ನನ್ನ ಮಗನಿಗೆ ಆರು ವರ್ಷ ತುಂಬಿತು. ದೂರದೂರಿನಲ್ಲಿ ಓದುತ್ತಿರುವ ಅವನ ನೆನಪಿನಲ್ಲಿ ಏನೇನೋ ಹಾದು ಹೋಯಿತು. ಅದನ್ನೆಲ್ಲಾ ಇಲ್ಲಿ ಬರೆದಿದ್ದೇನೆ. ಇದು ತೀರಾ ವೈಯಕ್ತಿಕ ನೆಲೆಯದ್ದು.

ಬದುಕೇ ಎಷ್ಟೊಂದು ಅಚ್ಚರಿ. ಪುಟ್ಟ ನವಿಲುಗರಿಯನ್ನು ಎಲ್ಲೆಲ್ಲಿಂದಲೋ ಪಡೆದು ಪುಸ್ತಕದ ಪುಟಗಳ ಮಧ್ಯೆ ಇಟ್ಟುಕೊಳ್ಳುತ್ತಿದ್ದ ಸಂಭ್ರಮ ನಮ್ಮೊಳಗೆ ತುಂಬಿ ಗರಿಯಾಗಿ ಬಿಚ್ಚಿಕೊಳ್ಳುವ ನಾನಾ ಸಂಗತಿ…ಎಲ್ಲ ಮೆಟ್ಟಿಲೇರಿ ನಿಂತಾಗ ಕೆಳಗಿದ್ದವರೆಲ್ಲಾ ಪುಟ್ಟದ್ದಾಗಿಯೇ ಕಾಣುತ್ತಾರೆ. ಅದು ಒಂದು ಬಗೆಯ ಖುಷಿಯೂ ಹೌದು, ದೊಡ್ಡವರಾಗಿದ್ದೇವೆಂಬ ಗಂಭೀರ ಮೊಹರನ್ನು ಒತ್ತಿಕೊಂಡ ಮುಖದಲ್ಲಿ ಕಾಣುವ ಸುಕ್ಕುಗಳೇ ನಮ್ಮನ್ನು ಪ್ರಪಾತಕ್ಕೆ ನೂಕಿ ಬಿಡುತ್ತವೆ. ಬೇಸರದ ಬಾವಿಯಲ್ಲಿ ಒಬ್ಬಂಟಿಗರಾಗುತ್ತೇವೆ. ಮೇಲೆ ಯಾರೋ ಬಂದು ನಮ್ಮನ್ನು ರಕ್ಷಿಸಬಹುದು ಎಂದು ಕಾತರಿಸುತ್ತೇವೆ. ನಿಜ…ಪುಟ್ಟ ಮಕ್ಕಳ ಬೆಳವಣಿಗೆ ಅಂಥದೊಂದು ಊರುಗೋಲಾಗಿ ಬಿಡುತ್ತದೆ. ನಮ್ಮೊಳಗೆ ಒಂದು ಖುಷಿ ತುಂಬುತ್ತದೆ.

