ಲೇಖನ

ಕೋಮುವಾದಿ ಸರಕಾರಕ್ಕೆ ಚಪ್ಪಾಳೆ ತಟ್ಟಿದ ಲಿಂಗದೇವರು ಹಳೆಮನೆ

ಮತ್ತೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಸರಕಾರಕ್ಕೂ ನೈತಿಕತೆಯಿಲ್ಲ. ಅದು ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ, ಬಿಜೆಪಿ ಆಗಲೀ, ಯಾವುದೇ ಪಕ್ಷದ ಸರಕಾರವು ನಕ್ಸಲ್ ಚಳವಳಿಯನ್ನು ಬೆಂಬಲಿಸದು. ವಾಸ್ತವ ಹೀಗಿರುವಾಗ ಬಿಜೆಪಿ ಸರಕಾರವಂತೂ ನೇಮಿಸಲೇ ಬಾರದಿತ್ತು. ಆದರೂ ಒಬ್ಬ ನಕ್ಸಲ್ ಸಹಾನುಭೂತಿಯವರನ್ನು ರಂಗಾಯಣಕ್ಕೆ ನೇಮಿಸುವ ಮೂಲಕ ಸರಕಾರವೂ ನಕ್ಸಲ್ ಚಳವಳಿಯನ್ನು ನೈತಿಕವಾಗಿ ಬೆಂಬಲಿಸಿದಂತಾಗಿದೆ.

ಹಾಗಾದರೆ ಯಾರು ಬಂಡವಾಳಶಾಹಿಗಳು ? -ಈ ಪ್ರಶ್ನೆಯೇ ಸದಾ ನನ್ನನ್ನು ಕಾಡುತ್ತಿರುವಂಥದ್ದು. ಮಂಗಳವಾರ ರಾಜ್ಯ ಸರಕಾರ ಮೈಸೂರಿನ ರಂಗಾಯಣಕ್ಕೆ ನಾಟಕಕಾರ ಲಿಂಗದೇವರು ಹಳೆಮನೆಯವರನ್ನು ನೇಮಕ ಮಾಡಲು ನಿರ್ಧರಿಸಿದ ಮೇಲೆ ಹಾಗೂ ಅದನ್ನು ಅವರು ಒಪ್ಪಿಕೊಂಡ ಮೇಲೆ ಮತ್ತೆ ಅದೇ ಪ್ರಶ್ನೆ ಕಾಡುತ್ತಿದೆ.

ಸರಕಾರದ ನೇಮಕವನ್ನು ಪ್ರಶ್ನಿಸುವ ಉದ್ದೇಶವಲ್ಲ, ಆದರೆ ಅದರ ಹಿಂದಿನ ನಿರುದ್ದೇಶದ ಆಷಾಢಭೂತಿತನವನ್ನು ಪ್ರಶ್ನಿಸುವಂಥದ್ದು. ಸದಾ ತನ್ನ ವಿರೋಧಿಗಳನ್ನು ತನ್ನ ಹಂಗಿನ ಅರಮನೆಯಲ್ಲಿ ಬಂಧಿಸಲು ಹವಣಿಸುತ್ತಿರುವ ಸರಕಾರದೊಂದಿಗೆ ರಾಜಿಗಿಳಿಯುವವರ ಬಗ್ಗೆ ನನ್ನ ಪ್ರಶ್ನೆ. ಇಲ್ಲಿ ಹಳೆಮನೆಯವರೂ ನೆಪ ಮಾತ್ರ. ಆದರೆ ರಾಜಕಾರಣ-ಆಡಳಿತ ಪಕ್ಷಕ್ಕೆ ಹತ್ತಿರವಿದ್ದು, ಜನರೆದುರು ದೂರವಿದ್ದಂತೆ ನಟಿಸುವ ಆಷಾಢಭೂತಿಗಳು ತಾವೇ ಒದಗಿಸಿಕೊಳ್ಳುವ ಅವಕಾಶಗಳಿಗೆ ‘ಪ್ರತಿಭೆ’, ‘ಅರ್ಹತೆ’ಯ ಹಣೆಪಟ್ಟಿ ಕಟ್ಟುವ ಅವಕಾಶವಾದಿಗಳು ಬಹಳ ಮಂದಿ ಇದ್ದಾರೆ. ಇಂಥ ‘ಗಿರಗಟ್ಲಿ‘ಗಳು (ಗಾಳಿಗೆ ಬಂದ ಕಡೆ ತಿರುಗುವವರು) ಪ್ರತಿ ಸರಕಾರದ ಸಂದರ್ಭದಲ್ಲೂ ಇರುತ್ತಾರೆ. ಸರಕಾರಕ್ಕೂ, ತಮ್ಮನ್ನು ಟೀಕಿಸುವವರಿಂದಲೇ ಶಹಭಾಷ್ ಗಿರಿ ಪಡೆಯಬೇಕೆಂಬ ಚಟ. ಅದನ್ನು ನಗದಾ (ಎನ್‌ಕ್ಯಾಶ್)ಗಿಸಿಕೊಳ್ಳುವ ಮಂದಿಗೆ ಅದು ಕೊಳ್ಳೆ ಹೊಡೆಯುವ ಅವಕಾಶ.

