ಲೇಖನ ಮಾಲಿಕೆ

ಸಂಸತ್ತಿನ ಗ್ರಂಥಾಲಯ ಕಂಡರೆ ಬೆಚ್ಚಿ ಬೀಳುತ್ತೀರಿ…

ಸಂಸತ್ತಿನ ಗ್ರಂಥಾಲಯ, ನಮ್ಮ ಜನ ಪ್ರತಿನಿಧಿಗಳಿಗೆ ಅಧ್ಯಯನಕ್ಕಾಗಿ ಒದಗಿಸುವ ವ್ಯವಸ್ಥೆ ಎಲ್ಲವನ್ನೂ ಕಂಡರೆ ಬೆಚ್ಚಿ ಬೀಳದೇ ವಿಧಿಯಿಲ್ಲ. ಆ ಪೈಕಿ ಇದರ ಸದುಪಯೋಗ ಎಷ್ಟಾಗುತ್ತಿದೆ ಎಂದು ಕೇಳಬೇಡಿ. ಒಂದಂತೂ ನಿಜ. ನಮ್ಮ ಸಂಸದರು ಓದದಿದ್ದರೂ ಅವರ ಆಪ್ತ ಸಹಾಯಕರು, ಅಧಿಕಾರಿಗಳು ಓದುತ್ತಿರಬಹುದು. ಅಷ್ಟಕ್ಕೇ ಸಮಾಧಾನ ಪಡಬೇಕು !


ಒಂದು ಕಾಲದಲ್ಲಿ ಎಲ್ಲೆಲ್ಲೂ ಅಧ್ಯಯನ ಶೀಲರಿದ್ದರು. ಈ ಮಾತಿಗೆ ಸಂಸತ್ತೂ ಅಪವಾದವಾಗಿರಲಿಲ್ಲ. ಅದರಲ್ಲೂ ಭಾರತ ಜ್ಞಾನ ಸಂಪನ್ನರ ದೇಶ. ಅವರನ್ನು ಪ್ರತಿನಿಧಿಸುವವರೆಲ್ಲಾ ಜ್ಞಾನ ಸಂಪನ್ನರೇ ಎನ್ನುವಂತಿತ್ತು. ಒಂದು ವಿಷಯ ಕುರಿತು ಫಲಪ್ರದ ಚರ್ಚೆಗೆ ಅವಕಾಶ ಕಲ್ಪಿಸುತ್ತಿದ್ದ ಎರಡೂ ಸದನಗಳಲ್ಲಿ ಮಾತನಾಡಿದ್ದೆಲ್ಲವೂ ದಾಖಲೆಯಾಗುತ್ತಿತ್ತು. ಹಾಗಾಗಿ ಸದಸ್ಯರು ಏನೇನೋ ಮಾತನಾಡುವಂತಿರಲಿಲ್ಲ.

ಅದಕ್ಕೇ ಸಭಾ ನಡವಳಿಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳಿವೆ. ಇವೆಲ್ಲವನ್ನೂ ಮಾಡಿಕೊಂಡಿದ್ದು ಚರ್ಚೆಯ ದಿಕ್ಕು ತಪ್ಪದಿರಲೆಂಬ ಉದ್ದೇಶದಿಂದಲೇ. ಅಂದರೆ ಅನಗತ್ಯ ಚರ್ಚೆ ಎನ್ನುವುದು ಮತ್ತೊಂದು ಅಪವಾದಕ್ಕೆ ಕಾರಣವಾಗಬಾರದೆಂಬ ಕಾಳಜಿ ಕೆಲಸ ಮಾಡಿತ್ತು. ಅಲ್ಲಿಗೆ, ಇಷ್ಟೊಂದು ಮಂದಿಗೆ ಏನಾದರೂ ಮಾಹಿತಿ ಬೇಕೆಂದರೆ ಎಲ್ಲಿಗೆ ಹೋಗಬೇಕು ? ಎಂಬ ಸಮಸ್ಯೆ ಉದ್ಭವಿಸಿದ ಹಿನ್ನೆಲೆಯಲ್ಲಿ ಗ್ರಂಥಾಲಯ ಕಟ್ಟಡ ಅಸ್ತಿತ್ವಕ್ಕೆ ಬಂದಿತು.