ಋತುಪರ್ಣ ಮತ್ತು ಮಿತ್ರವಿಂದಾ

ನನ್ನ ಮಗನಿಗೆ ಆರು ವರ್ಷ ತುಂಬಿತು. ಮುಂದಿನ ಮೇ ನಲ್ಲಿ ಒಂದನೇ ಕ್ಲಾಸಿಗೆ ಸೇರಬೇಕು. ಒಂದಿಷ್ಟು ಹಸಿರಿರುವ, ಉಸಿರಿರುವ ನನ್ನೂರಿನಲ್ಲಿ ಶಾಲೆ ಕಲಿಯುತ್ತಿದ್ದಾನೆ. ಅವನಿಗೆ ಇಂದು ಆರು ವರ್ಷ ತುಂಬಿತು. ಋತುಪರ್ಣನೆಂಬ ಸಂಭ್ರಮದ ಹೆಸರನ್ನು ಹುಡುಕಿ ಇಟ್ಟಾಗ ಬಹಳ ಖುಷಿ ಆವರಿಸಿತ್ತು. ಬ್ರಹ್ಮಾವರದ ಹತ್ತಿರದ ಸಾಲಿಕೇರಿಯಲ್ಲಿ ಅವನ ಶಾಲೆ. ಬೆಳಗ್ಗೆ ೯ ಕ್ಕೆ ಅಮ್ಮಮ್ಮನ ಮನೆಯಿಂದ ಹೊರಟು ಸಂಜೆ ೪ ಕ್ಕೆ ಬರುತ್ತಾನೆ. ಅಲ್ಲಿಯವರೆಗೂ ಓದುವುದಿಲ್ಲ ಎನ್ನುವುದೇ ನನ್ನ ಪಾಲಿನ ಖುಷಿ.

ಒಂದಷ್ಟು ಹೊತ್ತು ಕಲಿಯುತ್ತಾನೆ, ಸ್ವಲ್ಪ ಮಲಗುತ್ತಾನೆ, ಹಾಲು ಕುಡಿದು ವಿರಾಮ ಪಡೆದು ಹೀಗೆ ಕಾಲ ಕಳೆಯುತ್ತಾನೆ. ಪರವಾಗಿಲ್ಲ, ಹಸಿರಿನ ಮಧ್ಯೆ ಅರಳುತ್ತಿದ್ದಾನೆ ಎಂಬುದೇ ಸಣ್ಣ ಖುಷಿ.

ನನ್ನ ಮಗ ಮೊನ್ನೆ ರಾತ್ರಿಯೆಲ್ಲಾ ಕುಳಿತು ಯಕ್ಷಗಾನ (ಆಟ) ನೋಡಿ ಮನೆಗೆ ಬಂದ ಅವನ ಅಜ್ಜನ ಜತೆಗೆ. ಕಣ್ಣು ಭಾರವಾಗಿತ್ತು, ಮಲಗಿಕೊಂಡ. ಮಾರನೆ ದಿನ ಬೆಳಗ್ಗೆ ಶಾಲೆಗೆ ಹೋಗಲಿಲ್ಲ. ನೀವು ಏನೇ ಹೇಳಿ, ನನಗೆ ಆ ಕ್ಷಣ ಖುಷಿಯಾಯಿತು. ನನ್ನ ಮಗನನ್ನು ಬೆಂಬಲಿಸಿದ್ದೂ ನಿಜ. ನಮ್ಮ ಹಾಗೆಯೇ ಅವನೂ ಬೆಳೆಯಬೇಕೆಂಬುದು ನನ್ನ ಹಂಬಲವೂ ಸಹ.

