ಪ್ರಚಲಿತ

ಇದು ಮಾನ್ಯ ಯಡಿಯೂರಪ್ಪನವರು ಕೊಡುತ್ತಿರುವ ಶಿಕ್ಷೆ

ಎರಡು ವರ್ಷದ ಸಾಧನೆಯ ಸಂಭ್ರಮದಲ್ಲಿದ್ದ ಬಿಜೆಪಿಯ ರಾಜ್ಯ ಸರಕಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೊಟ್ಟದ್ದು ಬರಿದೇ ಶಾಕ್ ಅಲ್ಲ, ವಾಸ್ತವವಾಗಿ ಆ ನಡೆಗೆ ಕೊಟ್ಟ ‘ಚೆಕ್’.

ಈಗ ರಾಜ್ಯ ಸರಕಾರದ ಮುಂದಿನ ನಡೆಯೇನು ಎಂಬ ಕುತೂಹಲವಿದ್ದದ್ದು ನಿಜ. ಆದರೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಬ್ಬ ಅಪ್ರಬುದ್ಧ ಆಟಗಾರನಂತೆ ಸೋಲು ಒಪ್ಪಿಕೊಂಡಿದ್ದಾರೆ. ಚೆಕ್ ಕೊಡುವುದಿರಲಿ, ಪಂದ್ಯವನ್ನೇ ಆಡುವುದಿಲ್ಲ ಎಂದು ಘೋಷಿಸಿದರು. ಇದು ಅವರ ರಾಜಕೀಯ ದಡ್ಡತನವನ್ನೂ, ಅಪ್ರಬುದ್ಧತೆಯನ್ನೂ ಸಾಬೀತುಪಡಿಸಿದೆ. ಆ ಲೆಕ್ಕದಲ್ಲಿ ಹೇಳುವುದಾದರೆ ಇನ್ನೂ ನಮ್ಮ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರೇ ಹೊರತು, ಒಬ್ಬ ಧೀಮಂತ ಮುಖ್ಯಮಂತ್ರಿಯಲ್ಲ !

ಮೂರು ವರ್ಷದ ಅವಧಿ ಇರುವಾಗಲೇ ಲೋಕಾಯುಕ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಧಿಕಾರ ಸ್ವೀಕರಿಸಿದಾಗ ‘ನಾನು ಹಿಂದಿನವರಂತೆ ದಾಳಿ ಮಾಡಲಾರೆ’ ಎಂದು ಉಚ್ಚರಿಸಿದ್ದರು. ನಂತರ ವಿಜಯ ಕರ್ನಾಟಕ ಪತ್ರಿಕೆಯೇ ಸಂಗ್ರಹಿಸಿದ ಜನಾಭಿಪ್ರಾಯ ಹೇಗಿತ್ತೆಂದರೆ ಅವರನ್ನು ದಾಳಿಯತ್ತ ಚಿಮ್ಮಿಸಿತು ಎಂದರೆ ತಪ್ಪೇನೂ ಇಲ್ಲ. ಆದರೆ ಎಂದಿಗೂ ಇವರು ಪ್ರಚಾರಕ್ಕೆ ದಾಳಿ ಮಾಡಿದವರಲ್ಲ. ಹಿಂದಿನವರಿಗೆ (ಎನ್. ವೆಂಕಟಾಚಲ)ಹೋಲಿಸಿದರೆ ಹೆಚ್ಚು ವ್ಯವಸ್ಥಿತವಾಗಿ ದಾಳಿ ನಡೆಸಿ ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಿಡಿದರು. ಜನರ ಮೆಚ್ಚುಗೆ ಗಳಿಸಿದರು. ಜತೆಗೆ ತಪ್ಪಿತಸ್ಥರ ಅಥವಾ ಭ್ರಷ್ಟರ ಬಗ್ಗೆ ತಾವು ನೀಡಿದ ವರದಿಯನ್ನು ಸರಕಾರ ಉಪೇಕ್ಷಿಸತೊಡಗಿದಾಗ ಹೆಚ್ಚು ನಿಷ್ಠುರವಾಗಿಯೇ ಮಾಧ್ಯಗಳ ಮುಂದೆ, ಜನರೆದುರು ಬಿಚ್ಚಿಟ್ಟರು. ಆಗಲೇ ಅವರು ಎಂದಿಗೂ ಹುದ್ದೆ ಬಿಡಲು ಸಿದ್ಧವಾಗಿಯೇ ಇಂಥದೊಂದು ನಿಷ್ಠುರ ಅಧ್ಯಾಯ ಬರೆಯಲಾರಂಭಿಸಿದ್ದು. ಇಂದಿನ ರಾಜೀನಾಮೆ ಆ ಅಧ್ಯಾಯದ ಕ್ಲೈಮ್ಯಾಕ್ಸ್ ಹೊರತು ಹೊಸದಲ್ಲ.

