ಇದು ನನ್ನ ತಲೆಮಾರಿನ ದುರ್ದೈವ. ಚುನಾವಣೆಯಿಂದ ಚುನಾವಣೆಗೆ ನಮ್ಮನ್ನು ಆಳುವ ನಾಯಕರ ಬೌದ್ಧಿಕ ಹಾಗೂ ನೈತಿಕ ದಾರ್ರಿದ್ರ್ಯವನ್ನು ಕಂಡು ನಿಜಕ್ಕೂ ಖೇದ ಎನಿಸುತ್ತದೆ. ನಾವು ಇವರ ಆಡಳಿತದ ಅವಧಿಯಲ್ಲಿ ಬದುಕಿದ್ದೇವೆ ಎಂಬುದೂ ಒಂದು ನಾಚಿಕೆಗೇಡಿತನದ ಸಂಗತಿಯಾಗಿ ಪರಿಣಮಿಸುತ್ತಿದೆ.

ಈ ಮಾತನ್ನು ಸುಮ್ಮನೆ ಟೀಕೆಗೆಂದು ಹೇಳುತ್ತಿಲ್ಲ. ಮೂರು ದಿನಗಳಿಂದ ನಾವು ಸಮೂಹ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಮಂತ್ರಿ ಸ್ಥಾನಕ್ಕೆ ನಾಚಿಕೆ ಬಿಟ್ಟು ಪಡುತ್ತಿರುವ ಪಡಿಪಾಟಲು ಕಂಡರೆ ಬೇಸರವಷ್ಟೇ ಆಗದು ; ಹೇಸಿಗೆ ಹುಟ್ಟುತ್ತದೆ. ಜನಸೇವೆ ಮಾಡಲು ಶಾಸಕರಾದರಷ್ಟೇ ಸಾಕು ಎಂದು ಚುನಾವಣೆಗೆ ಮುನ್ನ ಹಲುಬುವ ಮಂದಿಗೀಗ ಮಂತ್ರಿಯಾಗಲೇಬೇಕಾದ ಅನಿವಾರ‍್ಯ. ಇಲ್ಲದಿದ್ದರೆ ಹುಟ್ಟಿದ್ದೇ ವ್ಯರ್ಥ (ವೇಸ್ಟು ಎನ್ನುವ ಹಾಗೆ). ಒಂದರ್ಥದಲ್ಲಿ ಯಾರನ್ನ ಸಚಿವರನ್ನಾಗಿಸಿದರೂ ‘ವೇಸ್ಟ್’ ಎನ್ನುವಂತೆಯೇ ಬಹುತೇಕರಿದ್ದಾರೆ. ಅವರಲ್ಲೇ ಪೈಪೋಟಿ ನಡೆದಿರುವುದು ವ್ಯಂಗ್ಯ.

ಎರಡು ತಲೆಮಾರುಗಳ ಹಿಂದೆ ಅಥವಾ 1960-70 ರ ದಶಕದಲ್ಲಿ ಆಡಳಿತ ಮಾಡುವವರು ಹೇಗಿದ್ದರು ? ಎಂಥವರು ಮಂತ್ರಿಯಾಗುತ್ತಿದ್ದರು ? ಎಂಥವರು ನಮ್ಮನ್ನು ಪ್ರತಿನಿಧಿಸುತ್ತಿದ್ದರು ? ಎಂಬಂಥ ಹಲವು ಸಂಗತಿಗಳನ್ನು ಈಗ ಪ್ರಸ್ತಾಪಿಸುವುದು ಬೇಡ. ಕಾರಣವಿಷ್ಟೇ. ಈಗಿನವರಿಗೆ ಹಿಂದಿನದೆಲ್ಲಾ ಪ್ರಯೋಜನಕ್ಕೆ ಬಾರದಂಥವು. ಆದರೆ ಮೂರು ದಿನಗಳಿಂದ ಅತ್ಯಂತ ಉಚ್ಛ್ರಾಯ ಮಟ್ಟಕ್ಕೆ ತಲುಪಿರುವ ಮಂತ್ರಿಗಿರಿ ಪಡೆಯುವ ಪ್ರಹಸನ ಕಂಡಾಗ ನೂರು ದಿನದ ನಾಟಕದಂತಿದೆ.

