ಈ ಹಿಂದಿನ ಪೋಸ್ಟ್ ನಲ್ಲಿ ಆಗಾಗ್ಗೆ ಲಲಿತಪ್ರಬಂಧಗಳನ್ನು ಪೋಸ್ಟ್ ಮಾಡುವುದಾಗಿ ತಿಳಿಸಿದ್ದೆ. ಅದಕ್ಕೂ ತಡವಾಯಿತು. ಇನ್ನು ಮುಂದೆ ನಿರಂತರತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಹೊಸ ವರ್ಷದ ಪ್ರತಿಜ್ಞೆ

ಬಸ್ಸಿಗೂ ನನಗೂ ಸುಮಾರು ವರ್ಷಗಳ ಸಂಬಂಧ. ಸುಮಾರು ವರ್ಷಗಳೆಂದರೆ ಅದಕ್ಕೂ ಅಖಚಿತ ಲೆಕ್ಕವಿದೆ. ಸರಕಾರಿ ಬಸ್ಸನ್ನು ಅವಲಂಬಿಸಿ; ಅನುಭವಿಸಿ 20 ವರ್ಷಗಳು ಕಳೆದಿರಬಹುದು. ಬಸ್ಸಿಗೂ ನನಗೂ ಅನ್ಯೋನ್ಯತೆ ಬೆಳೆದದ್ದು ಅನಿವಾರ್ಯತೆಯಿಂದ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಬಸ್ಸನ್ನೇರಿಯೇ ಹೋಗಬೇಕಿತ್ತು. ನಡೆಯಲು ಸಾಧ್ಯವಿರಲಿಲ್ಲ ಎಂದಲ್ಲ, ಮನಸ್ಸಿರಲಿಲ್ಲ. ನಮಗೆ ಆಗಲೇ ನಾಗರಿಕತೆಯ ಝಲಕ್ ಅರ್ಥವಾಗಿತ್ತು. ಸಂಶೋಧನೆಗಳು ಮಿತಿ ಮೀರಿ ನಡೆದು, ನಾಗರಿಕನ ಬದುಕನ್ನು ಹೆಚ್ಚು ಸುಲಲಿತ ಮಾಡುತ್ತಿರುವಾಗ ನಾನೇಕೆ ಅನುಭವಿಸದೇ ಸುಮ್ಮನಿರಬೇಕೆಂಬ ವಿಚಾರವೂ ಇದಕ್ಕೆ ಕಾರಣ.

ನನ್ನ ಅಜ್ಜ, ಅಪ್ಪ ಹತ್ತು ಹನ್ನೆರಡು ಕಿ.ಮೀ. ದೂರದ ಶಾಲೆಗೆ ಗುಡ್ಡ ದಾಟಿ ಹೋಗಬೇಕಿದ್ದು ನಡೆದುಕೊಂಡೇ. ಅವರೆಲ್ಲಾ ಕಲಿತದ್ದು ಹಾಗೆಯೇ. ಕಷ್ಟಪಟ್ಟು, ದಾರಿದೀಪದ ಕೆಳಗೆ, ವಾರಾನ್ನ, ತಿಂಗಳಾನ್ನವೋ ಮಾಡಿಕೊಂಡು. ಅಷ್ಟೇ ಏಕೆ? ಹರಕು ಚಡ್ಡಿ, ಷರಟು ಹಾಕಿಕೊಂಡು. ಷರಾಯಿ ತೊಟ್ಟುಕೊಂಡದ್ದೇ ಇಲ್ಲವೆನ್ನುತ್ತಾರೆ. ಹಾಗೆಂದು ನೋಡಿರಲಿಲ್ಲ ಎಂದಲ್ಲ. ಊರ ಪಟೇಲರು, ಅವರ ಮಗ ತೊಟ್ಟದ್ದನ್ನು ಬಹು ದೂರದಿಂದಲೇ ನೋಡಿದವರು. ಆದರೆ ಅಂದಿನಿಂದ ಇಂದಿಗೆ ನಮ್ಮ ಬದುಕನ್ನು ನಾವೇ ಹೆಚ್ಚು ಸರಳೀಕರಿಸಿಕೊಂಡಿದ್ದೇವೆ ಎನ್ನುವುದಕ್ಕಿಂತಲೂ ಹೆಚ್ಚು ‘ಸಾಧ್ಯ’ವಾಗಿಸಿಕೊಂಡಿದ್ದೇವೆ.

