ಹೀಗೆ ಎಲ್ಲದಕ್ಕೂ ಪುಟ್ಟ ಪುಟ್ಟ ಇತಿಹಾಸ ಹೊಂದಿರುವ ಸಂಸತ್ತು ಒಂದು ನೆಲೆಯಲ್ಲಿ ಬರಿಯ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಛ ಕಾರ್ಯ ಸಾಧನೆಯ ನೆಲವಾಗಿಯಷ್ಟೆ ಅಲ್ಲ, ನಮ್ಮ ಸಂಸ್ಕೃತಿ, ನಮ್ಮ ಮಾದರಿಗಳ ಷೋಕೇಸ್ ಸಹಿತ ಹೌದು. ಸಂಸತ್ತಿನ ಪ್ರಾಕಾರದಲ್ಲಿ ಅಥವಾ ಆವರಣದ ಸುತ್ತ ಮುತ್ತಲೆಲ್ಲಾ ನಾವು ಮಾದರಿ ಎಂದುಕೊಂಡವರೆಲ್ಲಾ ತಣ್ಣಗೆ ವಿರಾಜಮಾನವಾಗಿದ್ದಾರೆ. ಒಂದರ್ಥದಲ್ಲಿ ಇದು ಬಯಲು ಮ್ಯೂಸಿಯಂ.

ಸಂಸತ್ತಿನ ಐದನೇ ಗೇಟ್‌ನ ಎದುರು ಚಂದ್ರಗುಪ್ತ ಮೌರ್ಯನ ಪುತ್ಥಳಿಯಿದೆ. 0.74 ಮೀಟರ್ ಉದ್ದದ ಕಂಚಿನ ಪುತ್ಥಳಿಯನ್ನು ರಚಿಸಿದವರು ಹಿದಾ ಸೆಲ್ಗಮಾನ್. ಕ್ರಿ.ಪೂ 321 ರಿಂದ 296 ರವರೆಗೆ ಆಡಳಿತ ನಡೆಸಿದ ಈತ ಮೌರ್ಯ ವಂಶದ ಸ್ಥಾಪಕ. ಹೀಗೆ ಕಣ್ಣರಳಿಸುತ್ತಾ ಸೆಂಟ್ರಲ್ ಹಾಲ್‌ಗೆ ಪ್ರವೇಶಿಸುವ ಒಂದನೇ ಗೇಟಿನ ಬಳಿ ಬಂದರೆ ಮಹಾತ್ಮಾಗಾಂಧಿಯ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಅಮೃತಶಿಲೆಯ ಪುತ್ಥಳಿ ನಿಮ್ಮನ್ನು ಸ್ವಾಗತಿಸುತ್ತದೆ. ಜಿ. ಕೆ. ಮಹಾತ್ರೆ ರೂಪಿಸಿದ ಪುತ್ಥಳಿ 1966 ರಲ್ಲಿ ಸ್ಥಾಪನೆಯಾದದ್ದು. ದೇಶದ ದೊಡ್ಡ ಅಧ್ಯಾತ್ಮ ಗುರು ಅರವಿಂದ್ ಘೋಷ್ ಸಹ ಇರುವುದು ಇಲ್ಲೇ ಹತ್ತಿರದಲ್ಲಿ. ಅದೂ ಅಮೃತಶಿಲೆಯದ್ದು. ಲೋಕಸಭೆ ಸ್ಪೀಕರ್ ಆಗಿದ್ದ ಕರ್ನಾಟಕದ ಕೆ.ಎಸ್. ಹೆಗ್ಡೆ ಇದನ್ನು ಅನಾವರಣಗೊಳಿಸಿದ್ದು 1970ರಲ್ಲಿ. ಹದಿನಾರು ಅಡಿಯ ಕುಳಿತ ಗಾಂಧಿಯ ಪ್ರತಿಮೆ ಕಾಣಲು ಗೇಟ್ ನಂ. 1 ಬಳಿ ಬರಬೇಕು. ರಾಮ್ ಸುತಾರ್ ರಚಿಸಿದ ಕಂಚಿನ ಪ್ರತಿಮೆಯನ್ನು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮ ಅನಾವರಣಗೊಳಿಸಿದ್ದು 1993 ರ ಅಕ್ಟೋಬರ್ 2 ರಂದು.
ಪಂಡಿತ್ ಮೋತಿಲಾಲ್ ನೆಹರೂ ಇಲ್ಲಿ ನೆಲೆಯಾಗಿದ್ದು 1963 ರಲ್ಲಿ. ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್, 3.75 ಮೀಟರ್‌ನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಡಿ. ಪಿ. ರಾಯ್‌ಚೌಧರಿ ಮೂಡಿಸಿದ ಪ್ರತಿಮೆ ಸಂಸತ್ ಮಾರ್ಗದ ಕಡೆಯಿಂದ ಪ್ರವೇಶಿಸುವಲ್ಲಿ ಇದೆ. ಹಾಗೆಯೇ ಒಂದನೇ ಗೇಟ್ ನ ಬಳಿ ರಾಮ್ ಸುತಾರ್ ರಚನೆಯ 16 ಅಡಿಯ ಆಳೆತ್ತರದ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಂಚಿನ ಪ್ರತಿಮೆ 1995 ರ ಗಣರಾಜ್ಯೋತ್ಸವ ದಿನ ಅನಾವರಣಗೊಂಡಿತು. ಈ ಗಳಿಗೆಗೆ ಸಾಕ್ಷಿಯಾಗಿದ್ದು ದಕ್ಷಿಣ ಆಫ್ರಿಕಾದ ಹೋರಾಟಗಾರ ನೆಲ್ಸನ್ ಮಂಡೇಲಾ. ಇದೊಂದು ವಿಶೇಷ.