ಮಂತ್ರಿಯಾಗಲು ನಿಮಗಿರುವ ಅರ್ಹತೆ ಏನು ? ಎಂದು ಪ್ರಶ್ನೆ ಕೇಳಿದರೆ, ಈ ಪ್ರಹಸನದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮತ್ತೊಬ್ಬನ ಅರ್ಹತೆಯನ್ನು ಪ್ರಶ್ನಿಸುತ್ತಾರೆ. ವಾಸ್ತವವಾಗಿ ಅದು ಆ ಪ್ರಶ್ನೆಗೆ ಉತ್ತರವಲ್ಲ. ಜತೆಗೆ ಉತ್ತರ ಅವರಲ್ಲೂ ಇಲ್ಲ. ಬೇಳೂರು ಗೋಪಾಲಕೃಷ್ಣರೇ, ನಿಮಗೆ ಯಾವ ಸೊಬಗಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದರೆ, ‘ನಮ್ಮ ಬಗ್ಗೆ ಕೇಳ್ತೀರಲ್ಲಾ. ಅವರಿಗೆ ಏನಂತ ಕೊಟ್ಟಿದ್ದೀರಿ. ನಾನು ಒಂದು ಜನಾಂಗದ ಮುಖಂಡ. ನಮ್ಮವರೆಲ್ಲಾ ಇದೇ ಪಕ್ಷವನ್ನು ಬೆಂಬಲಿಸಿದ್ದಾರೆ. ಅಂದ ಮೇಲೆ ನನಗೆ ಮಂತ್ರಿ ಸ್ಥಾನ ಬೇಡವೇ? ಅವರು ನನ್ನ ಬಗ್ಗೆ ಆಡಿದ ಮಾತು ಇಡೀ ಜನಾಂಗಕ್ಕೆ ಮಾಡಿದ ಅವಮಾನ.ಅದಕ್ಕೆ ಸುಮ್ಮನಿರಬೇಕಾ’ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಇಡೀ ಜನಾಂಗ ನಿಮ್ಮ ಗುತ್ತಿಗೆಯೇ? ನಿಮಗೆ ಮಂತ್ರಿ ಸ್ಥಾನ ಕೊಟ್ಟ ಕೂಡಲೇ ಜನಾಂಗಕ್ಕಾದ ಅವಮಾನ ಸರಿಯಾಗುತ್ತದಾ?’ ಎಂದು ಪ್ರಶ್ನಿಸಿದರೆ, ‘ಹಾಗೆಲ್ಲಾ ಕೇಳಬೇಡಿ. ನಮ್ಮ ಜನಾಂಗಕ್ಕೆ ಅವಕಾಶವೇ ಸಿಕ್ಕಿಲ್ಲ. ಅವಕಾಶ ವಂಚಿತರಿಗೆ ಅವಕಾಶ ಕೇಳೋದು ತಪ್ಪಾ?’ ಎಂಬ ಧಾಟಿಯಲ್ಲಿ ಮಾತನಾಡುತ್ತಾರೆ. ಪ್ರಶ್ನೆಗೆ ಮತ್ತೊಂದು ಪ್ರಶ್ನೆಯನ್ನು ಹುಟ್ಟು ಹಾಕುವುದು ಈಗಿನವರ ಜಾಣ್ಮೆ.

