ಲೇಖನ

ಕನ್ನಡದ ಪರಿಚಾರಕ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ ಅವರು ಗುರುವಾರ (ಜು.22) ದಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.

ತಣ್ಣಗಿನ ಸ್ವರ, ಅಷ್ಟೇನೂ ಉದ್ದವಲ್ಲದ ಆಕೃತಿ, ಖಾದಿ ರೇಷ್ಮೆಯ ಜುಬ್ಬಾ ಹಾಕಿಕೊಂಡು ತಣ್ಣಗೆ ಪಕ್ಕದಲ್ಲಿ ಬಂದು ನಿಂತ ಆಕೃತಿ ಮಾತನಾಡುವುದೇ ಹೀಗೆ-’ನಮಸ್ಕಾರ’.

ನಾನು ಎಸ್. ಕೆ. ಹರಿಹರೇಶ್ವರ’ ಎಂದು ಪರಿಚಯಿಸಿಕೊಳ್ಳುತ್ತಿದ್ದ ಶಿಕಾರಿಪುರ ಹರಿಹರೇಶ್ವರ ಅವರು ಸಾಹಿತ್ಯ ಸಾಧಕರಲ್ಲದಿರಬಹುದು, ಆದರೆ ಪರಿಚಾರಕರು. ಅದರಲ್ಲೂ ಕನ್ನಡದ ಸೇವಕರೆಂದರೆ ಯಾವುದೇ ಅತಿಶಯೋಕ್ತಿಯಲ್ಲ. ಸೌಜನ್ಯದ ವ್ಯಕ್ತಿತ್ವ, ಸ್ವಲ್ಪ ಕೋಪವಿದ್ದರೂ ಯಾರನ್ನೂ ಸುಡದಂಥದ್ದು, ಏರು ದನಿಯವರಲ್ಲ, ಸೌಮ್ಯದಿಂದಲೇ ಸಣ್ಣಗೆ ಮಾತನಾಡುವವರು.

ಮತ್ತೊಂದು ಸಂಗತಿಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ್ದದಿದೆ. ಕನ್ನಡದ್ದೇ ನಾಡಿನಲ್ಲಿ ಕನ್ನಡ ಉಳಿಸಲು, ಕನ್ನಡದ ಬಗ್ಗೆ ಪ್ರಚಾರ ನಡೆಸಲು, ಕನ್ನಡಕ್ಕೆ ಫರಾಕು ಹಾಕಲು ಬೇಕಾದಷ್ಟು ಮಂದಿ ಇದ್ದಾರೆ, ಸರಕಾರಗಳಿವೆ, ಪ್ರಾಧಿಕಾರಗಳಿವೆ, ಅಕಾಡೆಮಿಗಳಿವೆ, ನಿತ್ಯವೂ ಕನ್ನಡದ ಜಪವನ್ನೇ ಮಾಡುತ್ತವೆ. ಆದರೆ ಆಗಲೇ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಅಮೆರಿಕದಲ್ಲಿ ಭಾರತೀಯರೆನ್ನುವರೇ ಅಲ್ಪಸ್ವಲ್ಪ ಎನ್ನಿಸುವ ಸಂಖ್ಯೆಯಲ್ಲಿದ್ದಾಗ ಆ ಪೈಕಿ ಇರುವ ಅಲ್ಪಿಗರಾದ ಕನ್ನಡಿಗರನ್ನು ಒಟ್ಟು ಹಾಕಿ ಕನ್ನಡದ ತೇರನ್ನೆಳೆಯುವಲ್ಲಿ ಎಲ್ಲ ಆಸಕ್ತ, ಪ್ರೀತಿಯ ಅನಿವಾಸಿ ಕನ್ನಡಿಗರ ಕೊಡುಗೆ ಅನನ್ಯ. ಆ ಪೈಕಿ ಎಸ್. ಕೆ. ಹರಿಹರೇಶ್ವರ ಅವರು ಮುಂಚೂಣಿಯಲ್ಲಿದ್ದರು.