ಒಂದು ಗಮನಿಸಬೇಕಾದ ಸಂಗತಿಯೆಂದರೆ ಇತ್ತೀಚೆಗೆ ಲೋಕಾಯುಕ್ತರು ಭ್ರಷ್ಟಾಚಾರ ನಿಯಂತ್ರಣದ ನೆಲೆಯಲ್ಲಿ ರಾಜ್ಯ ಸರಕಾರದ ನಿಷ್ಕ್ರಿಯತೆ, ವಿಳಂಬ ಧೋರಣೆ, ಭ್ರಷ್ಟರಿಗೆ ಸಚಿವ ಸಂಪುಟ ಸದಸ್ಯರ ಶ್ರೀರಕ್ಷೆ ಇತ್ಯಾದಿ ವಿಷಯಗಳಲ್ಲಿ ನೇರವಾಗಿಯೇ ಟೀಕಿಸುತ್ತಿದ್ದರು. ಅದರಲ್ಲೂ ನೆರೆ ಹಾವಳಿ ಸಂದಭ ದಲ್ಲಿ ಕೈಗೊಳ್ಳಲಾದ ಪರಿಹಾರ ಕ್ರಮಗಳಲ್ಲೂ ಭ್ರಷ್ಟಾಚಾರ ನಡೆದಿದ್ದರ ಬಗ್ಗೆಯೂ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಲೋಕಾಯುಕ್ತರ ಮೇಲೆ ಜನರ ವಿಶ್ವಾಸ ಹೆಚ್ಚಾಗುತ್ತಾ ಹೋಗಿತ್ತು. ಇಂಥ ಸಂದರ್ಭದಲ್ಲಿ ತುಸು ಎಚ್ಚರಿಕೆಯಿಂದ ವರ್ತಿಸಬೇಕಾಗಿದ್ದ ಮುಖ್ಯಮಂತ್ರಿ, ಯಾವಾಗಲೂ ಪ್ರತಿಕ್ರಿಯಿಸುವಂತೆ ‘ನಾನು ಅವರನ್ನು ಮನವೊಲಿಸಲು ಹೋಗುವುದಿಲ್ಲ, ಗೌರವಪೂರ್ಣ ವಿದಾಯ ಹೇಳುತ್ತೇನೆ’ ಎಂದರು. ಆ ಮಾತಿನ ಆಳ-ಅಗಲವಾದರೂ ಮಾನ್ಯ ಯಡಿಯೂರಪ್ಪನವರಿಗೆ ತಿಳಿದಿದೆಯೇ ಎಂಬುದು ಅಚ್ಚರಿಯ ಸಂಗತಿ.

ರಾಜ್ಯಪಾಲರು, ಕೇಂದ್ರ ಸಚಿವ ಪಿ. ಚಿದಂಬರಂರಂಥವರು ರಾಜೀನಾಮೆ ವಾಪಸು ತೆಗೆದುಕೊಳ್ಳುವಂತೆ ಮನವೊಲಿಸುತ್ತಿದ್ದರೆ, ನಮ್ಮ ಯಡಿಯೂರಪ್ಪನವರು ‘ನಾವೇನೂ ತಲೆ ಕೆಡಿಸಿಕೊಳ್ಳೋಲ್ಲ’ ಅನ್ನೋ ರೀತಿಯಲ್ಲಿ ಹೇಳಿಬಿಟ್ಟರು. ‘ಆಯಿತು ಸ್ವಾಮಿ, ನೀವು ಮನವೊಲಿಸಬೇಕಿಲ್ಲ. ಆದರೆ ಗೌರವಪೂರ್ಣ ವಿದಾಯ ಅನ್ನೋ ಅರ್ಥವೇನು?’ ಅನ್ನೋದನ್ನು ಸ್ಪಷ್ಟಪಡಿಸಬೇಕಲ್ಲವೇ. ಒಂದು ಒಳ್ಳೆಯ ಸಮಾರಂಭ ಏರ್ಪಡಿಸಿ, ಸನ್ಮಾನಿಸಿ ಕಳುಹಿಸುತ್ತೀರಾ ? ಅಥವಾ ದೊಡ್ಡ ‘ಹೈಟೀ’ ಕೊಟ್ಟು ಕಳಿಸ್ತೀರಾ? ಈ ಮಾತಿನ ಮೂಲಕ ನೀವು ನಿಮ್ಮ ದೊಡ್ಡಸ್ಥಿಕೆಯನ್ನು ಮೆರೆಸಿರಬಹುದು, ಪ್ರಾಮಾಣಿಕತೆಯನ್ನಲ್ಲ.

