಿಸುಮುರಿಸು ಉಂಟು ಮಾಡಿದ್ದು ನಿಜ.

“ಏನ್ರೀ, ನಮ್ಮನ್ನು ಕರೆಯೋದು ನೀವು ಮಾಡಿರೋ ಪಟ್ಟಿಗೆ ಸಹಿ ಹಾಕಿಸಿಕೊಳ್ಳೋದಿಕ್ಕಾ ? ಅದಕ್ಯಾಕೆ ಕರೀತೀರಿ ? ನೀವೇ ಸಹಿ ಹಾಕಿಕೊಂಡು ಬಿಡಿ’ ಎಂದು ಗುಡುಗಿದಾಗ ಸಚಿವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಆಗ ಮುಖ್ಯಮಂತ್ರಿ ಸಚಿವಾಲಯದಿಂದ ಬಂದ ಉತ್ತರ, “ಮಾನ್ಯರೇ, ನಿಮ್ಮದೂ ಪಟ್ಟಿ ಇದ್ದರೆ ಕೊಡಿ, ಸೇರಿಸ್ತೀವಿ’ ಎಂಬುದು. ಅಲ್ಲಿಗೆ, ಅಕಾಡೆಮಿ ಅಧ್ಯಕ್ಷರುಳ್ಳ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸಭೆ ಸೇರುವ ಮೊದಲೇ ಪಟ್ಟಿ ಸಿದ್ಧವಾಗಿತ್ತು ಎನ್ನುವುದನ್ನು ಆ ಸಚಿವಾಲಯವೂ ಒಪ್ಪಿಕೊಂಡಿತಲ್ಲ.

ಎಲ್ಲವೂ ಮುಗಿದು, ಅರೆ ಮನಸ್ಸಿನಿಂದಲೇ ಆ ಅಧ್ಯಕ್ಷರು ‘ಏನ್ ಬೇಕಾದ್ರೂ ಮಾಡ್ಕೊಳ್ಳಿ’ ಎಂದು ಯಾವುದೋ ಎರಡು ಹೆಸರು ಕೊಟ್ಟು ಬಂದರಂತೆ. ಅವರಿಗೂ ಪ್ರಶಸ್ತಿ ಬರುವವರೆಗೂ ತಾವು ಕೊಟ್ಟ ಹೆಸರು ಉಳಿದೀತೆಂಬ ಭರವಸೆಯೇ ಇಲ್ಲ. ಅದೂ ಕಷ್ಟವೇ. ಎಲ್ಲ ಅಕಾಡೆಮಿ ಅಧ್ಯಕ್ಷರು ಹೀಗಿರುವುದಿಲ್ಲ, ಬಿಡಿ. ಬಹುತೇಕರು ವೇಷ ಹಾಕಿಕೊಂಡು ಕುಣಿಯುವುದಕ್ಕೇನೋ ಹೊರಟಿರುತ್ತಾರೆ, ವೇದಿಕೆಗೆ ಬಂದ ಮೇಲೆ ತಾಳವೇ ನೆನಪಿರುವುದಿಲ್ಲ. ಸುಮ್ಮನೆ ತಣ್ಣಗಾಗಿ ವೇಷ ಕಳಚಿಕೊಂಡು ಬರುತ್ತಾರೆ. ಅದೇ ರೀತಿ. “ಏನ್ಮಾಡೋದು, ನಾವು ನಮ್ಮ ಕ್ಷೇತ್ರದವರನ್ನು ಗುರುತಿಸಿಕೊಡ್ತೀವಿ. ಅವರಿಗೂ ಬೇರೆ ಬೇರೆ ಒತ್ತಡ ಇರುತ್ತೆ. ನಾವು ಕೊಟ್ಟ ಪಟ್ಟಿಯಲ್ಲಿ ಒಂದೆರಡು ಹೆಸರು ಬಿಟ್ಟು ಹೋಗಿ, ಅವರದ್ದು ಸೇರುತ್ತೆ. ಇವೆಲ್ಲಾ ಸಹಜ’ ಎಂದುಕೊಂಡು ಪಾಪ, ಎಂದು ಸುಮ್ಮನಾಗುವವರೇ ಎಲ್ಲರೂ. ಈ ಬಾರಿಯೂ ಹಾಗೆಯೇ.