ಇಂದು ಅಕ್ಕ, ನಾವಿಕದಂಥ ಸಂಸ್ಥೆಗಳು ಅಮೆರಿಕದಲ್ಲಿ ಕನ್ನಡದ ಕಂಪನ್ನು ಸೂಸುತ್ತಿದ್ದರೆ, ಹರಿಹರೇಶ್ವರಂಥವರು ಗಂಧದಂತೆ ತೇಯ್ದುಕೊಂಡಿದ್ದಾರೆ. ಇದನ್ನು ಮರೆಯುವಂತಿಲ್ಲ. ಹತ್ತು ಹಲವರನ್ನು ಒಟ್ಟಿಗೆ ಕರೆದುಕೊಂಡು ಕನ್ನಡಿಗರಾಗಿ’ ವಿಜೃಂಭಿಸಿದವರು. ಆದ್ದರಿಂದಲೇ ಇಂದು ಅಮೆರಿಕದಲ್ಲಿ ಕನ್ನಡದ ರಥದ ’ದನಿ’ ಎಲ್ಲರ ಕಿವಿಗೂ ಕೇಳುತ್ತಿರುವುದು. ಒಂದು ದೊಡ್ಡ ಕೆಲಸ ಒಬ್ಬರಿಂದಲೇ ಆಗದು ಎನ್ನುವ ಮಾತು ಅಕ್ಷರಶಃ ಸತ್ಯ. ಆದರೆ, ಅಂಥದೊಂದು ದೊಡ್ಡ ಕೆಲಸಕ್ಕೆ ಸಣ್ಣ-ಸಣ್ಣವರೇ ನೂರಾರು ಮಂದಿ ಸೇರಿರುತ್ತಾರೆ. ಅಂಥ ಸಣ್ಣವರಲ್ಲಿ ಹರಿಹರೇಶ್ವರರೂ ಒಬ್ಬರು. ಇದೇ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೆಂದರೆ ಹೀಗೆ ಸಣ್ಣವರಾದವರು ಸಂಘ ಸುಖದಲ್ಲಿ ದೊಡ್ಡದನ್ನು ಸಾಧಿಸಿ ಆತ್ಮತೃಪ್ತಿ ಪಡೆದದ್ದೇ ಅತೀವ ದೊಡ್ಡದು. ಹಾಗಾಗಿಯೇ ಅನಿವಾಸಿ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಹರಿಹರೇಶ್ವರ ಅವರನ್ನು ಬಿಟ್ಟು ಏನನ್ನೂ ನೆನಪಿಸಿಕೊಳ್ಳಲಾಗದು.

ಮೊದಲೇ ಹೇಳಿದಂತೆ ಬಹಳ ತಣ್ಣಗಿನ ಸ್ವರ. ಅವರನ್ನು ನಾನು ಕಂಡದ್ದು ಕೆಲವೇ ಬಾರಿ. ಬೆಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ. ಎಷ್ಟೋ ಬಾರಿ ಹೀಗೇ ಅಮೆರಿಕದಲ್ಲಿನ ಕನ್ನಡಿಗರ ಬಗೆಗಿನ ಕುತೂಹಲವೇ ಅವರನ್ನು ಮುಖಾಮುಖಿ ಮಾಡಿಸಿತ್ತು. ಚೆಂದದ ಕನ್ನಡ ನಾಡಿನಲ್ಲಿರುವ ನಮಗೆ ಅನಿವಾಸಿ ಕನ್ನಡಿಗರ ಬಗೆಗಿನ ಆತಂಕ ಇದ್ದದ್ದು ಒಂದೇ. ಅಲ್ಲಿನ ಮಕ್ಕಳೆಲ್ಲಾ ಬರೀ ಇಂಗ್ಲಿಷ್ ಕಲಿಯುತ್ತಿದ್ದಾರೆ, ಕನ್ನಡವನ್ನಲ್ಲ’ ಎಂಬುದು. ಅದೇ ಪ್ರಶ್ನೆ ಅವರಿಗೆ ಬಂದಾಗಲೆಲ್ಲಾ ಕೇಳುತ್ತಿದ್ದೆವು. ಆಗಲೂ ಅವರು ತಣ್ಣಗೆ, ನೀವಂದು ಕೊಂಡಂತಿಲ್ಲ. ಅಲ್ಲಿ ನಾವೆಲ್ಲಾ ಕನ್ನಡ ಉಳಿಸುತ್ತಿದ್ದೇವೆ’ ಎನ್ನುತ್ತಿದ್ದರು. ಮಕ್ಕಳಿಗೆಲ್ಲಾ ಕನ್ನಡ ಕಲಿಸುವಂತೆ ಕನ್ನಡ ಸಂಘಗಳಲ್ಲಿ ಕಾರ‍್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮನೆಯಲ್ಲಿ ಆದಷ್ಟು ಕನ್ನಡ ಮಾತನಾಡುತ್ತೇವೆ. ಒಟ್ಟೂ ಕನ್ನಡ ಪರಿಸರ ಸ್ವಲ್ಪವಾದರೂ ಕಾಣಲೆಂಬುದು ನಮ್ಮ ಪ್ರಯತ್ನ’ ಹೀಗೆ ಕೈಗೊಂಡ ಪ್ರಾಮಾಣಿಕ ಪ್ರಯತ್ನಗಳನ್ನೆಲ್ಲಾ ವಿವರಿಸುತ್ತಿದ್ದರು. ಆಗ ನಿಜವಾಗಲೂ ನನಗೆ ನಾಚಿಕೆಯಾಗುತ್ತಿತ್ತು, ನಮ್ಮಲ್ಲೇ ಕನ್ನಡ ಉಳಿಸಿಕೊಳ್ಳಲು ಬಹಳ ಕಷ್ಟಪಡುತ್ತಿದ್ದೇವೆ’. ಈ ಸತ್ಯ ಸಂಗತಿಯಿಂದ ಮತ್ತೆ ಆ ಬಗೆಗಿನ ಪ್ರಶ್ನೆ ಕೇಳಲು ಹೋಗುತ್ತಿರಲಿಲ್ಲ. ನಾನೂ ಅವರಂತೆಯೇ ತಣ್ಣಗೆ ಕೇಳಿಕೊಂಡು ಇಳಿದು ಹೋಗಿಬಿಡುತ್ತಿದ್ದೆ.