ತನಗಾಗುವ ಅವಮಾನ, ಅಗೌರವವನ್ನೆಲ್ಲಾ ಸಹಿಸಿಕೊಂಡೂ ಆಧಿಕಾರದ ಗೂಟಕ್ಕೆ ಅಂಟಿಕೊಂಡು ಕುಳಿತುಕೊಳ್ಳುವವರಿಗೆ ನಿಮ್ಮ ಪ್ರಯೋಗವನ್ನು ಮಾಡಬಹುದೇನೋ ? ಸಂತೋಷ್ ಹೆಗ್ಡೆಯವರಿಗಲ್ಲ. ಯಾಕೆಂದರೆ, ಹೆಗ್ಡೆಯವರೇ ನಿಜವಾಗಿ ಗೌರವಪೂರ್ಣ ವಿದಾಯ ಹೇಳಿದ್ದಾರೆ ತಮ್ಮ ಹುದ್ದೆಗೆ. ‘ನಿನಗೆಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲಿರುವ ಅಗತ್ಯವಿಲ್ಲ’ ಎಂಬ ತಮ್ಮ ತಂದೆಯ ಮಾತನ್ನು ಪತ್ರಿಕಾಗೋಷ್ಟಿಯಲ್ಲಿ ಉಲ್ಲೇಖಿಸಿದರು. ಇದರರ್ಥ ನೀವೂ ಮತ್ತು ನಿಮ್ಮ ಸರಕಾರ ಎಷ್ಟು ಗೌರವ ಕೊಟ್ಟಿದೆ ಎಂಬುದನ್ನೂ ಆ ಮಾತೇ ಜಗಜ್ಜಾಹೀರುಪಡಿಸಿದೆ. ಇನ್ನು ಹೊಸ ಗೌರವವನ್ನೇನು ಕೊಡುತ್ತೀರೋ ತಿಳಿಯುತ್ತಿಲ್ಲ.
-2-
ಹೆಗ್ಡೆಯವರು ಒಂದು ಪ್ರಕರಣದ ಮೂಲಕ ತನ್ನ ಪ್ರಸ್ತುತತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾರವಾರದ ಬಂದರಿನಲ್ಲಿ ಅಕ್ರಮ ಅದಿರನ್ನು ಪತ್ತೆ ಹಚ್ಚಿದ ಅಧಿಕಾರಿಯನ್ನೇ ವರ್ಗಾಯಿಸಲು ನಿಮ್ಮ ಪೇಮೆಂಟ್ ಸೀಟಿನ ಸಚಿವರು ಮುಖ್ಯ ಕಾರ‍್ಯದರ್ಶಿಗಳಿಗೆ ಫರ್ಮಾನು ಹೊರಡಿಸಿದರು. ಈ ಪೇಮೆಂಟ್ ಸೀಟಿನವರಿಗೆ ಹಣದ ದರ್ಪವೇ ಹೊರತು ಸ್ವಾಭಿಮಾನದ ಜಂಭವಲ್ಲ. ಅದನ್ನೂ ಕಂಡೂ ನೀವು ತಣ್ಣಗಿದ್ದಿರಿ. ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಉಳಿಸಿಕೊಳ್ಳಲು ಇಷ್ಟು ಕಷ್ಟ ಪಡಬೇಕಲ್ಲ ಎಂಬುದು ಹೆಗ್ಡೆಯವರ ಮನ ನೋಯಿಸಿತು. ‘ಇನ್ನು ಇಲ್ಲಿಗೆ ನಾನು ಪ್ರಸ್ತುತನಲ್ಲ’ ಎಂದೆಣಿಸಿ ರಾಜೀನಾಮೆ ಕೊಟ್ಟರು. ಆ ಮೂಲಕ ಇಡೀ ನಾಡಿಗೆ ಸ್ಪಷ್ಟಪಡಿಸಿದ್ದು ಏನೆಂಬುದು ಗೊತ್ತೇ ? ‘ಪ್ರಾಮಾಣಿಕರು ಇಲ್ಲಿಗೆ ಅನರ್ಹರು’ ಎಂಬುದನ್ನು. ಇದರ ಮೂಲಕ ನಿಮ್ಮ ಸರಕಾರದ ಮರ‍್ಯಾದೆ ಎಷ್ಟು ಹೋಯಿತು ಎಂದು ಲೆಕ್ಕ ಹಾಕಿ, ತಿಳಿಯಬಹುದು.

