ಕಿರಂ ತೀವ್ರ ಕಾವ್ಯ ಮೋಹಿ. ಅವರಿಗೆ ಕಾವ್ಯ ಎಂದರೆ ಬದುಕು.

ಬೇಂದ್ರೆ ಮತ್ತು ಅಲ್ಲಮನ ಕಾವ್ಯಗಳೆಂದರೆ ಇಷ್ಟ. ತೀರಾ ಸಾಹಿತ್ಯಕ ಭಾಷೆಯಲ್ಲಿ ಹೇಳುವುದಾದರೆ, ಒಬ್ಬ ಸ್ನಿಗ್ಘ ಸೌಂದರ್ಯದ ವಿಮರ್ಶಕ. ಕಾವ್ಯವನ್ನು ಅರ್ಥೈಸಬೇಕು ಅನ್ನುವ ವೇಗ ಇರಲಿಲ್ಲ. ಆದರೆ ಕಾವ್ಯವನ್ನು ಅನುಭವಿಸುವುದಕ್ಕೆ ಬೇಕಾದಂತ ತುಡಿತ , ನಿಧಾನತೆ ಅವರಲ್ಲಿತ್ತು. ಅದೇ ಕಾವ್ಯವನ್ನು ಹತ್ತಿರವಾಗಿಸಿದ್ದು.

ಕಿರಂ ಎಲ್ಲಿರುತ್ತಾರೋ ಅಲ್ಲಿ ಎರಡಕ್ಕೇ ಸ್ಥಾನ. ಒಂದು ಪ್ರೀತಿ ಮತ್ತು ಕಾವ್ಯ. ಪ್ರತಿಯೊಬ್ಬರನ್ನು ಅತ್ಯಂತ ಆಪ್ತವಾಗಿ ಮಾತನಾಡಿಸುತ್ತಿದ್ದ ಅವರು, ಮೊದಲು ಏನ್ರೀ ಚೆನ್ನಾಗಿದ್ದೀರ ಎಂದು ಪ್ರಶ್ನಿಸಿದ ನಂತರ ಕಾವ್ಯದ ಬಗ್ಗೆ ನೇರವಾಗಿ ಮಾತಿಗಿಳಿಯುತ್ತಿದ್ದರು. ಅವರ ಅಖಂಡ ಕಾವ್ಯ ಮೋಹ ಬೇರೆ ಏನನ್ನೂ ಮಾತನಾಡಲು ಬಿಡುತ್ತಿರಲಿಲ್ಲ. ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಜಾಣ್ಮೆಯ ಎಚ್ಚರ ಕಾವ್ಯದ ಬಗ್ಗೆ ಮಾತನಾಡುತ್ತಿರುವಾಗ ಅವರನ್ನು ತಡೆಯತ್ತಿರಲಿಲ್ಲ.

ಕಾವ್ಯಮಂಡಲ ಎಂಬ ಸಂಸ್ಥೆ ಕಟ್ಟಿ ಯಾವ ನಿರ್ಭಿಡೆ ಇಲ್ಲದೆ ಯಾವುದೇ ಊರಿನ ಜನ ಅವರನ್ನು ಕರೆದು ಕಾವ್ಯದ ಬಗ್ಗೆ ಮಾತನಾಡಿ ಎಂದಾಗ ಅಲ್ಲಿ ಬಂದು ಪ್ರೀತಿ ಗಳಿಸುತ್ತಿದ್ದರು. ರನ್ನ, ಪಂಪನಿಂದ ಹಿಡಿದು ಬೇಂದ್ರೆಯವರಿಗಿನ ಎಲ್ಲ ಕಾವ್ಯಗಳ ಬಗ್ಗೆ ಹೊಸ ಹೊಳಹನ್ನು, ನೋಟವನ್ನು ನೀಡುತ್ತಿದ್ದ ಕಿರಂ, ಅವರ ಆಪ್ತತೆಯ ಪ್ರೀತಿ ಕಾವ್ಯದ ಬಗ್ಗೆ ಆಸೆ ಹುಟ್ಟುವಂತೆ ಮಾಡುತ್ತಿತ್ತು. ರನ್ನ ಪಂಪನಿಂದ ಹಿಡಿದು ಬೇಂದ್ರೆಯವರಿಗಿನ ಎಲ್ಲ ಕಾವ್ಯಗಳ ಬಗ್ಗೆ ಹೊಸ ನೋಟವನ್ನು ನೀಡುತ್ತಿದ್ದರು.