ಬಹುಶಃ ನನಗೆ ಈ ಬಸ್ಸು ಕಲಿಸಿದಷ್ಟು ಜೀವನ ಪಾಠ, ಸಮಾಜದೊಂದಿಗಿನ ಸ್ಪಂದನ ಸ್ವಭಾವ ಯಾವ ಶಾಲೆ, ಮನೆ, ಗುರುಪೀಠಗಳೂ ಕಲಿಸಿಲ್ಲ. ಮಗುವಿನೊಂದಿಗೆ ಬಂದ ತಾಯಿಗೆ ಸೀಟು ಬಿಟ್ಟು ಕೊಡುವ ಮಾನವ ವರ್ತನೆಯಿಂದ ಹಿಡಿದು, ಫುಟ್‌ಬೋರ್ಡ್‌ನಲ್ಲಿ ನಿಂತು ಸಿಗರೇಟು ಸೇದುವ ಮಂದಿಗೆ ‘ಸ್ವಲ್ಪ ಆರಿಸ್ತೀರಾ?’ ಎಂದು ಹೇಳುವವರೆಗೆ, ಜೋರು ಮಾಡುವ ಕಂಡಕ್ಟರ್‌ಗೆ ಪ್ರತಿ ಜೋರು ಮಾಡುವುದಕ್ಕೆ, ರಶ್ ಇದ್ದಾಗ ಕೈಗಳನ್ನು ಜೇಬಿಗೆ ಕಾವಲಿಗೆ ನೇಮಿಸುವುದಕ್ಕೆ, ಜತೆಗೆ ಪೈಪೋಟಿಯಲ್ಲಿ ಜಯಿಸುವುದನ್ನೂ ಕಲಿಸಿದೆ.
ಕಿಕ್ಕಿರಿದ ಜನಜಂಗುಳಿಯ ನಡುವೆ ಬಸ್ಸಲ್ಲಿ ಸೀಟು ಹಿಡಿಯಲು ನಡೆಯುವ ಪೈಪೋಟಿ ಯಾವುದಕ್ಕೆ ಕಮ್ಮಿ? ಪುಸ್ತಕ, ಕರವಸ್ತ್ರ, ಮ್ಯಾಗಝಿನ್ ಹೀಗೆ ಏನೇನೋ ಎಸೆದು ಸೀಟು ಕಾದಿರಿಸುವುದು. ಒಮ್ಮೊಮ್ಮೆ ಏನೂ ಸಿಗದಾಗ ಉದ್ದ ನೋಟ್ ಪುಸ್ತಕದ ಹಾಳೆ ಹರಿದು ಉದ್ದಕ್ಕೆ ಹಾಸಿ ಬಿಡುವುದೂ ನಮ್ಮ ಜಾಣ್ಮೆ. ಮುಂದೆ ನಿಂತ ಹುಡುಗಿಯ ಮೈ ಅಪ್ಪಿಕೊಂಡ ಉಡುಪು ಸೋಕಿದರೂ ಏನೋ ಒಂದು ಸುಖವಿದೆ ಎಂದು ತಿಳಿದದ್ದು, ನಿದಿಗೆ ಹುಡುಗಿ ಲೀಲೂ ಮೇಲೆ ಮನಸ್ಸಾಗಿದ್ದು ಬಸ್ಸಲ್ಲೇ. ಡ್ರೈವರ್ ಪಕ್ಕದ ಮೀಸಲು ಸೀಟಿನಲ್ಲಿ ಕುಳಿತಿರುವ ಲೀಲೂಗೂ, ಹಿಂದಿನ ಬಾಗಿಲ ಆರಂಭದ ಸೀಟು ಹಿಡಿದು ಕುಳಿತುಕೊಳ್ಳುವ ನನಗೂ ನಡುವ ಒಂದು ಸಮಾನಂತರ ನೇರ ರೇಖೆ. ‘ಕಾಮನಬಿಲ್ಲು’ ಚಿತ್ರದ ‘ಕಣ್ಣು ಕಣ್ಣು ಕಲೆತಾಗ’ ಹಾಡಿನ ಅರ್ಥ ಹೇಳಿಕೊಟ್ಟಿದ್ದು ಇದೇ ರೇಖೆ. ಇದೇ ಬಸ್ಸು.

ಬಸ್ಸೆಂದರೆ ಅಂತಿಂಥದ್ದಲ್ಲ. ಎಂಥದ್ದು? ಒಂದು ಜಗತ್ತು. ಹಳ್ಳಿಗೆ ಆಧುನಿಕತೆಯ ಬೆರಗು ಬಂದದ್ದು ಬಸ್ಸಿನಿಂದ. ಪಟ್ಟಣಗಳ ಕತೆಗಳು ಹಳ್ಳಿಯಲ್ಲಿನ ಮನೆಗಳಲ್ಲಿ, ಬಸ್ ಸ್ಟ್ಯಾಂಡಿನ ಕಾಫೀ ಕ್ಲಬ್ಬಿನಲ್ಲಿ, ಬಣ್ಣ ಬಣ್ಣದ ಮೆರುಗು ಪಡೆದಿದ್ದಕ್ಕೆ ಈ ಬಸ್ಸೇ ಕಾರಣ. ಪಟ್ಟಣದ ಸಂತೆ ವಿಚಾರ, ಅಲ್ಲಿನ ಬದುಕು, ಸಾಬಣ್ಣ ಮಾರುತ್ತಿದ್ದ ಕಾರ ಶೇವ್ ಮುಂಡಕ್ಕಿ ಪರಿಮಳ, ಅದರೊಳಗಿದ್ದ ಹುರಿದ ಕಡಲೆ ಬೀಜದ ಬಣ್ಣ ತಿಳಿದದ್ದು ಇದೇ ಬಸ್ಸಿನಿಂದ. ಸಮ ಭಾವ ಬಿತ್ತಿದ್ದೂ ಇದೇ ಬಸ್ಸು. ಅದು ನಿಜವಾದ ಸಮಾಜವಾದಿ, ಸಮತಾವಾದಿ ಹಾಗೂ ಜಾತ್ಯತೀತ ಸಮಾಜ ಪರ.
ಬಸ್ಸಿನ ಅನಂತ ಅನುಭವ ಹೊಚ್ಚ ಹೊಸ, ಬೆಚ್ಚಗಿನ ಕನಸು ಕಟ್ಟಿಕೊಟ್ಟಿದೆ. ಶಾಲೆಗೆ ಹೋಗಲು ಮೊದಲ ಬಾರಿ ಬಸ್ಸಿಗೆ ಕಾಲಿಟ್ಟಾಗ ಹೊಸ ಲೋಕ. ಕಿಟಕಿಗೆ ಆತು ಕುಳಿತು, ಗ್ಲಾಸು ತೆರೆದು, ಓಡುವ ರಸ್ತೆ, ಹಸಿರು, ಗದ್ದೆ, ತೋಟ, ಹಸು-ಕರು, ನಾಯಿ, ಜನ, ಕೊನೆಗೆ ಊರಿಗೇ ಊರು, ಲೋಕಕ್ಕೆ ಲೋಕವನ್ನು ನೋಡೋದೇ ಒಂದು ಸೊಬಗು. ಮೊದ ಮೊದಲು ಬಸ್ಸು ನಿಂತ ಎಷ್ಟೋ ಕ್ಷಣಗಳ ಮೇಲೆ ಇಳಿಯಲೂ ಭಯ. ಓಡುವ ಬಸ್ಸಿಂದ ಹಾರಿದ ಮೇಲೆ ಕೆಲ ಕ್ಷಣ ಓಡುತ್ತಿರಲೇಬೇಕು ಎಂದು ಭೌತಶಾಸ್ತ್ರ ಉಪನ್ಯಾಸಕನಾಗಿ ಕಲಿಸಿದ್ದು ಇದೇ ಬಸ್ಸು.

