ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ವಾಪಸು ತೆಗೆದುಕೊಳ್ಳಲು ನಿರ್ಧರಿಸಿರುವುದು, ಅಂಥದೊಂದು ಮನವೊಲಿಸುವಿಕೆಯತ್ತ ರಾಜ್ಯ ಸರಕಾರ ಮುಖ ಮಾಡಿದ್ದು-ಎರಡೂ ಒಳ್ಳೆಯದೇ.

ಇಡೀ ಪ್ರಕರಣದಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದಕ್ಕಿಂತಲೂ ಇಡೀ ಬೆಳವಣಿಗೆ ಒಂದು ಆರೋಗ್ಯದಾಯಕವಾಗಿ ನಡೆದಿದೆ. ಆ ನೆಲೆಯಲ್ಲೇ ಇದನ್ನು ಗಮನಿಸಬೇಕು ಮತ್ತು ಸ್ವಾಗತಿಸಬೇಕು.
ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆಯವರ ರಾಜೀನಾಮೆ ವಾಪಸ್ ನಿರ್ಧಾರದ ಔಚಿತ್ಯದ ಪ್ರಶ್ನೆ ಇಲ್ಲಿ ಎತ್ತುವುದಕ್ಕಿಂತಲೂ, ಆ ನಿರ್ಧಾರವನ್ನು ಸ್ವಾಗತಿಸಬೇಕಾದ ತುರ್ತೊಂದು ಇದೆ. ಅದೆಂದರೆ ಒಂದು ವ್ಯವಸ್ಥೆಯ ಬಗ್ಗೆ ಆಗಬಹುದಾದ ಇನ್ನಷ್ಟು ಕುಸಿತವನ್ನು ಇಬ್ಬರೂ ಸೇರಿ ತಡೆ ಹಿಡಿದಿದ್ದಾರೆ ಎನ್ನಬಹುದು.

ಈ ಮಾತು ಹೇಳಲಿಕ್ಕೆ ಇರುವ ನೆಲೆಗಳಿಷ್ಟೇ. ಸಂತೋಷ್ ಹೆಗ್ಡೆಯವರು ರಾಜೀನಾಮೆ ವಾಪಸ್ ಪಡೆಯದೇ ಇದ್ದಿದ್ದರೆ ಬೇರೇನೂ ಆಗುತ್ತಿರಲಿಲ್ಲ. ಒಬ್ಬ ಸ್ವಾಭಿಮಾನಿ ಮನುಷ್ಯ ಆ ಹುದ್ದೆಗೆ ಬರುವುದು ಕಷ್ಟವಿರುತ್ತಿತ್ತು. ಅಂದರೆ ಆಯ್ಕೆಯೇ ದೊಡ್ಡ ಸಮಸ್ಯೆಯಾಗಿ ಸರಕಾರಕ್ಕೆ ಆಗುತ್ತಿತ್ತೇನೋ ಹೇಳಲಾರೆ. ಆದರೆ ವ್ಯಕ್ತಿಯಾಗಿ ಪ್ರತಿಯೊಬ್ಬ ಸ್ವಾಭಿಮಾನಿಗೂ ಆ ಹುದ್ದೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತಿತ್ತು. ಇದು ಅಕ್ಷರಶಃ ನಿಜ.
ಇದೇ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಮಸ್ಯೆಯ ಮತ್ತೊಂದು ಕೋನದ ಬಗ್ಗೆ ಆಲೋಚಿಸುವುದಾದರೆ, ಸರಕಾರ ಎಂಬ ವ್ಯವಸ್ಥೆ ತನ್ನ ತಾಳಕ್ಕೆ ಕುಣಿಯುವ ಮನುಷ್ಯನನ್ನೇ ಈ ಹುದ್ದೆಗೆ ಆರಿಸುತ್ತಿತ್ತೇನೋ? ಗೊತ್ತಿರಲಿಲ್ಲ. ಆದರೆ, ಇಡೀ ಪ್ರಕರಣದಲ್ಲಿ ಮೊದಲ ಹತ್ತೂ ದಿನ ಸರಕಾರ ನಡೆದುಕೊಂಡ ರೀತಿ ಇಂಥದೇ ಒಂದು ಅನುಮಾನಕ್ಕೆ ಪುಷ್ಠಿ ನೀಡುವಂತಿತ್ತು. ಮೈಮೇಲೆ ವಿವಾದವನ್ನು ಎಳೆದುಕೊಳ್ಳದ ಹಾಗೆ, ಇದ್ದಕ್ಕಿದ್ದಂತೆ ಸರಕಾರದ ಮೇಲೆ ದಾಳಿ (ಮುಗಿಬೀಳುವ) ಮಾಡುವವರನ್ನು ದೂರವಿಟ್ಟು ನೋಡುವ ದೃಷ್ಟಿ ಬೆಳೆಸಿಕೊಳ್ಳುವ ಸಾಧ್ಯತೆಯೇ ಜಾಸ್ತಿ ಇತ್ತು.