ಅವರ ಈ ನಡೆ ಇಡೀ ರಾಜ್ಯದ ಚುಕ್ಕಾಣಿ ಹಿಡಿದ ನಿಮಗೆ ಅಘಾತ ತರಬೇಕಿತ್ತು, ನಾಚಿಕೆಯಾಗಬೇಕಿತ್ತು. ತಕ್ಷಣವೇ ಅವರ ಕಾಲು ಹಿಡಿಯಬೇಕೆಂದು ಹೇಳುತ್ತಿಲ್ಲ, ಸೌಜನ್ಯಕ್ಕಾದರೂ ‘ಸ್ವಲ್ಪ ತಾಳಿ. ಉಪ ಲೋಕಾಯುಕ್ತರ ನೇಮಕ ಇತ್ಯಾದಿ ಪರಿಹರಿಸುವೆ. ಸ್ವಲ್ಪ ತಡವಾಗಿದೆ. ಹಲವು ಚುನಾವಣೆಗಳ ಬ್ಯುಸಿ. ನಿಮ್ಮಂಥ ಒಳ್ಳೆಯವರು ನಮ್ಮ ಸರಕಾರದಲ್ಲಿರಬೇಕು. ಪರಮಾಧಿಕಾರದ ಬಗ್ಗೆ ಆದಷ್ಟು ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವೆ ಎಂದು ಹೇಳಬೇಕಿತ್ತು. ತಕ್ಷಣವೇ ಸಂಬಂಧಪಟ್ಟ ಸಚಿವ ಮಹಾಶಯರಿಂದ ವಿವರಣೆ ಕೋರಬೇಕಿತ್ತು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಂಥವರನ್ನು ಬಿಡಲು ಪ್ರಯತ್ನಿಸಬೇಕಿತ್ತು. ಅದ್ಯಾವುದನ್ನೂ ಮಾಡದೇ ಪ್ರಾಮಾಣಿಕರನ್ನೆ ಬಲಿಗೊಡುತ್ತೇವೆ, ಭ್ರಷ್ಟರನ್ನಲ್ಲ ಎಂದು ಸಾರಿದಿರಲ್ಲ, ಈ ನಡೆ ಎಂಥ ಸಂದೇಶ ನೀಡಿದೆ ಗೊತ್ತೇ?

ಒಂದುವೇಳೆ ಹಾಗೆ ಹೇಳಿದ್ದರೆ ಮಾನ್ಯ ಯಡಿಯೂರಪ್ಪನವರೇ, ನೀವೇ ದೊಡ್ಡವರಾಗುತ್ತಿದ್ದಿರಿ. ಅವರಲ್ಲ. ಅದಾಗಲಿಲ್ಲ. ಬದಲಿಗೆ ಗೌರವಪೂರ್ಣ ವಿದಾಯ ಹೇಳಲು ಹೊರಟಿದ್ದೀರಿ. ವಿಪರ್ಯಾಸವೆಂದರೆ ಸರಕಾರದ ಮರ‍್ಯಾದೆಯನ್ನು, ಪಕ್ಷದ ಘನತೆಯನ್ನು ಹರಾಜಿಗಿಡುತ್ತಿರುವ ನಿಮ್ಮ ಸಂಪುಟದ ಪೇಮೆಂಟ್ ಸೀಟಿನ ಮಂದಿಗೆ ಗೌರವಪೂರ್ಣ ವಿದಾಯ ಹೇಳಲಾಗುತ್ತಿಲ್ಲ. ಬದಲಿಗೆ ಭ್ರಷ್ಟರನ್ನು ರಕ್ಷಿಸುವ ಮಂದಿಯ ನಾಯಕನಾಗಿಯೇ ಶೋಭಿತನಾಗುವ ಹಂಬಲ. ನಿಮ್ಮ ಫರಾಕು ಮುಂದುವರಿಯಲಿ.

ಅಲ್ಲಿಗೆ ನಿಮ್ಮ ಆದ್ಯತೆ ಸ್ಪಷ್ಟ. ಭ್ರಷ್ಟರೇ ನಿಮಗೆ ಮೊದಲ ಆದ್ಯತೆ, ಪ್ರಾಮಾಣಿಕರಲ್ಲ. ಆಡಳಿತದ ಚುಕ್ಕಾಣಿ ಹಿಡಿದವರು ಇಂಥ ಸಂದೇಶವನ್ನು ಎಂದಿಗೂ ನೀಡಬಾರದು. ನಿಮ್ಮ ಈ ಧೋರಣೆ ಎಂಥದೊಂದು ಸಂಕಷ್ಟವನ್ನು ತಂದೊಡ್ಡಿದೆ ಎಂದರೆ ಯಾವ ಪ್ರಾಮಾಣಿಕ ಅಧಿಕಾರಿಯೂ ಕೆಲಸ ಮಾಡುವ ಧೈರ್ಯವನ್ನೇ ತಾಳುವುದಿಲ್ಲ. ಪ್ರತಿ ಅಧಿಕಾರಿಯೂ ಜಾತಿ, ಜನಾಂಗ ಅದೂ ಇದೂ ಹೇಳಿಕೊಂಡು ಒಬ್ಬೊಬ್ಬ ಸಚಿವನ ಹಿಂದೆ ಪಟಾಲಂ ಕಟ್ಟಿಕೊಳ್ಳುತ್ತಾರೆ. ಅರಾಜಕತೆಯೇ ತಾಂಡವವಾಡುತ್ತದೆ. ಯಾವ ಅಧಿಕಾರಿಯೂ ದುಡ್ಡಿಲ್ಲದಿದ್ದರೆ ಜನರೊಂದಿಗೆ ಮಾತನ್ನೂ ಆಡಲಾರ. ಅಂಥ ಅಗ್ರಪಂಕ್ತಿಯನ್ನು ಹಾಕಿಕೊಟ್ಟ ಕೀರ್ತಿ ನಿಮಗೇ ದಕ್ಕಬೇಕು.
-3-
ರಾಜೀನಾಮೆ ಅಧ್ಯಾಯ ಮುಗಿದು ಹೋಯಿತು ಬಿಡಿ. ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸಾಧನಾ ಸಮಾವೇಶದಲ್ಲೂ ಅತ್ತು ಬಿಟ್ಟಿರಿ. ಜನರ ಸೇವೆಯಲ್ಲಿ ತೊಡಗಿಕೊಳ್ಳಿ ಎಂದೂ ಎಲ್ಲರಿಗೂ ಕರೆ ನೀಡಿ ಮೊಸಳೆ ಕಣ್ಣೀರು ಸುರಿಸಿದಿರಿ. ಅವೆಲ್ಲವೂ ಇರಲಿ, ಬಿಡಿ. ರಾಜಕೀಯದ ಒಂದು ಅಧ್ಯಾಯವದು.