ಇದೇ ಪ್ರಶ್ನೆಯನ್ನು ನಮ್ಮ ಮಹಾನ್ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಕೇಳಿ-‘ನಾವು ಸಂಕಷ್ಟದಲ್ಲಿ ಅವರ ಕೈ ಹಿಡಿದಿಲ್ಲವೇ?’ ಎಂದು ಕೇಳುತ್ತಾರೆ. ಈ ಮಹಾಶಯರಂತೂ ಯಾವ ಮಟ್ಟಕ್ಕೆ ಇಳಿದಿದ್ದಾರೆಂದರೆ ಮಂತ್ರಿ ಸ್ಥಾನ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ. ಅವರ ಶವದ ಮೇಲೆ ಬಿಜೆಪಿ ಬಾವುಟ ನೆಡಬೇಕಂತೆ. ಏನ್ರೀ, ಈ ಇವರಿಗೆ ಕನಿಷ್ಠ ಮರ‍್ಯಾದೆ ಬೇಡವೇ? ನಮ್ಮನ್ನಾಳುವ ಮಹಾಶಯ ಹೀಗೆ ಹೇಡಿಯಂತೆ ವರ್ತಿಸುತ್ತಿದ್ದಾರಲ್ಲಾ , ನಾಚಿಕೆಯಾಗಬೇಕು. ಇಷ್ಟಕ್ಕೂ, ಇವರು ಆತ್ಮಹತ್ಯೆ ಮಾಡಿಕೊಂಡರೆ ಜನರೇನಾದರೂ ತಲೆ ಕೆಡಿಸಿಕೊಳ್ಳುತ್ತಾರಾ ? ಇಂಥದೊಂದು ಪ್ರಶ್ನೆ ತಮ್ಮಷ್ಟಕ್ಕೇ ತಾವು ಹಾಕಿಕೊಳ್ಳುವಷ್ಟೂ ನೈತಿಕತೆ ಬೇಡವೇ ? ಇದಕ್ಕೂ ಉತ್ತರವಿಲ್ಲ. ಆದರೂ ಕರುಣಾಕರ ರೆಡ್ಡಿಯಂಥವರೂ ನ್ಯಾಯ, ಧರ್ಮದ ಬಗ್ಗೆ ಈ ಸರಿಹೊತ್ತಿನಲ್ಲಿ ಮಾತನಾಡ ತೊಡಗುತ್ತಾರೆ !

ಈ ರೇಣುಕಾಚಾರ‍್ಯರಂಥವ ರು, ಮಂತ್ರಿ ಸ್ಥಾನ ಸಿಕ್ಕಾಗ ಮಾಧ್ಯಮಗಳ ಎದುರು ಹಲ್ಲುಗಿಂಜಿ ‘ನಮ್ಮ ಮುಖ್ಯಮಂತ್ರಿಯೋರು ಬಹಳ ಒಳ್ಳೆಯವರು. ಅವರ ನಾಯಕತ್ವದಲ್ಲಿ ನಾನು ಕೆಲಸ ಮಾಡ್ತೇನೆ’ ಎಂದೆಲ್ಲಾ ಬೊಗಳೆ ಹೊಡೆದು ಮೊನ್ನೆವರೆಗೆ ಸುಮ್ಮನಿದ್ದರು. ಈಗ ದುಬಾಯಿನಲ್ಲಿ ಕುಳಿತು ‘ನಾಳೆ ಬೆಳಗ್ಗೆ ಹೋಗುತ್ತೇನೆ, ಮೀಟಿಂಗ್ ಮಾಡಿ ನಮ್ಮ ಮುಂದಿನ ನಿರ್ಧಾರ ಹೇಳ್ತೇವೆ’ ಎಂದೆಲ್ಲಾ ಹಲುಬತೊಡಗಿದರು. ಅನಂತರ ಇಲ್ಲದ ಪ್ರಾಮುಖ್ಯತೆ ಪಡೆದುಕೊಳ್ಳಲು ಮಾರನೆ ದಿನ ಸಭೆ ಮುಗಿಸಿ ‘ನಮ್ಮ ನಾಯಕ ಯಡಿಯೂರಪ್ಪನವರೇ. ಎಲ್ಲ ಸರಿಪಡಿಸಿದ್ದೇನೆ’ ಎಂದರು. ‘ಯಾರೂ ರಾಜೀನಾಮೆ ನೀಡುವುದಿಲ್ಲ’ ಎಂದು ಹೇಳಿ ಬೇಳೂರು ಗೋಪಾಲಕೃಷ್ಣರನ್ನು ಸಮಾಧಾನಿಸಿದರವರಂತೆ ಫೋಜು ಕೊಡುತ್ತಾರೆ. ರೆಡ್ಡಿ ಗ್ಯಾಂಗೂ ಸಹ ತಣ್ಣಗೆ ಕುಳಿತಿಲ್ಲ, ನಿಧಾನವಾಗಿ ರಂಗ ಪ್ರವೇಶಿಸುತ್ತಿದ್ದಾರೆ. ಒಟ್ಟೂ ಎಲ್ಲರದ್ದೂ ವರ್ತಮಾನದ ಕಾವಿನಲ್ಲಿ ಒಬ್ಬಟ್ಟು ಬೇಯಿಸಿಕೊಳ್ಳುವವರೇ. ಹಾಳೂರಿಗೆ ಉಳಿದವರೇ ನಾಯಕರೆಂಬಂತೆ, ಪುಂಡು ಪುಂಡು ಗುಂಪಿಗೊಬ್ಬ ಮರಿ ನಾಯಕರು !