ಬಸ್ಸು ಊರ ವಿಚಾರವನ್ನೆಲ್ಲಾ ನಮ್ಮ ಮನದ ಜಗುಲಿಗೆ ತಂದು ಸುರಿಯುವ ವರದಿಗಾರ. ಅಷ್ಟೇ ಅಲ್ಲ, ಆನಂತರ ಸುದ್ದಿಯ ವಿಶ್ಲೇಷಣೆಗೆ ತನ್ನಲ್ಲೇ ಅವಕಾಶ ಮಾಡಿಕೊಡುವ ಒಬ್ಬ ಪ್ರೋತ್ಸಾಹಕ. ಪ್ರೇಮಿಗಳನ್ನು ಒಂದುಗೂಡಿಸಿ ಬದುಕು ಕಟ್ಟಿಕೊಡುವ ಹಿತೈಷಿ. ನಮ್ಮ ಕೇರಿ ಕೊನೆ ಮನೆ ಸರಸೂ ತನ್ನ ಪ್ರಿಯಕರನೊಂದಿಗೆ ಓಡುಹೋದದ್ದು ಈ ಬಸ್ಸಿನ ಮೂಲಕವೇ. ಇಷ್ಟೆಲ್ಲದರ ನಡುವೆ ಆತ ಬಡವರ ಬಂಧು. ಹೀಗಾಗಿ ಬಸ್ಸು ಎಂದರೆ ಬದುಕು. ಕಷ್ಟ, ನಷ್ಟ, ಸುಖ, ದುಃಖಗಳು ಒಟ್ಟಿಗೆ ಚಲಿಸುವ ಲೋಕ. ಒಂದು ಅದ್ಭುತ ಜಗತ್ತು. ಇದನ್ನು ದೂರುವ ಎಷ್ಟೋ ಮಂದಿ ಇದ್ದಾರೆ. ಛೀಕರಿಸುವವರಿದ್ದಾರೆ. ಅಷ್ಟೇ ಏಕೆ, ಘಳಿಗೆ ಘಳಿಗೆಗೂ ಹಿಡಿಶಾಪ ಹಾಕುವವರಿದ್ದಾರೆ. ಪ್ರತಿ ಕ್ಷಣ ಬಸ್ಸಿಗೆ, ಅದರ ಚಾಲಕನಿಗೆ, ನಿರ್ವಾಹಕ ಮಹಾಶಯನಿಗೆ ಬೈಯುತ್ತಲೇ ಬಸ್ಸು ಹತ್ತುವವರಿದ್ದಾರೆ. ಸೀಟು ಸಿಕ್ಕರೂ ತಮ್ಮ ಗೊಣಗಾಟಕ್ಕೆ ಪೂರ್ಣವಿರಾಮ ಹೇಳದೇ ಅಲ್ಪವಿರಾಮದಲ್ಲಿಯೇ ದಾರಿ ನೂಕುವವರೂ ಇದ್ದಾರೆ. ಎಲ್ಲಾ ಅನಾನುಕೂಲತೆಯ ಒಟ್ಟು ಮೊತ್ತ ಈ ಬಸ್ಸು ಎಂದು
ಆರೋಪಿಸುವವರಿಗೇನೂ ಕೊರತೆಯಿಲ್ಲ. ಹಾಗೆಂದು ಅವರು ಬಸ್ಸು ಬಿಟ್ಟು ಬದುಕುವುದಿಲ್ಲ. ಬಸ್ಸಿಲ್ಲದ್ದೇ ಅವರ ಬದುಕಿಲ್ಲ. ಅದಕ್ಕೇ ಹೇಳಿದ್ದು ಬದುಕಿದು ಜಟಕಾ ಬಂಡಿಯೆಂದು. ಆದರೆ ಇಂದಿಗೆ ಸರಿ ಹೊಂದುವಂತೆ ಬದುಕು ಮೋಟಾರು ಬಂಡಿ’ ಎಂದು ಬದಲಿಸುವುದೊಳಿತು.