ಇದರಿಂದ ಆಗುತ್ತಿದ್ದ ವ್ಯವಸ್ಥೆಯ ಅಧಃಪತನ ಹೇಳಲಾರದಷ್ಟು. ಯಾಕೆಂದರೆ, ಒಮ್ಮೆ ಬೆಂಚ್ ಮಾರ್ಕ್ ಎನ್ನುವುದೊಂದನ್ನು ಸೃಷ್ಟಿಸಿಕೊಂಡರೆ ಅದು ನೀರಿಗೂ ಎಳೆಯಬಹುದು, ಏರಿಗೂ ಎಳೆಯಬಹುದು. ಇದಕ್ಕೆ ಚಿಕ್ಕದೊಂದು ಉದಾಹರಣೆ ಎಂದರೆ, ಲೋಕಾಯುಕ್ತ ಎನ್. ವೆಂಕಟಾಚಲ ಅವರು ಭ್ರಷ್ಟರ ವಿರುದ್ಧ ದಾಳಿ ನಡೆಸಲು ಆರಂಭಿಸಿದ ಮೇಲೆಯೇ “ಭ್ರಷ್ಟತೆ’ ಯ ಬಾಹ್ಯರೂಪ ಹಾಗೂ ಭ್ರಷ್ಟರ ಅವತಾರಗಳು ಅರ್ಥವಾಗುತ್ತಾ ಹೋದದ್ದು. ಭ್ರಷ್ಟಾಚಾರದ ಬಗ್ಗೆ ಮತ್ತು ಲೋಕಾಯುಕ್ತರ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡತೊಡಗಿದ್ದು.
ಆ ಲೋಕಾಯುಕ್ತರು ದಾಳಿಗೆ ಮಾಧ್ಯಮದವರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದರೋ, ಪ್ರಚಾರಕ್ಕಾಗಿ ಮಾಡುತ್ತಿದ್ದರೋ, ಪ್ರಚಾರ ಪಡೆಯುವುದಷ್ಟೇ ಅವರ ಉದ್ದೇಶವಾಗಿತ್ತೋ…(ಇತ್ಯಾದಿ ಟೀಕೆ ಕೇಳಿಬಂದಿದ್ದು ನಿಜ). ಅವೆಲ್ಲವನ್ನೂ ಬದಿಗೆ ಸರಿಸೋಣ. ಆದರೆ ಆ ದಾಳಿಯಿಂದ ಒಂದಿಷ್ಟು ಅರಿವು ಮೂಡಿದ್ದು ನಿಜ.
ಅದೇ ಕೆಲಸವನ್ನು ಸಂತೋಷ್ ಹೆಗ್ಡೆಯವರೂ ಮುಂದುವರಿಸಿದ್ದೂ ನಿಜವೇ. ಇನ್ನೂ ವಿಶದವಾಗಿ ಹೇಳುವುದಾದರೆ ಲೋಕಾಯುಕ್ತದ ಇಮೇಜ್ (ವರ್ಚಸ್ಸು) ನ್ನು ಬದಲಾಯಿಸಿದರೂ ಸಹ. ತಣ್ಣಗಿದ್ದೇ ಬಾಂಬ್‌ಗಳನ್ನು ಹಾರಿಸುತ್ತಾರೆ ಎಂಬ ಅಭಿಪ್ರಾಯವಿದೆಯಲ್ಲ ಹಾಗೆಯೇ.