ಭದ್ರಾವತಿಯಲ್ಲಿ (ಆಗ ನಾನು ಐದನೇ ಕ್ಲಾಸು)ಓದುತ್ತಿದ್ದಾಗ ಗಣಪತಿ ಹಬ್ಬ ಬಂತೆಂದರೆ ಬೊಂಬಾಟ್. ಸಾರ್ವಜನಿಕ ಗಣಪತಿ ಪೆಂಡಾಲ್‌ಗಳಲ್ಲಿ ತೋರಿಸುತ್ತಿದ್ದ ಚಲನಚಿತ್ರಗಳನ್ನು ತಪ್ಪಿಸಲು ಮನಸ್ಸಿರುತ್ತಿರಲಿಲ್ಲ. ಚಲನಚಿತ್ರ ಆರಂಭವಾಗುತ್ತಿದ್ದುದೇ ರಾತ್ರಿ ೧೧ಗಂಟೆಗೆ. ಎಲ್ಲರೂ ಊಟ ಮುಗಿಸಿ ಬಂದ ಮೇಲೆ. ಶುರುವಾದ ಮೇಲೆ ಮೂರ‍್ನಾಲ್ಕು ಸಾರಿ ತಾಂತ್ರಿಕ ದೋಷ. ಎಲ್ಲವೂ ಸರಿಹೋಗಿ, ಲಯ ಹಿಡಿಯಿತು ಎನ್ನುವಾಗ ಬರೋಬ್ಬರೀ ಬೆಳಗಿನ ಜಾವ ೨. ೩೦. ನಂತರ ಮುಗಿಯುವಷ್ಟರಲ್ಲಿ ನಾಲ್ಕು ಸಹಜವೇ. ಹೀಗೇ ನಾನೂ ‘ಶಂಕರ್ ಗುರು’ ಚಿತ್ರ ನೋಡಿಕೊಂಡು ಬಂದು ಹೀಗೇ ಮಾಡಿದ್ದೆ. ಶಾಲೆ ತಪ್ಪಿಸಿಕೊಂಡು ನನ್ನ ದೊಡ್ಡಮ್ಮನ ಬಳಿ ಬೈಯಿಸಿಕೊಂಡಿದ್ದೆ. ಅಂದಿನಿಂದ ದೊಡ್ಡಮ್ಮನ ನಾಲ್ಕು ಕಣ್ಣುಗಳು ನನ್ನನ್ನು ಕಾಯುತ್ತಿದ್ದವು.

ಮತ್ತೆ ಅವರೇ...

ಮಾರನೆ ದಿನ ನನ್ನಮ್ಮ-ಪ್ಪನಿಗೂ ದೂರು ಹೋಗಿಯಾಗಿತ್ತು. ಬಿಡಿ, ಆ ಹೊತ್ತಿನಲ್ಲಿ ಸಿಟ್ಟು ಬಂದರವರ ಎದುರು ನಿಲ್ಲದಿರುವುದೊಂದೇ ಎಲ್ಲ ಸಮಸ್ಯೆಗೂ ಪರಿಹಾರ. ಅದನ್ನೇ ಮಾಡಿ ನಾನೂ ತಪ್ಪಿಸಿಕೊಂಡಿದ್ದೆ. ಹಾಗೆಂದು ನಂತರದ ದಿನಗಳಲ್ಲಿ ಪಿಕ್ಚರ್‌ಗಳನ್ನು ಮಿಸ್ ಮಾಡಿಕೊಳ್ಳಲಿಲ್ಲ, ರಾತ್ರಿ ಸಿನಿಮಾ ನೋಡಿ, ಬೆಳಗ್ಗೆಯೂ ನಿದ್ರೆ ಕಚಗುಡುವುದನ್ನು (ನಿದ್ರೆಗೆಡುವುದು) ಕಲಿತೆ. ನನ್ನ ಮಗ ಹೀಗೇ ಮಾಡಬೇಕೆಂದೇನೂ ಅಲ್ಲ. ಆದರೆ, ನಿದ್ರೆಗೆಟ್ಟು ಆಟವನ್ನು ನೋಡುವ ಮಜಾವೇ ಬೇರೆ. ಅದು ಅವನು ಪಡೆದುಕೊಂಡ ಎನ್ನುವ ಸಂಭ್ರಮ ನನ್ನನ್ನು ಆವರಿಸಿಕೊಂಡಿತ್ತು ಆ ಕ್ಷಣ.