ಬಂಡವಾಳಶಾಹಿಗೆ ಲಾಭಕೋರತನ ಮುಖ್ಯವೇ ಹೊರತು ಮತ್ತೇನೂ ಅಲ್ಲ. ಸಿದ್ಧಾಂತವಿಲ್ಲ, ಪಕ್ಷವಿಲ್ಲ. ಎಲ್ಲರಿಗೂ ಶತ್ರು, ಎಲ್ಲರಿಗೂ ಮಿತ್ರ. ಗಾಳಿಗೆ ತಕ್ಕಂತೆ ತೂರಿಕೊಳ್ಳುವ ಜಾಯಮಾನ. ಯಾವುದಾದರೂ ಮೂಲದಿಂದ ಎಲ್ಲ ಅವಕಾಶವೂ ತನಗೇ ಸಿಗಲೆಂದು ಹಪಹಪಿಸುವ ಮತ್ತು ದಕ್ಕಿಸಿಕೊಳ್ಳಲೆತ್ನಿಸುವ ಏಕಮೇವ ನಿಷ್ಠೆ ಅವನದ್ದು. ಇಂಥವನ ಚಹರೆ ಈ ನೇಮಕದಲ್ಲಿ ಸ್ಟಷ್ಟ.

ರಾಜ್ಯ ಸರಕಾರವು ಲಿಂಗದೇವರು ಹಳೆಮನೆಯವರನ್ನು ನೇಮಿಸಿದ್ದೇ ಅಚ್ಚರಿ. ನೇಮಕಗೊಂಡವರು ಹಾಗೂ ನೇಮಿಸುತ್ತಿರುವವರ ನಡವಳಿಕೆಗಳೇ ಅದಕ್ಕೆ ಕಾರಣ. ಬಿ. ಜಯಶ್ರೀ ರಂಗಾಯಣಕ್ಕೆ ನಿರ್ದೇಶಕರಾಗಿ ಮೂರೇ ತಿಂಗಳಾಗಿತ್ತು. ಕಲಾವಿದರಿಗೂ, ಅವರಿಗೂ ಸರಿ ಬರಲಿಲ್ಲ. ಪರಸ್ಪರ ಆರೋಪ, ಪ್ರತ್ಯಾರೋಪ ಮುಗಿಲು ಮುಟ್ಟಿದಾಗ ಮೈಸೂರಿನ ರಂಗಾಸಕ್ತರು ರಂಗಕ್ಕೆ ಬಂದರು. ರಂಗಾಸಕ್ತರ ಬಳಗ ಕಲಾವಿದರನ್ನು, ಜಯಶ್ರೀಯವರನ್ನು ಭೇಟಿ ಮಾಡಿ ಪರಿಸ್ಥಿತಿ ತಿಳಿ ಮಾಡಲೆತ್ನಿಸಿತು.

ತೆರೆಮರೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯುವ ಬಂಡವಾಳಶಾಹಿಗಳೂ ಕಾರ್ಯ ಪ್ರವೃತ್ತರಾಗಿದ್ದರು. ಅವರದ್ದು ಒಂದೇ ಕಾರ‍್ಯಸೂಚಿ. ಜಯಶ್ರೀ ಅವರು ತೊಲಗಬೇಕು, ಸ್ಥಾನ ಖಾಲಿಯಾಗಬೇಕು. ಆ ಸ್ಥಾನಕ್ಕೆ ತಮ್ಮನ್ನು ಪ್ರತಿಷ್ಟಾಪಿಸಿಕೊಳ್ಳಬೇಕು. ಎಲ್ಲದರ ಫಲ ರಂಗಾಯಣ ರಾಮಾಯಣ ಸರಿ ಹೋಗಲಿಲ್ಲ. ಜಯಶ್ರೀ ರಾಜೀನಾಮೆ ನೀಡಿದರು. ನಿರ್ದೇಶಕ ಸ್ಥಾನ ಖಾಲಿಯಾಯಿತು.
ಸರಕಾರವೀಗ ನೆರೆಯ ರಂಪದಲ್ಲಿ ಮುಳುಗಿದೆ. ಹೀಗಿರುವಾಗ ರಂಗಾಯಣದ ಬಗ್ಗೆ ತಲೆ ಕೆಡಿಸಿಕೊಳ್ಳಲಾರದು ಎಂದೇ ರಂಗವಲಯ ತಿಳಿದಿತ್ತು. ಆದರೆ ಸರಕಾರ ಅತ್ಯಾಸಕ್ತಿಯಿಂದ ಹಳೆಮನೆಯವರನ್ನು ನೇಮಿಸುತ್ತಿದೆ, ಯಾರಿಗೂ ತಿಳಿಯದೇ.

ರಂಗಾಯಣದ ಆಡಳಿತದ ಬೆನ್ನೆಲುಬಾದ ರಂಗಸಮಾಜದ ಸದಸ್ಯರು ಸಭೆ ಸೇರಿ ನಿರ್ದೇಶಕ ಸ್ಥಾನಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಬೇಕು. ಅದರಲ್ಲಿ ಸರಕಾರ ಒಂದನ್ನು ಆಯ್ಕೆ ಮಾಡುತ್ತದೆ. ಇದು ನಡೆದು ಬಂದ ಪರಿಪಾಠ. ಇದೇ ಸೋಮವಾರ (ನ.23) ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಂಗಾಯಣದ ಭವಿಷ್ಯದ ಯೋಜನೆ ಬಗ್ಗೆ ರಂಗಸಮಾಜದ ಕಾರ‍್ಯಕಾರಿ ಸಮಿತಿ ಸಭೆ ನಡೆಯಿತು. ಸದಸ್ಯರೂ ಹಾಜರಿದ್ದರು. ಆದರೆ ಈ ಹೊಸ ನೇಮಕದ ಬಗ್ಗೆ ಪ್ರಸ್ತಾಪವಾಗಲೇ ಇಲ್ಲ.

ಸರಕಾರಕ್ಕೆ ಪರಮಾಧಿಕಾರವಿರುವುದು ನಿಜ. ಯಾವ ಪರಿಪಾಠವನ್ನಾದರೂ ಮುರಿಯಲು ಹಕ್ಕು ಇದ್ದೇ ಇದೆ. ಆದರೆ ಈ ಹೊತ್ತಿನಲ್ಲಿ ಪರಮಾಧಿಕಾರ ಬಳಕೆಯಾದದ್ದೇ ಆಶ್ಚರ್ಯ, ಅದೂ ಗುಪ್ತವಾಗಿ. ಸ್ವತಃ ಅದರ ಆಡಳಿತ ಮಂಡಳಿಯ ಸದಸ್ಯರ ಗಮನಕ್ಕೂ ಬಾರದೇ. ಅಲ್ಲಿಗೆ, ಸರಕಾರಕ್ಕೆ ತೀರಾ ಒತ್ತಡಕ್ಕೆ ಸಿಲುಕಿಸಿದ ಸಂಗತಿ ಯಾವುದಿರಬಹುದು.