ಮುಂದಿನ ಹೆಜ್ಜೆ ಬಗ್ಗೆ ಹೇಳಿ. ನಿಮ್ಮ ಪಕ್ಷದ ಆಶ್ವಾಸನೆ ಪಟ್ಟಿಯಲ್ಲೇ ಲೋಕಾಯುಕ್ತ ಪರಮಾಧಿಕಾರದ ಬಗ್ಗೆ ಪ್ರಸ್ತಾಪಿಸಿದಿರಿ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಒಂದೇ ಒಂದು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಜ್ಞಾಪಕಕ್ಕೆ ಬರಲಿಲ್ಲ. ನಿಮ್ಮ ಸರಕಾರದ ಬಾಲವನ್ನು ರೆಡ್ಡಿ ಸೋದರರು ಹಿಡಿದೆಳೆಯುವಾಗ ಏಕಾಏಕಿ ಸಂಪುಟ ಸಭೆ ತೆಗೆದುಕೊಂಡು ಉಳಿಯುವುದಕ್ಕೋಸ್ಕರ ಏನೆಲ್ಲಾ ನಿರ್ಧಾರವನ್ನು ತೆಗೆದುಕೊಂಡಿರಿ. ಈ ವಿಷಯವನ್ನು ಚರ್ಚಿಸಲು ಏಕೆ ಹಿಂಜರಿಕೆ ?

ಪರಮಾಧಿಕಾರ ಕೊಡದೇ ಬರೀ ಲೋಕಾಯುಕ್ತರನ್ನು ತಮ್ಮ ಸರಕಾರದ ‘ಷೋ ಮ್ಯಾನ್’ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದೀರಾ ? ನಿಮ್ಮ ಸರಕಾರದ ರಬ್ಬರ್ ಸ್ಟ್ಯಾಂಪ್‌ಗಳನ್ನು ಅಲ್ಲಿಟ್ಟು, ನಿಮ್ಮ ವಿರೋಧಿಗಳನ್ನು ಸದೆಬಡಿಯಲು, ನಿಮ್ಮಿಷ್ಟದಂತೆ ಬಳಸಿಕೊಳ್ಳುವುದು ನಿಮ್ಮ ಇಚ್ಛೆಯಾಗಿದ್ದರೆ, ಅದನ್ನಾದರೂ ಸ್ಪಷ್ಟಪಡಿಸಿ. ‘ಷೋ ಮ್ಯಾನ್’ ಎಂಬ ಪದ ಬಳಸಿದ್ದಕ್ಕೆ ಕಾರಣವಿದೆ. ಲೋಕಾಯಕ್ತರು ಭ್ರಷ್ಟರನ್ನು ಹಿಡಿದು ಬಹಿರಂಗಪಡಿಸುತ್ತಲೇ ಇರುತ್ತಾರೆ, ವರದಿ ನೀಡುತ್ತಲೇ ಇರುತ್ತಾರೆ. ನೀವು ಭ್ರಷ್ಟರಿಗೆ ತಕ್ಕ ಶಿಕ್ಷೆ ಎಂದು ಪ್ರತಿ ಬಾರಿಯೂ ಭಾಷಣ ಬಿಗಿಯುತ್ತಲೇ ಇರುತ್ತೀರಿ. ಜತೆಗೆ ಉದಾಹರಣೆಗೆ ‘ನೋಡಿ ಲೋಕಾಯುಕ್ತರು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟರನ್ನು ಹಿಡಿದು ಸದೆಬಡಿಯುತ್ತಿದ್ದಾರೆ. ಅವರಿಗೆ ನಮ್ಮ ಎಲ್ಲ ಸಹಕಾರವಿದೆ’ ಎನ್ನುತ್ತಲೇ ಇರುತ್ತೀರಿ. ಆದರೆ ಪರಮಾಧಿಕಾರ ನೀಡುವುದಿಲ್ಲ. ಹೋಗಲಿ, ಕನಿಷ್ಠ ಅವರು ಶಿಫಾರಸು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ಜರುಗಿಸುವುದಿಲ್ಲ. ಅಷ್ಟೊಂದು ನುಂಗಿದ್ದಕ್ಕೆ ಕೆಲವು ದಿನ ‘ಆರಾಮಾಗಿರಿ’ ಎಂದು ಪಿಕ್‌ನಿಕ್‌ಗೆ ಕಳುಹಿಸಿ, ನಂತರ ಬಡ್ತಿ ಕೊಟ್ಟು ಕಳುಹಿಸುತ್ತೀರಿ. ಅಲ್ಲಿಗೆ ನಿಮ್ಮ ಸರಕಾರದ ‘ಷೋ ಮ್ಯಾನ್’ ಗಳೇ ಅಲ್ಲವೇ?