ಅಧಿಕಾರಿಗಳಿಗಂತೂ ಸುಗ್ಗಿ :
ಪದಕ ಮಾಡಿಸೋ ಅಧಿಕಾರಿಗಳಿಗಂತೂ ಸುಗ್ಗಿ ಬಿಡಿ. ಹಾಗೆ ಹೀಗೆ ಮಾಡಿ ಹೇಗ್ಹೇಗೋ ಮಾಡಿದರೂ ನಡೆಯುತ್ತದೆ. ಯಾರೂ ಪ್ರಶ್ನಿಸುವವರಿರುವುದಿಲ್ಲ. ಈಗಾಗಲೇ ಇಲಾಖೆಯ ಮಂದಿ ಒಂಬತ್ತು ಮಂದಿಗೆ ಹತ್ತು ವರ್ಷಗಳಿಂದ ಪ್ರಶಸ್ತಿ ಕೊಡದೇ ಪದಕವನ್ನ ತಮ್ಮ ಇಲಾಖೆಯಲ್ಲೇ ಇಟ್ಟುಕೊಂಡು ಪೂಜೆ ಮಾಡ್ತಿದ್ದಾರೆ. ಬಹಳ ತಮಾಷೆಯೆಂದರೆ, ಕೆಲವು ಪದಕಗಳಲ್ಲಿ ಇದು ಯಾರದ್ದು ಎಂಬ ಹೆಸರೇ ಇಲ್ಲ. ಕೆ.ಸಿ. ರಾಮಮೂರ್ತಿಯವರು ನಿರ್ದೇಶಕರಾಗಿದ್ದಾಗ, ಪದಕ ಹಗರಣ ಬೆಳಕಿಗೆ ಬಂದಿತ್ತು. ತಕ್ಷಣವೇ, ತನಿಖೆಗೆ ಆದೇಶಿಸಿದಾಗ ಪದಕ ನುಂಗಿದವರೂ ಕಷ್ಟ ಕಳೆದರೆ ಸಾಕಪ್ಪಾ ಎಂದು ಪುನಾ ಪದಕ ಮಾಡಿಸಿಕೊಂಡು ತಂದರು. ಆ ಗಡಿಬಿಡಿಯಲ್ಲಿ ಹೆಸರು ಬರೆಸುವುದನ್ನೇ ಮರೆತುಬಿಟ್ಟರು.

ಇನ್ನೂ ಸಿದ್ಱಗಂಗಾ ಸ್ವಾಮೀಜಿ ಪದಕವನ್ನು ಕೊಟ್ಟಿಲ್ಲ. ಜಿ.ಆರ್. ವಿಶ್ವನಾಥ್ ಗೆ ಪದಕ ಮುಟ್ಟಿಸಿ ಬರುವಾಗ ನಾಲ್ಕು ವರ್ಷವಾಗಿತ್ತು. ಗೊ.ರು.ಚನ್ನಬಸಪ್ಪನವರು ಕಾರ್ಗಿಲ್ ನಿಧಿಗೆ ಕೊಟ್ಟ ಪದಕ ಏನಾಯ್ತೋ ಗೊತ್ತಿಲ್ಲ. ಒಂದು ಸಂದರ್ಭದಲ್ಲಿ ಇಂಥ ಅವಾಂತರಗಳಿಗೆ ಕಾರಣರಾದ ಅಧಿಕಾರಿ ಸಮೂಹವೇ ಈಗ ಅಂಗಡಿ ತೆರೆದುಕೊಂಡು ಕುಳಿತಿದೆ. ಪರವಾಗಿಲ್ಲ, ಪ್ರಶಸ್ತಿಗೆ ಒಂದಿಷ್ಟು ಹಣವೂ ಇರುವುದರಿಂದ, ಗಿರಾಕಿಗಳೂ ಹೆಚ್ಚೇ…ವ್ಯಾಪಾರವೂ ಜೋರು. ನಾವು-ನೀವು ಸುಮ್ಮನೇ ನಿಂತು ವಹಿವಾಟು ನೋಡಿದರೆ ಸಾಕು, ಅದಷ್ಟೇ ನಮ್ಮ ಕೆಲಸ