ಇಷ್ಟಕ್ಕೇ ಮುಗಿಯುತ್ತದೆಯೇ ಪೈಪೋಟಿ ? ಸಿ. ಟಿ. ರವಿಯವರು ‘ತಮಗಂತೂ ಪಟ್ಟ ಬೇಕೇ ಬೇಕು’ ಎನ್ನುವುದನ್ನು ತಮ್ಮ ಕ್ಷೇತ್ರದ ನಗರಸಭೆ ಸದಸ್ಯರಿಂದ ಒತ್ತಡ ಹೇರುತ್ತಿದ್ದಾರೆ. ಅವರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಪ್ಪಚ್ಚು ರಂಜನ್ ಸಹ ಹಿಂದೆ ಬಿದ್ದಿಲ್ಲ. ‘ಅವರೆಲ್ಲಾ ರಾಜೀನಾಮೆ ಕೊಡುವಾಗ ನಾವ್ಯಾಕೆ ರಾಜೀನಾಮೆ ಕೊಡಬಾರದು’ ಎಂದುಕೊಂಡು ಅವರೂ ಪತ್ರವನ್ನು ಕೈನಲ್ಲೇ ಹಿಡಿದಿದ್ದಾರೆ. ಶಂಕರಲಿಂಗೇಗೌಡರೂ ತಣ್ಣಗೇನೂ ಇಲ್ಲ, ಕುದಿಯುತ್ತಿದ್ದಾರೆ.

ಗ್ರಂಥಾಲಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ವರದಿಗಳು ಬಂದರೂ, ನೈತಿಕತೆಯಿಲ್ಲದೇ ಪಟ್ಟದಲ್ಲಿ ಮುಂದುವರಿದಿರುವ ಶಿವನಗೌಡ ನಾಯಕರು, ಪಟ್ಟ ಬಿಟ್ಟುಕೊಡಲು ತಯಾರಿಲ್ಲ. ತಮ್ಮ ತಮ್ಮ ಗಾಡ್ ಫಾದರ್‌ಗಳ ಕಾಲನ್ನು ಒತ್ತುತ್ತಾ ಪಟ್ಟ ಉಳಿಸಿಕೊಳ್ಳುವುದು ಅವರ ಪ್ರಯತ್ನ. ಸುಧಾಕರರಂತೂ ಎಷ್ಟೊಂದು ಸುಧಾರಿಸಿದ್ದಾರೆಂದರೆ ‘ಮುಖ್ಯಮಂತ್ರಿಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ’. ಆನಂದ ಅಸ್ನೋಟಿಕರ್ ಎನ್ನುವ ಮಹಾಶಯರಂತೂ ಸಚಿವರಾಗಿದ್ದಷ್ಟೇ ಗೊತ್ತು. ಆಮೇಲೆ ಎಲ್ಲೂ ಕಂಡೇ ಇಲ್ಲ. ಯಾವ ಅಭಿವೃದ್ಧಿಯೂ ಕಣ್ಣಿಗೆ ಕಂಡಿಲ್ಲ. ಆದರೂ ಅವರು ಸೇಫಂತೆ !

ಇವರೆಲ್ಲಾ ಸಾರ್ವಜನಿಕವಾಗಿ ನೀಡುತ್ತಿರುವ ಒಂದೊಂದು ಹೇಳಿಕೆಗಳೂ ಎಷ್ಟು ಅಸಹ್ಯವಾಗಿದೆಯಂದರೆ, ನಾವು ಎಂಥವರನ್ನು ಆಯ್ಕೆ ಮಾಡಿದ್ದೀವಲ್ಲಾ ಎಂದು ನಮ್ಮನ್ನೇ ನಾವು ಹೊಡೆದುಕೊಳ್ಳಬೇಕೆನ್ನುವಂತಿದೆ. ನಾನು ಇಂಥದೊಂದು ಹೇಳಿಕೆ ಕೊಟ್ಟರೆ ಅದು ನಮ್ಮ ಕ್ಷೇತ್ರದ ಮೇಲೆ, ನಮ್ಮ ಜನರ ಮೇಲೆ ಬೀರಬಹುದಾದ ಪರಿಣಾಮವೇನು? ಎಂಬುದರ ಬಗ್ಗೆಯೂ ಕಿಂಚಿತ್ತೂ ಆಲೋಚಿಸುತ್ತಿಲ್ಲ. ಬಾಯಿಗೆ ಬಂದಂತೆ ಹರಟುವ ಮಂದಿಯನ್ನು ನಮ್ಮ ನಾಯಕರೆನ್ನಬೇಕು ?!