ಇದೇ ಸರಕಾರಕ್ಕೆ ಚಿದಂಬರರಾವ್ ಜಂಬೆ ಅವಧಿ ಮುಗಿಸಿದ ಮೇಲೆ ಎರಡು ವರ್ಷ ರಂಗಾಯಣ ಖಾಲಿ ಹೊಡೆಯುತ್ತಿದ್ದರೂ ಮಹತ್ವದ್ದೆನಿಸಿರಲಿಲ್ಲ. ಯಾವ ರಾಜಕೀಯ ಕ್ಷೋಭೆಯಾಗಲೀ, ಪ್ರಾಕೃತಿಕ ವಿಕೋಪವಾಗಲೀ ಆಗ ಕಾಡುತ್ತಿರಲಿಲ್ಲ. ಆದರೂ, ಸಾಂಸ್ಕೃತಿಕ ವಲಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಪುರಸೊತ್ತಿರಲಿಲ್ಲ. ಬರೀ ಸೂಕ್ತರನ್ನು ಹುಡುಕುವುದರಲ್ಲೇ ಕಾಲ ಕಳೆಯಿತು. ತಮಾಷೆಯೆಂದರೆ ಆ ಹೊತ್ತಿನಲ್ಲಿ ಇದೇ ಹಳೆಮನೆಯವರು ಕಣ್ಣೆದುರುಗಿದ್ದರು. ಆದರೂ ಸರಕಾರ ಮನಸ್ಸು ಮಾಡಿರಲಿಲ್ಲ. ಅದಕ್ಕೆ ಹಳೆಮನೆಯವರು ಎಡಪಂಥೀಯರು ಎನ್ನುವುದೂ ಕಾರಣವಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಬಲಪಂಥೀಯ ವಿಚಾರಧಾರೆಯ ಸರಕಾರ, ಒಬ್ಬ ಎಡಪಂಥೀಯ ವಿಚಾರಧಾರೆಯವನನ್ನು ಉನ್ನತ ಹುದ್ದೆಗೆ ನೇಮಿಸುವುದು ನಿಜಕ್ಕೂ ಸ್ವಾಗತಾರ್ಹ. ಜತೆಗೆ ಪ್ರಜಾಪ್ರಭುತ್ವದ ಸೌಂದರ್ಯವೇ ಅದು. ಆದರೆ ಆ ಕ್ರಮ ಅತ್ಯಂತ ಮುಕ್ತ, ಪಾರದರ್ಶಕವಾಗಿರಬೇಕು. ಅಲ್ಲದೇ, ಪ್ರತಿಭೆ, ಅರ್ಹತೆಗಷ್ಟೇ ಪ್ರಾಮುಖ್ಯ ಕೊಟ್ಟಿರಬೇಕು. ರಾಜಕೀಯ ಒತ್ತಡವಾಗಲೀ, ಜಾತಿ ಕಾರಣವಾಗಲೀ, ಮಠ ಮಾನ್ಯಗಳಾಗಲೀ ಇದರ ಹಿಂದಿರಬಾರದು. ಅಂಥ ಯಾವುದೇ ಲಕ್ಷಣ ಈ ನಡೆಯಲ್ಲಿ ಇರದಿರುವುದೇ ತೀರಾ ವಿಷಾದದ ಸಂಗತಿ.

ರಾಜಕಾರಣದಲ್ಲಿ ಶತ್ರುಗಳು, ಮಿತ್ರರೂ ಸೇರುವುದೇ ಒಂದೇ ಒಂದು ನೆಲೆಯಲ್ಲಿ ಮಾತ್ರ. ಅದು ಜಾತಿ. ಈ ಬಿಂದುವಿನಲ್ಲಿ ರಾಜಕಾರಣಿಗಳು, ಮಠಗಳು, ಅಧಿಕಾರಿಗಳು, ಉದ್ಯಮಿಗಳು ಎಲ್ಲರೂ ಕೂಡುತ್ತಾರೆ. ಅಲ್ಲಿ ಯಾವ ಸಿದ್ಧಾಂತವಾಗಲೀ, ಪಕ್ಷಭೇದವಾಗಲೀ ಇರದು. ಎಲ್ಲರೂ ನಾವೇ ಎಂಬ ಬೀಜಮಂತ್ರವೊಂದೇ ಅಲ್ಲಿರುವಂಥದ್ದು. ಅದು ಪ್ರಜಾಪ್ರಭುತ್ವದಲ್ಲಿ ಸೃಷ್ಟಿಸುವ ಅಪಾಯ ಹೆಚ್ಚಿನದು.

