ರಾಜ್ಯೋತ್ಸವ ಪ್ರಶಸ್ತಿ ಈ ಬಾರಿಯೂ ಸೇಲ್ !

ಈ ಮಾತು ಸುಳ್ಳಲ್ಲ. ರಾಜ್ಯ ಸರಕಾರ ಅನಧಿಕೃತವಾಗಿ ಹರಾಜು ಹಾಕಿದೆ ಪ್ರಶಸ್ತಿಗಳನ್ನು. ಎಷ್ಟೋ ಬಾರಿ ಪ್ರಶಸ್ತಿಗೆ ಗೌರವ ತಂದುಕೊಡುವವರು ಯಾರು ಮತ್ತು ಯಾವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನನ್ನ ಪ್ರಕಾರ ವ್ಯಕ್ತಿಯೊಬ್ಬ ಅದನ್ನು ಅಲಂಕರಿಸಿ ಪ್ರಶಸ್ತಿಗೆ ಗೌರವ ತಂದುಕೊಡುತ್ತಾನೆ. ಆ ಕೆಲಸ ಈಗ ಆಗುತ್ತಿದೆಯೇ ಎಂದು ಕೇಳಿದರೆ ಉತ್ತರವಿಲ್ಲ.

ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರೆದು, ಕರೆದು ಸಿಕ್ಕ ಸಿಕ್ಕವರಿಗೆಲ್ಲಾ ಪ್ರಶಸ್ತಿಯನ್ನು ಪ್ರಕಟಿಸಿದಾಗ ಅಚ್ಚರಿ ಪಟ್ಟಿದ್ದರು. “ಮುಂದಿನ ಬಾರಿ ಅರ್ಹರಿಗೆ” ಎಂಬ ಲೇಖನವನ್ನೂ ಪ್ರಕಟಿಸಿದ್ದರು. ಅದರರ್ಥ ಆ ಬಾರಿ ಯಾರೂ ಅರ್ಹರಿರಲಿಲ್ಲವೇ ? ಎಂದು ಕೇಳಿದರೂ ನನ್ನಲ್ಲಿ ಉತ್ತರವಿಲ್ಲ. ಆದರೆ, ಅವರು ಹೇಳಿದಂತೆ “ಮುಂದಿನ ಬಾರಿ ಅರ್ಹರಿಗೆ” ಎಂಬ ವಾಕ್ಯ ಮಾತ್ರ ಪ್ರತಿ ಬಾರಿಯೂ ಪುನರಾವರ್ತಿತವಾಗುವಂತೆಯೇ ನಡೆಯುತ್ತಿದೆ. ಅವರೋ-ಇವರೋ ಒಂದಿಷ್ಟು ಮಂದಿ ಮಾತ್ರ ಅರ್ಹರು ಉಳಿದವರ ಮಧ್ಯೆ ತಲೆತಗ್ಗಿಸಿ ಬಲಿಪಶುವಿನಂತೆ ನಿಂತಿರುತ್ತಾರೆ. ಅದನ್ನು ಕಂಡರೇ ಅಯ್ಯೋ ಎನಿಸುವುದುಂಟು.

ಸರಕಾರಕ್ಕೂ , ಪ್ರಶಸ್ತಿಯದೇ ದಂಧೆ ನಡೆಸುವ ಖಾಸಗಿ ಸಂಸ್ಥೆಗಳ ಪ್ರಶಸ್ತಿಗೂ ಯಾವ ವ್ಯತ್ಯಾಸವೂ ಇಲ್ಲ. ಅಲ್ಲಿ ನಡೆಯುವ ಎಲ್ಲ ಉಪದ್ಯ್ವಾಪಗಳೂ ಇಲ್ಲಿಯೂ ನಡೆಯುತ್ತವೆ. ಈ ಬಾರಿಯದೆ ತೆಗೆದುಕೊಳ್ಳಿ. ಕಳೆದ ವರ್ಷ ನೆರೆ ಬಂದಿತೆಂದು, ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಿಲ್ಲ. ಅದಕ್ಕೇ ಈ ಬಾರಿ 100ಮಂದಿಗೆ ಪ್ರಶಸ್ತಿ ನೀಡಲು ಮೊದಲು ಸರಕಾರ ನಿರ್ಧರಿಸಿತು. ಆಯಿತು, ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಮುಟ್ಟಿರುವುದು ಈಗ 160 ಕ್ಕೆ. ರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನಗಳಿವೆ, ಅದು ಹತ್ತು ಹೆಚ್ಚಾಗಬಹುದು ಅಥವಾ ಹತ್ತು ಕಡಿಮೆ ಆಗಬಹುದು. ಇನ್ನೂ ಪಟ್ಟಿ ಫೈನಲ್ ಆಗುತ್ತಲೇ ಇದೆ.