ಯಾಕೆಂದರೆ, ಒಂದಂತೂ ಸತ್ಯ. ಸರಕಾರದ ಭ್ರಷ್ಟರಪರ ಧೋರಣೆಯನ್ನು ಪ್ರಶ್ನಿಸುವವರು, ಟೀಕಿಸುವ ಯಾರೂ ಲೋಕಾಯುಕ್ತರಾಗುವಂತಿಲ್ಲ. ಈ ಘಟನೆಯ ನಂತರ ಅಂಥವರು ಸರಕಾರ ಕರೆದರೂ ಬರಲಾರೆ ಎನ್ನುತ್ತಾರೆ. ಸಂತೋಷ್ ಹೆಗ್ಡೆಯವರು ಅದಾಗದಿರಲು ಹುದ್ದೆ ತ್ಯಜಿಸಿದ್ದಾರೆ. ಇದನ್ನರಿತವರ‍್ಯಾರೂ ನೀವು ಕೊಟ್ಟ ಗೌರವವನ್ನು ಸ್ವೀಕರಿಸಲಾರರು.

ಇನ್ನು, ನಿಮ್ಮ ಸಂಪುಟದ ಸದಸ್ಯರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸನ್ಮಾನ್ಯ ಈಶ್ವರಪ್ಪನವರು, ‘ರಾಜೀನಾಮೆ ನೀಡಿದ್ದು ಸಾಧನೆಯೂ ಅಲ್ಲ, ಸಮಸ್ಯೆಗೆ ಪರಿಹಾರವೂ ಅಲ್ಲ’ ಎಂದಿದ್ದಾರೆ. ಇದೇ ಈಶ್ವರಪ್ಪನವರ ಸಾಧನೆ ಮತ್ತು ಸಮಸ್ಯೆ ಏನೆಂಬುದು ನಾಡಿಗೇ ಗೊತ್ತಿದೆ. ಪ್ರತಿಯೊಂದನ್ನೂ ಸಮರ್ಥಿಸಿಕೊಳ್ಳಲು ಹೋಗುವ ಅಪ್ರಬುದ್ಧ ಪಂಡಿತ ಎಂಬುದು ಇವರಿಗೆ ಇಂದು ಬಂದ ಬಿರುದಲ್ಲ, ಎಂದೋ ಆ ಕೀರ್ತಿ ಬಂದಿತ್ತು. ಇವರಿಗೆಲ್ಲಾ ಸ್ವಲ್ಪ ಸುಮ್ಮನೆ ಇರಲು, ಹೇಳಿ. ಇಲ್ಲದಿದ್ದರೆ ಪಕ್ಷದ, ಸರಕಾರದ ಹಿತಕ್ಕೆ ಇನ್ನಷ್ಟು ಧಕ್ಕೆಯಾಗುವುದು ಖಂಡಿತ. ನೀವು ರಾಜಕೀಯವಾಗಿಯೂ ತಪ್ಪೆಸಗಿದ್ದೀರಿ, ಪ್ರಾಮಾಣಿಕವಾಗಿಯೂ ತಪ್ಪು ಮಾಡಿದ್ದೀರಿ.

ಕೊನೆಯದಾಗಿ, ಮುಂದೆ ಯಾರನ್ನಾದರೂ ನೇಮಿಸಿ. ಅವರಿಗೆ ಪರಮಾಧಿಕಾರ ಕೊಡಿ. ಅದರಿಂದ ನೀವು ಮತ್ತು ನಿಮ್ಮ ಪಕ್ಷ ಗಳಿಸುವ ಲಾಭ ದೊಡ್ಡದು. ಭವಿಷ್ಯ ಮಂಕಾಗುತ್ತಿರುವ ಪಕ್ಷವನ್ನು ಪುನರುಜ್ಜೀವಗೊಳಿಸಿದ ಕೀರ್ತಿ ನಿಮ್ಮ ಹೆಗಲ ಮೇಲೇರುತ್ತದೆ. ಸದ್ಯಕ್ಕಂತೂ ಇಡೀ ಪ್ರಸಂಗದಲ್ಲಿ ಸಂತೋಷ್ ಹೆಗ್ಡೆಯವರೇ ಸೋತು ಗೆದ್ದಿದ್ದಾರೆ, ನೀವು ಗೆದ್ದು ಸೋತಿದ್ದೀರಿ.

