ಲೇಖನ

ಹಾವನೂರರ ಬಗ್ಗೆ ಇದನ್ನು ಹಂಚಿಕೊಳ್ಳಲೇಬೇಕೆನಿಸಿತು !

ಶ್ರೀನಿವಾಸ ಹಾವನೂರರು ಇಲ್ಲವಾಗಿದ್ದಾರೆ.
ಈ ಸುದ್ದಿ ಕೇಳಿದ ತಕ್ಷಣವೇ ಹೃದಯ ಭಾರವೆನಿಸಿತು. ಇತ್ತೀಚೆಗೆ (ಮೈಸೂರಿಗೆ ಬಂದ ಮೇಲೆ ) ಭೇಟಿ ಅವಕಾಶ ಇರಲಿಲ್ಲ. ಆದರೆ ಆರು ತಿಂಗಳ ಹಿಂದೆ ಹೀಗೇ ನೆನಪಿಸಿಕೊಂಡು ಫೋನ್ ಮಾಡಿದ್ದೆ. ‘ಸಾರ್, ನಾನು ನಾವಡ ಅಂತಾ’ ಎಂದಾಗ ‘ನಾವಡ ಅಂತ್ಲೇ, ಯಾವೂರಿನಲ್ಲಿರುತ್ತೀರಿ?’ ಎಂದು ಮರೆತು ಹೋದವರಂತೆ ಚಟಾಕಿ ಹಾರಿಸಿದ್ದರು. ನಂತರ ಸುಮಾರು ಹತ್ತು ನಿಮಿಷ ಮಾತನಾಡಿದವರೇ, ಏನಪ್ಪಾ…ಎಲ್ಲಾ ಸರಿ ಇದೇ ತಾನೆ ಎಂದು ವಿಚಾರಿಸಿದ್ದರು.

ಹರ್ಮನ್ ಮೋಗ್ಲಿಂಗ್ ಬಗೆಗಿನ ಸ್ಟೋರಿಯಿಂದಲೇ ಅವರು ನನಗೆ ಪರಿಚಯವಾಗಿದ್ದು. ಆ ದಿನ ಭಾನುವಾರ ಬೆಳಗ್ಗೆ ಮಾಹಿತಿಗಾಗಿ ಫೋನ್ ಮಾಡಿ ವಿಜಯ ನಗರದಲ್ಲಿದ್ದ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. ಇದೆಲ್ಲವೂ ಏಳೆಂಟು ವರ್ಷದ ಹಿಂದೆ. ಅದುವರೆಗೆ ಅವರು ಪರಿಚಯವಾಗಿರಲಿಲ್ಲ, ಹೆಸರು ಕೇಳಿದ್ದೆ ಅಷ್ಟೇ.

ನನಗೂ ವಿಜಯನಗರ ಹೊಸದೇ. ಅವರ ಮನೆ ವಿಳಾಸ ಹುಡುಕಿಕೊಂಡು ಹೋಗುವಾಗ (ಒಂದು ಏರು, ಒಂದು ತಗ್ಗು) ಸುಸ್ತಾಗಿದ್ದೆ. ಪಾಪ, ಅವರು ಗೇಟ್ ಬಳಿ ಬಂದು ಬಂದವರನ್ನೆಲ್ಲಾ ‘ಇವನಾ ನಾವಡ’ ಎಂದು ಹುಡುಕುತ್ತಿದ್ದರು. ನನ್ನ ವೇಷನವನ್ನು ಕಂಡೋ ಏನೋ ಗೊತ್ತಿಲ್ಲ, ನಾನೂ ಅವರ ಕಾಯುವಿಕೆಯ ಕಣ್ಣನ್ನು ಕಂಡೋ ಏನೋ…ನಾನು ಅವರಿದ್ದಲ್ಲಿಗೇ ಹೋಗಿ…ಸಾರ್….ಶ್ರೀನಿವಾಸ ಹಾವನೂರರಾ ? ’ಎಂದು ಕೇಳಿದೆ.