ಇನ್ನು, ಹಳೆಮನೆಯವರು ಎಡಪಂಥೀಯ ವಿಚಾರಧಾರೆಯವರು. ಅದು ತಪ್ಪಲ್ಲ. ಅವರು ತಮ್ಮೊಳಗೆ ಇಳಿಸಿಕೊಂಡು, ಅದಕ್ಕಾಗಿ ‘ಬದುಕನ್ನು’ ತೇಯುತ್ತಾ ಇರುವವರು. ಇವರ ವಿರುದ್ಧ ನಕ್ಸಲ್ ಸಹಾನುಭೂತಿಗಳೆಂಬ ಆರೋಪವೂ ಇದೆ. 2003-04 ರಲ್ಲಿ ಭಯೋತ್ಪಾದಕ ನಿಗ್ರಹ ದಳದ ಐಜಿಪಿ ಚಿಕ್ಕೆರೂರ್ ಅವರು, ಮೈಸೂರಿನ ಪೊಲೀಸ್ ಆಯುಕ್ತರಿಗೆ ಇದೇ ಹಳೆಮನೆಯವರು ನಕ್ಸಲ್ ಚಳವಳಿಯನ್ನು ಬೆಂಬಲಿಸುತ್ತಿರುವುದರಿಂದ ಕಣ್ಣಿಡಿ ಎಂದು ಸೂಚಿಸಿದ್ದರು, ರಾಜ್ಯಪಾಲರಿಗೂ ವರದಿ ಸಂದಾಯವಾಗಿತ್ತು. ಜತೆಗೆ ಹಳೆಮನೆಯವರು, ಜಗತ್ತಿನ ನಿಷ್ಠ ಕಮ್ಯುನಿಸ್ಟರಲ್ಲಿ ನಾನೂ ಒಬ್ಬ ಎಂದು ಕೆಚ್ಚೆದೆಯಿಂದ ಹೇಳಿಕೊಳ್ಳುತ್ತಿದ್ದವರೂ ಇವರೇ.
ಇದೇ ಬಿಜೆಪಿ ಸರಕಾರವನ್ನು ಬಾಯಿಗೆ ಬಂದಂತೆ ಬೈದಿದ್ದವರು. ವಾಚಾಮಗೋಚರ ಬೈದಿದ್ದಕ್ಕೆ ಕಾರಣವಿಷ್ಟೇ. ಬಿಜೆಪಿಯವರು ಮೂಲಭೂತವಾದಿಗಳು, ಕೋಮುವಾದಿಗಳು, ಜೀವ ವಿರೋಧಿಗಳು, ಜಾತಿ-ಮತ ಒಡೆದು ರಾಜಕೀಯ ಮಾಡುವವರು. ಹೀಗೇ ನಾನಾ ಕಾರಣಗಳು.