ಬರೀ ವರ್ತಮಾವನ್ನಷ್ಟೇ ಹಿಂಜಿ ಹಿಂಜಿ ಸುಖ ಪಡುತ್ತಿರುವುದ ಬಿಟ್ಟು ಭವಿಷ್ಯದ ಕನಸು ಕಾಣಿ. ಪಕ್ಷಕ್ಕೆ ಒಂದಿಷ್ಟು ಕಸುವು ತುಂಬಿ. ನಿಮ್ಮ ಹಿಂದೆ ಜನರಿರಬೇಕೇ ಹೊರತು ಯಾರೋ ಕೆಲವು ಭ್ರಷ್ಟ ಅಧಿಕಾರಿಗಳಲ್ಲ, ಪೇಮೆಂಟ್ ಹಿಡಿದು ನಿಂತ ಧನಿಕರಲ್ಲ, ನಿಮ್ಮ ಜುಟ್ಟು ಹಿಡಿದಿಟ್ಟು ಆಡಿಸುವ ಮಂದಿಯೂ ಅಲ್ಲ. ಜನಬಲವಿದ್ದರೆ ಸಾಕು ಎಂದು ವಿರೋಧಪಕ್ಷದಲ್ಲಿ ಹೇಳುತ್ತಿದ್ದ ನೀವೇ ಅವರ ಮೇಲಿನ ವಿಶ್ವಾಸ ಕಳೆದುಕೊಂಡಿರುವುದು ಆಡಳಿತಕ್ಕೆ ಬಂದ ಮೇಲಿನ ಬೆಳವಣಿಗೆಯೋ ಏನೋ ಆರ್ಥವಾಗುತ್ತಿಲ್ಲ.

ವರ್ತಮಾನಕ್ಕಷ್ಟೇ ಕ್ರಿಯಾಶೀಲವಾಗುವವ ರಾಜಕಾರಣಿ, ಭವಿಷ್ಯದತ್ತಲೂ ದೃಷ್ಟಿ ಹರಿಸುವವ ಮುತ್ಸದ್ಧಿ. ಈ ಪೈಕಿ ನಿಮ್ಮ ಆಯ್ಕೆ ಯಾವುದೋ, ಅದನ್ನೇ ಆರಿಸಿಕೊಳ್ಳಿ. ನೀವೇ ಸಾಧನಾ ಸಮಾವೇಶದಲ್ಲಿ ಗುಡುಗಿದಂತೆ ‘ಇದು ಯಾರು ಮಾಡಿದ ತಪ್ಪಿಗೆ ಜನರಿಗೆ ಕೊಡುತ್ತಿರುವ ಶಿಕ್ಷೆ‘ ಎಂಬುದನ್ನು ಹೇಳಿ.

Advertisements

7 thoughts on “ಇದು ಮಾನ್ಯ ಯಡಿಯೂರಪ್ಪನವರು ಕೊಡುತ್ತಿರುವ ಶಿಕ್ಷೆ

 1. ಮುಖ್ಯಮಂತ್ರಿಗಳ ’ಅವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳಿ ಎಂದು ವಿನಂತಿ ಮಾಡಿ ಅವರಿಗೆ ಮುಜುಗರ ಉಂಟುಮಾಡುವುದಿಲ್ಲ’ ಎಂಬ ಹೇಳಿಕೆ ನನಗೆ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಅದೊಂದು ಅಸಂಬದ್ಧ ಹೇಳಿಕೆ ಎಂದೆನಿಸಿತ್ತು. ರೋಗಿ (ಯಡಿಯೂರಪ್ಪ)ಬಯಸಿದ್ದೂ ಹಾಲು, ವೈದ್ಯ (ಹೆಗ್ಡೆ) ನೀಡಿದ್ದೂ ಅದನ್ನೇ! ತುಂಬಾ ಪ್ರಬುದ್ಧ ಲೇಖನ. ಧನ್ಯವಾದ ನಾವಡರೆ.

 2. ಚೆನ್ನಾದ ವಿಶ್ಲೇಷಣೆ ನಾವಡರೇ, ಈಗ ಸಿಎಂ ಗುಂಪಿನ ನಾಯಕರು ಚಿತ್ರ ವಿಚಿತ್ರ ಹೇಳಿಕೆ ನೀಡುವುದು ನೋಡಿದರೆ ಒಳಗೊಳಗೇ ಎಲ್ಲರಿಗೂ ಲೋಕಾಯುಕ್ತರ ರಾಜೀನಾಮೆ ಪಾಯಸದಷ್ಟೇ ಖುಷಿಕೊಟ್ಟಂತಿದೆ