ಈ ಮಾತನ್ನು ಅತ್ಯಂತ ಧನಾತ್ಮಕ ನೆಲೆಯಲ್ಲಿ ಹೇಳುತ್ತಿದ್ದೇನೆ. ಹಾಗೆ ಸುಮ್ಮನಿದ್ದು ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಬಲೆಗೆ ಕೆಡವಿದರು. ಬಹಳ ಮುಖ್ಯವಾಗಿ ಅದಕ್ಕೆ ಅವರು ಬಳಸಿಕೊಂಡಿದ್ದು ತನ್ನೊಳಗಿರುವ ವ್ಯವಸ್ಥೆಯನ್ನು. ಅಂದರೆ ಖುದ್ದಾಗಿ ಭಾಗವಹಿಸಿದ್ದಕ್ಕಿಂತ ಹೆಚ್ಚು ತನ್ನ ಸಿಬ್ಬಂದಿಯನ್ನೇ ವಿಶ್ವಾಸಕ್ಕೆ ಪಡೆದು ಸಕ್ರಿಯಗೊಳಿಸಿದ್ದು ಹೆಗ್ಡೆಯವರ ಹೆಗ್ಗಳಿಕೆ. ಹೀಗೆ ಒಂದು ವ್ಯವಸ್ಥೆ ಸಕ್ರಿಯಗೊಳ್ಳುತ್ತಿರುವ ಹಂತದಲ್ಲೇ ಅವರ ರಾಜೀನಾಮೆ ಆಘಾತ ತಂದು ಕೊಟ್ಟಿತ್ತು. ಅದೀಗ ಸ್ವಲ್ಪ ಮಟ್ಟಿಗೆ ಖುಷಿ ತಂದಿದೆ.

ಇಲ್ಲಿ ಬಿಜೆಪಿ ವರಿಷ್ಠ ಎಲ್. ಕೆ. ಆಡ್ವಾಣಿಯವರ ಮಾತನ್ನು ಕೇಳಿ ಹೆಗ್ಡೆಯವರು ರಾಜೀನಾಮೆ ವಾಪಸು ಪಡೆಯಲು ನಿರ್ಧರಿಸಿದರೋ ? ಯಾರ ಮಾತಿಗೂ ಮಣಿಯುವುದಿಲ್ಲ ಎಂದವರು ಇವರ ಮಾತಿಗೆ ಮಣಿದಿದ್ದೇಕೆ ? ರಾಜಕೀಯ ಒತ್ತಡಕ್ಕೆ ಮತ್ತೆ ತಣ್ಣಗಾದರೇ ? ಇನ್ನು ಮುಂದೆಯೂ ರಾಜ್ಯ ಸರಕಾರದ ಮಂದಿ ತನಗಾಗುವ ಮುಜುಗರದ ಸಂದರ್ಭದಲ್ಲಿ ಇಂಥದೇ ತಂತ್ರವನ್ನು ಅನುಸರಿಸುತ್ತದೆಯೋ? ಇತ್ಯಾದಿಗಳನ್ನು ಲೆಕ್ಕ ಹಾಕುವುದರಲ್ಲಿ ಅರ್ಥವಿಲ್ಲ.

ಆರಂಭದಲ್ಲಿ ‘ಮನವೊಲಿಸಲಾರೆ, ಗೌರವ ವಿದಾಯ’ ಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಂಪುಟ ಸದಸ್ಯರ ಮನ ಪರಿವರ್ತನೆಗೆ ಜನಾಭಿಪ್ರಾಯವೂ ಮಹತ್ವದ ಪಾತ್ರವನ್ನು ವಹಿಸಿದೆ. ಅದರ ಬೆನ್ನಿಗೇ ಹೆಗ್ಡೆಯವರ ರಾಜೀನಾಮೆಯಿಂದ ಪಕ್ಷದ ವರ್ಚಸ್ಸಿಗೆ ಆಗಬಹುದಾದ ಅನಾಹುತವನ್ನು ಗ್ರಹಿಸಿ ಈಗಲಾದರೂ ಎಚ್ಚೆತ್ತದ್ದು ವಿಶೇಷವೆನ್ನಲೇಬೇಕು.