ಸೂರ್ಯ ಕಣ್ಣರಳಿಸಿದ ಕೂಡಲೇ ಕೈಯಲ್ಲಿ ಊಟದ ಚೀಲ ಹಿಡಿದು ಸಾಗುವುದು ಮತ್ತೆ ಬಸ್ಸಿನಲ್ಲೇ. ಏದುಸಿರನ್ನು ಬಿಡುತ್ತಲೋ, ಫುಟ್‌ಬೋರ್ಡ್ ಸರಳನ್ನು ಹಿಡಿದುಕೊಂಡೋ, ಹೊಸ ಪ್ರಪಂಚದೊಳಗೆ ಪ್ರವೇಶಿಸಿದರೆ ಸಂಪೂರ್ಣ ಭಿನ್ನವಾದ ಜಗತ್ತು. ಪರಿಚಯಿಸಿಕೊಳ್ಳಲು ಕೆಲ ಕಾಲ ತಗುಲಬಹುದು. ಆದರೆ ‘ತಾನು ಬೇರಲ್ಲ’ ಎಂಬ ಸಮತಾ ಭಾವನೆ. ‘ತಾನೊಬ್ಬನೇ ಅಲ್ಲ’ ಎಂಬ ಸಮಾಧಾನ ಚಿಗುರೊಡೆಯುವುದೇ ಪರೀಕ್ಷಿಸಿಕೊಂಡು ಬನ್ನಿ. ನಿಮ್ಮದೂ ಸೇರಿದಂತೆ. ಶಿವರಾಮಕಾರಂತರ ಮಾತು ಸುಳ್ಳಾಗುತ್ತದೆ. ಅಲ್ಲಿರುವುದು ಹುಚ್ಚು ಮನಸ್ಸಿನ ಹತ್ತುಮುಖಗಳಲ್ಲ. ನೂರು… ಸಾವಿರಾರು…ಲಕ್ಷವಾರು… ಎಷ್ಟು ಬೇಕಾದರೂ ಎಣಿಸಿಕೊಳ್ಳಿ, ನಿಮಗೆ ಶಕ್ತಿ ಸಾಮರ್ಥ್ಯವಿದ್ದರೆ?

ಅಲ್ಲಿ ಸಮಾಜದ ಮಾರ್ಗದರ್ಶಿಗಳು, ರೂಪದರ್ಶಿಗಳು, ಹೋರಾಟಗಾರರು, ಹೇಡಿಗಳು, ಕಾಮುಕರು ಎಲ್ಲರಿಗೂ ಪ್ರವೇಶಾವಕಾಶವಿದೆ. ಅಲ್ಲಿ ಬರಬೇಡಿ ಎನ್ನುವವರೂ ಇಲ್ಲ. ‘ನಮಸ್ಕಾರ, ಪುನಃ ಬನ್ನಿ’ ಎಂದು ಫಲಕ ತೂಗು ಹಾಕಿದ ಯಾವುವೋ ಅಪರೂಪದ ಬಸ್‌ಗಳನ್ನು ಬಿಟ್ಟರೆ, ನಿಮ್ಮನ್ನು ಬನ್ನಿ ಎಂದು ಸ್ವಾಗತಿಸುವವರೂ ಇಲ್ಲ. ಈ ಅಪರೂಪವೂ ನಾಲ್ಕೈದು ವರ್ಷಗಳಿಗೊಮ್ಮೆ ಬರುವ ಅಧಿಕ ವರ್ಷದಂತೆ. ಇದನ್ನು ಸಾರ್ವತ್ರಿಕ ಎಂದು ತಿಳಿದುಕೊಳ್ಳಬೇಡಿ. ಸಾರ್ವಕಾಲಿಕವೂ ಅಲ್ಲ. ಬಿಸಿರಕ್ತದ ಯುವಕನ ಮುಖದಲ್ಲಿ ಮೂಡಿದ ನೂರಾರು ಮೀಸೆ ಕೂದಲುಗಳ ನಡುವೆ ಎಲ್ಲೋ ಒಂದು ಕೆಂಪೋ, ಬಿಳಿಯದು ಬಂದರೆ…ಊಹಿಸಿಕೊಳ್ಳಿ. ಹಾಗೇ.

ಫುಟ್‌ಬೋರ್ಡಿನಲ್ಲಿ ನಿಂತು ರಸ್ತೆಗಳಲ್ಲಿನ ಮೇಲಿನ ಸಂಗತಿಗಳನ್ನು ಸಂಗ್ರಹಿಸುವ ದಾಖಲಾಶೂರರು, ಇಂದೂ ಕಚೇರಿಗೆ ಹೋಗಬೇಕೆ? ಎಂದು ಪ್ರತಿಫಲಿಸುವ ಸರಕಾರಿ ನೌಕರರ ಬೇಸರ ವದನಗಳು, ವರ್ಷರಾಜನ ಕನಲಿಕೆಗೆ ಮುಲುಗುವ ಹೆಣ್ಣುಮಕ್ಕಳು ತುಟಿಗೆ ಮೆತ್ತಿಕೊಂಡ ಬಣ್ಣ, ಅವರ ಹಿಂದೆ ಬಿದ್ದ ಕಾಮಣ್ಣರು, ಬಗಲಲ್ಲಿ ಮಗು ಇರಿಸಿಕೊಂಡು, ಆಸೀನಳಾದ ಕಾಲೇಜು ಹುಡುಗಿ ಕಡೆ ಸೀಟಿಗಾಗಿ ದೈನ್ಯ ದೃಷ್ಟಿ ಭೀರುವ ತಾಯಿ, ಕೆಮ್ಮಿನಿಂದ ನರಳುತ್ತಿರುವಾತ ಎಲ್ಲರೂ ಇಲ್ಲಿ ಕಾಣಸಿಕ್ಕುತ್ತಾರೆ… ಎಷ್ಟೊಂದು ವಿಧದ ಗೊಣಗಣ್ಣರನ್ನು ಕಾಣಬಹುದು. ಅಥವಾ ಗೊಣಗಾಟವನ್ನು ಕೇಳಬಹುದು. ಗೊತ್ತೆ? ಅವರನ್ನು ಹುಡುಕಬೇಕೆಂದರೆ ನೀವು ಆ ಗುಂಪಿಗೇ ಸೇರಬೇಕು. ಸಮಾಜದ ಎಲ್ಲಾ ಮುಖಗಳಿಗೂ ಬಸ್ಸು ಏಕ ಕನ್ನಡಿಯಾದ್ದರಿಂದ ಎಲ್ಲರೂ ಅಲಂಕರಿಸಿಕೊಳ್ಳಬೇಕಾದ್ದು ಅದರಲ್ಲೇ. ಮಧ್ಯಮ ವರ್ಗದ, ಜನಸಾಮಾನ್ಯರಿಗೆ ಇರುವ ಎರಡನೇ ಕನ್ನಡಿ ಎಂದರೆ ರೈಲು. ರೈಲಿನ ಮಾತನ್ನು ಅಲ್ಲಿಗೇ ಬಿಡಿ. ಬಸ್ಸಿಗೆ ಮತ್ತೆ ಬನ್ನಿ. ಬಸ್ಸು ಒಂದು ಅನುಭವ ಮಂಟಪ. ನಮಗೆ ತಿಳಿದಿರದ್ದನ್ನು, ಕಲಿಯದ್ದನ್ನು ಅದು ಕಲಿಸುತ್ತದೆ. ನಾವು ಕಲಿಯಲು ತಯಾರಿರಬೇಕಷ್ಟೇ. ನೀವು ಡಿವಿಜಿ ಅವರ ಮಂಕುತಿಮ್ಮನಂತೆ ಎಲ್ಲರೊಳಗೊಂದಾಗುವುದನ್ನು ಕರಗತ ಮಾಡಿಕೊಂಡಿದ್ದರೆ ಸಲೀಸು. ನಿಮ್ಮದೇ ಪ್ರಪಂಚ, ನಿಮ್ಮದೇ ಬದುಕು. ನಿಮ್ಮದೇ ಬಸ್ಸು.