ಈಗ ಬಿಜೆಪಿ ಸರಕಾರ ನಕ್ಸಲರನ್ನು ಸದೆ ಬಡಿಯಲು ಹೊರಟಿದೆ. ಎಡಪಂಥೀಯ ವಿಚಾರಧಾರೆಯವರನ್ನು ಸದಾ ಹಣಿಯಲು ಯತ್ನಿಸುತ್ತಿರುತ್ತದೆ. ಹಳೆಮನೆಯವರಂಥವರು ಆರೋಪಿಸುವಂತೆಯೇ ಅದು ಕೋಮುವಾದಿಯಾಗಿಯೇ ಇದೆ. ಅದೇನೂ ತನ್ನನ್ನು ಬದಲಾಯಿಸಿಕೊಂಡಿಲ್ಲ. ಆದರೆ, ಹಳೆಮನೆಯವರು ಹಾಗೆ ಬದಲಾಗದ ಸರಕಾರದಲ್ಲೇ ಅಧಿಕಾರ ಅನುಭವಿಸಲು ಹೊರಟಿದ್ದಾರೆ. ‘ಇದು ಬಯಸದೇ ಬಂದ ಭಾಗ್ಯ’ ಎಂದಿದ್ದಾರೆ. ಹಾಗಾದರೆ ಇಲ್ಲಿ ಬಂಡವಾಳಶಾಹಿಗಳು ಯಾರು ? ಅಧಿಕಾರಕ್ಕಾಗಿ ಸೈದ್ಧಾಂತಿಕ ರಾಜಿಗೆ ಮುಂದಾದ ಹಳೆಮನೆಯವರು ಬಂಡವಾಳಶಾಹಿಯೇ ? ಬಂಡವಾಳಶಾಹಿಯೆಂದು ಆರೋಪಕ್ಕೆ ಸದಾ ಒಳಗಾಗುವ ಸರಕಾರವೇ ?
ಇನ್ನು ಉಳಿದಿರುವುದು ತ್ಯಾಗದ ಪ್ರಶ್ನೆ. ಯಾವಾಗಲೂ ಆದರ್ಶವಾದಿಗಳು ಸಮಾಜದ ಉನ್ನತಿಗೆ ಯಾವ ರೀತಿಯ ತ್ಯಾಗಕ್ಕಾದರೂ ಸಿದ್ಧವಿರುತ್ತಾರಂತೆ. ನಮ್ಮ ಹಳೆಮನೆಯವರು ರಂಗಾಯಣ ಉಳಿವಿಗಾಗಿ ಅಂಥದೊಂದು ತ್ಯಾಗಕ್ಕೆ ಮುಂದಾದರೆ ? ಇದು ಮತ್ತೊಂದು ಅಚ್ಚರಿ. ಆದರೆ, ಈ ನಡೆಯಲ್ಲಿನ ಸೂಕ್ಷ್ಮತೆ ‘ಬುದ್ಧಿಜೀವಿ‘ಗಳಿಗಷ್ಟೇ ತೋರೀತು. ಜನ ಸಾಮಾನ್ಯರ ಕಣ್ಣಿಗೆ ಢಾಳು ಢಾಳಾಗಿ ಅವಕಾಶವಾದಿತನವಷ್ಟೇ ಕಾಣುತ್ತದೆ.

ಎಂಥಾ ವಿಚಿತ್ರ ನೋಡಿ. ಸಾಮಾಜಿಕ ಸಮಾನತೆಗೆ ಹೋರಾಟ ನಡೆಸುತ್ತಾ ನಕ್ಸಲರು ಕಾಡಿನಲ್ಲಿ ತಲೆ ಮರೆಸಿಕೊಂಡು, ಕಷ್ಟ ಪಡುತ್ತಾ ಹೋರಾಟದಲ್ಲಿ ತೊಡಗಿರುತ್ತಾರೆ. ಎಲ್ಲಿ ಕಂಡರೂ ನಕ್ಸಲ್ ಜಿಂದಾಬಾದ್ ಎಂದೆಲ್ಲಾ ಕೂಗುತ್ತಿರುತ್ತಾರೆ. ಆದರೆ, ಅವರ ಥಿಂಕ್ ಟ್ಯಾಂಕ್ ಗಳಲ್ಲಿ ಬಹುತೇಕರು, ಹೀಗೇ ನಮ್ಮ ಹಳೆಮನೆಯವರ ಹಾಗೆ, ಅಧಿಕಾರದ ಕುರ್ಚಿಯಿಂದ ಕುರ್ಚಿಗೆ ಹಾರುತ್ತಿರುತ್ತಾರೆ.