ಆಷಾಢ ಮುಗಿದು ಶ್ರಾವಣ ಮಾಸ ಪ್ರಾರಂಭವಾಗುವ ದಿನಗಳಲ್ಲಿ ಶ್ರಾವಣ ಬರುವ ಮುನ್ನವೇ ಶ್ರಾವಣ ಕವಿಯ ಬಳಿ ಹೊರಟರು. ಬೇಂದ್ರೆಯ ‘ಜೋಗಿ’ ಪದ್ಯದ ಬಗ್ಗೆ ಮಾತು ಪ್ರಾರಂಭಿಸಿ, ಕೊನೆಯಲ್ಲಿ ಅಲ್ಲಮನ ಬಗ್ಗೆಯೂ ಉಲ್ಲೇಖಿಸಿದ್ದು, ಬಹುಶಃ ತನ್ನ ಆತ್ಮದ ಕವಿಗಳಿಬ್ಬರಿಗೆ ಸಲ್ಲಿಸಿದ ಕೊನೆಯ ನಮಸ್ಕಾರವೂ ಇದ್ದಿರಬಹುದು.

ಇಂಗ್ಲಿಷಿನ ‘ಡೆಡ್ ಪೊಯೆಟ್ಸ್ ಸೊಸೈಟಿ’ ಚಿತ್ರದ ನಾಯಕ ಪಾತ್ರವಾದ ಮೇಷ್ಟ್ರು, ತನ್ನ ವಿದ್ಯಾರ್ಥಿಗಳಲ್ಲಿ ಕಾವ್ಯದ ಬಗ್ಗೆ ಹುಚ್ಚು ಹತ್ತಿಸುತ್ತಾನೆ. ಕಾವ್ಯದ ಪ್ರೀತಿ ಬೆಳೆಸಿಕೊಂಡರೆ ಜೀವನ ಎಷ್ಟು ಚೆನ್ನಾಗಿರುತ್ತದೆ ಎಂಬ ಬಗ್ಗೆ ಹೇಳಿಕೊಡುತ್ತಾನೆ. ಆ ಚಿತ್ರದ ನಾಯಕನಂತೆ ಕಿರಂ ಇದ್ದರು ಎಂದರೆ ತಪ್ಪಾಗಲಾರದೇನೋ.

ಅವರು ಬರೆದು ಸಾಧಿಸಬೇಕೆಂಬ ಬಗ್ಗೆ ಆಸಕ್ತಿ ಇಟ್ಟುಕೊಂಡವರಲ್ಲ. ಸ್ವತಃ ಬರೆದವರಲ್ಲ. ಬಹಳಷ್ಟು ಸಾಹಿತ್ಯವನ್ನು ತಿದ್ದಿದ್ದಾರೆ. ಸಲಹೆ ನೀಡದ್ದಾರೆ. ಇಡೀ ಕನ್ನಡ ಕಾವ್ಯದ ಬಗ್ಗೆ ದಾಖಲೆಯಾಗ ಬಹುದಾದ ಒಳನೋಟಗಳು, ಒಳವುಗಳು ಅವರೊಂದಿಗೆ ಕಳೆದುಹೋಗಿವೆ. ಕೀರಂ ಅವರನ್ನು ಕಳೆದುಕೊಂಡಿದ್ದೇವೆ , ಅವರ ಒಳನೋಟವನ್ನು ಕಳೆದುಕೊಂಡಿದ್ದೇವೆ. ಅದನ್ನು ಉಳಿಸಿಕೊಳ್ಳುವ ಎಚ್ಚರ ನಮ್ಮಲ್ಲಿರಿದ್ದುದೆ ವಿಷಾದ.

ಬೇಂದ್ರೆ ಅತ್ಯಂತ ಆಪ್ತ ಕವಿ, ಒಮ್ಮೊಮ್ಮೆಯೂ ಪದ್ಯವನ್ನು ಭಿನ್ನ ಕೋನದಿಂದ ನೋಡಿ, ವ್ಯಾಖ್ಯಾನಿಸುತ್ತಿದ್ದರು. ತೀರಾ ಸರಳವಾಗಿ ಹೇಳುವುದಾದರೆ ಪ್ರತಿ ಬಾರಿಯೂ ಅದೇ ಪದ್ಯದ ಸಾಲುಗಳಿಗೆ ಹೊಸ ಅರ್ಥ. ಒಂದೇ ನೆಲೆಯ ವ್ಯಾಖ್ಯಾನ ಮಾಡಿ ಮುಗಿಸುವ ಸಂಗತಿಯೂ ಆಗಿರಲಿಲ್ಲ, ಇಷ್ಟವೂ ಇರಲಿಲ್ಲ. ಅವರಿಗೆ ಬದುಕಿನ ಶೋಧದ ನೆಲೆಯೂ ಕಾವ್ಯವಾಗಿತ್ತು. ಹಾಗಾಗಿಯೇ ಅವರು ಪ್ರತಿಬಾರಿಯೂ ಹೊಸದಾಗಿ ನೋಡುತ್ತಿದ್ದರು.