ಲೋಕಸಭೆ ಆವರಣದಲ್ಲಿರುವ ಪ್ರಧಾನಮಂತ್ರಿ ಕಚೇರಿ ಬಳಿ ಬಂದರೆ, ನಿಮ್ಮನ್ನು ಮಾತನಾಡಿಸುವವರು ನೇತಾಜಿ ಸುಭಾಷ್ ಚಂದ್ರ ಬೋಸ್. ಕಾರ್ತಿಕ್ ಚಂದ್ರಪೌಲ್ ರಚಿಸಿದ ಕಂಚಿನ ಪ್ರತಿಮೆ 1997 ರಲ್ಲಿ ನೆಲೆಗೊಂಡಿತು. ಹೀಗೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ 366ಮೀಟರ್‌ನದ್ದು. ಬಿ.ವಿ. ವಾಗ್ ರೂಪಿಸಿದ ಈ ಪ್ರತಿಮೆ ಲೋಕಸಭೆಗೆ ಹೋಗುವ ದಾರಿಯಲ್ಲೇ ಸಿಗುತತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ 1967 ರಲ್ಲೇ ಅನಾವರಣಗೊಳಿಸಿದರು. ಕಂಕುಳಲ್ಲಿ ಸಂವಿಧಾನ ಹಿಡಿದು ಭವಿಷ್ಯದತ್ತ ತೋರ‍್ಬೆರಳು ತೋರಿಸುತ್ತಿರುವ ಅಂಬೇಡ್ಕರ್, ದಾರ್ಶನಿಕನಾಗಿ ತೋರುತ್ತಾರೆ. ಲೋಕಸಭೆಗೆ ಹೊರ ಆವರಣಕ್ಕೆ ಬರುವಲ್ಲಿ ಜಗಜೀವನರಾಂರ 9 ಅಡಿಯ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಸ್ವಾತಂತ್ರ ಹೋರಾಟಗಾರರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರ 16 ಅಡಿಯ ಕಂಚಿನ ಪ್ರತಿಮೆ ಗೇಟ್ ನಂ. 1 ರಲ್ಲಿ, ಲೋಕಸಭೆ ಹೊರ ಪಡಸಾಲೆಯ ಬಳಿ 9 ಅಡಿಯ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ರ ಪ್ರತಿಮೆ, ಪಂಡಿತ್ ರವಿಶಂಕರ್ ಶುಕ್ಲಾ, ವೈ.ಬಿ. ಚವಾಣ್, ಕುಮಾರಸ್ವಾಮಿ ಕಾಮರಾಜ್‌ರ ಪ್ರತಿಮೆ, ಹತ್ತಿರವೇ ಇರುವ ಗೇಟ್ ನಂ. 5 ರ ಮೂಲಕ ಒಳ ಪ್ರವೇಶಿಸುವಲ್ಲಿ ೧೬ ಅಡಿಯ ಇಂದಿರಾಗಾಂಧಿಯ ಕಂಚಿನ ಪ್ರತಿಮೆ ಅನಾವರಣಗೊಂಡಿವೆ. ಹಾಗೆಯೇ ಪ್ರೊ. ಎನ್.ಜಿ. ರಂಗ ಸಹ ಗೇಟ್ ನಂ. 4 ರ ಮೂಲಕ ಲೋಕಸಭೆ ಪಡಸಾಲೆಗೆ ಬರುವಲ್ಲಿ ರಾರಾಜಿಸುತ್ತಿದ್ದಾರೆ.

ಇದು ಪ್ರತಿಮೆ-ಪುತ್ಥಳಿಗಳ ಕಥೆ. ಅದರಂತೆಯೇ ರಾಜ್ಯಸಭೆಯ ಒಳಗೆ ಮತ್ತು ಪಡಸಾಲೆಯಲ್ಲಿ ಡಾ.ಎ ಸ್. ರಾಧಾಕೃಷ್ಣನ್, ಡಾ. ಜಾಕಿರ್ ಹುಸೇನ್, ಎಂ. ಹಿದಾಯಿತುಲ್ಲಾ, ವಿ. ವಿ. ಗಿರಿ, ಬಿ. ಡಿ. ಜತ್ತಿ, ಜಿ. ಎಸ್. ಪಾಠಕ್, ಆರ್. ವೆಂಕರಾಮನ್, ಡಾ. ಶಂಕರದಯಾಳ್ ಶರ್ಮರ ತೂಗುಪಟ ವಿರಾಜಿಸಿದ್ದರೆ, ಲೋಕಸಭೆ ಮತ್ತು ಪಡಸಾಲೆಯಲ್ಲಿ ವಿಠ್ಠಲ್‌ಬಾಯಿ ಜಿ. ಪಟೇಲ್, ಫೆಡ್ರ್ವಿಕ್ ವ್ಹೈಟ್, ಮೊಹಮ್ಮದ್ ಯಾಕುಬ್, ಸರ್. ಇಬ್ರಾಹಿಂ ರಹೀಂತುಲ್ಲಾ, ಆರ್. ಷಣ್ಮುಖಂ ಚೆಟ್ಟಿ, ಸರ್. ಅಬ್ದುಲ್ ರಹೀಂ, ಜಿ. ವಿ. ಮಾವಳಂಕರ್,

ನಮ್ಮನ್ನು ಕಾಯುತ್ತಿದ್ದಾರೆ, ನಮ್ಮ ಪ್ರತಿ ಚಟುವಟಿಕೆಯ ಮೇಲೂ ಆತ್ಮಸಾಕ್ಷಿಯಂತೆ !