ಲೋಕಾಯುಕ್ತರು ರಾಜೀನಾಮೆ ಹಿನ್ನೆಲೆಯಲ್ಲಿ ಆಡ್ವಾಣಿಯಂಥ ಅನುಭವಿ ನಾಯಕನಿಗೆ ತನ್ನ ಪಕ್ಷದ ಸರಕಾರದ ಮೇಲೆ (ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿದ್ದ) ಆಗಬಹುದಾದ ಪರಿಣಾಮವನ್ನು ಗ್ರಹಿಸಿದ್ದು ಉಲ್ಲೇಖನೀಯ. ಆದರೆ ಆ ಒಳ ನೋಟವನ್ನು ನಮ್ಮ ರಾಜ್ಯ ಸರಕಾರದ ಮಂದಿ ಅರಿಯದಿದ್ದುದು ವಿಪರ್ಯಾಸವೇ ಸರಿ.

ಎಲ್ಲದರ ಮಧ್ಯೆ, ಏನೇನೋ ಘಟಿಸಿ ಸಂತೋಷ್ ಹೆಗ್ಡೆ ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಒಳ್ಳೆ ಕೆಲಸಕ್ಕೆ ಸಹಕರಿಸುವ ಪ್ರಯತ್ನವನ್ನು ಖಚಿತಪಡಿಸಿದ್ದಾರೆ. ‘ಮತ್ತೆ ಭರವಸೆಗಳನ್ನು ನಂಬುತ್ತಿದ್ದೇನೆ, ನಂಬಬೇಕು’ ಎಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದರೆ ಮನುಷ್ಯರನ್ನು ಮತ್ತೆ ನಂಬುತ್ತಿದ್ದಾರೆ. ಇದನ್ನು ನಮ್ಮ ರಾಜ್ಯ ಸರಕಾರದ ಮಂದಿಯೂ ಅರ್ಥ ಮಾಡಿಕೊಳ್ಳಬೇಕು.

ಪ್ರಕರಣವಿಡೀ ಸುಖಾಂತ್ಯಗೊಂಡಿದೆ. ಇನ್ನೊಂದು ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಕಾರಣ, ಭವಿಷ್ಯದಲ್ಲಿ ಸಾಧನೆಯಲ್ಲಿ ಪಕ್ಷ ಸೋಲುಂಡಿದ್ದರೆ ಸ್ವಪಕ್ಷದವರೇ ಇದೇ ಕಾರಣ ಹೇಳಿ ತಲೆ ಮೆಲೆ ಮೆಣಸು ಅರೆಯುತ್ತಿದ್ದರು. ಹಾಗಾಗಿ ಸದ್ಯಕ್ಕೆ ಅಪಾಯದಿಂದ ಪಾರು. ಜತೆಗೆ ಯಾರು ಸೋತರು, ಯಾರು ಗೆದ್ದರು ಎಂಬುದು ಮುಖ್ಯವಿಲ್ಲ. ಆ ನೆಲೆಯಲ್ಲಿ ಪ್ರಕರಣವನ್ನೂ ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ.

ಜನಾಭಿಪ್ರಾಯಕ್ಕೆ ಮಣಿದು ಇಬ್ಬರೂ (ಲೋಕಾಯುಕ್ತ, ಮುಖ್ಯಮಂತ್ರಿ)ತಮ್ಮ ನಿಲುವುಗಳನ್ನು ಬದಲಿಸಿದ್ದಕ್ಕೆ ಅಭಿನಂದಿಸಬೇಕು. (ವಿಜಯ ಕರ್ನಾಟಕದಲ್ಲಿ ಪ್ರಕಟಿತ)