ಒಂದು ಪಟ್ಟಿ ಎಷ್ಟು ಬಾರಿ ಫೈನಲ್ ಆಗಬಹುದು ಎಂದು ಕೇಳಿದರೆ ಲೆಕ್ಕವಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು. ಇದೂ ಒಂದು ಸಮಾಧಾನಿಸುವ ಅಸ್ತ್ರವಾಗಿರುವುದರಿಂದ ಒತ್ತಡವಿದ್ದೇ ಇರುತ್ತದೆ. ಮುಖ್ಯಮಂತ್ರಿಗಳದ್ದು ಒಂದು ಪಟ್ಟಿ, ನಂತರ ಪ್ರಭಾವಿ ಸಚಿವರದ್ದು ಮತ್ತೊಂದು ಪಟ್ಟಿ, ತದನಂತರ ಜಿಲ್ಲಾ ಉಸ್ತುವಾರಿ ಸಚಿವರುಗಳದ್ದು ಒಂದು ಪಟ್ಟಿ, ಅದಾದ ಮೇಲೆ ಹಿರಿಯರ ಸಚಿವರ ಚಿಕ್ಕ ಪಟ್ಟಿ, ಇಷ್ಟೆಲ್ಲಾ ಮುಗಿದು ಪಟ್ಟಿಯಲ್ಲಿ ಖಾಲಿ ಜಾಗ ಉಳಿದಿದ್ದರೆ, ವಿವಿಧ ಲಲಿತಕಲೆಗಳ ಕ್ಷೇತ್ರಕ್ಕೆಂದು ರಚಿಸಲಾದ ಅಕಾಡೆಮಿಗಳಿಗೆ “ನೀವು ತಜ್ಞರು’ ಎಂದು ಸ್ವತಃ ಸರಕಾರವೇ ಕುಳ್ಳಿರಿಸಿದ ಅಧ್ಯಕ್ಷರಿಂದ ಪಟ್ಟಿ ಕಳುಹಿಸುವಂತೆ ಹೇಳುತ್ತಾರೆ.

ಈ ಬಾರಿಯೂ ಪಟ್ಟಿಯೆಲ್ಲಾ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿದ್ವಾಂಸ ಅಧಿಕಾರಿ ಮನುಬಳಿಗಾರ್ ಎಲ್ಲರೂ ಸಿದ್ಧಪಡಿಸಿಕೊಂಡೇ ನಾಮ್ ಕೇ ವಾಸ್ತೇ ಅಕಾಡೆಮಿ ಅಧ್ಯಕ್ಷರು, ಸಂಸ್ಕೃತಿ ಸಚಿವರನ್ನೊಳಗೊಂಡ ಸಮಿತಿಯ ಸಭೆ ಕರೆದರು. ಎಲ್ಲವೂ ಸಿದ್ಧವಿರುವಾಗ ಈ ಸಭೆ ಏಕೆ ಎಂದು ಕೇಳಿದರೆ, ಅದು ನಾವು ಆರಿಸಿರುವುದಕ್ಕೆ ನಿಮ್ಮ ಒಪ್ಪಿಗೆ ಪಡೆಯಲು ಎನ್ನುವಷ್ಟು ನಾಚಿಕೆ ಬಿಟ್ಟಿರುವವರು ಈ ಸರಕಾರದ ಮಂದಿ ಮತ್ತು ಅವರಿಗೆ “ಬುದ್ಧಿ’ ಯಾಗಿರುವ ಅಧಿಕಾರಿ ಮಂದಿ. ನಮ್ಮ ಮನೆಯ ಸುತ್ತ ತಿರುಗಾಡುವವರು, ತಮ್ಮ ಕಷ್ಟ ಕಾಲಕ್ಕೆ ನೆರವಾಗುವವರು, ಬಹುಪರಾಕು ಹಾಕುವವರು…ಹೀಗೆ ಎಲ್ಲ ವರ್ಗಗಳ ಹೆಸರನ್ನೆಲ್ಲಾ ಪಟ್ಟಿಯಲ್ಲಿ ತೂರಿ ಬಿಟ್ಟು, ಉಳಿದ ಬೆರಳೆಣಿಕೆಯಷ್ಟು ಸ್ಥಾನಕ್ಕೆ ಅರ್ಹರನ್ನು ಹುಡುಕುತ್ತಾರೆ. ಹಾಗಾಗಿ ಒಂದು ಸಂದರ್ಭದಲ್ಲಿ ಇದ್ದ ಹಲವು ಗಣ್ಯರ ಮಧ್ಯೆ ನನಗೂ ಪ್ರಶಸ್ತಿ ಪ್ರದಾನವಾಯಿತು ಎಂದಿದ್ದ ಮಾತನ್ನು, ಈಗ ‘ಕೆಲವು ಗಣ್ಯರ ನಡುವೆ ನನಗೂ ಪ್ರಶಸ್ತಿ ಪ್ರದಾನವಾಯಿತು’ ಎಂದುಕೊಳ್ಳಬೇಕಷ್ಟೇ.