ಬಸ್ಸು ನಮ್ಮೊಂದಿಗೆ ಅಷ್ಟೊಂದು ಆತ್ಮೀಯನಾಗಲು ಮಹತ್ವದ ಕಾರಣವಿದೆ. ಅದಕ್ಕೆ ಅಹಂಕಾರವಿಲ್ಲ. ಅಹಂನ ಕೋಟೆ ಕಟ್ಟಿಕೊಂಡು ದೂರ ನಿಲ್ಲುವುದಿಲ್ಲ ಅದು. ನೀವು ನಿಂತಲ್ಲಿ (ಬಸ್ ನಿಲ್ದಾಣದಲ್ಲಿ) ಅದು ಬಂದು ನಿಲ್ಲುತ್ತದೆ. ನಿಮ್ಮನ್ನು ಮಾತನಾಡಿಕೊಂಡು ಕರೆದೊಯ್ಯುತ್ತದೆ. ಇಳಿದು ಟಾಟಾ ಹೇಳುವವರೆಗೂ ನಿಮ್ಮನ್ನು ಆದರಿಸುವ ಬಸ್ಸು, ಮರುಕ್ಷಣದಲ್ಲೇ ಮತ್ತೊಬ್ಬ ನಮ್ಮ ಸಹೋದರನನ್ನು ಬರಸೆಳೆದುಕೊಳ್ಳುತ್ತದೆ. ಈ ಕಾರ್ಯ ನಮ್ಮ ನಿಮ್ಮಿಂದ ಸಾಧ್ಯವಿದೆಯೇ ಹೇಳಿ.

ಆತ್ಮೀಯತೆ ಬಸ್ಸಲ್ಲಿ ಸಿಕ್ಕಿದಷ್ಟು ‘ಫ್ರೀ’ ಎಲ್ಲೂ ಸಿಗಲಾರದು. ಆಟೋದಲ್ಲಿ ಒಮ್ಮೆ ಹೋಗಿಬನ್ನಿ; ಹೋಗುವ ಮುನ್ನ ಆಟೋ ಚಾಲಕನಿಗೆ ನಮಸ್ಕಾರ ಹೇಳಿ, ‘ಸ್ವಾಮಿ ಜಯನಗರದ ಕಡೆ ಬರುತ್ತೀರಾ’ ಎಂದು ಕೇಳಬೇಕು; (ಕರಾವಳಿ ಕಡೆ ದೇವಸ್ಥಾನಗಳಲ್ಲಿ ಪುಷ್ಪ ಪ್ರಶ್ನೆ ಎಂಬುದಿದೆ. ಅದರರ್ಥ ಇಷ್ಟೇ. ಭಕ್ತರು ತಮ್ಮ ಬಯಕೆ ಈಡೇರಿಸುವಂತೆ ಕೋರಿ ನೀಡಿದ ಪುಷ್ಪವನ್ನು ಪುರೋಹಿತರು ದೇವರಿಗರ್ಪಿಸಿ ಮಂಗಳಾರತಿ ಮಾಡುತ್ತಾರೆ. ಆನಂತರ ದೇವರ ಬಲಭಾಗಕ್ಕೆ ಪ್ರಸಾದ ಬಿದ್ದರೆ ‘ಆಗುತ್ತದೆ’, ಎಡಕ್ಕೆ ಬಿದ್ದರೆ ‘ಆ ಚಿಂತೆ ಬಿಡಿ’ ಎಂದು ಅರ್ಥ. ಆಟೋ ವಿಹಾರ ವಿಷಯದಲ್ಲೂ ಹೀಗೆಯೇ ಕಾಯಬೇಕು.) ರಿಕ್ಷಾವಾಲನ ಮುಖದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳಿಗೂ ಅರ್ಥ ಕಲ್ಪಿಸಬೇಕು. ಒಂದು ವೇಳೆ ಆತನ ಮುಖದಲ್ಲಿ ನಗೆ ಮಿಂಚಿ, ಕೈಯೋ, ಕತ್ತೋ ಅಲ್ಲಾಡಿದರೆ ‘ಹತ್ತಿಕೊಳ್ಳಬಹುದು’, ಇಲ್ಲದಿದ್ದರೆ ‘ಈ ಆಟೋ ಆಸೆ ಬಿಟ್ಟುಬಿಡಿ’ ಎಂಬುದು ವೇದವಾಕ್ಯವಾಗುತ್ತದೆ.
ಇದು ನಿತ್ಯ ಪುರಾಣ.

