ಸಂಸದೀಯ ಜ್ಞಾನಪೀಠದ ಪಥ ತಿಳಿದ ಮೇಲೆ ಸ್ವಲ್ಪ ಸಂಸತ್ತಿನೊಳಗಿನ ಪದ್ಧತಿ ಕುರಿತು ಕಣ್ಣು ಹಾಯಿಸುವಂತದ್ದಿದೆ. ಇಡೀ ಜಗತ್ತು ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿರುವಾಗ ಸಂಸತ್ತೂ ಸುಮ್ಮನಿರಲಿಲ್ಲ. ಅದರೊಳಗಿನ ವ್ಯವಸ್ಥೆಯೆಲ್ಲಾ ತಾಂತ್ರಿಕ ರೂಪ ಪಡೆದುಕೊಂಡಿತು. ಇದರ ಮಹತ್ವದ ಘಟ್ಟವೆಂದರೆ ಸಂಸತ್ತಿನ ಕಲಾಪಗಳೆಲ್ಲಾ ಸಾರ್ವಜನಿಕವಾಗಿ ಪ್ರಸಾರವಾಗತೊಡಗಿದ್ದು.

1989 ರವರೆಗೆ ಸಂಸತ್ತಿನಲ್ಲಿ ನಡೆವ ಕಲಾಪಗಳನ್ನು ನೋಡುವ ಭಾಗ್ಯ ಇರಲಿಲ್ಲ. ಆ ಕಲಾಪಗಳ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಓದಿದರೆ ಮುಗಿದಂತೆ. ನಮ್ಮ ಸಂಸದರು ಅಲ್ಲಿ ಎಷ್ಟು ಹೊತ್ತು ಮಾತನಾಡಿದರು ? ಏನೆಲ್ಲಾ ಮಾತನಾಡಿದರು? ಯಾವುದೂ ತಿಳಿಯುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬಂದಷ್ಟೇ ವರದಿ. ದೂರದರ್ಶನದ ವಾರ್ತೆಯಲ್ಲಿ ಬರುವ ಕೆಲವು ತುಣುಕುಗಳಷ್ಟೇ.

ಇಂಥ ಸಂದರ್ಭದಲ್ಲಿ ಸಂಸತ್ತಿನ ಕಲಾಪ ಸಾರ್ವಜನಿಕಗೊಳಿಸಬೇಕೆಂಬ ಪ್ರಯತ್ನ ಶುರುವಾಗಿದ್ದು 1989 ರಲ್ಲಿ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕಲಾಪಗಳು ಪಾರದರ್ಶಕವಾಗಿರಲಿ ಎಂಬ ಸದಾಶಯವೂ ಇದರ ಬೆನ್ನಿಗಿತ್ತು. 1989 ರ 20 ರಂದು ಎರಡೂ ಸಭೆಗಳ (ಲೋಕಸಭೆ-ರಾಜ್ಯಸಭೆ)ನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣವನ್ನು ನೇರ ಪ್ರಸಾರ ಮಾಡಲಾಯಿತು. ನಂತರ ಈ ಪರಂಪರೆ ಮುಂದುವರಿಯಿತು.

1992 ರಲ್ಲಿ ಹಲವು ಉದ್ದೇಶಗಳಿಂದ ಶ್ರವ್ಯ-ದೃಶ್ಯ ಘಟಕವನ್ನು ಆರಂಭಿಸಲಾಯಿತು. ಎಲ್ಲವನ್ನೂ ಧ್ವನಿಮುದ್ರಿಸಿದ, ಚಿತ್ರೀಕರಿಸಿದ ಧ್ವನಿಸುರುಳಿಗಳನ್ನು ಸಂಗ್ರಹಿಸಿಡುವ, ಸದಸ್ಯರು ಕೇಳಿದ್ದನ್ನು ಒದಗಿಸುವ ಕೆಲಸ ಈ ಘಟಕಕ್ಕೆ ನೀಡಲಾಯಿತು. ಜತೆಗೆ ಕಲಾಪಗಳ ಪ್ರಸಾರಕ್ಕೆ ಸಂಬಂಧಿಸಿ 1994 ರಲ್ಲಿ ಸಂಸತ್ ಭವನದಲ್ಲಿ ಲೋ ಪವರ್ ಟ್ರಾನ್ಸ್‌ಮಿಟರ್‌ ಗಳನ್ನು ಅಳವಡಿಸಲಾಯಿತು. ಇದರಿಂದ ಸುತ್ತಲಿನ 10-25 ಕಿ. ಮೀ ವರೆಗೆ ನೇರ ಪ್ರಸಾರ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದ ಕ್ರಮೇಣ 1994 ರ ಡಿಸೆಂಬರ್ 7 ರ ನಂತರ ದೇಶಾದ್ಯಂತ ದೂರದರ್ಶನ ವಾಹಿನಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪಗಳನ್ನು ನೇರ ಪ್ರಸಾರ ಮಾಡಲಾಯಿತು. ಈ ವಾರ ಲೋಕಸಭೆಯ ಕಲಾಪ ಪ್ರಸಾರವಾದರೆ, ಮುಂದಿನ ವಾರ ರಾಜ್ಯಸಭೆಗೆ ಕಲಾಪಕ್ಕೆ ಮೀಸಲು.