‘ಬನ್ನಿ, ನೀವೇ ನಾವಡ ಅಂದ್ರೇ?’ ಎಂದು ಪ್ರಶ್ನಿಸಿದ್ದಕ್ಕೆ ಹೌದೆಂದು ಮುಂದೆ ಹೊರಟರು. ನಾನು ಹಿಂಬಾಲಿಸಿದೆ. ಅವರದ್ದೇ ಪ್ರತ್ಯೇಕ ಕೋಣೆ, ಅಲ್ಲಿ ಬರೀ ಪುಸ್ತಕಗಳು. ಅದರ ಮಧ್ಯೆ ಒಂದು ಕುರ್ಚಿ. ಅಲ್ಲಿ ಅವರು ಕುಳಿತು ಅಧ್ಯಯನ ಮಾಡುವುದು ಅಭ್ಯಾಸ. ನನ್ನನ್ನೂ ಆ ಕೋಣೆಯಲ್ಲಿ ಕುಳ್ಳಿರಿಸಿ ಕುರ್ಚಿ ಹಾಕಿಕೊಟ್ಟರು. ಅವರ ಕುಶಲ ವಿಚಾರಿಸುವಷ್ಟು ನಾನು ಅವರಿಗೆ ಪರಿಚಿತನಲ್ಲ, ಮೊದಲ ಭೇಟಿ.

ಸುಮ್ಮನೆ ತಣ್ಣಗೆ ಕುಳಿತೆ. ಎದ್ದು ಹೋದ ಅವರು, ದೊಡ್ಡ ಕಪ್‌ನಲ್ಲಿ ಚಹಾದೊಂದಿಗೆ ಬಂದರು. ನನಗೆ ಚಹಾ, ಕಾಫಿನೋ ಎಂದೂ ಕೇಳಿರಲಿಲ್ಲ. ಕೈಗೆ ಚಹಾ ಕಪ್ ಕೊಡುತ್ತಾ, ‘ನಾನು ಟೀ ನಾ ಚೆನ್ನಾಗಿ ಮಾಡ್ತೀನಿ. ಕಾಫಿ ಕಷ್ಟ. ಸುಮ್ಮನೆ ಪ್ರಯೋಗ ಮಾಡೋದಿಕ್ಕೆ ಹೋಗೋದಿಲ್ಲ, ಅದರಲ್ಲೂ ಬಂದವರ ಮೇಲಂತೂ..’ ಅಂದರು ಒಳ್ಳೆಯ ಲಲಿತ ಶೈಲಿಯಲ್ಲಿ. ನನಗೆ ವಿಚಿತ್ರ ಎನಿಸಿದ್ದು ನಿಜ.

‘ಏನಪ್ಪಾ, ಪೇಪರ‍್ನಲ್ಲಿ ಬರೆಯೋದು ಸರಿ, ಬೇರೆ ಏನು ಆಸಕ್ತಿ?’ ಎಂದು ಕೇಳಿದರು. ಹೀಗೇ ಪುಸ್ತಕ ಓದುವುದು..ಮಾಮೂಲಿ ರೀತಿಯಲ್ಲಿ ಆಗಿನ ಸಂದರ್ಭದಲ್ಲಿ ಎಲ್ಲರೂ ಪರವಾಗಿಲ್ಲ ಪರವಾಗಿಲ್ಲ ಎನ್ನಬಹುದಾದ ಹವ್ಯಾಸಗಳನ್ನು ಹೇಳಿದೆ. ‘ಒಳ್ಳೆಯದು’ ಎಂದವರೇ ತಕ್ಷಣ ಯಾವುದೋ ಪುಸ್ತಕ ತೆಗೆದು ‘ಬರೆದುಕೊಳ್ಳಿ’ ಎಂದರು. ಎಲ್ಲವೂ ಮುಗಿದಮೇಲೆ, ನಿಮ್ಮದೊಂದು ಫೋಟೋ ಕೊಡಿ ಎಂದೆ. ‘ನನ್ನ ಫೋಟೋ ಯಾಕಪ್ಪಾ, ನೀನೇ ಬರ‍್ತಾ ಇರ‍್ತೀಯಲ್ಲಾ’ ಎಂದರು. ‘ಅಲ್ಲಾ ಸಾರ್, ಈ ಸ್ಟೋರಿ ಸಂದರ್ಭದಲ್ಲಿ ಬಳಸಬೇಕಾಗಬಹುದು ಅದಕ್ಕೆ’ ಎಂದೆ. ಯಾಕೋ ಒಲ್ಲದ ಮನಸ್ಸಿನಿಂದ ‘ಇರಲಿ’ ಎನ್ನುತ್ತಾ, ‘ನೋಡಪ್ಪಾ, ಇದು ನನ್ನ ಮೊಮ್ಮಗನೊಂದಿಗೆ ತೆಗೆದ ಚಿತ್ರ’ ಹೇಗಿದೆ ? ಎಂದು ಹಲವು ಚಿತ್ರಗಳನ್ನು ತೋರಿಸಿದರೂ ಒಂದೂ ಕೊಡಲಿಲ್ಲ. ಅಂತಿಮವಾಗಿ ಒಂದು ಪುಟ್ಟ ಭಾವಚಿತ್ರವನ್ನು ಕೈಗಿತ್ತು, ಚೆನ್ನಾಗಿದ್ದರೆ ಬಳಸಪ್ಪಾ ಎಂದಾಗ ನನಗೆ ಏನು ಹೇಳಬೇಕೋ ತಿಳಿಯಲಿಲ್ಲ.