ಉಳಿದಂತೆ ಸಚಿವ ಸಂಪುಟದಲ್ಲಿ ರಾಜಾರೋಷವಾಗಿ ದುಡ್ಡು ಮಾಡಿಕೊಂಡು ತಿರುಗುತ್ತಿರುವ ಸಚಿವ ಮಹಾಶಯರು ಲೆಕ್ಕಕ್ಕಿಲ್ಲದಷ್ಟು ಇದ್ದಾರೆ. ಶಿಸ್ತಿನ ಸಂಘಟನೆಯಿಂದ ಬಂದವರೂ, ನೈತಿಕತೆಯ ಬಗ್ಗೆ ಪಾಠ ಹೇಳಿಸಿಕೊಂಡವರೂ ಇದನ್ನೇ ಮಾಡುತ್ತಿದ್ದಾರೆ. ಇನ್ನು, ದುಡ್ಡು ಕೊಟ್ಟೇ ಸೀಟು ಖರೀದಿಸಿ, ಈ ಸಚಿವ ಸಂಪುಟ ಪುನಾರಚನೆಯ ಯಾವ ಗೊಂದಲವನ್ನೂ ತಲೆಗಂಟಿಸಿಕೊಳ್ಳದೇ ತಣ್ಣಗೆ ಕುಳಿತಕೊಂಡಿರುವವರೂ ಇದ್ದಾರೆ. ಇನ್ನೂ ಕೆಲವು ಸಚಿವರ ತಲೆಬಿಸಿಯೇ ಬೇರೆ. ಎಲ್ಲಿ ಮಾಧ್ಯಮಗಳಲ್ಲಿ ಬಂದುಬಿಟ್ಟರೆ ಸಚಿವ ಪಟ್ಟ ಹೋಗಿಬಿಡುತ್ತದೋ ಎಂದು ಬೆಳಕಿಗೇ ಬಾರದೇ ಕತ್ತಲೆಯಲ್ಲೇ ಕೊಳೆಯುತ್ತಿರುವವರೂ ಇದ್ದಾರೆ. ಇವರ ಮಧ್ಯೆ ಪ್ರಾಮಾಣಿಕತೆಯನ್ನೇ ಬಂಡವಾಳವನ್ನಾಗಿಟ್ಟುಕೊಂಡು ಏನೂ ಬದಲಾವಣೆ ಮಾಡದೇ ಅತ್ಯಂತ ಸಜ್ಜನ ಮಂತ್ರಿ ಎನಿಸಿಕೊಂಡವರ ಗ್ಯಾಂಗೂ ಇದೆ. ಇಂಥವರಿಗೆಲ್ಲಾ ಯಾವ ಮಾದರಿ ಉನ್ನತ ಶಿಕ್ಷಣ ಕೊಡಿಸಬೇಕೋ ಆ ಈಶ್ವರನಿಗೇ ಗೊತ್ತು.

ಇವರಿಗೆಲ್ಲಾ ಜನ ನಮ್ಮ ಬಗ್ಗೆ ಏನಂದುಕೊಂಡಾರು ? ಅಸಹ್ಯ ಪಟ್ಟುಕೊಳ್ತಾರೆಯೇ? ಇಂಥ ಪ್ರಶ್ನೆಗಳೇ ಏಳುವುದಿಲ್ಲ. ಅದೂ ನಿಜವೇ, ಇಂಥ ಪ್ರಶ್ನೆಗಳಿಗೆಲ್ಲಾ ಈಗ ‘ಮೌಲ್ಯ’ವಿಲ್ಲ. ಮೂರೂ ಬಿಟ್ಟೋರು ಊರಿಗೆ ದೊಡ್ಡವರು ಎಂಬ ನಾಣ್ಣುಡಿ ಅಕ್ಷರಶಃ ನಿಜ. ಇದೆಲ್ಲದರ ಮಧ್ಯೆ ನಮ್ಮ ಮುಖ್ಯಮಂತ್ರಿಯವರು ತಣ್ಣಗೆ ಕುಳಿತು ಆಲೋಚಿಸುವ ಸ್ಥಿತಿಯಂತೂ ಇಲ್ಲವೇ ಇಲ್ಲ. ಅವರದ್ದೂ ಕ್ಯಾಂಡಿಡೇಟ್‌ಗಳಿದ್ದಾರೆ. ಅಲ್ಲಿಗೆ ಎಲ್ಲವನ್ನೂ ನಿಯಂತ್ರಿಸುವ, ನಿರ್ವಹಿಸುವ ಶಕ್ತಿ ಅವರಿಗೂ ಇಲ್ಲ. ಈ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಗತ್ತು ಹೇಗಿರಬೇಕಿತ್ತು ?