ಸಿಕ್ಕಾಪಟ್ಟೆ ಮಾತನಾಡುತ್ತಾನೆ. ಅವನನ್ನು ನಮ್ಮಿಂದ ದೂರವಿಟ್ಟು ಓದಿಸುವಾಗ ನಮ್ಮಿಬ್ಬರೊಳಗೂ (ಪತ್ನಿ ಸುಧಾ) ಒಂದು ಬಗೆಯ ತಾಕಲಾಟ ಆಗಿದ್ದಿದೆ. ಅವನೊಬ್ಬನೇ ಕಷ್ಟವಾಗುವುದಿಲ್ಲವೇ ? ಬಿಟ್ಟಿರಲು ಸಾಧ್ಯವೇ ? ಇಂಥವೆಲ್ಲಾ ಪ್ರಶ್ನೆಗಳು ಬಂದಿದ್ದವು. ಬಹಳ ಜನರ ಸಲಹೆಯ ಮಧ್ಯೆಯೂ ಇದೇ ನಿರ್ಧಾರವನ್ನು ತೆಗೆದುಕೊಂಡೆವು. ಕೆಲಸದ ಒತ್ತಡದ ಅನಿವಾರ‍್ಯತೆಯೂ ಇತ್ತು. ಆದರೆ ಅದಕ್ಕಿಂತ ಇಂಥದೊಂದು ಯಕ್ಷಗಾನ, ಒಂದಿಷ್ಟು ನದಿ, ಹಸಿರು, ಸಮುದ್ರ…ಹೀಗೇ ನಾವಿರುವಲ್ಲಿ ಇರಲಾರದ್ದನ್ನು ಕಂಡೇ ಬೆಳೆಯುತ್ತಾನೆ ಎಂಬ ಸಮಾಧಾನವಿತ್ತು. ಅದರೊಂದಿಗೆ ನನ್ನ ಮೇಲಿದ್ದ ದೊಡ್ಡ ಹೊಣೆಯೆಂದರೆ ಅವನಿಗೊಂದು ‘ಊರು‘ ಕೊಡಬೇಕಿತ್ತು.

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಖುಷಿಯೇ ಹೇಳತೀರದ್ದು. ನಾನು ಭದ್ರಾವತಿಯಲ್ಲಿದ್ದರೂ, ಕುಂದಾಪುರಕ್ಕೆ ಹೊರಡುವುದೆಂದರೆ ಅಂಥದ್ದೇ ಒಂದು ಉಮೇದು. ಈಗಲೂ ಅಷ್ಟೇ. ಮೈಸೂರು ಬಿಟ್ಟು ಕುಂದಾಪುರಕ್ಕೆ, ಸಾಲಿಗ್ರಾಮಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಅದೇ ನಮ್ಮನ್ನು ಎಷ್ಟೋ ಬಾರಿ ಉಲ್ಲಸಿತಗೊಳಿಸಿದ್ದಿದೆ. ಇದರರ್ಥ ಇರುವ ಊರಿನ ಬಗ್ಗೆ ಜಿಗುಪ್ಸೆಯಲ್ಲ. ಆದರೆ, ಈ ಸದಾ ಗಿಜಿಗುಡವ ಸಂತೆಯ ಮಧ್ಯೆ ದೂರದಲ್ಲೆಲ್ಲೋ ಕಾಣುವ ಬೆಟ್ಟವೂ ನಮ್ಮದೇ ಎನಿಸಿ, ಅಲ್ಲಿಯೂ ಒಂದಿಷ್ಟು ಹೊತ್ತು ಇರಬಹುದೆಂದು ಹುಟ್ಟಿಸುವ ವಿಶ್ವಾಸ ಹಲವು ಬಾರಿ ನಮ್ಮನ್ನು ದಾಟಿಸಿಬಿಡುತ್ತದೆ. ಅಂಥದೇ ಒಂದು ಉಮೇದಿನಲ್ಲಿ ಅವನನ್ನು ದೂರದ ಸಾಲಿಗ್ರಾಮದಲ್ಲಿ ಓದಲು ಸೇರಿಸಿದೆ.