ಆಟೋ ಹಿಡಿದು ಇರಲಿ ನೀವು ಬೈಕ್, ವಿಮಾನ, ಏರಿದಾಗಲೂ ಒದು ಅವ್ಯಕ್ತ ಭಾವ, ಸುಖ ಅನುಭವಿಸಲು ಬಿಡದೇ ಹಿಡಿದಿರುತ್ತದೆ. ಅತ್ತಿ ಹಣ್ಣು ನೋಡಲು ಬಹಳ ಚೆಂದವಂತೆ. ಅದನ್ನು ಕಂಡಷ್ಟೂ ಸುಖವಿದೆ. ಆದರೆ ತಿನ್ನಲು ಅಸಾಧ್ಯ. ಗಣ್ಯವ್ಯಕ್ತಿಗಳ ಭದ್ರತಾ ಪಡೆಯ ಮಂದಿ ಸುತ್ತಲೂ ಕಣ್ಣು ತಿರುಗಿಸುತ್ತಾ ಕಾಯುವ ತರಹ, ನಿಮ್ಮೊಳಗೆ ಜಾಗರೂಕವಾಗಿರುವ ವಿಶೇಷ ಪ್ರಜ್ಞೆ ಆ ಸುಖದಿಂದ ನಿಮ್ಮನ್ನು ವಂಚಿತನಾಗಿಸುತ್ತದೆ; ನಿಮ್ಮ ಮೆದುಳಿನ ಫ್ಲಾಪಿಯಲ್ಲಿ ಸಂಗ್ರಹಿತ ಎಚ್ಚರಿಕೆಗಳು ನಿಮ್ಮ ಮನಸ್ಸಿಗೆ ಟೆಲಿಗ್ರಾಮ್ ಮೂಲಕ ರವಾನಿಸಲ್ಪಡುತ್ತವೆ. ‘ಅತ್ತಿ ಹಣ್ಣಿನೊಳಗೆ ಬರೀ ಹುಳು’ ಎಂಬುದು ನಿಮ್ಮನ್ನು ಕೊರೆಯುತ್ತಲೇ ಇರುವಂತೆ. ಇಲ್ಲಿ ಸುಖದ ಮೂಟೆ ಸೋರುತ್ತಲೇ ಇರುತ್ತದೆ.

ಆದರೆ ಬಸ್ಸಿನಲ್ಲಿ ಈ ಸಂಗತಿಗಳೇ ಉದ್ಭವಿಸುವುದಿಲ್ಲ. ಅಲ್ಲಿರುವ ಚಾಲಕ, ನಿರ್ವಾಹಕರೂ ನಮ್ಮ ಹಾಗೆಯೇ ತಮ್ಮ ಹೆಂಡತಿ, ಮಕ್ಕಳು, ಸಂಸಾರಕ್ಕಾಗಿ ದುಡಿಯುತ್ತಿರುವವರು. ಅವರಿಗೆ ಬಸ್ಸಿನ ಮೇಲಿನ ಪ್ರೀತಿಗಿಂತಲೂ ಸಂಸಾರದ ಮೇಲೆ ಹೆಚ್ಚು ಒಲವು?! ಆದ್ದರಿದಲೇ, ಯಾರು ಬಂದಿರಿ, ಯಾರು ಇಳಿದಿರಿ, ಯಾರು ಹೋದಿರಿ ಎಂಬ ಯಾವುದೇ ಪ್ರಶ್ನೆಗಳನ್ನು ಯಾರೂ ಯಾರಿಗೂ ಕೇಳುವುದೇ ಇಲ್ಲ. ನಿಮ್ಮದೇ ಸ್ವಾತಂತ್ರ್ಯ, ನಿಮ್ಮದೇ ರಾಜ್ಯ, ಎಲ್ಲಿ ಬೇಕಾದರೂ ಇಳಿಯಬಹುದು, ಎಲ್ಲಿಗೆ ಬೇಕಾದರೂ ತೆರಳಬಹುದು.