ಕೆಲವೇ ವರ್ಷಗಳ ಹಿಂದೆ ಕರ್ನಾಟಕಕ್ಕೆ ವಾಪಸಾಗಿದ್ದ ಹರಿಹರೇಶ್ವರ ದಂಪತಿಗಳು ನೆಲೆಸಿದ್ದು ಮೈಸೂರಿನಲ್ಲಿ. ನಿತ್ಯವೂ ಎಸ್. ಕೆ. ಹರಿಹರೇಶ್ವರ ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತೇ ಕೆಲಸ ಮಾಡುತ್ತಿದ್ದರು. ಸ್ಥಳೀಯ ಹಲವು ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಇಲ್ಲಿದ್ದುಕೊಂಡೇ ಅಮೆರಿಕ, ಯುರೋಪು ಖಂಡಗಳಲ್ಲಿರುವ ಕನ್ನಡ ಸಂಸ್ಥೆಗಳಿಗೆ, ಕನ್ನಡಿಗರಿಗೆ ಕೊಂಡಿಯಾಗಿದ್ದರು.

ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರು ಅಮೆರಿಕದಲ್ಲಿದ್ದಾಗಲೂ ಕನ್ನಡವನ್ನು, ಕರ್ನಾಟಕವನ್ನು ಮರೆತಿರಲಿಲ್ಲ. ಸಂತೋಷದ ಸಂಗತಿಯೆಂದರೆ, ಕರ್ನಾಟಕಕ್ಕೆ ವಾಪಸ್ಸಾಗಿ ನೆಲೆಗೊಂಡಾಗಲೂ ಅಮೆರಿಕವನ್ನು, ಅಮೆರಿಕದಲ್ಲಿಹ ಕನ್ನಡಿಗರನ್ನು ಹಾಗೂ ಅಲ್ಲಿನ ಕನ್ನಡಿಗರ ಹೊಸ ತಲೆಮಾರಿನ ಬವಣೆಯನ್ನು ಮರೆತಿರಲಿಲ್ಲ. ಹಾಗಾಗಿಯೇ ಸಿಕ್ಕಾಗಲೆಲ್ಲಾ ಹೇಳುತ್ತಿದ್ದ ಒಂದೇ ಮಾತೆಂದರೆ, ಹೊಸ ತಲೆಮಾರಿಗೆ ಕನ್ನಡ ಕಲಿಸಬೇಕು.

ಇದು ಅವರ ಅತ್ಯಂತ ಕಾಳಜಿಯ ಮಾತು. ಈ ಮಾತನ್ನು ಆಡಲು ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅಮೆರಿಕದಲ್ಲಿ ಕನ್ನಡಿಗರನ್ನು ಒಟ್ಟು ಗೂಡಿಸಲು, ಕನ್ನಡಿಗರ ಮಧ್ಯೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಪತ್ರಕರ್ತ’ರೂ ಆದರು. ಅಮೆರಿಕನ್ನಡಿಗ’ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ಈ ಮೂಲಕ ಕರ್ನಾಟಕಕ್ಕೂ, ಅಮೆರಿಕದಲ್ಲಿರುವ ಕನ್ನಡಿಗರಿಗೂ ಸಂಪರ್ಕ ಸೇತುವಾಗಿ ಕೆಲಸ ಮಾಡಿದರು. ಇಂದಿನ ಅತ್ಯಂತ ದುಃಖದ ಸಂಗತಿಯೆಂದರೆ ಅಂಥ ಸೇತು ಕುಸಿದು ಬಿದ್ದಿದೆ. ಅವರೊಂದಿಗಿನ ನೆನಪಿನ ನೂಲಿನಲ್ಲಿ ಸಂಬಂಧವನ್ನು ಹಸಿಗೊಳಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಇಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s