 3. ಒಳ್ಳೆಯ ವಿಮರ್ಶಾ ಲೇಖನ ನಾವಡರೇ.
  ಆದರೂ ಲೋಕಾಯುಕ್ತರಿಗೆ ಎಲ್ಲಾ ಸರಕಾರಗಳಿಗಿ೦ತ ಹೆಚ್ಚಿನ ಸಹಕಾರ ನೀಡಿದ ಸರ್ಕಾರ ಯಡ್ದಿಯವರದು. ಆದರೆ ಅವರು ನೀಡಿದ ಸಹಕಾರಗಳಾವುವೂ ಚರ್ಚೆಗೊಳಗಾಗುತ್ತಿಲ್ಲ.( ಇ೦ದಿನ ವಿಜಯ ಕರ್ನಾಟಕ ಪುಟ-೮) ಕೇವಲ ಹೆಗ್ಡೆಯವರ ರಾಜೀನಾಮೆ ಹಾಗೂ ಅದಕ್ಕೆ ಸರ್ಕಾರದ ಟೀಕೆಗಳ ಸುತ್ತಲೇ ಎಲ್ಲಾ ಮಾಧ್ಯಮಗಳೂ ಗಿರಕಿ ಹೊಡೆಯುತ್ತಿರುವುದು ಮಾತ್ರ ವಿಪರ್ಯಾಸ.
  ನಮಸ್ಕಾರಗಳು.

 4. ರಾಘವೇಂದ್ರರೇ,
  ನಮಸ್ಕಾರ. ನೀವು ಹೇಳುವುದು ನಿಜವಿರಬಹುದು. ಯಡಿಯೂರಪ್ಪನವರ ಸರಕಾರ ಲೋಕಾಯುಕ್ತರಿಗೆ ಸಾಕಷ್ಟು ಸಹಕಾರ ನೀಡಿರಬಹುದು. ಆದರೆ ಸಂಕಷ್ಟದಲ್ಲಿರುವವನಿಗೆ ಒಂದು ತುತ್ತಿನ ಆಹಾರ ಕೊಟ್ಟು ಮಹಾದಾನಿಯಂತೆ ಫರಾಕು ಹಾಕಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಪ್ರತಿ ಘಟನೆಯ (ಸನ್ನಿವೇಶ) ಹೊತ್ತಿನಲ್ಲಿ ಅಂದರೆ ವರ್ತಮಾನದಲ್ಲಿ ಹೇಗೆ ಬದುಕುತ್ತಾನೆ ಎನ್ನುವುದೂ ಮುಖ್ಯ. ಲೋಕಾಯುಕ್ತರ ರಾಜೀನಾಮೆಗೆ ಮೂಲ ಕಾರಣವಾಗಿರುವ ಕಾರವಾರ ಬಂದರು ಅಕ್ರಮ ಅದಿರು ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿಯನ್ನೇ ಎತ್ತಂಗಡಿ ಮಾಡಲು ಮಹಾ ಸಹಕಾರ ನೀಡಿದ ಮುಖ್ಯಮಂತ್ರಿಗಳೇ ಸಹಿ ಮಾಡಲಿಲ್ಲವೇ? ಒಂದು ವೇಳೆ ಪ್ರಾಮಾಣಿಕ ಸಹಕಾರ ನೀಡುವ ಮನಸ್ಸಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸುಮ್ಮನಾಗಬೇಕಿತ್ತು. ಒಬ್ಬ ಮುಖ್ಯಮಂತ್ರಿಯಾಗಿ ಇಡೀ ಪ್ರಕರಣದಲ್ಲಿ ನಡೆದುಕೊಳ್ಳದೇ, ಕೇವಲ ಯಡಿಯೂರಪ್ಪನಾಗಿ (ಜನ ಸಾಮಾನ್ಯನಂತೆ) ನಡೆದುಕೊಂಡರು ಎನ್ನುವುದು ನನ್ನ ಆಕ್ಷೇಪ.

 5. ಶೆಟ್ಟರು, ವೇಣು ವಿನೋದ ಮತ್ತು ರಾಜೇಶ್ ನಾಯಕರಿಗೆ ಧನ್ಯವಾದಗಳು. ನಾವು ಹೀಗೇ ಬರೆಯುತ್ತಿರುತ್ತೇವೆ, ನೀವು ಹೀಗೆಯೇ ಬಂದು ಓದುತ್ತೀರಿ, ಹರಸುತ್ತಿರಿ.
  ಪ್ರವೀಣ,
  ನೀನು ಹೇಳಿದ್ದು ಸರಿ. ಬರೆಯುವ ಓಘದಲ್ಲಿ ಮತ್ತೊಮ್ಮೆ ಓದುವುದನ್ನೇ ಮರೆತಿದ್ದೆ. ತಪ್ಪಾಗಿದ್ದಕ್ಕೆ ಕ್ಷಮೆ ಇರಲಿ. ನನ್ನನ್ನು ಎಚ್ಚರಿಸಿದ್ದಕ್ಕೆ ಧನ್ಯವಾದ
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s