ಬಹಳ ದಿನಗಳಾಯ್ತು ಬ್ಲಾಗಿನ ಕಡೆ ಮುಖ ಹಾಕಿರಲಿಲ್ಲ. ಬದಲಾಗುವ ಸನ್ನಿವೇಶದಲ್ಲಿ ಹೊಸದೊಂದು ರೀತಿಯಲ್ಲಿ ಏನಾದರೂ ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದೆ. ಆ ದಿಕ್ಕಿನಲ್ಲಿ ಕಾರ್ಯ ಮಗ್ನನಾಗಿದ್ದೆ. ಬ್ಲಾಗ್ ಹೊರತಾದ ಒಂದೆರಡು ಅಸೈನ್ ಮೆಂಟಗಳಿದ್ದವು. ಅದರಲ್ಲಿ ತೊಡಗಿಕೊಂಡಿದ್ದೆ. ಅದೂ ಮುಕ್ಕಾಲುವಾಸಿ ಮುಗಿದಿದೆ.

ಬ್ಲಾಗ್ ಅನ್ನು ಒಂದು ಸದ್ದುದ್ದೇಶಕ್ಕೂ ಈಡೇರಬೇಕು ಎಂದು ವಾದಿಸುತ್ತಾ ಬಂದವನಲ್ಲಿ ನಾನೂ ಒಬ್ಬ. ಈ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಗೆ ಅಡಿಯಿಡುತ್ತಿದ್ದೇನೆ.

ಇದು ನನ್ನ ಹಲವು ದಿನಗಳ ಕನಸೂ ಸಹ. ನನ್ನ ಕ್ಷೇತ್ರ ಪತ್ರಿಕೋದ್ಯಮ. ಈ ಕ್ಷೇತ್ರದತ್ತ ಒಲವಿಟ್ಟು ಬರುವವರ ಸಂಖ್ಯೆಯೂ ದೊಡ್ಡ ಪಾಲಿದೆ. ಇವತ್ತು ಪತ್ರಿಕೋದ್ಯಮ ತರಗತಿಗಳಲ್ಲಿ ಪ್ರಾಯೋಗಿಕ ನೆಲೆಯ ಜ್ಞಾನ ಸಿಗುತ್ತಿರುವುದು ತೀರಾ ಕಡಿಮೆ. ಇದರೊಂದಿಗೆ ಪತ್ರಿಕೆಗಳಲ್ಲೂ ಹೊಸಬರಿಗೆ ಬರೆಯಲು ಅವಕಾಶ ಸಿಗುತ್ತಿರುವುದೂ ಅಪರೂಪವೇ. ಈ ಆರೋಪ ಇಂದಿನದಲ್ಲ ; ಬಹಳ ಹಿಂದಿನದು.

ಅನುಭವವಿಲ್ಲದೇ ಕೆಲಸ ಸಿಗದು, ಕೆಲಸ ಸಿಗದೇ ಅನುಭವ ದೊರಕದು ಎಂಬ ಮಾತೂ ಸಹ ಬಹಳ ಹಿಂದಿನದು. ಹೋಟೆಲ್ ವೊಂದರಲ್ಲಿ ಸಪ್ಲೆಯರ್ ಕೆಲಸ ಪಡೆಯಲು ಹೋದವನಿಗೆ ಮಾಲೀಕ ಕೇಳಿದ ಮೊದಲ ಪ್ರಶ್ನೆ…”ಎಲ್ಲಾದ್ರೂ ಕೆಲಸ ಮಾಡಿದ್ಯಾ, ಅನುಭವವಿದೆಯಾ?’, ಅದಕ್ಕೆ ಆತ “ಇಲ್ಲ, ಇದೇ ಮೊದಲು’ ಎಂದ. ಮತ್ತೆ, ಸಪ್ಲೆಯರ್ ಕೆಲಸ ಕೇಳ್ತಿದ್ಯಾ, ಅದರ ಬಗ್ಗೆ ಗೊತ್ತಿದೆಯಾ ಎಂದು ಪ್ರಶ್ನೆ ಹಾಕಿದ. ಅದಕ್ಕೆ ಕೆಲಸ ಬಯಸಿದವ, “ಮಾಡ್ತೀನಿ ಎನ್ನೋ ವಿಶ್ವಾಸ. ನೋಡಿ ಕಲಿತುಕೊಳ್ತೇನೆ” ಎಂದು ಹೇಳಿದ.