1926 ರಲ್ಲೇ ಸ್ಥಾಪಿಸಲ್ಪಟ್ಟ ಗ್ರಂಥಾಲಯ ಇಂದು ಗ್ರಂಥಗಳ ಕಣಜ. ಸಂಶೋಧನಾರ್ಥಿಗಳ ಕಾಶಿಯಾಗಿದೆ. ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ದೇಶದ ಎರಡನೇ ಅತ್ಯಂತ ಹೆಚ್ಚು ಗ್ರಂಥಗಳನ್ನು ಹೊಂದಿರುವ ಗ್ರಂಥಾಲಯವಿದು. ಅಂದಾಜು ಲೆಕ್ಕ ಹಾಕಿ ಅಲ್ಲಿರಬಹುದಾದ ಪುಸ್ತಕಗಳ ಬಗ್ಗೆ. ಸುಮಾರು 1.27 ದಶಲಕ್ಷ ಪುಸ್ತಕ, ವರದಿ, ಸರಕಾರಿ ಪ್ರಕಟಣೆಗಳು, ವಿಶ್ವಸಂಸ್ಥೆ ವರದಿಗಳು, ಚರ್ಚೆಯ ವಿವರಗಳು, ಗೆಜೆಟ್ ಅಧಿಸೂಚನೆಗಳು…ಇತ್ಯಾದಿ ಇಲ್ಲಿ ಲಭ್ಯ. ಮೊದಲನೇ ಸ್ಥಾನದಲ್ಲಿರುವಂಥದ್ದು 1836 ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾದ ಸಾರ್ವಜನಿಕ ಗ್ರಂಥಾಲಯ. ಅದೀಗ ನ್ಯಾಷನಲ್ ಲೈಬ್ರರಿ ಆಗಿದೆ.

ಸಂಸತ್ತಿನ ಗ್ರಂಥಾಲಯದಲ್ಲಿ 150 ದೇಶಿ, ವಿದೇಶಿ ಪತ್ರಿಕೆಗಳು, 587 ಇಂಗ್ಲಿಷ್, ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ ನಿಯತಕಾಲಿಕೆಗಳು ಇಲ್ಲಿ ಲಭ್ಯ. ಇಷ್ಟಕ್ಕೇ ಇದರ ಕೀರ್ತಿ ಮುಗಿಯಲಿಲ್ಲ. ಗ್ರಂಥಾಲಯವೇ ಪ್ರತಿ ತಿಂಗಳೂ ಒಂದು ಪತ್ರಿಕೆಯನ್ನು ಹೊರ ತರುತ್ತದೆ. ಈ ಪತ್ರಿಕೆಯಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಹೊಸ ಪ್ರಕಟಣೆಗಳು ಇತ್ಯಾದಿಗಳ ಮಾಹಿತಿ. ಜತೆಗೆ ಗ್ರಂಥಾಲಯ ಏರ್ಪಡಿಸುವ ವಿಶೇಷ ಕಾರ್ಯಕ್ರಮ, ಗಣ್ಯ ವ್ಯಕ್ತಿಗಳ ಭೇಟಿ…ಮುಂತಾದ ಮಾಹಿತಿ ನೀಡಲಾಗುವುದು. ಇದರಲ್ಲಿ ಸದಸ್ಯರಿಗೆಂದು ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸಂಸತ್ತಿನ ಎದುರೇ ಹೊಸ ಕಟ್ಟಡವನ್ನು ಒದಗಿಸಲಾಗಿದ್ದು, ಅದು ಬಹಳ ವಿಶಿಷ್ಟವಾಗಿ ವಿನ್ಯಾಸಗೊಂಡಿದೆ. ರಾಜ್ ರೇವಲ್ ಎಂಬವರು ರೂಪಿಸಿದ ವಿನ್ಯಾಸ ಸಂಪೂರ್ಣ ಭಾರತೀಯ ನೆಲೆಯದ್ದೇ. ಅಂದಹಾಗೆ ಗ್ರಂಥಾಲಯ ಕಟ್ಟಡಕ್ಕೆ ಕಾಲಿಡುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರ ನಾಥ ಠಾಕೂರರ ಬೃಹತ್ತಾದ ಪ್ರತಿಮೆ. ಜ್ಞಾನದ ಪಿತಾಮಹ ಎಂಬ ಅಭಿದಾನ ಹೊಂದಿರುವ ಠಾಗೋರರ ಪ್ರತಿಮೆಯೇ ಅತ್ಯಂತ ಆಕರ್ಷಣೀಯ.
ನಂತರ ಇಲ್ಲಿಯ ಮತ್ತೊಂದು ಇತಿಹಾಸದ ಹಿರಿಮೆಯೆಂದರೆ ಸಂವಿಧಾನದ ಮೂಲಪ್ರತಿ ಸಂರಕ್ಷಿಸಲ್ಪಟ್ಟ ತಾಣ. ಇಲ್ಲಿ 1949 ನೇ ಇಸವಿಯ ನವೆಂಬರ್ 26 ರಂದು ಸಂವಿಧಾನ ಕರಡು ಸಮಿತಿ ಸದಸ್ಯರು ಸಹಿ ಮಾಡಿದ ಗ್ರಂಥಾಲಯದ ಕರಡು ಪ್ರತಿಯನ್ನು ಇಲ್ಲಿಯೇ ಸಂರಕ್ಷಿಸಲಾಗಿದೆ. ನೈಟ್ರೋಜನ್ ಅನಿಲವನ್ನು ಬಳಸಿ ಇದನ್ನು ಸಂರಕ್ಷಿಸಿರುವುದು ಒಂದು ಅದ್ಭುತವೇ.