ಮುಂಚೆ ಬರೀ 10 ಸಾವಿರ ರೂ, ಒಂದು ಚಿನ್ನದ ಪದಕ ನೀಡಿ ಗೌರವಿಸುತ್ತಿದ್ದರು. ಈಗ ಒಂದು ಲಕ್ಷ ರೂ. ಮೊತ್ತವಾದ ಮೇಲಂತೂ ಪ್ರಶಸ್ತಿ ರಿಸರ್ವೇಷನ್ ಮಾಡಿಸುವವರೂ ಆರಂಭವಾಗಿಬಿಟ್ಟಿದ್ದಾರೆ, ರೈಲ್ವೆ, ಬಸ್ ಟಿಕೆಟ್ ಕಾದಿರಿಸಿದ ಹಾಗೆ. ಒಬ್ಬ ಅಕಾಡೆಮಿ ಅಧ್ಯಕ್ಷರೊಂದಿಗೆ ಮಾತನಾಡುತ್ತಿದ್ದೆ, “ಹೇಗಿದೆ ಸಾರ್, ಪ್ರಶಸ್ತಿ ಒತ್ತಡ?” ಎಂದು ಕೇಳಿದೆ. ಅವೆಲ್ಲಾ ಇದ್ದದ್ದೇ ಸಾರ್, ಎಲ್ಲ ಒಂದಷ್ಟು ಮಂದಿ ನಿಭಾಯಿಸ್ತಾರೆ ಎಂದರು. “ಏನೋ ಕಮೀಷನ್ ಶುರುವಾಗಿದೆಯಂತೆ’ ಎಂದಿದ್ದಕ್ಕೆ, “ಎಲ್ಲವೂ ಶುರುವಾಗುತ್ತೇರಿ, ಏನ್ಮಾಡೋದು?’ ಎಂದರು. ಜತೆಗೊಂದು ಮಾತು ಸೇರಿಸಿದರು, “ಇಷ್ಟು ಪರ್ಸೆಂಟ್ ಕೊಡ್ತೀವಿ, ಪ್ರಶಸ್ತಿ ಕೊಡ್ಸಿ ಅನ್ನೋರೂ ಇದ್ದಾರೆ, ಜತೆಗೆ ಎಲ್ಲವೂ ನೀವೇ ಇಟ್ಟುಕೊಳ್ಳಿ, ನನಗೊಂದು ಪ್ರಶಸ್ತಿ ಕೊಡ್ಸಿ ಸನ್ಮಾನ ಮಾಡಿಸಿ ಬಿಡಿ ಸಾಕು’ ಎನ್ನುವವರೂ ಇದ್ದಾರೆ. ಅದಕ್ಕೇ ಇರ್ಬೇಕು, ಒಂದಿಷ್ಟು ಅಧಿಕಾರಿಗಳು ಅಂಗಡಿಗಳನ್ನು ತೆರೆದು ಕುಳಿತಿದ್ದಾರೆ, ಗಿರಾಕಿಗಳಿಗಾಗಿ !

ಬಹಳ ಸಂವೇದನೆಶೀಲ ಸರಕಾರ ಎಂದುಕೊಂಡಿದ್ದ ಬಿಜೆಪಿ ಸಹ ಎಷ್ಟೊಂದು ಸಂವೇದನಾಶೀಲವೆಂಬುದನ್ನು ಸಾಬೀತು ಪಡಿಸಿದೆ ಹಲವು ಪ್ರಸಂಗಗಳಲ್ಲಿ. ಈಗ ಮತ್ತೆ ಅದನ್ನೇ ಮಾಡುತ್ತಿದೆ, ಸಂಸ್ಕೃತಿ ಇಲಾಖೆ ಬಾಗಿಲು ಹಾಕಿ, ಬೀಗ ಜಡಿಯುವ ಮೊದಲು ಗುಡಿಸಿ ರಂಗೋಲಿ ಇಡುತ್ತಿದ್ದಾರೆ ಅಧಿಕಾರಿಗಳು, ಸರಕಾರವೂ ಅದಕ್ಕೆ ಸಾಕ್ಷಿಯಾಗುತ್ತಿದೆ ಅಷ್ಟೇ. ಅಧಿಕಾರಿಗಳನ್ನು ಪುಟಕ್ಕಿಟ್ಟು, ಪ್ರಶ್ನಿಸಿ ಸರಿ ಪಡಿಸಬೇಕಾದ ಇಲಾಖೆಯ ನಿರ್ದೇಶಕರು ಪಾಪ, ತಣ್ಣಗಿದ್ದಾರೆ, ಹಾಗಾಗಿ ಎಲ್ಲರೂ ತಣ್ಣಗಿದ್ದಾರೆ !