ರಾಜ್ಯದ ಆಡಳಿತವನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಲು ನನಗೆ ಇಂಥವರನ್ನು ಕೊಡಿ ಎಂದು ಅವರವರ ಅರ್ಹತೆ, ಯೋಗ್ಯತೆ, ಅನುಭವವನ್ನು ತಾಳೆ ಹಾಕಿ, ತೂಗಿ ನೋಡಿ ಹೈಕಮಾಂಡ್ ಎದುರು ಶಿಫಾರಸು ಮಾಡುವಂತಿದ್ದರೆ ಹೇಗಿರುತ್ತಿತ್ತು ? ನೀವು, ಇಂಥವರನ್ನು ಕೊಟ್ಟರೆ ನಮ್ಮ ಆಡಳಿತದ ಸಾಮರ್ಥ್ಯ ಎಷ್ಟರಮಟ್ಟಿಗೆ ಉತ್ತಮಗೊಳ್ಳಬಹುದು? ಅಥವಾ ಕುಸಿಯಬಹುದು? ಎಂದು ವಿಶ್ಲೇಷಿಸಿ ಹೇಳಬೇಕಿತ್ತು. ಮುಂದಿನ ಬಾರಿಯೂ ನಾವು ಮತ್ತೆ ಅಧಿಕಾರ ಹಿಡಿಯಬೇಕಾದರೆ, ಇದುವರೆಗೆ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಎಂಥವರನ್ನು ಸೇರಿಸಿಕೊಳ್ಳಬೇಕು ? ಅದರಿಂದಾಗುವ ಲಾಭವೇನು? ಇತ್ಯಾದಿಯನ್ನು ವಿವರಿಸಿ ಹೈಕಮಾಂಡ್ ಎಂಬ ಮಾಯಾದಂಡಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ವಿಪರ್ಯಾಸವೆಂದರೆ, ಅವೆಲ್ಲವನ್ನೂ ಮಾಡಬೇಕಾದ ಮುಖ್ಯಮಂತ್ರಿಗಳು ‘ನನ್ನ ಎರಡೂ ಹೆಸರನ್ನು ಸೇರಿಸಿ’ ಎಂದು ಪಟ್ಟಿ ಹಿಡಿದು ಸಾಲಿನಲ್ಲಿ ನಿಂತಿದ್ದಾರೆ. ಒಂದೇ ಒಂದು ವಿಶೇಷವೆಂದರೆ, ತಿರುಪತಿಯಲ್ಲಿ ನೂರಾರು ರೂ. ಕೊಟ್ಟು ವಿಶೇಷ ದರ್ಶನಕ್ಕೆಂದು ಮೀಸಲಿಟ್ಟಿದ್ದ ಸಾಲಿನಲ್ಲಿ ಬರುವವರು ನೇರವಾಗಿ ದೇವರನ್ನು ತಲುಪುವುದಿಲ್ಲ. ಬಾಗಿಲವರೆಗೆ ಮಾತ್ರ ಝುಮ್ಮೆಂದು ಬರುತ್ತಾರೆ. ಅಂಥದೇ ಸ್ಥಿತಿ ನಮ್ಮ ಮುಖ್ಯಮಂತ್ರಿಯವರದ್ದೂ.