ಇದು ಸಪ್ಲೆಯರ್ ನ ಕಥೆ. ಇಲ್ಲಿ ಮೂರು ಮಂದಿ ತರಹದ ಮಾಲೀಕರಿರುತ್ತಾರೆ. ಒಂದು ವರ್ಗವೆಂದರೆ…”ಸರಿ, ನೋಡೋಣ. ಒಂದು ವಾರ ಕೆಲಸ ನೋಡ್ತೀನಿ, ಆಮೇಲೆ ಸಂಬಳ ಫಿಕ್ಸ್. ಕೆಲಸ ಬರದೇ ಇದ್ರೆ ಕಳಿಸ್ತೀನಿ’ ಅಂತಾರೆ. ಎರಡನೇ ವರ್ಗದವರು, “ಅನುಭವ ಇಲ್ಲದೇ ಇದ್ರೆ ನಿನ್ನಂಥವನು ತೆಗೆದುಕೊಂಡು ನಾನೇನು ಮಾಡೋದು ? ಬೇರೆ ಹೋಟೆಲ್ ನಲ್ಲಿ ಹುಡುಕು, ನಮ್ಮಲ್ಲಿಲ್ಲ” ಎಂದು ಹೇಳಿ ಬಿಡೋರು. ಅಂದರೆ ಬೇರೆಹೋಟೆಲ್ ನವನಿಗೆ ಆ ಕಷ್ಟ ವರ್ಗವಾದರೆ ಸಾಕು.

ಕೊನೆ ವರ್ಗದವರು, “ನೋಡಯ್ಯ, ಸಪ್ಲೆಯರ್ ಕೆಲಸ ಕಷ್ಟ. ಮೊದಲೇ ಏನೂ ಗೊತ್ತಿಲ್ಲ ಅಂತೀದ್ದೀಯಾ, ಸ್ವಲ್ಪ ಓದಿದೀನಿ ಅಂತ ಬೇರೆ ಪ್ರವರ ನಿಂದು. ಒಂದು ಕೆಲಸ ಮಾಡು, ಒಂದೆರಡು ತಿಂಗಳು ಕ್ಲೀನಿಂಗೋ, ಸ್ಟಾಲೋ, ತಿಂಡಿ ಅಸಿಸ್ಟೆಂಟೋ ಕೆಲಸ ಮಾಡು. ಸಪ್ಲೆಯರ್ ಕೆಲಸ ತಿಳಿದುಕೊ, ನಂತರ ಕೆಲಸ ನೀಡೋಣ’ ಎಂದು ಹೇಳಿ ಕೆಲಸ ಕೊಡ್ತಾನೆ. ಮೊದಲ, ಮೂರನೇ ವರ್ಗದವರು ಪರವಾಗಿಲ್ಲ, ಹಾಗೆಂದು ಎರಡನೇ ವರ್ಗದವರನ್ನೂ ದೂರುವಂತಿಲ್ಲ.

ಇಂದು ಇದು ಬರಿಯ ಹೋಟೆಲ್ ನವನ ಕಥೆಯಲ್ಲ. ಎಲ್ಲ ಕ್ಷೇತ್ರಗಳದ್ದು…ನಮ್ಮ ಪತ್ರಿಕೋದ್ಯಮದ್ದೂ ಸಹ. ಸುದ್ದಿಮನೆಗಳಲ್ಲಿರುವ ಮಂದಿ ವಿದ್ಯಾರ್ಥಿ ಸಮುದಾಯವನ್ನು ಒಳಗೊಳ್ಳುವ ಕೆಲಸವೇನಾದರೂ ಮಾಡಬೇಕು ಎಂಬುದು ನನ್ನ ಪ್ರತಿಪಾದನೆಯೂ ಸಹ. ಅವರಿಗೆ ಒಂದಿಷ್ಟು ತರಗತಿಗಳಲ್ಲಿ ಸಿಗದ ಜ್ಞಾನವನ್ನು ಕೊಡಲು ಸಾಧ್ಯವೇ ಎಂಬುದೂ ನನ್ನ ಆಲೋಚನೆ.

ಇದರೊಂದಿಗೇ ಹೊಸ ತಲೆಮಾರಿನ ಹುಡುಗರ ಆಲೋಚನಾ ಪರಿಯನ್ನು ಅರ್ಥೈಸಿಕೊಳ್ಳುತ್ತಲೇ, ನನಗೆ ವಯಸ್ಸಾಗದಂತೆ ನೋಡಿಕೊಳ್ಳೋದು ಎಚ್ಚರಿಕೆಯೂ ಸಹ. ಹೀಗಾಗಿಯೇ ಒಂದಿಷ್ಟು ಹೊತ್ತು ಇದಕ್ಕೆ ಯೋಜಿಸಲು ಹೊರಟಿದ್ದೇನೆ. ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು, ಪತ್ರಕರ್ತ ಸಮುದಾಯವನ್ನು ಮುಂದಿಟ್ಟುಕೊಂಡು ನನ್ನ ಗೆಳೆಯರು ಬ್ಲಾಗ್ ಶುರು ಮಾಡುತ್ತಿದ್ದಾರೆ. ಅದಕ್ಕೆ ನನ್ನದೂ ಕೊಡುಗೆ ಕೊಡುವ ಉದ್ದೇಶ.

ನ. 1 ರಿಂದ ಹೊಸ ಬ್ಲಾಗ್ ಶುರು. ಹೆಸರು www.5wonly1h.blogspot.com . ಒಮ್ಮೆ ಭೇಟಿಕೊಡಿ.