ನೀವು ನಿಮ್ಮ ಮನದ ಮಾತನ್ನು ಹೇಳಿ, ಅಂದರೆ ಸತ್ಯವನ್ನೇ ಹೇಳಿ. ಬಸ್ಸಿನಲ್ಲಿ ಸಿಕ್ಕ ಸ್ವಾತಂತ್ರ್ಯ ಬೇರೆ ಎಲ್ಲಾದರೂ ಸಿಗುವುದು ಸಾಧ್ಯವೇ? ಅಲ್ಲಿ ಯಾರಾದರೂ ನಿಮ್ಮನ್ನು ಕೇಳುವವರಿದ್ದಾರೆಯೇ? ಒಂದು ವೇಳೆ ಅಮೆರಿಕೆ, ಇಂಗ್ಲೆಂಡ್, ಸಿಂಗಾಪುರದಂಥ ರಾಷ್ಟ್ರಗಳಲ್ಲಿ ಪ್ರಶ್ನಿಸುವವರಿದ್ದಾರು ಆದರೆ ನಮ್ಮ ಭವ್ಯ ಭಾರತದಲ್ಲಿಲ್ಲ. ಬಸ್ಸಿನಲ್ಲಿ ಟೈಮ್ ಪಾಸ್ ಮಾಡಲು ಕಡ್ಲೇಕಾಯಿ ಕೊಂಡು ತರುತ್ತೀರಿ. ಸುಲಿದ ಸಿಪ್ಪೆಯನ್ನು ಜೇಬಲ್ಲಿ ಹಾಕಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ನೂರಾರು ರೂಪಾಯಿ ಕೊಟ್ಟು ಷರಾಯಿ, ಷರಟು ಹೊಲಿಸಿ, ಜೇಬು ಇರಿಸಿದ್ದು ‘ಬೇಡದ್ದು’ ತುಂಬಲೇ? ಎಂದಿಗೂ ಅಲ್ಲ. ಅದನ್ನೆಲ್ಲಾ ಬಸ್ಸಿಗೆ ಹಾಕುತ್ತೇವೆ. ಮುಸುಕಿನ ಜೋಳದ ದಂಟು, ಪ್ಲಾಸ್ಟಿಕ್ ಕಾಗದ, ಬಾಳೆಹಣ್ಣಿನ ಸಿಪ್ಪೆ, ಬಾಡಿದ ಮಲ್ಲಿಗೆ ಮಾಲೆ, ಬಸ್ ಟಿಕೆಟ್… ಹೀಗೆ ಎಲ್ಲಾವನ್ನೂ ಯಾವುದೇ ಮುಜುಗರವಿಲ್ಲದೇ ನಮ್ಮ ‘ಕಸದ ಬುಟ್ಟಿ’ ಎಂದು ತಿಳಿದು ಎಸೆಯುತ್ತೇವೆ. ನಿರ್ವಾಹಕರು ಆಕ್ಷೇಪಿಸುವುದೂ ಇಲ್ಲ. ಏಕೆಂದರೆ ಅವರೂ ‘ನಮ್ಮವರೇ’. ಈ ಸ್ವಾತಂತ್ರ್ಯ ಇನ್ನೆಲ್ಲಿದೆ? ಆಟೋ ನಿಮ್ಮ ಕಸದ ಬುಟ್ಟಿ ಆಗಲು ತಯಾರಿದೆಯೇ?

ಇನ್ನು ಎಲ್ಲಿಗೆ ಬೇಕಾದರೂ ತೆರಳುವ ವಿಚಾರ. ಆಟೋ, ಬೈಕ್‌ನಲ್ಲಿ ಸಾಧ್ಯವಿದೆ. ಆದರೆ ಮಾಲೀಕನ ‘ಸ್ವಾರ್ಥ ಪ್ರಜ್ಞೆ’, ‘ಜಾಗರೂಕತೆ’ಪ್ರತಿಕ್ಷಣದಲ್ಲೂ ಇಣುಕು ಹಾಕುತ್ತಾ ನಿಮ್ಮ ಸುಖಾನುಭವಕ್ಕೆ ರಸಭಂಗವುಂಟು ಮಾಡುತ್ತದೆ. ಉದಾಹರಣೆಗೆ, ನೀವು ಆಟೋದಿಂದ ಇಳಿದು ಹಣ ನೀಡಲು ಬಂದರೂ, ಚಾಲಕನಿಗೆ ನಿಮ್ಮ ಹಣಕ್ಕಿಂತಲೂ ಆತನ ಸೀಟು ಮುಖ್ಯ. ಆತ ನೀವು ಕುಳಿತಿದ್ದ ಆ ಸೀಟು ಸರಿಯಿದೆಯೋ, ಬಿದ್ದೋಯಿತೋ ಎಂಬುದನ್ನು ಖಚಿತಪಡಿಸಿಕೊಂಡು, ಸರಿಪಡಿಸಿದ ಆನಂತರ ಉಳಿದ ವ್ಯಾಪಾರ, ನಿಮ್ಮ ಬೈಕೂ ಅಷ್ಟೇ. ರಸ್ತೆ ಮೇಲೆ ಹೋಗುತ್ತಿದ್ದಾಗ ಯಾರಿಗಾದರೂ ಡಿಕ್ಕಿ ಹೊಡೆದೇನೆಂಬ ಭಯಕ್ಕಿಂತಲೂ ನಿಮ್ಮನ್ನು ಕಾಡುವುದು, ಬೈಕ್‌ಗೆ ಏನಾದರೂ ಆದರೆ… ಎಂಬುದು. ಹಾಗಾಗಿ ಮೈಯೆಲ್ಲಾ ಕಣ್ಣಾಗಿ ರಸ್ತೆ ನೋಡುತ್ತಿರುತ್ತದೆ. ಈಗ ಹೇಳಿ. ಬಸ್ಸಿನಲ್ಲಿ ಕುಳಿತರೆ ಇದ್ಯಾವುದಾದರೂ ಉಪದ್ರವವಿರುತ್ತದೆಯೇ?

ಇಷ್ಟೆಲ್ಲಾ ಕಲಿಸಿದ ಬಸ್ಸಿಗೆ ಒಂದೇ ಒಂದು ಬಾರಿ ಬೈಯ್ದು ಬಿಟ್ಟಿದ್ದೇನೆ, ದೊಡ್ಡ ಕಲ್ಲನ್ನು ಎತ್ತಿ ಅದರ ಮೈಗೆ ಬೀಸಿ ಒಗೆದು ಅದಕ್ಕೆ ಗಾಯ ಮಾಡಿದ್ದೇನೆ. ಮನಸ್ಸಿಗೆ ಬಂದಷ್ಟು ತೆಗಳಿದ್ದೇನೆ. ಕೊನೆಗೆ ಪಶ್ಚಾತ್ತಾಪದಿಂದ ಮರುಕಿದ್ದೇನೆ. ಕಣ್ಣಲ್ಲಿ ನೀರು ತೋಡಿನಂತೆ ಹರಿದಿದೆ. ದೊಡ್ಡಮ್ಮ ಬಂದು, ‘ಮಾಡಿದ್ದಾಯ್ತಲ್ಲ, ಇನ್ನು ಮರುಕೋದು ಏಕೆ? ನಾಳೆಯಿಂದ ಇದನ್ನು ಮಾಡಬೇಡ’ ಎಂದು ಹೇಳಿದರೂ ನಾನು ಮರುಕುವುದನ್ನು ಬಿಡಲಿಲ್ಲ. ಆ ದುಃಖ ಮಾಯವಾದದ್ದು ಅದೇ ಬಸ್ಸಣ್ಣ ಹೊಸ ಅಂಗಿ ತೊಟ್ಟ ಮೇಲೆಯೇ. ಆ ‘ದುರ್ಘಟನೆ’ ನಡೆದದ್ದು ಹೀಗೆ:

ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದ ಸಮಯ. ಭದ್ರಾವತಿಯ ಸಿಲ್ವರ್ ಜ್ಯೂಬ್ಲಿಯಲ್ಲಿ ಪಾಠ ಕೇಳುತ್ತಿದ್ದೆ. ಸಂಜೆ ೫ಕ್ಕೆ ಶಾಲೆ ಮುಗಿಯುತ್ತಿತ್ತು. 5.30ಗೆ ಹೋಟೆಲ್‌ಗೆ ಹಾಜರಾಗಬೇಕಿತ್ತು. ಕಾದು ಕಾದು ಸುಸ್ತಾಗುವ ಹೊತ್ತಿಗೆ ಬಸ್ಸು ಬಂತು. ಆದರೆ ನಿಲ್ಲಿಸಲಿಲ್ಲ. ನನಗೆ ಹೊತ್ತಾಗಿಬಿಟ್ಟಿತ್ತು. ಸಿಟ್ಟು ಬಂತು. ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಒಗೆದೇ ಬಿಟ್ಟೆ. ಸ್ವಲ್ಪ ದೂರ ಹೋಗಿ ಬಸ್ಸು ನಿಂತಿತು. ತಕ್ಷಣವೇ ನಾನು ಅಲ್ಲಿಂದ ಓಡಿದೆ. ಯಾರ ಕೈಗೂ ಸಿಕ್ಕದೆಯೇ. ನಂತರ ಒಂದು ವಾರ ಆ ಬಸ್ಸನ್ನೇ ಹತ್ತಿರಲಿಲ್ಲ.

ಅಂದು ಬೇರೆ ಬಸ್ಸು ಹತ್ತಿ ಮನೆಗೆ ಬಂದೆ. ಏಕೋ ಮನದೊಳಗೆ ಒಂದು ಥರಾ ಭಯ ಗೊರಕೆ ಹೊಡೆಯುತ್ತಿತ್ತು. ಏನು ಮಾಡುವುದು ತಿಳಿಯಲಿಲ್ಲ. ನನ್ನ ದೊಡ್ಡಮ್ಮನಿಗೆ ಹೇಳಿದ್ದಕ್ಕೆ. ‘ಬಸ್ಸಿಗೆ ಕಲ್ಲು ಹೊಡೆದ್ರೆ ಏನೂ ಆಗೋಲ್ಲ. ಗ್ಲಾಸು ಒಡೆಯುತ್ತಷ್ಟೇ. ನಾಳೆ ಅದರ ಖರ್ಚನ್ನು ನಾವೇ ಭರಿಸಬೇಕು. ಟ್ಯಾಕ್ಸ್ ಕಟ್ಟೋದು ನಾವೇ. ಇನ್ನು ಮುಂದೆ ಹಾಗೆ ಮಾಡಬಾರದು’ ಎಂದು ಬುದ್ದಿವಾದ ಹೇಳಿದಳು.

ಒಮ್ಮೆಲೆ ಅಳು ಬಂತು. ಅತ್ತೆ, ಅತ್ತೆ, ಕಣ್ಣು ನೋಯುವಷ್ಟು ಅತ್ತೆ. ನನಗೆ ‘ಸಾರ್ವಜನಿಕ ಪ್ರಜ್ಞೆ’ ಹೇಳಿಕೊಟ್ಟಿದ್ದು, ಸ್ವಾನುಭವದಿಂದಲೇ ಸಾರ್ವಜನಿಕ ಆಸ್ತಿ ನಷ್ಟ ಕೂಡದು ಎಂಬ ಹೊಸ ಪಾಠ ಹೇಳಿಕೊಟ್ಟ ಬಸ್ಸು ಎಂದೆಂದಿಗೂ ನನ್ನ ಮುದ್ದಿನ ಮೇಷ್ಟ್ರು. ಅದಕ್ಕೆ ಥ್ಯಾಂಕ್ಸ್ ಹೇಳಲು ಶುರು ಮಾಡಿದರೆ, ಜೀವನ ಪೂರ್ತಿ ಅದರಲ್ಲೇ ಕಳೆಯಬೇಕು. ಅದೂ ನಿಜವೆನ್ನಿ. ಮಧ್ಯಮ ವರ್ಗದ ನಾವು ಬದುಕನ್ನು ಕಳೆಯೋದು ಬಸ್ಸಲ್ಲೇ ಅಲ್ಲವೆ?

ಹೀಗೆ ಬಸ್ಸಿಂದ ಕಲಿತಷ್ಟೂ ಇದ್ದೇ ಇದೆ. ಅದು ಖಾಲಿಯಾದ ಅಕ್ಷಯ ಭಂಡಾರ. ಬದುಕಲು ಕಲಿಯಬೇಕೆಂದರೆ ಬಸ್ಸಲ್ಲಿ ಕಲಿಯಬೇಕು. ನಂತರ ಇಳಿದು ಬಂದು ಬದುಕಬೇಕು.