ಬುಧವಾರ ಬೆಳಗ್ಗೆಯಾಗುವುದರೊಳಗೆ ಹೈಕಮಾಂಡ್ ಎಂಬ ಮಾಯಾದಂಡ ಯಾವುದೋ ಒಂದು ಪರಿಹಾರ ಸೂಚಿಸಿಬಿಡುತ್ತದೆ. ಒಂದಷ್ಟು ಮಂದಿ ಕೋಟು ಹೊಲೆಸಿಕೊಂಡು ಫೋಟೊ ತೆಗೆಸಿಕೊಳ್ಳುತ್ತಾರೆ, ಮತ್ತೊಂದಿಷ್ಟು ಮಂದಿ ಧಿಕ್ಕಾರ ಕೂಗಿಕೊಂಡು ರಸ್ತೆಯ ಕೊನೆವರೆಗೆ ಹೋಗಿ ಅದೃಶ್ಯರಾಗುತ್ತಾರೆ. ಮತ್ತೊಂದಿಷ್ಟು ಮಂದಿ ಫೋಟೋ ತೆಗೆಸಿಕೊಂಡವರ ಹಿಂದೆ ನಿಂತು ‘ಗ್ರೂಫ್ ಫೋಟೋ’ ಗೆ ಫೋಜ್ ಕೊಡುತ್ತಾರೆ. ಇನ್ನೂ ಕೆಲವರು ಅವಕಾಶ ಕಳೆದುಕೊಂಡ ಮಂದಿ ಮತ್ತೊಂದು ದಿನದ ಲೆಕ್ಕಾಚಾರಕ್ಕೆ ಶಕ್ತಿ ಕ್ರೋಡೀಕರಣದಲ್ಲಿ ತೊಡಗುತ್ತಾರೆ. ಇವರ ಹಿಂದೆ ಇರುವ ಕಿಂಗ್ ಮೇಕರ್‌ಗಳೆಂಬ ಜೋಕರ್‌ಗಳು ಮಾತ್ರ ಎಲ್ಲೋ ಒಂದೆಡೆ ಸೇರಿ ಪಾರ್ಟಿ ಮಾಡಿಕೊಂಡು ಇಡೀ ಪ್ರಹಸವನ್ನು ನೆನಪಿಸಿಕೊಂಡು ಕೇಕೆ ಹಾಕುತ್ತಿರುತ್ತಾರೆ, ಸ್ಮಶಾನದಲ್ಲಿಯ ಪಿಶಾಚಿಗಳಂತೆ. ಈ ಮಧ್ಯೆ ಶಕುನಿಯಂತೆ ಬುದ್ಧಿ ಹೇಳಲೂ ಹೊರಡುತ್ತಾರೆ. ಅವರ ಫೋಜ್ ಮಾತ್ರ ಮಹಾಭಾರತದ ‘ವಿದುರನಂತೆ’.

ಎಂಥಾ ದುರಂತವೆಂದರೆ ವರ್ಷಕ್ಕೆ ಹನ್ನೆರಡೆ ತಿಂಗಳಿರುವುದು. ಒಂದುವೇಳೆ ೨೪ ತಿಂಗಳಿದ್ದಿದ್ದರೆ ಯಡಿಯೂರಪ್ಪನವರು ತಮ್ಮ ಪಕ್ಷದ ಎಲ್ಲ ಶಾಸಕರಿಗೂ ತಲಾ ಒಂದೊಂದು ತಿಂಗಳು ಮಂತ್ರಿ ಸ್ಥಾನವನ್ನು ಹಂಚಲು ಕೊಡಬಹುದಿತ್ತು. ಅದರಿಂದ ರಾಜ್ಯದ ಪ್ರಗತಿ ಏನಾಗುತ್ತದೋ ಅದು ಬದಿಗಿಡೋಣ. ಅವರ ಅಧಿಕಾರ ಹಪಾಹಪಿ ತಪ್ಪಬಹುದೇನೋ ಎಂಬ ಪ್ರಯೋಗ ಮಾಡಿ ನೋಡಬಹುದಿತ್ತು. ನಾವು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಪಟ್ಟವನ್ನು, ಮಹಾನಗರಪಾಲಿಕೆಗಳ ಮೇಯರ್‌ಗಿರಿಯನ್ನು ಹಾಗೆ ಹಲವು ಪಕ್ಷಗಳು ಆರು ತಿಂಗಳು, ಏಳು ತಿಂಗಳೆಂಬ ಲೆಕ್ಕಾಚಾರದಲ್ಲಿ ಹಂಚಿಕೊಟ್ಟಿದ್ದೇವೆ. ಐದು ವರ್ಷದಲ್ಲಿ ಇಂಥದೊಂದು ಪ್ರಯೋಗ ನಡೆಸಿದ್ದರೆ ಬಿಜೆಪಿ ‘ಡಿಫ್ರೆಂಟ್ ಪಾರ್ಟಿ’ ಎಂದು ಸಾಬೀತು ಪಡಿಸಬಹುದಿತ್ತೇನೋ ?