2003 ರಲ್ಲಿ ಡಿಡಿ ನ್ಯೂಸ್ ವಾಹಿನಿ ಆರಂಭವಾದ ಮೇಲೆ, ಎರಡೂ ಸಭೆಗಳ ಪ್ರಶ್ನೋತ್ತರ ಕಲಾಪವನ್ನು ಏಕಕಾಲಕ್ಕೆ ಪ್ರಸಾರ ಮಾಡುವ ಮೂಲಕ ಇತಿಹಾಸ ಬರೆಯಲಾಯಿತು. ಆಕಾಶವಾಣಿ ಮತ್ತು ದೂರದರ್ಶನದ ನಡುವಿನ ಸಮನ್ವಯತೆಯಿಂದ ಕಲಾಪದ ಪ್ರಮುಖಾಂಶ ಜನರಿಗೆ ತಲುಪಲು ಸಾಧ್ಯವಾಯಿತು. ದೂರದರ್ಶನದಲ್ಲಿ ಲೋಕಸಭೆಯ ಕಲಾಪ ಪ್ರಸಾರವಾಗುವ ವಾರ, ಆಕಾಶವಾಣಿ ರಾಜ್ಯಸಭೆಯತ್ತ ದೃಷ್ಟಿ ನೆಟ್ಟಿರುತ್ತದೆ. ಹಾಗೆಯೇ ನಂತರದ ವಾರ ಅದರ ವಿರುದ್ಧ.

2004 ಡಿಸೆಂಬರ್ 14 ಕ್ಕೆ ಪ್ರಜಾಪ್ರಭುತ್ವಕ್ಕೂ ಐತಿಹಾಸಿಕ ದಿನ ಹಾಗೂ ಸಂಸತ್ತಿನ ಆಧುನಿಕ ವ್ಯವಸ್ಥೆಗೂ ಮಹತ್ವದ ದಿನ. ಪ್ರಸಾರ ಭಾರತಿ ಮತ್ತು ಲೋಕಸಭೆ ಪ್ರಯತ್ನದ ಫಲವಾಗಿ ಅಂದು ಎರಡು ಪ್ರತ್ಯೇಕ ವಾಹಿನಿ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಪ್ರಸಾರ ಮಾಡಲೆಂದೇ ಹುಟ್ಟಿಕೊಂಡವು.

ರಾಜ್ಯಸಭೆಯ ಸಭಾಪತಿ ಉಪ ರಾಷ್ಟ್ರಪತಿಯವರು ರಾಜ್ಯಸಭೆ ವಾಹಿನಿಗೆ ಚಾಲನೆ ಕೊಟ್ಟರೆ, ಲೋಕಸಭೆಯ ಸ್ಪೀಕರ್ ಲೋಕಸಭೆಯ ವಾಹಿನಿಗೆ ಹಸಿರು ನಿಶಾನೆ ತೋರಿದರು. ಇಂಥದೊಂದು ಕಾರ‍್ಯಕ್ರಮಕ್ಕೆ ಮತ್ತೆ ಸಂಸತ್ತಿನ ಸೆಂಟ್ರಲ್ ಹಾಲ್ ಸಾಕ್ಷಿಯಾಯಿತು. ಹೀಗೆ ಅತ್ಯಾಧುನಿಕಗೊಂಡ ಸಂಸತ್ತಿನಲ್ಲಿ ನಡೆಯುವ ಕಲಾಪಗಳನ್ನೆಲ್ಲಾ ಚಿತ್ರೀಕರಿಸಲು ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಂಟೂ ಕ್ಯಾಮೆರಾಗಳನ್ನು ಪ್ರೊಡಕ್ಷನ್ ಘಟಕದಲ್ಲಿರುವ ವ್ಯವಸ್ಥೆ ನಿಯಂತ್ರಿಸುತ್ತದೆ. ಅಲ್ಲಿಗೆ ನಮ್ಮ ಸಂಸದರು, ಚುನಾಯಿತ ಪ್ರತಿನಿಧಿಗಳಿಗೆ ಮಾತನಾಡಲು, ಧ್ವನಿ ಎತ್ತಲು ಎಷ್ಟೊಂದು ವ್ಯವಸ್ಥೆ ಮಾಡಿದ್ದೇವೆ. ಆದರೂ ದನಿ ಎತ್ತಲು ಮೀನಾ ಮೇಷ ಎಣಿಸಿದರೆ ಹೇಗೆ ?