ಎಷ್ಟರ ಮಟ್ಟಿಗೆ ಎಂದರೆ, ಒಂದು ಅವಧಿಯನ್ನೂ ಅವರು ಅಧಿಕಾರವಿಲ್ಲದೇ ಕಳೆಯಲಾರರು. ಭಾರತೀಯ ಭಾಷಾ ಸಂಸ್ಥಾನದಿಂದ ನಿವೃತ್ತರಾಗಿ ಕೆಲವೇ ತಿಂಗಳೂ ಕಳೆದಿಲ್ಲ. ಅಷ್ಟರಲ್ಲಿ ರಂಗಾಯಣ ನಿರ್ದೇಶಕರ ಹುದ್ದೆಯನ್ನು ಯಾವ್ಯಾವುದೋ ಕಾರಣದಿಂದ ಗಿಟ್ಟಿಸಿಕೊಂಡವರು ಲಿಂಗದೇವರು ಹಳೆಮನೆ. ಸಕಾಲಕ್ಕೆ ನಿವೃತ್ತಿ ಪಿಂಚಣಿ, ಜತೆಗೆ ಗೌರವ ಹುದ್ದೆಗಳನ್ನು ಅಲಂಕರಿಸುತ್ತಲೇ ಇರುತ್ತಾರೆ ಇಂಥವರು. ಆದರೆ “ಹೋರಾಟ ಎಂದಿಗೂ ಸಾಯಬಾರದು” ಎನ್ನುತ್ತಾ ಕಾಡಿನಲ್ಲಿದ್ದವರಿಗೆ ಅಪ್ಪಣೆ ಹೊರಡಿಸುತ್ತಲೇ ಇರುತ್ತಾರೆ ಇಂಥವರು. ನನಗೆ ಇಂಥ ಬಹು ವರ್ಣದ ಮಂದಿಯನ್ನು ಒಪ್ಪುವುದಿಲ್ಲ.

ಇದೇ ಬಂಡವಾಳಶಾಹಿಗಳನ್ನು ವ್ಯಾಪಾರಿಗಳೆಂದೂ ಕರೆಯುತ್ತೇವೆ. ಅವರಿಗೆ ಪಕ್ಷ ನಿಷ್ಠೆ ಇರುವುದಿಲ್ಲ. ಆಡಳಿತಕ್ಕೆ ಬರುವ ಪಕ್ಷಗಳಿಗೇ ಅವರ ನಿಷ್ಠೆ. ಅಂಥವರು ಯಾವಾಗಲೂ ಆಡಳಿತ ಪಕ್ಷದವರು.

ಎಡಪಂಥೀಯ ವಿಚಾರಧಾರೆಯ ಹಳೆಮನೆಯವರಿಗೆ ಕೇಂದ್ರದಲ್ಲಿರುವ ಯುಪಿಎ ಸರಕಾರವು, ತನ್ನ ಇಂದಿರಾಗಾಂಧಿ ಕಲಾ ಕೇಂದ್ರದ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕರಾಗಿಯೂ (ಕಚೇರಿ ಬೆಂಗಳೂರಿನಲ್ಲಿದೆ) ಆಯ್ಕೆ ಮಾಡಿತ್ತಂತೆ. ಇನ್ನೇನು ಅಧಿಕಾರ ವಹಿಸಿ ಕೊಳ್ಳುವಷ್ಟರಲ್ಲಿ ರಾಜ್ಯ ಸರಕಾರ ತನ್ನ ಆಹ್ವಾನ ನೀಡಿದೆ. ತಮ್ಮ ಊರಲ್ಲೇ ಇರುವ ರಂಗಾಯಣವೇ ತಮ್ಮ ಆಯ್ಕೆ ಎಂದು ಹಳೆಮನೆಯವರು ಹೇಳಿದ್ದಾರೆ.

ಅಲ್ಲಿಗೆ ಎಡಪಂಥೀಯರನ್ನು ಹೊರಗಿಟ್ಟ ಯುಪಿಎ ಸರಕಾರವೂ, ಅದೇ ಎಡಪಂಥೀಯರನ್ನು ಸಾಂಪ್ರದಾಯಿಕ ಸೈದ್ಧಾಂತಿಕ ಎದುರಾಳಿ ಎಂದು ಪರಿಗಣಿಸುವ ಬಲಪಂಥೀಯ ನೆಲೆಯ ಬಿಜೆಪಿ ಸರಕಾರವೂ ಹತ್ತಿರವೇ ಎನ್ನುವುದು ಮತ್ತೊಂದು ಅಚ್ಚರಿಯಲ್ಲದೇ ಮತ್ತೇನು ? (ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)

Advertisements

2 thoughts on “ಕೋಮುವಾದಿ ಸರಕಾರಕ್ಕೆ ಚಪ್ಪಾಳೆ ತಟ್ಟಿದ ಲಿಂಗದೇವರು ಹಳೆಮನೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s