ಇದೆಲ್ಲದರ ಮಧ್ಯೆ ಸಂಸತ್ತಿನ ಸಿಬ್ಬಂದಿಗೆಂದೇ ಪ್ರತ್ಯೇಕ ಗ್ರಂಥಾಲಯವಿದೆ. ಹೊಸ ಕಟ್ಟಡದಲ್ಲಿದ್ದರೂ ಗ್ರಂಥಾಲಯದೊಳಗೆ ಮತ್ತೊಂದು ಗ್ರಂಥಾಲಯ ಎನ್ನಲಡ್ಡಿಯಿಲ್ಲ. ಇಲ್ಲಿಯೂ ೨೬ ಸಾವಿರ ಪುಸ್ತಕಗಳಿಂದ ಹಿಡಿದು ವಿವಿಧ ನಿಯತಕಾಲಿಕೆ, ಪರಾಮರ್ಶನ ಗ್ರಂಥಗಳೆಲ್ಲಾ ಪರಿಮಳ ಬೀರುತ್ತಿವೆ. ಲೋಕಸಭಾ ಮತ್ತು ರಾಜ್ಯಸಭಾ ಸಚಿವಾಲಯದ 3, 100 ಕ್ಕೂ ಹೆಚ್ಚು ಮಂದಿ ಇದರ ಸದಸ್ಯರು.

ಇವೆಲ್ಲಾ ಇರಲಿ, ಇಂಥದೊಂದು ವ್ಯವಸ್ಥೆ ದೇಶದ (ಕೋಲ್ಕತ್ತಾ ಬಿಟ್ಟರೆ) ಉಳಿದ ಸಾರ್ವಜನಿಕ ಗ್ರಂಥಾಲಯಗಳಿಲ್ಲವೆಂದೇ ಹೇಳಬಹುದು. ರಾಜ್ಯದಲ್ಲಿ ಗ್ರಂಥಾಲಯಗಳೆಲ್ಲಾ ರದ್ದಿ ಪುಸ್ತಕದ ಅಂಗಳವಾಗಿರುವಾಗ, ನಮ್ಮನ್ನಾಳುವ ಮಂದಿಯ ಗ್ರಂಥಾಲಯದ ವ್ಯವಸ್ಥೆ ಕಂಡರೆ ನಿಜಕ್ಕೂ ಬೆಚ್ಚಿ ಬೀಳುತ್ತೇವೆ !

Advertisements

2 thoughts on “ಸಂಸತ್ತಿನ ಗ್ರಂಥಾಲಯ ಕಂಡರೆ ಬೆಚ್ಚಿ ಬೀಳುತ್ತೀರಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s