ಆಗಲೇ ಹೇಳಿದೆನಲ್ಲ, ಸಿಕ್ಕಾಪಟ್ಟೆ ಮಾತನಾಡುತ್ತಾನೆ. ಅದು, ಇದು, ಏನೇನೋ. ತಲೆ ಗಿರ್ರನೆನಬೇಕು ಹಾಗೆ. ಸ್ವಲ್ಪ ಸಂಗೀತವೆಂದರೆ ಇಷ್ಟ. ಒಂದಿಷ್ಟು ಹೊತ್ತು ಕಾರ್ಟೂನ್ ನೋಡಿಕೊಂಡು, ಮನೆಯ ಅಂಗಳದಲ್ಲಿ ಸೈಕಲ್ ಆಡಿಕೊಂಡು, ಅಕ್ಕಪಕ್ಕದ ಮನೆಯಲ್ಲಿ ಸುತ್ತಿಕೊಂಡು, ಮನೆಗೆ ಬರುವವರಿಗೆಲ್ಲಾ ಒಂದಷ್ಟು ಜೋರು ಮಾಡಿಯೋ, ನಗಿಸಿಯೋ, ಅಮ್ಮಮ್ಮನೊಂದಿಗೆ ಗುದ್ದಾಡುತ್ತಲೇ ದೊಡ್ಡವನಾಗುತ್ತಿದ್ದಾನೆ. ಕೊರತೆಯ ಮಧ್ಯೆಯೂ ಹುಟ್ಟಿಕೊಳ್ಳುವ ಖುಷಿಯ ಒರತೆ ಎಂದರೆ ಇದೇ ಇರಬೇಕೇನೋ.

ಕಾಟ್ ಅಂದ್ರೆ ಕಾಟು !

ಮನೆಯಲ್ಲೂ ಒಬ್ಬಳಿದ್ದಾಳೆ ನಮ್ಮೂರಿನ ಮಳೆಯಂತೆಯೇ ಮಾತನಾಡುತ್ತಾಳೆ. ಅಜ್ಜಿಯನ್ನು ಪೀಡಿಸುತ್ತಾ, ಅಮ್ಮನೊಂದಿಗೆ ಮಲಗಲು ಸತಾಯಿಸುತ್ತಾ, ಅಪ್ಪ ಬರುವವರೆಗೆ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಾ, ಮಾತೆತಿದ್ದರೆ ‘ಬಾಬು ಇಲ್ಲ’ ಎನ್ನುತ್ತಲೇ ತೂಕಡಿಸುತ್ತಾ ಇರುವಾಕೆ. ಮಿತ್ರವಿಂದಾ ಎಂದು ಕರೆದರೆ, ತಣ್ಣಗೆ ‘ಮಂದ‘ ಎನ್ನುತ್ತಾ, ನಿನ್ನ ಹೆಸರೇನು ಎಂದು ಕೇಳಿದರೆ ‘ಮಂದ’ ಎಂದು ಉತ್ತರಿಸುತ್ತಾ ತಲೆ ತಿನ್ನುತ್ತಿರುವವಳು. ಅವಳ ಮಧ್ಯೆ ಕಳೆದುಹೋಗುತ್ತಿರುವ ನಮಗೆ ಎಲ್ಲರೂ ಒಟ್ಟಿಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ, ಬದುಕೆಂದರೆ ಬರೀ ಪಡೆಯುವುದಲ್ಲ, ಕಳೆದುಕೊಳ್ಳುವುದೂ ಸಹ. ನಾನೀಗ ಆ ಎರಡಕ್ಕೂ ತಯಾರಾಗಿದ್ದೇನೆ.

ಬದುಕಿನ ಬಣ್ಣ ಅರಿತುಕೊಳ್ಳುವುದರಲ್ಲೇ ಬದುಕು ಮುಗಿಯುತ್ತದೆ. ಆದರೆ ಅರಿತುಕೊಳ್ಳುವ ಪ್ರಯತ್ನ ಬದುಕು ಮುಗಿಸಿದ ತೃಪ್ತಿಯನ್ನು ನೀಡುತ್ತದೆ. ಅದು ನನ್ನ ನಂಬಿಕೆಯೂ ಸಹ.