ಕವಿತೆ, ಕವಿತೆ ಅಷ್ಟೇ, ಅದಕ್ಕೆ ಬೇರೇನೂ ಮಾಡಬೇಡಿ, ಅದರ ಪಾಡಿಗೆ ಅದನ್ನು ಬಿಡಿ ಎಂದು ಹೇಳುತ್ತಿದ್ದರು.
ಕವಿತೆ ಘೋಷಣೆ ಯಾಗಬಾರದು, ಭಾಷಣವಾಗವಾರದು, ಕವಿತೆ ಕವಿತೆಯಾಗಿರಬೇಕು. ಕಾವ್ಯದ ಬಗ್ಗೆ ಅಖಂಡ ಪ್ರೀತಿಯೇ ಇಂಥ ಮಾತುಗಳನ್ನು ಹೇಳಿಸುತ್ತಿತ್ತು.

ಕವಿ ತನ್ನ ಕಾವ್ಯದಲ್ಲಿ ಇಟ್ಟಿರುವ ಅರ್ಥದ ಸಾಧ್ಯತೆ ಮತ್ತು ರಹಸ್ಯವನ್ನು ಅರಿಯುವ ಪ್ರಯತ್ನದ ವಿನಯಶೀಲ ವಿದ್ಯಾರ್ಥಿಯಂತೆಯೇ ತರಗತಿ ಮುಗಿಸಿದರೇ ಹೊರತು ಅರಿತಿದ್ದೇನೆ ಎಂಬ ಭ್ರಮೆಯಲ್ಲಲ್ಲ. ಅದೇ ಕಿರಂ ವಿಶೇಷ ಗುಣ.

ಕಿರಂ ಅವರನ್ನು, ಅವರ ಒಳನೋಟವನ್ನು ಕಳೆದುಕೊಂಡಿದ್ದೇವೆ. ಅವರಿಗೇಕೋ ಬರೆಯುವುದರಲ್ಲಿ ಅಷ್ಟು ನಂಬಿಕೆ ಇರಲಿಲ್ಲ, ಮಾತನಾಡಿಕೊಂಡೇ ಇದ್ದರು. ಒಂದಿಷ್ಟು ಯಾರೋ ಒತ್ತಾಯಕ್ಕೆ ಎಂಬಂತೆ ಬರೆದರು. ಆದರೆ ಒಂದಷ್ಟು ಮಂದಿಯಿಂದ ಬರೆಸಿದ್ದು, ತಿದ್ದಿದ್ದು, ಬರೆಯಲು ಮಾರ್ಗದರ್ಶನ ನೀಡಿದ್ದು ಎಷ್ಟೋ ಇದೆ. ಇಡೀ ಕನ್ನಡ ಕಾವ್ಯದ ಬಗ್ಗೆ ದಾಖಲೆಯಾಗಬಹುದಾದ ಒಳನೋಟಗಳು, ಹೊಳಹುಗಳು ಕಳೆದುಹೋದವು. ಅದನ್ನು ಉಳಿಸಿಕೊಳ್ಳುವ ವಿಚಾರವನ್ನು ಯಾರೂ ಮಾಡಲಿಲ್ಲ ಎಂಬುದು ವಿಷಾದ.

ಪ್ರತಿಯೊಬ್ಬರೂ ಕತ್ತಲೆಯಲ್ಲೇ ಬದುಕುತ್ತಾರೆ, ಆದರೆ ಯಾವುದೋ ಒಂದು ಬೆಳಕು ಮುನ್ನಡೆಸುತ್ತಿರುತ್ತದೆ. ಕಿರಂ ಅವರನ್ನು ಮುನ್ನಡೆಸುತ್ತಿದ್ದುದು ಕಾವ್ಯದ ಬೆಳಕು. ಈಗ ಕಾವ್ಯವೇ ಕಿರಂ ಅವರನ್ನು ನೀಗಿಕೊಂಡಿದೆ, ಇಬ್ಬರೂ ಬೆಳಕಾಗಿದ್ದಾರೆ !