ಸರಿ, ಎಲ್ಲ ಮುಗಿದು ವಾಪಸು ಹೊರಟೆ. ಗೇಟ್ ಬಳಿ ಬಂದು ಬೀಳ್ಕೊಟ್ಟರು. ಕೆಲವು ದಿನಗಳ ನಂತರ ಆ ಸುದ್ದಿ ಪ್ರಕಟವಾಯಿತು. ನಾನು (ನಮಗದು ಅಭ್ಯಾಸ, ಎಷ್ಟೋ ಬಾರಿ ಗಣ್ಯ ಸುದ್ದಿ ಮೂಲಗಳಿಗೆ ಫೋನ್ ಮಾಡಿ ತಿಳಿಸುವುದು)ಬೆಳಗ್ಗೆ ಫೋನ್ ಮಾಡಿ, ‘ಸಾರ್, ಸುದ್ದಿ ಬಂದಿದೆ ನೋಡಿದ್ರಾ, ಸರಿ ಇದೆಯಾ?’ ಎಂದು ಕೇಳಿದೆ. ಅದಕ್ಕೆ, ‘ನಮ್ಮ ಮನೆಗೆ ನಿಮ್ಮ ಪೇಪರ್ ಬರೋದಿಲ್ಲ, ಅಂಗಡಿಗೆ ಹೋಗಿ ಸಂಜೆ ನೋಡ್ತೀನಿ’ ಅಂದ್ರು. ಸಾಮಾನ್ಯವಾಗಿ ನಮಗೆ ಸುದ್ದಿ ಕೊಟ್ಟವರು ಅಥವಾ ಅವರ ಬಗ್ಗೆ ಸುದ್ದಿ ಪ್ರಕಟವಾಗಿದ್ದರೆ ಸಂಬಂಧಪಟ್ಟವರು ಬೆಳಗ್ಗೆ ಆರು ಗಂಟೆ ಆಗೋದೇ ತಡ, ಫೋನ್ ಮಾಡಿ ಥ್ಯಾಂಕ್ಯೂ ಹೇಳೋರು, ಎಲ್ಲಸರಿಯಾಗಿ ಬಂದಿದೆ, ಇವರ ಹೆಸರು ಬರಬೇಕಿತ್ತು ಎನ್ನೋರು, ಏನ್ರೀ ನನ್ನ ಅಭಿಪ್ರಾಯ ಕೇಳದೆಯೇ ಬರೆದಿದ್ದೀರಲ್ಲಾ ಎಂದು ರೋಪ್ ಹಾಕುವವರೆಲ್ಲರ ಮಧ್ಯೆ ಇವರು ವಿಚಿತ್ರವಾಗಿ ಕಂಡದ್ದು ನಿಜ.