ಶೇಕ್‌ಸ್ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕ ನೆನಪಾಗುತ್ತದೆ. ಆ ‘ಮ್ಯಾಕ್ಬೆತ್’ ನ ದುರಂತ ಸಾವು ಯಾರ ಪಾಲಿನದ್ದು ಎಂಬ ಯೋಚನೆ ಕಾಡತೊಡಗುತ್ತದೆ. ಈ ಮಾತು ಹೇಳಿದ್ದಕ್ಕೆ ಒಂದೇ ಕಾರಣ, ಅಂಥ ಸಾವು ಪ್ರಜೆಗಳದ್ದೋ, ಪ್ರಜಾಪ್ರಭುತ್ವದ್ದೋ ಎಂಬುದು. ನಮ್ಮನ್ನಾಳುವವರ ಸ್ವಾರ್ಥ ಚಿಂತನೆ, ಕುಟುಂಬ ವ್ಯಾಮೋಹ ಹಾಗೂ ಅಧಿಕಾರದ ದಾಹ ನಮಗೆ ಹಾಗೂ ನಾವು ಅತೀವವಾಗಿ ಪ್ರೀತಿಸುವ ಪ್ರಜಾಪ್ರಭುತ್ವ ಆಡಳಿತ ಪದ್ಧತಿಗೆ ಅಂಥದೊಂದು ದುರಂತ ಸಾವು ತಂದುಕೊಡುತ್ತಿದ್ದರೂ ತಣ್ಣಗಿರುವುದೇಕೆ ? ಎಂಬುದೇ ಅರ್ಥವಾಗುತ್ತಿಲ್ಲ.

ಪ್ರಜಾಪ್ರಭುತ್ವದ ಮೂಲ ಗುಣವಾದ ಪ್ರತಿಭಟನೆ, ಅಭಿಮತ ಎಂಬುದನ್ನೇ ಮರೆತಿದ್ದೇವೆ. ಎಲ್ಲದಕ್ಕೂ ಮೂಕ ಪ್ರೇಕ್ಷಕರಾಗುವುದೂ ನಮ್ಮನ್ನೂ ನಿರ್ವೀರ್ಯರಂತೆ ಬಿಂಬಿಸುವುದಿಲ್ಲವೇ ಎಂಬುದು ಮತ್ತೊಂದು ಜಿಜ್ಞಾಸೆಯ ಸಂಗತಿ. ಒಟ್ಟೂ ಮೆರವಣಿಗೆ ನಡೆಯುತ್ತಿದೆ, ರಸ್ತೆ ಬದಿಯಲ್ಲಿ ನಿಂತು ನೋಡಬೇಕಷ್ಟೇ, ಯಾರು ಎಷ್ಟು ಹೊತ್ತು ಕುಣಿಯುತ್ತಾರೆ ಎಂಬುದಷ್ಟೇ ರೋಚಕವಾಗಿ ಉಳಿದಿಲ್ಲ, ಕುಣಿಸುತ್ತಾರೆ ಎಂಬುದೂ ಅಷ್ಟೇ ಕೌತುಕವಾಗಿ ಉಳಿದಿದೆ. ಕನಸೇ ಇಲ್ಲದವನು, ಭವಿಷ್ಯದಲ್ಲಿ ನಂಬಿಕೆಯನ್ನೇ ಹೊಂದಿರದವ ಮಾತ್ರ ವರ್ತಮಾನದಲ್ಲಿ ಎಲ್ಲ ವಿವೇಕವನ್ನೂ ಕಳೆದುಕೊಂಡು ತಕ್ಷಣದ ಅಸ್ತಿತ್ವಕ್ಕೆ ಹೊಡೆದಾಡುತ್ತಾನೆ. ಈಗ ಆಗುತ್ತಿರುವುದೂ ಅದೇ.