ಸಂಜೆ ಏಳರ ಹೊತ್ತಿಗೆ ಫೋನ್ ಬಂತು ಅವರಿಂದ. ‘ಸರಿ ಇದೆ ಕಣಪ್ಪಾ ಸುದ್ದಿ, ಆದ್ರೆ ಇದೊಂದು ಮಾಹಿತಿ ಇನ್ನಷ್ಟು ಸ್ಪಷ್ಟವಾಗಬೇಕಿತ್ತು’ ಎಂದು ಒಂದು ದೋಷವನ್ನು ಎತ್ತಿ ಹೇಳಿದರು. ‘ಸರಿ ಸಾರ್’ ಎಂದೆ. ಇದಾದ ನಂತರ ಕ್ರಮೇಣ ಪರಸ್ಪರ ಸಂಬಂಧ ಹತ್ತಿರವಾಯಿತು. ತಿಂಗಳಿಗೊಮ್ಮೆ ಫೋನ್, ಇಲ್ಲವೇ ಎರಡು ಮೂರು ತಿಂಗಳಿಗೊಮ್ಮೆಯಾದರೂ ಭೇಟಿ ನೀಡುತ್ತಿದ್ದೆ. ಒಮ್ಮೆ ಮಂಗಳೂರಿನಲ್ಲೂ ಇದ್ದಾಗ ಹೋಗಿದ್ದೆ.
ಒಮ್ಮೊಮ್ಮೆ ‘ಇವರೇನು ವಿಚಿತ್ರ, ಇವರ ಸಹವಾಸ ಸಾಕಪ್ಪಾ’ ಎನ್ನಿಸುವುದೂ ಇತ್ತು.‘ನೋಡಪ್ಪಾ ನಿಮ್ಮ ಪತ್ರಿಕೆಗೆ ಲೇಖನ ಕಳಿಸಿದೆ, ಏನೂ ಉತ್ತರವೇ ಬರಲಿಲ್ಲ. ಇನ್ನೊಂದು ಪತ್ರಿಕೆಗೆ ಕಳಿಸಿದ್ದೆ, ಅಲ್ಲೂ ಅದೇ ಕಥೆ. ಯಾಕೆ ಹೀಗೆ, ಹಾಕ್ತೀವೋ, ಇಲ್ಲವೋ ಅಂತಾ ಹೇಳೋಕೆ ಏನು ಕಷ್ಟ?’ ಎಂದು ನೇರವಾಗಿಯೇ ಕೇಳುತ್ತಿದ್ದರು. ಇದಕ್ಕೆ ನನ್ನಲ್ಲೂ ಏನೂ ಉತ್ತರವಿರುತ್ತಿರಲಿಲ್ಲ, ಸುಮ್ಮನಾಗಿರುತ್ತಿದ್ದೆ.

ಎದುರು ಸಾಕಷ್ಟು ಮಾತನಾಡುತ್ತಿದ್ದರೂ ಫೋನಿನಲ್ಲಿ ಎರಡೇ ಮಾತು. ‘ಏನಪ್ಪಾ, ಹೇಗಿದ್ದೀರಿ ? ಏನು ವಿಷಯ? ಅದು ಮುಗಿದ ಕೂಡಲೇ ಸರಿ ಸಿಗೋಣ’ ಎಂದವರೇ ಪೋನ್ ಕುಕ್ಕುತ್ತಿದ್ದರು. ನಾವಿನ್ನೂ ಸರಿ ಸಾರ್, ನಮಸ್ಕಾರ ಎನ್ನುವಷ್ಟರಲ್ಲಿ ಖತಂ.

ಹೆಗಲ ಮೇಲೆ ಕೈಯಿಟ್ಟು ‘ಏನಪ್ಪಾ?’ ಎಂದು ಪ್ರಶ್ನಿಸುತ್ತಿದ್ದ ಅವರಲ್ಲಿ ಒಂದು ಬಗೆಯ ಆಜ್ಞಾಧಾರಕ ಪ್ರಜ್ಞೆ ಇರಲಿಲ್ಲ. ‘ನಾನು ಸಂಶೋಧಕ, ನೀನು ಹೀಗೇ ಕೇಳಬೇಕಪ್ಪಾ?’ ಎನ್ನುವ ವರ್ತನೆಯನ್ನು ನನ್ನಲ್ಲಂತೂ ತೋರಿರಲಿಲ್ಲ. ಏನಾದರೂ ಮಾಹಿತಿಗೆ ಫೋನ್ ಮಾಡಿದಾಗಲೆಲ್ಲಾ ಎಂದೂ ‘ಅಪಾಯಿಂಟ್‌ಮೆಂಟ್’ ಕೊಟ್ಟವರಲ್ಲ.

ಬಹಳ ಉತ್ಸಾಹದ, ಖುಷಿಯಿಂದಿರುತ್ತಿದ್ದ ಅಜ್ಜ ಇಲ್ಲವಾಗಿದ್ದಾರೆ. ಹೀಗೆ ಸಂಬಂಧದ ಒಂದೊಂದು ಎಳೆಯೂ ಕರಗಿ ಹೋಗುತ್ತಿರುವುದಕ್ಕೆ ತೀವ್ರ ದುಃಖವಾಗುತ್ತಿದೆ, ಒಂಟಿಯಾದೀವೆಂಬ ಭಯದಿಂದ. (ಚಿತ್ರ ಕೃಪೆ : ಅವಧಿ)

Advertisements

2 thoughts on “ಹಾವನೂರರ ಬಗ್ಗೆ ಇದನ್ನು ಹಂಚಿಕೊಳ್ಳಲೇಬೇಕೆನಿಸಿತು !

  1. ಮರುಕೋರಿಕೆ (Pingback): ಪತ್ರಿಕೋದ್ಯಮಕ್ಕೂ ಸಂದ ಶ್ರೀನಿವಾಸ ಹಾವನೂರು « Media Mind

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s